ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಲೋಕಾಂತದಲ್ಲೂ ಏಕಾಂತಕ್ಕಿರಲಿ ಜಾಗ

ಆಗಾಗ ಏಕಾಂತವನ್ನು ಪ್ರವೇಶಿಸಿ ತನ್ನನ್ನು ತಾನು ಆತ್ಮವಿಮರ್ಶೆಗೆ ಒಳಗಾಗಿಸಿಕೊಳ್ಳುವುದು ಭಾವಶುದ್ಧಿಯ ದೃಷ್ಟಿಯಿಂದ ತುಂಬ ಅಗತ್ಯ
Published 4 ಜೂನ್ 2024, 0:19 IST
Last Updated 4 ಜೂನ್ 2024, 0:19 IST
ಅಕ್ಷರ ಗಾತ್ರ

ಕುಟುಂಬದ ಸದಸ್ಯರ ನಡುವಣ ಜಗಳಗಳು, ಕಚೇರಿ ಯಲ್ಲಾದ ಗಲಾಟೆ, ಮೇಲಧಿಕಾರಿ ಕುರಿತು ಒಂದಿಷ್ಟು ಅಸಹನೆಯ ಮಾತುಗಳು, ಸಹೋದ್ಯೋಗಿಗಳ ನಡವಳಿಕೆಯ ವಿಶ್ಲೇಷಣೆ, ದಾಯಾದಿಗಳೊಂದಿಗಿನ ಕಾದಾಟ, ಪಕ್ಕದ ಮನೆಯವರ ಉಪದ್ರವದಂತಹ ಎಲ್ಲ ಸಂಗತಿಗಳ ಕುರಿತ ಸಂಭಾಷಣೆಗಳು ಬೇಡವೆಂದರೂ ಬೆಳಗಿನ ವಾಕಿಂಗ್ ವೇಳೆ ಕಿವಿಯ ಮೇಲೆ ಬೀಳುತ್ತವೆ. ಮಹಿಳೆಯರ ಸಂಭಾಷಣೆಯಲ್ಲಿ ಅತ್ತೆ, ನಾದಿನಿ, ವಾರಗಿತ್ತಿಯರ ಕುರಿತು ಅತ್ಯಂತ ಕೆಟ್ಟ ಬೈಗುಳ ಗಳು ಮಾರ್ದನಿಸುತ್ತವೆ. ತಾವು ರಸ್ತೆಯ ಮೇಲೆ ನಡೆಯುತ್ತಿದ್ದೇವೆ ಎನ್ನುವುದನ್ನೂ ಮರೆತು, ತಮಗಾಗದವ ರನ್ನು ಜೋರು ಧ್ವನಿಯಿಂದ ನಿಂದಿಸುತ್ತ, ಹೀಯಾಳಿ ಸುತ್ತ, ಬೈಯುತ್ತ ಪ್ರತೀಕಾರ ತೀರಿಸಿಕೊಳ್ಳುತ್ತಿರುವ ಉದ್ವೇಗದಲ್ಲಿ ಹೆಜ್ಜೆ ಹಾಕುವ ಪರಿ ಅಚ್ಚರಿ ಮೂಡಿಸುತ್ತದೆ.

ಬೆಳಗಿನ ಆಹ್ಲಾದಕರವಾದ ವಾತಾವರಣ ದಲ್ಲಿ ಶುದ್ಧ ಗಾಳಿ ಸೇವಿಸುತ್ತ ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧಿಯಾಗಿಸಿಕೊಳ್ಳುವುದು ವಾಯುವಿಹಾರದ ಹಿಂದಿರುವ ಉದ್ದೇಶ. ಆದರೆ ಹಲವರ ಜೊತೆಗೂಡಿ ಮಾತನಾಡುತ್ತಾ ನಡಿಗೆಯಲ್ಲಿ ತೊಡಗುವ ಈ ಸಂದರ್ಭವು ಅನ್ಯರ ನಿಂದನೆಯ ಸುತ್ತ ಗಿರಕಿ ಹೊಡೆಯುತ್ತ ಮನುಷ್ಯನ ಮನಸ್ಸನ್ನು ಅನಾರೋಗ್ಯಕ್ಕೆ ದೂಡುತ್ತಿದೆ. ದೇಹದ ಆರೋಗ್ಯದಷ್ಟೇ ಮನಸ್ಸಿನ ಆರೋಗ್ಯವೂ ಮಹತ್ವದ್ದು.

‘ಮನುಷ್ಯ ಏಕಾಂಗಿಯಾಗಿದ್ದಾಗ ಅದು ಆತ್ಮದ ವಿಶ್ಲೇಷಣೆಗೆ ದಾರಿ ಮಾಡಿಕೊಡುತ್ತದೆ. ಇನ್ನೊಬ್ಬ ಜೊತೆಗೂಡಿದಾಗ ಬೇರೆಯವರನ್ನು ನಿಂದಿಸುವುದು ಶುರುವಾಗುತ್ತದೆ. ಮೂರು ಜನ ಕಲೆತಾಗ ಅದು ಜಗಳಕ್ಕೆ ನಾಂದಿ ಹಾಡುತ್ತದೆ’ ಎಂದಿರುವರು ಅನುಭಾವಿಗಳು.

ವಾಯುವಿಹಾರ, ಯೋಗ, ಧ್ಯಾನ, ಅಧ್ಯಾತ್ಮ ಪ್ರವಚನ, ದೇವಸ್ಥಾನ ಭೇಟಿ ಈ ಎಲ್ಲ ಸಂದರ್ಭಗಳಲ್ಲೂ ಮನುಷ್ಯನು ಮನಸ್ಸಿನ ಶುದ್ಧತೆಗೆ ಆದ್ಯತೆ ಕೊಡುತ್ತಿಲ್ಲ. ಅಲೌಕಿಕ ವಾತಾವರಣದಲ್ಲೂ ರಾಗದ್ವೇಷ, ಮದ, ಮೋಹ, ಮತ್ಸರದಂತಹ ಅರಿಷಡ್ವರ್ಗಗಳಿಂದ ಬಂಧಿತ ನಾಗುತ್ತಿದ್ದಾನೆ. ಬದುಕಿನಲ್ಲಿ ಭೌತಿಕ ಸಂಗತಿಗಳೇ ಮುನ್ನೆಲೆಗೆ ಬರುತ್ತಿರುವ ಇಂದಿನ ದಿನಗಳಲ್ಲಿ ವಾಯು ವಿಹಾರ, ಯೋಗ, ಧ್ಯಾನದಂತಹ ಕ್ರಿಯೆಗಳು ಬರೀ ತೋರಿಕೆಯಾಗುತ್ತಿವೆ.

ಸದಾಕಾಲ ಲೋಕಾಂತದ ವ್ಯವಹಾರಗಳಲ್ಲಿ ಮುಳುಗಿರುವವರಿಗೆ ಏಕಾಂತಕ್ಕೆ ಲಗ್ಗೆ ಇಡುವುದು ಕಷ್ಟದ ಕೆಲಸ. ಆಗಾಗ ಏಕಾಂತವನ್ನು ಪ್ರವೇಶಿಸಿ ತನ್ನನ್ನು ತಾನು ಆತ್ಮವಿಮರ್ಶೆಗೆ ಒಳಗಾಗಿಸಿಕೊಳ್ಳು
ವುದು ಭಾವಶುದ್ಧಿಯ ದೃಷ್ಟಿಯಿಂದ ತುಂಬ ಅಗತ್ಯ ವಾಗಿದೆ. ಇಂದಿನ ದಿನಗಳಲ್ಲಿ ಯೋಗ, ಧ್ಯಾನದಂಥ ಏಕಾಂತದ ಕ್ರಿಯೆಗಳಿಗೆ ಮಾರುಕಟ್ಟೆಯ ಮೌಲ್ಯ ಪ್ರಾಪ್ತವಾಗಿದೆ. ಎಲ್ಲವನ್ನೂ ಲಾಭ ಮತ್ತು ನಷ್ಟದ ನೆಲೆಯಲ್ಲೇ ಅಳೆಯುತ್ತ ಯೋಗ ಮತ್ತು ಧ್ಯಾನದಂತಹ ಏಕಾಂತದ ಕ್ರಿಯೆಗಳನ್ನು ಲೋಕಾಂತದಲ್ಲಿ ಮಾರಾಟದ ಸರಕುಗಳಾಗಿ ಪರಿವರ್ತಿಸಲಾಗಿದೆ. ತನ್ನ ನಡೆ-ನುಡಿ, ತನ್ನೊಳಗಿನ ಸರಿ-ತಪ್ಪುಗಳ ವಿವೇಚನೆ ಮತ್ತು ವಿಶ್ಲೇಷಣೆ ಇದೆಲ್ಲ ಸಾಧ್ಯವಾಗುವುದು ಏಕಾಂತದಲ್ಲಿ ಮಾತ್ರ. ಲೋಕಾಂತದಲ್ಲಿ ಕಳೆದುಹೋಗಿರುವ ಮನುಷ್ಯನಿಗೆ ಏಕಾಂತದ ಸುಖದ ಅರಿವಿಲ್ಲವಾಗಿದೆ.

ಶರಣರು ಲೋಕಾಂತದಲ್ಲೇ ಬದುಕಿನ ಸತ್ಯವನ್ನು ಶೋಧಿಸಿದರು ಮತ್ತು ಮೋಕ್ಷವನ್ನು ಸಾಧಿಸಿದರು. ಅಂತರಂಗ ಮತ್ತು ಬಹಿರಂಗ ಎರಡನ್ನೂ ಏಕತ್ರಗೊಳಿಸಿ ಲೋಕಾಂತದಲ್ಲೂ ಏಕಾಂತವನ್ನು
ಪ್ರವೇಶಿಸುತ್ತಿದ್ದ ಅನುಭಾವಿಗಳ ಬದುಕು ನಿಜಕ್ಕೂ ಒಂದು ಪವಾಡವೇ ಸರಿ. ಅಲ್ಲಮಪ್ರಭು, ಬಹಿರಂಗಕ್ಕಿಂತ ಅಂತರಂಗ ಶುದ್ಧಿ ಮೇಲು ಎನ್ನುತ್ತಾರೆ. 

ಪುಸ್ತಕಗಳ ಓದು ಮನುಷ್ಯನನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತದೆ. ಪುಸ್ತಕಗಳಲ್ಲಿ
ಅಂತರಂಗವನ್ನು ಶುದ್ಧವಾಗಿಸುವ ವಿಚಾರಗಳು ಹೇರಳ ವಾಗಿ ಲಭಿಸುತ್ತವೆ. ಶಾಂತಿನಾಥ ದೇಸಾಯಿ ಅವರ ‘ಓಂ ಣಮೋ’ ಕಾದಂಬರಿಯಲ್ಲಿ ಮೋಕ್ಷಕ್ಕೆ ದಾರಿ ಮಾಡಿ ಕೊಡುವ ಐದು ತತ್ವಗಳನ್ನು ಪಾತ್ರವೊಂದು ರೂಢಿಸಿಕೊಳ್ಳುವುದು ಹೀಗಿದೆ- ‘ನಾನಂತೂ ಮರಣದ ಮುಖ ನೋಡಿದ ಮೇಲೆ ನಿರ್ಲಿಪ್ತನಾಗಿಬಿಟ್ಟಿದ್ದೇನೆ. ಇದಕ್ಕೆ ನಾವು ಅಪರಿಗ್ರಹ ಅಂತೀವಿ. ಹೆಂಡತಿಯಿಂದಲೂ ನಿರ್ಲಿಪ್ತ. ಅದಕ್ಕೆ ಬ್ರಹ್ಮಚರ್ಯೆ ಅಂತಾರೆ. ಬಿಜಿನಸ್ಸನ್ನೆಲ್ಲ ಮಗನ ಕೊರಳಿಗೆ ಕಟ್ಟೀನಿ-ಅದಕ್ಕಂತಾರೆ ಆಸ್ತೇಯ. ಯಾವ ಪ್ರಾಣಿಗೂ ತ್ರಾಸ ಕೊಡೋಲ್ಲ-ಅದಕ್ಕಂತಾರೆ ಅಹಿಂಸಾ. ಇನ್ನು ಸತ್ಯ, ಎಂದಾದರೂ ಸಾಯೋದೇ ಸತ್ಯ’. ಆದರೆ ಇಂದಿನ ದಿನಗಳಲ್ಲಿ ಪುಸ್ತಕಗಳನ್ನು ಓದುವ ಓದುಗರ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದ್ದು, ಪುಸ್ತಕಗಳ ಓದು ಸೃಷ್ಟಿಸುವ ಧ್ಯಾನಸ್ಥದ ಸುಖದಿಂದ ಮನುಷ್ಯ ವಂಚಿತನಾಗುತ್ತಿದ್ದಾನೆ.

ಕಥೆಗಾರ್ತಿ ಕಸ್ತೂರಿ ಬಾಯರಿ ಬದುಕಿನ ಕುರಿತು ತುಂಬ ಅರ್ಥಪೂರ್ಣವಾದ ಮಾತೊಂದನ್ನು
ಸಂದರ್ಶನವೊಂದರಲ್ಲಿ ಹೇಳಿದ್ದಾರೆ- ‘ಅಸಹಾಯಕತೆ, ಹಸಿವು ನಮ್ಮನ್ನು ಕಾಡಲಿಲ್ಲವೆಂದರೆ, ‘ಹೌ ಮಚ್ ವಿ ಆರ್ ಸ್ಟ್ರಾಂಗ್ ಇನ್‍ ಫ್ರಂಟ್ ಆಫ್ ಹಂಗರ್?’ ಅಂತ ಹ್ಯಾಂಗ ಗೊತ್ತಾಗೋದು. ಯಾರು ನಮ್ಮನ್ನು ನೋಡಿದರೂ ಒಂದು ಕೆಟ್ಟ ಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ ಅದು ಸಣ್ಣ ಮಾತಲ್ಲ’. ಲೋಕಾಂತದಲ್ಲೂ ಏಕಾಂತಕ್ಕೆ ಲಗ್ಗೆ ಇಡುವ ಅನುಭಾವಿಗಳ ಅಧ್ಯಾತ್ಮವಿದು. ಬದುಕಿನ ಪಯಣವೇ ಮನುಷ್ಯನಿಗೆ ಅಗತ್ಯವಾದ ಏನೆಲ್ಲ ಪಾಠಗಳನ್ನು ಕಲಿಸುತ್ತದೆ ಎಂದು ಅರ್ಥೈಸುತ್ತದೆ ಈ ಮಾತು.

ಮನುಷ್ಯನಿಗೆ ತನ್ನನ್ನು ತಾ ಅರಿಯಲು ತರಬೇತಿ ಶಾಲೆಗಳ ಅಗತ್ಯವಿಲ್ಲ. ಜೀವನವೇ ಒಂದು ಪಾಠಶಾಲೆ. ಬದುಕಿನ ತನ್ನ ಪಯಣದ ದಾರಿಯಲ್ಲೇ ಆತ ಜೀವನದ ಪಾಠಗಳನ್ನು ಕಲಿಯಬೇಕಿದೆ. ಲೋಕಾಂತದ ನಡುವೆಯೂ ಏಕಾಂತಕ್ಕೆ ಲಗ್ಗೆ ಇಟ್ಟು ಬದುಕನ್ನು ಅರ್ಥ ಮಾಡಿಕೊಳ್ಳುವ ಮನಃಸ್ಥಿತಿಯನ್ನು ರೂಢಿಸಿಕೊಳ್ಳ
ಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT