ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರೆ ಮೊಗಚುವ ದಿನ!

ನೆನಪಿರಲಿ, ವಿಶ್ವ ಕುಟಂಬದಲ್ಲಿ 750 ಕೋಟಿ ಜನರಿದ್ದಾರೆ! ಭೂಮಿ ಅನಂತವಲ್ಲ, ಅಪಾರವಲ್ಲ. ಆದ್ದರಿಂದ ಪುನರ್ಬಳಕೆ ನಮ್ಮ ಮಂತ್ರವಾಗಬೇಕು
Last Updated 31 ಜುಲೈ 2018, 19:30 IST
ಅಕ್ಷರ ಗಾತ್ರ

‘ರೀ ಸ್ವಾಮಿ, ಇವತ್ತೇ ಕಡೇ ದಿನ. ನಿಮಗೆ ನಾಳೆಯಿಂದ ಉದ್ರಿಯಿಲ್ಲ... ನೀವು ತೀರಿಸಬಹುದಾದಷ್ಟು ಸಾಲ ಕೊಟ್ಟಿದ್ದಾಯಿತು...’

ಮಾಸಾಂತ್ಯದ ದಿನಗಳಲ್ಲಿ ದಿನಸಿ ಅಂಗಡಿಯವರು ಗಿರಾಕಿಗೆ ಹೀಗೆ ಹೇಳಿದರೆ ಹೇಗೆ? ‘ಮುಂದಿನ ತಿಂಗಳಲ್ಲೂ ಈ ಮಾತು ಕೇಳುವ ಸ್ಥಿತಿ ಬಾರದಿರಲಿ’ ಎಂಬ ಸಣ್ಣ ಭಾವ ಅವನ ಮುಖದಲ್ಲಿ ಬಂದೇ ಬರುತ್ತದೆ ಎಂದು ಬೇರೆ ಹೇಳಬೇಕಿಲ್ಲ. ‘ಅರ್ಥ್‌ ಓವರ್ ಶೂಟ್ ಡೇ’ ಎಂದರೇನೆಂದು ತಿಳಿಯಲು ಈ ಉದಾಹರಣೆ ಸಾಕು. ಆಗಸ್ಟ್ 1, ಭೂಮಿಯು ತನ್ನ ಮೇಲೆ ವಾಸಿಸುವ ಮನುಜರನ್ನು ಎಚ್ಚರಿಸುವ ದಿನ. ‘ಎಲೈ ಮನುಜನೇ, ನನ್ನನ್ನು ನೀನು ಎಗ್ಗಿಲ್ಲದೆ ಬಗೆದು ಬಾಚುತ್ತಿರುವುದಕ್ಕೆ ನನಗೆ ಸಿಟ್ಟಿಲ್ಲ. ಆದರೆ ಅದೆಷ್ಟು ತ್ವರಿತವಾಗಿ ಮತ್ತು ವೇಗವಾಗಿ ಸಂಪನ್ಮೂಲಗಳನ್ನು ಬಳಸುತ್ತಿರುವೆಯೆಂದರೆ ತುಸು ಸುಧಾರಿಸಿಕೊಳ್ಳಲೂ ನೀನು ನನಗೆ ಸಮಯ ನೀಡುತ್ತಿಲ್ಲ’ ಎಂದು.

‘ಅರ್ಥ್ ಓವರ್‌ಶೂಟ್ ಡೇ’ ಅಥವಾ ‘ಪರಿಮಿತಿ ದಿನ’ ವಿಶ್ವದಾದ್ಯಂತ ಪ್ರತಿವರ್ಷವೂ ಆಚರಣೆಯಾಗಲೇಬೇಕು. ಏಕೆಂದರೆ ಈ ಆಚರಣೆಯಿಂದಲಾದರೂ ವಿಶ್ವದ ಪ್ರಜೆಗಳು ‘ನಾನು ಇಳೆಯ ಕೂಸು, ಆಕೆಯ ಸಹನೆಯನ್ನು ಪರೀಕ್ಷಿಸಬಾರದು’ ಎಂಬ ಪ್ರಜ್ಞೆ ರೂಢಿಸಿಕೊಳ್ಳುತ್ತಾರೆ. ‘ನೋಡಪ್ಪ ಇವತ್ತಿನಿಂದಾಚೆಗೆ ನೀನು ಏನೇ ಉಪಯೋಗಿಸಿದರೂ ಅದು ನೀನು ತೀರಿಸಲಾಗದ ಸಾಲವಾದೀತು’ ಎಂದು ಭೂಮಿ ಮನುಜನನ್ನು ಎಚ್ಚರಿಸುವ ದಿನವಿದು. ನಮ್ಮ ಪಾಡನ್ನು ನಾವೇ ವ್ಯಂಗ್ಯವಾಡುತ್ತ ‘ಪಾತ್ರೆ ಮೊಗಚುವ ದಿನ’ ಎನ್ನೋಣವೇ?! ನಮ್ಮನ್ನು ಚಕಿತಗೊಳಿಸಬೇಕಾದ ಸಂಗತಿಯೆಂದರೆ ಮನುಷ್ಯನು 1970ರಿಂದ ಈಚೆಗೆ ಭೂಮಿಯು ಉತ್ಪಾದಿಸುವುದಕ್ಕಿಂತಲೂ ಹೆಚ್ಚನ್ನು ಬಳಸುವ ಗ್ರಾಹಕನಾಗಿದ್ದಾನೆ. ಬಗೆ ಬಗೆಯ ವಸ್ತು, ಸರಂಜಾಮು... ಮುಗಿದರೆ ಮಾರುಕಟ್ಟೆಯಿಂದ ಕೊಂಡು ತಂದರಾಯಿತು ಎನ್ನುವ ತೆರದಲ್ಲಿ ಸಂಪನ್ಮೂಲಗಳನ್ನು ದುಂದು ವ್ಯಯಿಸುತ್ತಿದ್ದಾನೆ.

ಮನುಕುಲದಿಂದ ಭೂಮಿಯು ತೀವ್ರ ಒತ್ತಡಕ್ಕೊಳಪಟ್ಟಿದೆ. ಮನುಷ್ಯನು ನಗರಗಳನ್ನು ಕಟ್ಟಿದ್ದಾನೆ. ರಸ್ತೆ, ಸೇತುವೆ, ಅಣೆಕಟ್ಟುಗಳನ್ನು ನಿರ್ಮಿಸಿದ್ದಾನೆ. ಬೇಸಾಯ ಮಾಡಿದ್ದಾನೆ. ಬಗೆ ಬಗೆಯ ಲೋಹಗಳನ್ನು ಉತ್ಪಾದಿಸಿದ್ದಾನೆ. ಯಂತ್ರಗಳನ್ನು ಸಿದ್ಧಪಡಿಸಿದ್ದಾನೆ. ಕಾರ್ಖಾನೆ, ಉದ್ಯಮಗಳನ್ನು ಸ್ಥಾಪಿಸಿದ್ದಾನೆ. ಇವೆಲ್ಲವುಗಳಿಗಾಗಿಧರೆಯ ಸಂಪತ್ತನ್ನು ಗಮನಾರ್ಹ ಪ್ರಮಾಣದಲ್ಲಿ ವ್ಯಯಿಸಿದ್ದಾನೆ. ಸದ್ಯ ಭೂಮಿಯ ದಾಸ್ತಾನಿನಲ್ಲಿ ಎಷ್ಟು ಉಳಿದಿದೆ? ಪುನರುತ್ಪಾದನೆ ಎಂತು? ಈ ನಿಟ್ಟಿನಲ್ಲಿ ಆಲೋಚಿಸಲೇಬೇಕು. ಒಂದರ್ಥದಲ್ಲಿ ‘ಪರಿಮಿತಿ ದಿನ’ವನ್ನು ಭೂಮಿಯ ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದ ವರ್ಷದ ಆಯವ್ಯಯ ದಿನ ಎನ್ನಬಹುದು. ಇಲ್ಲಿ ಸಂಪನ್ಮೂಲವೆಂದರೆ ಭೂಮಿಯ ಲಭ್ಯ ಸಮಸ್ತ ನಿಧಿ ನಿಕ್ಷೇಪಗಳು. ನೀರು, ಕಾಡು ಮೇಡು, ಅನಿಲ, ಪೆಟ್ರೋಲ್‌, ಕಲ್ಲಿದ್ದಲು, ಪ್ರಾಣಿ–ಪಕ್ಷಿ, ಕಲ್ಲು, ಖನಿಜ, ರಾಸಾಯನಿಕ... ಪಾಷಾಣ ಕೂಡ. ಇನ್ನು ಪುನರುತ್ಪಾದನಾ ಸಂಪತ್ತೆಂದರೆ ಬಳಕೆಯಿಂದ ಬರಿದಾದ್ದನ್ನು ಜೈವಿಕವಾಗಿ ಅಥವಾ ಇತರ ನೈಸರ್ಗಿಕ ಸಂಚಿತ ಪ್ರಕ್ರಿಯೆಗಳಿಂದ ಮತ್ತೆ ತುಂಬಿಕೊಳ್ಳುವುದು. ಮಹಾತ್ಮ ಗಾಂಧಿ ಅವರು ‘ಪ್ರಕೃತಿಯು ಮನಷ್ಯನ ಆಸೆಯನ್ನು ಪೂರೈಸಬಲ್ಲದೇ ಹೊರತು ಅವನದುರಾಸೆಯನ್ನಲ್ಲ’ ಎಂದಿದ್ದರು. ಪ್ರಸ್ತುತ ಮನುಷ್ಯ ಬಕಾಸುರನೇ ಆಗಿದ್ದಾನೆ. ಅವನ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕಾದರೆ ಭೂಮಿ ಒಂದೂವರೆ ಪಟ್ಟು ಹಿರಿದಾಗಬೇಕಷ್ಟೆ! ಮನುಷ್ಯ ತನ್ನ ದಾಹವನ್ನು ಈ ಪಾಟಿ ಮುಂದುವರಿಸಿದರೆ ಇದೇ ಶತಮಾನದ ಮಧ್ಯಭಾಗದ ವೇಳೆಗೆ ಅವನಿಗೆ ಎರಡು ಭೂಮಿಗಳ ಅಗತ್ಯ ಬೀಳಬಹುದು.

2016ರಲ್ಲಿ ಆಗಸ್ಟ್ 8 ಎಚ್ಚರಿಕೆಯ ದಿನವಾಗಿತ್ತು. ಈ ಬಾರಿ ಒಂದು ವಾರ ಮೊದಲೇ ಗಂಟೆ ಬಾರಿಸಿದೆ. ಲಕ್ಷ್ಮಣ ರೇಖೆಯೊಳಗಿದ್ದಷ್ಟೂ ನಾವು ಕ್ಷೇಮ. ಆತಂಕದ ಸಂಗತಿಯೆಂದರೆ ಮನುಷ್ಯ ಜಾಗೃತನಾಗದಿದ್ದರೆ ಒಂದು ವರ್ಷ ಮೊದಲೇ ಇ.ಒ.ಡಿ. ದಿನ ಬಂದರೂ ಬಂದೀತು! ಗಾಬರಿಯಾಗಿಸುವ ಅಂಶವೆಂದರೆ ಪ್ರಸ್ತುತ ನಮ್ಮ ಬಳಕೆಯು ಭೂಮಿಯ ಉತ್ಪಾದನೆಗಿಂತ ಶೇ 70ರಷ್ಟು ಅಧಿಕ! ನೆನಪಿರಲಿ, ವಿಶ್ವ ಕುಟಂಬದಲ್ಲಿ 750 ಕೋಟಿ ಜನರಿದ್ದಾರೆ! ಭೂಮಿ ಅನಂತವಲ್ಲ, ಅಪಾರವಲ್ಲ. ಆದ್ದರಿಂದ ಪುನರ್ಬಳಕೆ ನಮ್ಮ ಮಂತ್ರವಾಗಬೇಕು. ಚೀಲ ಹಿಡಿದು ಪೇಟೆಗೆ ಹೋಗುವ ಮುನ್ನ, ತಾನು ಖರೀದಿಸಲು ಮುಂದಾಗಿರುವ ಪದಾರ್ಥ, ಪರಿಕರ ಈಗಾಗಲೇ ಮನೆಯಲ್ಲುಂಟೇ? ಅಲ್ಪಸ್ವಲ್ಪ ನಿಭಾಯಿಸಿದರೆ ಅವನ್ನೇ ಇನ್ನಷ್ಟು ದಿನ ಉಪಯೋಗಿಸಬಹುದೇ ಎಂದು ಒಮ್ಮೆ ಪ್ರಶ್ನಿಸಿಕೊಳ್ಳುವುದು ಅಗತ್ಯ.

ಜೈವಿಕವಾಗಿ ಎಷ್ಟು ವಿಸ್ತೀರ್ಣದ ಫಲದಾಯಕ ನೆಲವಿದೆ. ನೀರು ಬಳಸಿದ ಮತ್ತು ತ್ಯಾಜ್ಯ ವಿಸರ್ಜಿಸಿದ ಭಾಗವೆಷ್ಟು ಎಂಬುದರ ಆಧಾರದಲ್ಲಿ ಮನುಷ್ಯನ ಚಟುವಟಿಕೆಗಳ ಪರಿಣಾಮವನ್ನು ನಿಷ್ಕರ್ಷಿಸಲಾಗುತ್ತದೆ. ‘ಎಕಲಾಜಿಕಲ್ ಬ್ಲೂಪ್ರಿಂಟ್’ ಎಂದು ಕರೆಯಲಾಗುವ ಇದರಿಂದ ಆಯಾ ವರ್ಷದ ‘ಪರಿಮಿತಿ ದಿನ’ ಗೊತ್ತುಪಡಿಸುತ್ತಾರೆ. ಪ್ರಸಕ್ತ ವರ್ಷ ಕೈಗಾರಿಕೋದ್ಯಮಗಳಿಂದ ಹೊರಬೀಳುವ ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಗಂಧಕದ ಡೈ ಆಕ್ಸೈಡ್ ಮುಂತಾದ ಅನಿಲಗಳ ಪ್ರಮಾಣವನ್ನೂ ಗಣನೆಗೆ ತೆಗೆದುಕೊಂಡಿರುವುದು ವಿಶೇಷ. ತನ್ನ ಮುಖ್ಯ ಶಾಖೆಯನ್ನುಕ್ಯಾಲಿಫೋರ್ನಿಯಾದ ಆಕ್ಲಂಡ್‌ನಲ್ಲಿ ಹೊಂದಿರುವ ಅಂತರರಾಷ್ಟ್ರೀಯ ಸಂಸ್ಥೆ ‘ಗ್ಲೋಬಲ್ ಫುಟ್ ಪ್ರಿಂಟ್’ ಜಾಲದ ಮುಖ್ಯಸ್ಥ ಮ್ಯಾಥಿಸ್ ವಾಕರ್‍ಮಾಜೆಲ್ ಪ್ರಕಾರ, ‘ನಾವು ಭೂಮಿಯ ಭವಿಷ್ಯದ ಸಂಪನ್ಮೂಲಗಳನ್ನು ಎರವಲು ಪಡೆದು ವರ್ತಮಾನದ ಅರ್ಥವ್ಯವಸ್ಥೆಯನ್ನುಸರಿದೂಗಿಸುತ್ತಿದ್ದೇವೆ’. ಆದ್ದರಿಂದ ಸರಳ ಜೀವನ, ಸಮಪಾಲು, ಸಮಬಾಳು ಎಲ್ಲರ ಧ್ಯೇಯವಾಗಬೇಕು. ವಿದ್ಯುತ್ತಿನ ಹಿತಮಿತ ಉಪಯೋಗ ಇಂದು ಹಿಂದೆಂದೂ ಇರದ ಜರೂರು. ಅತಿಯಾದ ಆಹಾರ ಸಂಸ್ಕರಣ ಸಲ್ಲದು. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಪದೇ ಪದೇ ಆಹಾರ ಬಿಸಿ ಮಾಡುವುದನ್ನು ತಪ್ಪಿಸಬಹುದು. ಇದೊಂದು ಪುಟ್ಟ ಹೆಜ್ಜೆ. ಆದರೆ ಜಾಗತಿಕ ಮಟ್ಟದಲ್ಲಿ ಬಹು ಮಹತ್ವದ ದೌಡು. ಬೈಸಿಕಲ್, ಒರಳು ಕಲ್ಲು, ಗಾಣ, ಕೈಕಾಗದ ಹೀಗೆ ಪರಿಸರಸ್ನೇಹಿ ಯಂತ್ರ, ಉತ್ಪನ್ನಗಳ ಅವಲಂಬನೆ ನಿಸ್ಸಂದೇಹವಾಗಿ ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೊಲ ಗದ್ದೆಗಳಲ್ಲಿ ಕಾಳು ಕೇರಲು ಫ್ಯಾನ್ ಬದಲು ಸ್ವಾಭಾವಿಕವಾಗಿ ಬೀಸುವ ಗಾಳಿ ಸಾಕಲ್ಲ! ಒಣಗಿಸಲು ಬಿಸಿಲಾಗದೇ? ಇಂಥ ಪರ್ಯಾಯ ಶಕ್ತಿಮಾರ್ಗಗಳು ಪರಿಸರವನ್ನು ಕೊಂಚವಾದರೂ ಜೋಪಾನವಾಗಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT