ಶುಕ್ರವಾರ, ನವೆಂಬರ್ 22, 2019
27 °C

ಗ್ರಾಮ ಸ್ಥಳಾಂತರ: ಉತ್ತರವಿಲ್ಲದ ಪ್ರಶ್ನೆ

Published:
Updated:
Prajavani

ಸಾವೇ ಎದುರಿಗೆ ನಿಂತು ಎದೆಗೆ ಗುದ್ದುವಾಗ ರಕ್ಷಣೆಗಾಗಿ ಎದ್ದೋಡದೆ, ಅಲ್ಲಿಯೇ ಉಳಿಯುವುದು ಮೂರ್ಖತನವಾಗುತ್ತದೆ. ಪ್ರವಾಹದಲ್ಲಿ ತಮ್ಮ ಬದುಕೇ ತೇಲಿ ಹೋದಂತೆ ಆಗಿರುವ ನದಿ ತೀರದ ಗ್ರಾಮೀಣರಿಗೆ, ಸಾವಿನ ದವಡೆಯಿಂದ ಪಾರಾಗಲು ಎದ್ದೋಡಬೇಕಾದ ಅನಿವಾರ್ಯ ಸ್ಥಿತಿ ಇದೆ.

ಕೃಷ್ಣಾ, ದೂಧ್‌ಗಂಗಾ, ಪಂಚಗಂಗಾ, ವೇದಗಂಗಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ಮಲಪ್ರಭಾ, ಮಹದಾಯಿ ನದಿಗಳು ಹಾಗೂ ಕಳಸಾ-ಬಂಡೂರಿ, ಬಳ್ಳಾರಿ ನಾಲಾದಂಥ ಸಣ್ಣಪುಟ್ಟ ಹಳ್ಳಕೊಳ್ಳಗಳು ಉತ್ತರ ಕರ್ನಾಟಕದ ನಾಗರಿಕತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ, ಅವೇ ಈಗ ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಇಂಥದ್ದೊಂದು ದುರಂತ ಸ್ಥಿತಿ 14 ವರ್ಷಗಳ ಹಿಂದೆಯೇ, ಅಂದರೆ 2005ರಲ್ಲಿ ಸಂಭವಿಸಿ ‘ಹೇಗೋ ಬದುಕಿದೆವು’ ಎಂದು ನಿಟ್ಟುಸಿರುಬಿಟ್ಟು ಜೀವಿಸುತ್ತಿರುವಾಗ, ಈ ವರ್ಷ ಈ ನದಿಗಳೆಲ್ಲ ಮತ್ತೊಮ್ಮೆ ಅಬ್ಬರಿಸಿ ಬಂದು ಅಪ್ಪಳಿಸಿ, ಸಿಕ್ಕಿದ್ದನ್ನೆಲ್ಲ ತಮ್ಮ ಉಡಿಯೊಳಗೆ ತುಂಬಿಕೊಂಡು ಹೋಗಿವೆ.

ತಮ್ಮ ಪ್ರಕ್ಷುಬ್ಧತೆಯನ್ನು ನಿಯಂತ್ರಿಸಿಕೊಂಡು ಒಡಲು ಸೇರುವಾಗ ‘ನಿಮ್ಮ ಜಾಗ ಬಿಟ್ಟು ನನ್ನ ಪಾತ್ರದಲ್ಲಿ ಉಸಿರಾಡಿದರೆ ನೋಡಿ, ಈಗ ಉಳಿಸಿರುವುದರಲ್ಲಿ ಇನ್ನು ಏನನ್ನೂ ಉಳಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿರುವುದು, ನದಿಗಳ ಪಾತ್ರದ ಗ್ರಾಮಸ್ಥರಲ್ಲಿ ನಡುಕ ಉಂಟು ಮಾಡಿದೆ. ಈ ಹಿಂದೆ, ಇಷ್ಟೊಂದು ಭಯಂಕರ ಸ್ಥಿತಿಯಲ್ಲಿ ಎರಗದ ಈ ನದಿ, ಹಳ್ಳಕೊಳ್ಳಗಳು ಇಂದು ಹಾರಿ ಬರುತ್ತಿರುವುದು, ಮಾನವ ಕೃತ್ಯದ ಆಕ್ರಮಣಶೀಲ ಪ್ರವೃತ್ತಿಯ ಪ್ರತಿಫಲ ಎಂಬುದರಲ್ಲಿ ಎರಡು ಮಾತಿಲ್ಲ.

ನದಿಗಳ ಉಗ್ರತೆಯಿಂದ ಬದುಕು ಕಳೆದುಕೊಂಡು ಬೆದರಿರುವ ನದಿಪಾತ್ರದ ಗ್ರಾಮಗಳು ಸುರಕ್ಷಿತ ಸ್ಥಳಗಳಿಗೆ ಶಾಶ್ವತವಾಗಿ ಸ್ಥಳಾಂತರಗೊಳ್ಳಲು ಹಾತೊರೆಯುತ್ತಿವೆ. ‘ನಮಗೆ ಬದುಕಲು ಅವಕಾಶ ಮಾಡಿಕೊಡಿ’ ಎಂದು ಸರ್ಕಾರದ ಎದುರು ಅಂಗಲಾಚುತ್ತಿವೆ. ಸರ್ಕಾರವಾದರೂ ‘ನಾವು ಸುರಕ್ಷಿತ ಸ್ಥಳಗಳಿಗೆ ಎದ್ದುಬರುತ್ತೇವೆ ಎಂದು ಬರೆದುಕೊಡಿ’ ಎಂದು ಬಾಂಡ್‍ಪೇಪರ್ ಮುಂದಿಟ್ಟಿದೆ.

ಸರ್ಕಾರದ ಈ ಷರತ್ತಿನಿಂದಾಗಿ, ಗ್ರಾಮಸ್ಥರು ಗಲಿಬಿಲಿಗೊಂಡು ಪರಸ್ಪರ ಮುಖ ನೋಡಿಕೊಳ್ಳಲು ಶುರುಹಚ್ಚಿಕೊಂಡಿದ್ದಾರೆ. ಆರ್ಥಿಕವಾಗಿ ಭದ್ರವಾಗಿ ಇರುವವರು ಎದ್ದುಹೋಗಲು ಸಿದ್ಧರಾದವರ ಕಣ್ಣಿಗೆ ಬೀಳುತ್ತಿಲ್ಲ. ಕೆಲವರು ಕಾಯ್ದು ನೋಡುವ ಪ್ರವೃತ್ತಿ ಅನುಸರಿಸುತ್ತಿದ್ದಾರೆ. ಆದರೆ, ಊರಲ್ಲಿ ಬದುಕಿನ ಯಾವುದೇ ಬೇರೂ ಇಲ್ಲದ ದುರ್ಬಲರು ಮಾತ್ರ ತಮ್ಮ ಗಂಟುಮೂಟೆ ಕಟ್ಟಿಕೊಂಡು ತಯಾರಾಗಿ ನಿಂತಿದ್ದಾರೆ.

ಈ ಮಧ್ಯೆ, ಸರ್ಕಾರ ಮುಳುಗಡೆಯ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಸಿದ್ಧ ಎಂದು ಹೇಳಿಯೂ ಮುರಿದುಬಿದ್ದ ಮನೆಗಳನ್ನು ಅಲ್ಲಿಯೇ ಕಟ್ಟಿಕೊಳ್ಳಲು ಹಣಕಾಸಿನ ಸಹಾಯ ನೀಡಲು ಮುಂದಾಗಿದೆ. ಗ್ರಾಮಗಳ ಸ್ಥಳಾಂತರವು ಆರ್ಥಿಕ ದೃಷ್ಟಿಯಿಂದ, ಹೇಳಿದಷ್ಟು ಸುಲಭದ ಮಾತಲ್ಲ ಎಂಬುದನ್ನು ಅರಿತಿರುವ ಸರ್ಕಾರ, ‘ಈ ಹಿಂದೆ 2009ರಲ್ಲಿ ಗ್ರಾಮಗಳನ್ನು ಸ್ಥಳಾಂತರಿಸಿದಾಗ ಅದೆಷ್ಟೋ ಜನರು ಅಲ್ಲಿಗೆ ತೆರಳದೆ ಮೂಲ ನೆಲೆಯಲ್ಲಿಯೇ ಉಳಿದುಕೊಂಡಿದ್ದಾರೆ. ಹಾಗಾಗುವುದಾದರೆ, ಸ್ಥಳಾಂತರ ಉಪಯೋಗಕ್ಕೆ ಬಾರದು. ಪ್ರವಾಹವೇನೂ ನಿರಂತರ ಸಂಭವಿಸುವಂತಹದ್ದಲ್ಲ. ತಾವು ಇರುವಲ್ಲಿಯೇ ಇರುವುದಾಗಿ ತಿಳಿಸಿದರೆ, ಮನೆ ಕಳೆದುಕೊಂಡವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು’ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಿದೆ.

ಗ್ರಾಮಗಳ ಸ್ಥಳಾಂತರ ಎಂದರೆ ಕೇವಲ ಮನುಷ್ಯರನ್ನು ಬೇರೆಡೆ ಸಾಗಿಸುವುದಲ್ಲ. ಗಳಿಸಿಟ್ಟ ಆಸ್ತಿ, ಅಂತಸ್ತುಗಳನ್ನು ಹೊಸ ಜಾಗದ ಹೊಸ ಬದುಕಿಗೆ ಹೊತ್ತು ಸಾಗುವುದು; ನೂರಾರು ವರ್ಷಗಳಿಂದ ನದಿಗಳೊಂದಿಗೆ ಬೆಸೆದ ಭಾವ ಹಾಗೂ ಕಟ್ಟಿಕೊಂಡ ಸಾಮೂಹಿಕ ಬದುಕಿನ, ಸಾಂಸ್ಕೃತಿಕ ಜೀವನದ ಆಳವಾದ ಬೇರುಗಳನ್ನು ಕತ್ತರಿಸಿಕೊಳ್ಳುವುದು. ನವವಧು ತವರು ಬಿಟ್ಟು ಗಂಡನ ಮನೆಗೆ ಸಾಗುವಾಗ ಆಗುವ ತಳಮಳಕ್ಕಿಂತ ಅಧಿಕವಾದ ವೇದನೆ. ಅತಿವೃಷ್ಟಿಯ ಭೋರ್ಗರೆತದ ಸಂದರ್ಭದಲ್ಲಿ ನದಿ ನೀರು ಎದ್ದುಬಂದು ಎದೆಗೆ ಗುದ್ದುವಾಗ ಈ ಸಾಂಸ್ಕೃತಿಕ ಬೇರುಗಳು ಕಾಡುವುದಿಲ್ಲ. ಆದರೆ, ನದಿಗಳು ತಮ್ಮ ಒಡಲು ಸೇರಿಕೊಂಡಾಗ ಈ ಬೇರುಗಳು ತಡೆಯೊಡ್ಡುತ್ತವೆ.

ಗ್ರಾಮಗಳ ಸ್ಥಳಾಂತರ ಎಂದರೆ ಕೇವಲ ಮಂದಿಯನ್ನು ಸಾಗಿಸುವುದಲ್ಲ. ಅವರ ಬದುಕಿನ ಜೊತೆಗಿರುವ ಭೌತಿಕ ಸಂಬಂಧಗಳನ್ನೆಲ್ಲಾ ಸಾಗಿಸಿ ಹೊಸ ಊರುಗಳನ್ನೇ ಸೃಷ್ಟಿಸಬೇಕಾಗುತ್ತದೆ. ಈಗಿನ ಊರುಗಳಲ್ಲಿ ಬಿಲ್ಡಿಂಗುಗಳು ಇರುವಂತೆ ಸಾಧಾರಣ ಮನೆಗಳು, ಗುಡಿಸಿಲುಗಳೂ ಇವೆ. ನೂರಾರು ಎಕರೆ ಹೊಲಗಳಿರುವಂತೆ, ಒಂದೆರಡು ಎಕರೆ ಜಮೀನುಗಳನ್ನು ಹೊಂದಿದವರೂ ಇದ್ದಾರೆ. ದೂರದ ಗುಡ್ಡದ ಮೇಲಕ್ಕೆ ಊರನ್ನು ಸಾಗಿಸಿದರೆ, ಊರನ್ನು ಸೃಷ್ಟಿಸಿದ ಹೊಲ, ಮನೆಗಳ ಗತಿಯೇನು? ಸಂಪರ್ಕ ಸಾಧ್ಯತೆ ಹೇಗೆ? ಮುಖ್ಯ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳು ಇನ್ನೂ ಹೊರಬಂದಿಲ್ಲ. ಇಷ್ಟಾಗಿಯೂ ಬಿಲ್ಡಿಂಗುಗಳಲ್ಲಿ ಜೀವಿಸಿದವರ ಬದುಕಿನ ರೀತಿ, ಸ್ಥಳಾಂತರದ ಜಾಗದಲ್ಲಿ ಹೇಗೆ? ಅವರಿಗೆ ಸರ್ಕಾರ ಬಿಲ್ಡಿಂಗನ್ನೇ ನಿರ್ಮಿಸಿಕೊಡುವುದೋ ಹೇಗೆ? ಹೀಗೆ ಬಿಡಿಸಲು ಕಷ್ಟ ಎನಿಸುವ ನೂರಾರು ಪ್ರಶ್ನೆಗಳು ಗ್ರಾಮಗಳ ಸ್ಥಳಾಂತರ ಸಾಧ್ಯತೆಯ ಹಿಂದೆ ಸಂತ್ರಸ್ತರನ್ನು ಕಾಡುತ್ತಿವೆ. ಇವಕ್ಕೆಲ್ಲ ಉತ್ತರ ನೀಡುವವರು ಯಾರು?

ಪ್ರತಿಕ್ರಿಯಿಸಿ (+)