ಉದ್ದಿನ ಬೇಳೆ-ವಡಾದ ಅರ್ಥರಾಜಕಾರಣ!

7

ಉದ್ದಿನ ಬೇಳೆ-ವಡಾದ ಅರ್ಥರಾಜಕಾರಣ!

Published:
Updated:
ಸಾಂದರ್ಭಿಕ ಚಿತ್ರ

ಜಗತ್ತು ಎಷ್ಟೆಲ್ಲಾ ಸುಧಾರ್ಣೆ ಆಗಿದ್ರೂ, ಹಗಲೂ-ರಾತ್ರಿ ಬೆವರು ಹರಸೂ ನಮ್ಮ ರೈತರು ಮತ್ತ ಶಾರದ ಲಾಭಕೋರ ವ್ಯಾಪಾರಸ್ಥರ ನಡುವಿನ ಅಂತರಾ ಮಾತ್ರ ಯಾವಾಗ್ಲೂ ಭಾಳ ಅಗಲನs ಇರತೈತಿ. ಇದು ಎಲ್ಲಾರ್ಗ್ಯೂ ಗೊತ್ತಿರೋ ಸತ್ಯ. ಹೊಟ್ಟಿ ನೋಂವು ತರೂವಂತಾ ಹಿಂತಾ ಘಟನಾಕ್ಕ ಬೇಕಾದಷ್ಟು ಉದಾಹರ್ಣೆ ಕೊಡಬೌದು. ಇದೊಂದು ವಿಚಿತ್ರ ‘ಅರ್ಥರಾಜಕಾರಣದ’ ಸ್ಥಿತಿ. ಇದಕ್ಕ, ರೊಕ್ಕಾನs ಮಾನದಂಡ ಆಗೀರೂದು ಎಲ್ಲಾರ್ಗ್ಯೂ ಗೊತ್ತಿರೂವಂಥಾದ್ದು. ಆದ್ರ ಇದರ ಬಗ್ಗೆ ಯಾರೂ ಮಾತಾಡ್ದೇ ಇರೂದನ್ನ ನೋಡಿದ್ರ, ಎಲ್ಲಾರೂ ತಮತಮಗ ಸಿಕ್ಕಷ್ಟು ಹೊಡಕೊಂಡು ಹೋಗೂ ಮಸಲತ್ತಿನವ್ರs ಅನ್ನೂದು ಖರೆ ಅನಸ್ತೈತಿ. ಇದಕ್ಕೊಂದು ಉದಾಹರ್ಣೆ ಇಲ್ಲೈತಿ.

ಎರಡು ವರ್ಷದ ಹಿಂದ, ಉತ್ತರ ಕರ್ನಾಟಕದ ನಮ್ಮ ರೈತ್ರು ಭಾಳ ಉಮೇದ್ಲಿಂದ ತಮ್ಮ ಹೊಲದಾಗ ಉದ್ದು ಬಿತ್ತಿದ್ರು. ಬಿತ್ತೂವಾಗ ನಾಕ ಹನೀ ಚೊಲೋನs ಬಿದ್ದ ಮಳೀ, ಬರಬರ್ತಾ ಕೈ ಕೊಟ್ತು. ಕಡೇಕ್ಕ, ಹಂಗೂ-ಹಿಂಗೂ ಜೀಂವಾ ಹಿಡಕೊಂಡು ನಿಂತ ಒಂದು-ಎರ್ಡು ದೇಟಗೋಳ್ನ ಕಿತ್ತು ವಕ್ಕಲಾ ಮಾಡಿದ್ಯಾಗ, ಎಕರೇಕ್ಕs ಆರು-ಎಂಟು ಕ್ವಿಂಟಲ್ ಆಗೂ ಉದ್ದು ಅರ್ಧಾ ಚೀಲ, ಒಂದು ಚೀಲ ಆದ್ವು! ಮಾಲು ಕಮ್ಮೀ ಆಗಿದ್ದಕ್ಕ ಉದ್ದಿನ ಬ್ಯಾಳಿ ರೇಟು ಆಕಾಶಕ್ಕ ಏರಿತು. ಕಿಲೋ ಬ್ಯಾಳೀಗೆ ನೂರಾ ಎಪ್ಪತ್ತರ ತನಕಾನೂ ಹೋತು! ಉದ್ದಿನ ಬ್ಯಾಳಿ ತಿನ್ನೂದs ಬ್ಯಾಡ ಅನ್ನೂ ಸ್ಥಿತಿ ಬಂತು.

ರೊಕ್ಕಾ ಮಾಡಾಕ ಇದs ಚೊಲೋ ವ್ಯಾಳ್ಯಾ ಅಂತ ನಮ್ಮ ಶಾರದ ಹೋಟೆಲ್ಲಿನ ಮಂದಿ ಮುಂಜೇನನ್ನೂದ್ರೊಳಗs ಒಂದ ಉದ್ದಿನ ವಡಾದ ರೇಟನ್ನ ಹತ್ತರಿಂದ ಇಪ್ಪತ್ತಕ್ಕ ಏರಿಸಿಬಿಟ್ರು. ಈ ಲೆಕ್ಕದಾಗ ಇದು ಮೊದಲಿದ್ದ ರೇಟಿನ ಡಬಲ್ ಆದಂಗಾತು. ಇಡ್ಲಿ-ವಡಾ ಯಾವಾಗ್ಲೂ ಶಿವ-ಪಾರ್ವತಿಯರಂಗ ಬಿಡಲಾರದ ಜೋಡಿ ಇರೂ ಕಾರ್ಣಕ್ಕ, ವಡಾ ಬಿಟ್ಟು ಇಡ್ಲಿನಷ್ಟs ತಿನ್ನೂವಂಗೂ ಇಲ್ಲ; ತಿನ್ದ ಇರೂವಂಗೂ ಇಲ್ಲ. ತಿನ್ನವ್ರು ಹೆಂಗ್ ಬಿಡ್ತಾರ? ಶಾರದಾಗಿನ ನೌಕರದಾರ ಮಂದೀಗೆ ಇದ್ಯಾವ್ದೂ ಗಮನಕ್ಕs ಬರ್ಲಿಲ್ಲ. ಯಾಕಂದ್ರ, ಅವರ್ಗೆ ವರ್ಷಕ್ಕೊಮ್ಮೆ ಇನ್ಕ್ರೀಮೆಂಟು, ಎರ್ಡ್ ಸರ್ತೆ ಡಿ.ಎ. ಬರೂದ್ರಿಂದ ಯಾವ್ ರೇಟು, ಎಷ್ಟ್ ಏರಿದ್ರೂ ಅವರ್ಗೆ ಭಾರ ಅನಸೂದs ಇಲ್ಲ. ದುಪ್ಪಟ್ಟು ರೊಕ್ಕಾ ಕೊಟ್ಟು ಅವರು ಬಾಯಿ ಮುಚಗೊಂಡು ಇಡ್ಲಿ-ವಡಾ ತಿಂದ್ರು. ಆದ್ರ, ಸಂತೀ ಮಾಡಾಕ ಪ್ಯಾಟೀಗೆ ಬಂದಂಥ ರೈತಗ ಆ ಹೆಚ್ಚಿನ ರೇಟು ಕೊಟ್ಟು ವಡಾ ತಿನ್ನಾಕ ಸಾಧ್ಯ ಆಗ್ಲಿಲ್ಲ. ಹೋಟೆಲ್ನವ್ರ ವ್ಯಾಪಾರಾ ಮಾತ್ರ ಭರ್ಜರೀ ನಡೀತು, ಅವರ ಗಲ್ಲೇ ತುಂಬಾಕ ಹತ್ತಿತು.

ಪುಣ್ಯೇಕ್ಕ ಮರುವರ್ಷ ಮಳಿರಾಯ ಚೊಲೋತಾಗೇ ಕಣ್ಬಿಟ್ಟಾ. ರೈತ್ರು ಮತ್ತ ಉದ್ದು ಬಿತ್ತಿದ್ರು. ಬರೇ ಬಿತ್ಲಿಲ್ಲ; ರೇಟು ಹೆಚ್ಚಾಗೇತ್ಯಂತ ತಮ್ಮ ಎಲ್ಲಾ ಹೊಲಕ್ಕೂ ಉದ್ದs ಬಿತ್ತಿದ್ರು. ಬಂಪರ್ ಬೆಳೀ ಬಂತು. ರೈತರ್ಗೆಲ್ಲಾ ಖುಷೀನೋ ಖುಷಿ! ‘ಈ ವರಸ ಲಾಟರೀ ಹೊಡೀತ್ಲೆ ತಮ್ಮಾ’ ಅನಕೊಂತ ಕಣಾ ಮಾಡಿ, ಉದ್ದಿನ ಮೂಟೆಗಳ್ನ ಹೇರ್ಕೊಂಡು ಮಾರ್ಕೆಟ್ಗೆ ಹೋದ್ರು. ಅಲ್ಲೆ ದಲ್ಲಾಲಿ ಮಾಮಾಗಳು ಹೊಂಚ್ ಹಾಕ್ಕೊಂಡs ಕುಂತಿದ್ರು. ಭರಪೂರ ಬೆಳೀ ಬಂದದ್ದರ ನೆವಾ ಹೇಳಿ, ಕ್ವಿಂಟಲ್ಗೆ ಹನ್ನೆರಡು ಸಾವಿರ ಇದ್ದ ಉದ್ದಿನ ರೇಟನ್ನ ನಾಕೂವರೆ ಸಾವಿರಕ್ಕ ಇಳಿಸಿಬಿಟ್ರು! ಮಾರ್ಕೆಟ್ಟಿಗೆ ತಂದಿದ್ದ ಉದ್ದಿನ ಚೀಲಾ ವಾಪಸು ಒಯ್ಯಲಾರ್ದs ಕಣ್ಣೀರು ಹಾಕಿದ ರೈತ್ರು, ಅಗ್ಗಕ್ಕ ಮುಗ್ಗ ಜ್ವಾಳಾ ಮಾರೂವಂಗ, ವ್ಯಾಪಾರಸ್ತ್ರು ಕೇಳಿದ ರೇಟಿಗೆ ತೂಕಾ ಮಾಡಿ ಒಗದು, ಬಂದಷ್ಟು ರೊಕ್ಕಾ ತೊಗೊಂಡು, ಬಂದ್ ದಾರೀಗೆ ಸುಂಕ ಇಲ್ಲನ್ನೂವಂಗ ತಮ್ಮೂರ್ಗೆ ಹೊಳ್ಳಿ ಹೋದ್ರು. ಬೆಳೀ ಬೆಳ್ಯಾಕ ಮಾಡಿದ ಸಾಲಾ ತೀರ್ಲಿಲ್ಲ. ದುಡದು ಸಣ್ಣಗಾದ ಹೊಟ್ಟೀಗೂ ನಾಕು ದುಡ್ಡು ಉಳೀಲಿಲ್ಲ. ಇದು ಎರ್ಡು ವರ್ಷದ ಹಿಂದ ನಡದಂಥಾ ರೈತರ ಕತಿ ಅಲ್ಲ; ಖರೇ ಸ್ಥಿತಿ.

ಈ ವ್ಯಾಳೇದಾಗ ನಡದಂಥಾ ಇನ್ನೂ ಒಂದ್ ಕರಾಮತ್ತನ್ನ ಇಲ್ಲೆ ಗಮನಿಸ್ಬೇಕು. ಈ ಹಿಂದ ಉದ್ದಿನಬ್ಯಾಳೀ ರೇಟು ಗಗನಕ್ಕ ಏರೇತೆಂತ ಉದ್ದಿನ ವಡಾದ ರೇಟ್ನ ಹೋಟೆಲ್ಲಿನವ್ರು ಏನು ಏರಸಿದ್ದರಲ್ಲ, ಅವರ್ಗೇ ಮತ್ತೆ ಈಗ ಬಂಪರ್ ಹೊಡೀತು. ಈಗ ಉದ್ದಿನ ಬ್ಯಾಳೀ ರೇಟು ಅರವತ್ತೈದು-ಎಪ್ಪತ್ತಕ್ಕ ಇಳದಿದ್ದು ಅವರ್ಗೆ ಖುಷಿನೋ ಖುಷಿ! ಅಗ್ಗಕ್ಕ ತಂದ್ರು, ವಡಾ ಮಾಡಿದ್ರು, ಇಡ್ಲಿ ಕೂಡ ಅದs ವಡಾ ಇಟ್ಟು, ಎರ್ಡ್ ವರ್ಷದ ಹಿಂದ ಇಪ್ಪತ್ತು ರೂಪಾಯ್ಗೆ ಏನು ಏರಸಿದ್ರಲ್ಲಾ, ಅದs ರೇಟಿಗೆ ಮಾರಾಟ ಮಾಡಿ ಮತ್ತ ಡಬಲ್ ಆಮದಾನಿ ಹೊಡಕೊಳ್ಳಾಕ ಹತ್ತಿದ್ರು. ಶಾರದ ಜನಾ ಆವಾಗ್ಲೂ ಕಣ್ಣು ಮುಚಗೊಂಡs ವಡಾ ತಿಂದ್ರು. ಆದ್ರ ಉದ್ದು ಬೆಳದು ಪಾಪರಾದ ರೈತ್ರು ಪ್ಯಾಟೀಗೆ ಬಂದಾಗ ಆಗ್ಲುನೂ ಉದ್ದಿನ ವಡಾ ತಿನ್ನಾಕ ಸಾಧ್ಯನs ಆಗ್ಲಿಲ್ಲ! ಯಾಕಂದ್ರ ಅವರ ಹಂತೇಕ ರೊಕ್ಕಾ ಇರ್ಲಿಲ್ಲ! ಹೆಂಗ್ ಐತಿ ನೋಡ್ರಿ ಈ ಲೆಕ್ಕ?

ರೈತ ಚೊಲೋತಾಗಿ ಬೆಳೀ ಬೆಳದಾಗ ಆ ಉತ್ಪನ್ನದ ರೇಟನ್ನ ನೆಲಕ್ಕ ಇಳಿಸಿ ತಮ್ಮ ಲಾಭಾ ಮಾಡ್ಕೊಳ್ಳೋ ದಲ್ಲಾಳಿಗಳ ಹಿಕಮತ್ತು ಒಂದ್ ಕಡೆ. ಅದಕ್ಕ ಮಾರ್ಕೆಟ್ಟಿನ್ಯಾಗ ತಮಗ ಬೇಕಾದಂಗ ರೇಟು ಇಟ್ಟು ಮಾರೂವಂಥ ಅಂಗಡೀಕಾರರ ಲಾಭದ ದಂಧೇ ಮತ್ತೊಂದ್ ಕಡೆ. ಅಲ್ಲಿಂದ ಕಡಿಮಿ ರೇಟಿಗೆ ಕೊಂಡು ತಂದು, ವಡಾ ಮಾಡಿ ತಾಂವು ಒಮ್ಮೆ ನಿರ್ಧಾರಾ ಮಾಡಿದ ರೇಟನ್ನ ಯಾವ ಕಾರ್ಣಕ್ಕೂ ಇಳಿಸ್ದಂಗ ನೋಡ್ಕೊಂಡು ವ್ಯಾಪಾರಾ ಮಾಡೂ ಹೋಟೆಲ್ಲಿನ ಬಿಜಿನೆಸ್ಸಿನ ಮಂದಿ ಮತ್ತೊಂದ್ ಕಡೆ. ಈ ಎಲ್ಲಾ ಮಂದೀ ನಡುವೆ ಉದ್ದು ಬೆಳದು ಬುದ್ದೂ ಆದ ರೈತಗ ಮಾತ್ರ ಅಕ್ಕಡೆ ರೇಟೂ ಇಲ್ಲ, ಇಕ್ಕಡೆ ಉದ್ದಿನ ವಡಾನೂ ಸಿಗೂವಂಗಿಲ್ಲ! ಎದಕ್ಕಪಾ ರೈತರ ಬಾಳೇ ಅನಸೂದು ಇದಕ್ಕs. ಉದ್ದಿನ ಬ್ಯಾಳಿ ಮತ್ತು ಉದ್ದಿನ ವಡಾದ ಅರ್ಥರಾಜಕಾರಣ, ರೈತರ ದೈನೇಸಿ ಸ್ಥಿತಿಗೆ ಒಂದ್ ಸಣ್ಣ ಉದಾಹರ್ಣೆ ಮಾತ್ರ. ಯಾವ ಬೆಳೀ ಬೆಳದ್ರೂ ಅವನ ಹಣೇಬಾರಾ ಇದಕಿಂತ ಬ್ಯಾರೇ ಏನೂ ಇರುದಿಲ್ಲ.

ತಾನು ಬೆಳದ ಬೆಳೀಗೆ ರೈತ ರೇಟು ಮಾಡುವಂಗಿಲ್ಲ. ಆದ್ರ ವ್ಯಾಪಾರಸ್ತ್ರು, ಬಿಜಿನೆಸ್ಸಿನವ್ರು ಬೇಕಾದ್ದಂಗ್ ರೇಟು ಏರಸಬೌದು. ರೈತನ ಬೆಳೀ ರೇಟು ಏರೂದದಂತೂ ಯಾವಾಗ್ಲೂ ಸಾಧ್ಯನs ಇಲ್ಲ. ವ್ಯಾಪಾರಸ್ಥರು ಮಾತ್ರ ಅದನ್ನ ವ್ಯಾಳೆ ನೋಡ್ಕೊಂಡು ಇಳಸೂದು, ಏರ್ಸೂದು ಮಾಡ್ಕೊಂತನs ಇರ್ತಾರ. ಅಕ್ಕಡೆ, ಹೋಟೆಲ್ಲಿನ ರೇಟು ಒಮ್ಮೆ ಏರಿದ್ರ ಮುಗೀತು, ಅದು ಇಳಿಯೂದs ಇಲ್ಲ. ಬೇಕಾದ್ರ ಈಗ್ಲೂ ನೋಡ್ರಿ, ಉದ್ದಿನ ವಡಾದ ರೇಟು ಇಪ್ಪತ್ತs ಐತಿ, ಉದ್ದಿನ ಬ್ಯಾಳೀ ರೇಟು ಎಪ್ಪತ್ತಕ್ಕ ಇಳದೈತಿ. ಬೆಳದವ್ರಿಗೂ ಲಾಭಿಲ್ಲ; ತಿನ್ನವ್ರಿಗೂ ಲಾಭಿಲ್ಲ. ನಡವಿನವ್ರs ಎಲ್ಲಾ ಹೊಡಕೊಳ್ಳವ್ರು, ತಿನ್ನವ್ರು! ಒಬ್ಬರ ಕಣ್ಣೀಗೆ ಸುಣ್ಣ; ಮತ್ತೊಬ್ಬರ ಕಣ್ಣೀಗೆ ಬಣ್ಣಾ! ಇದ್ಯಾವ ಅರ್ಥವ್ಯವಸ್ಥಾ? ದೊರೀಗಳು ಕಣ್ಣು ಮುಚಗೊಂಡು ಕುಂದರಬಾರ್ದು. ರೈತ ಉದ್ಧಾರಾಗೂದು ಹೆಂಗಂತ ವಿಚಾರಾ ಮಾಡ್ಬೇಕು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !