ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಎಲ್ಲಿದೆ ಭ್ರಷ್ಟಾಚಾರ ನಿಗ್ರಹಾಸ್ತ್ರ?

ಚುನಾವಣಾ ವ್ಯವಸ್ಥೆಯ ಲೋಪಗಳ ನಿವಾರಣೆಗೆ ನಾಗರಿಕರು ಒತ್ತಡ ಹೇರಬೇಕಾಗಿದೆ
Published 24 ಏಪ್ರಿಲ್ 2024, 19:30 IST
Last Updated 24 ಏಪ್ರಿಲ್ 2024, 19:30 IST
ಅಕ್ಷರ ಗಾತ್ರ

ರಾಜ್ಯ ವಿಧಾನಸಭೆಗೆ ಮೊನ್ನೆ ಮೊನ್ನೆ ಚುನಾವಣೆ ನಡೆದಂತಿದೆ. ಅಷ್ಟರಲ್ಲೇ ಲೋಕಸಭಾ ಚುನಾವಣೆ ಎದುರಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗವು ಎಲ್ಲ ಬಗೆಯ ಪ್ರಯತ್ನಗಳನ್ನೂ ಮಾಡುತ್ತಿದೆ. ಆದರೆ ಚಿಂತೆಯಿರುವುದು ಚುನಾವಣಾ ನೀತಿ ಸಂಹಿತೆಯೆಂಬ ರಂಗೋಲಿಯ ಕೆಳಗೆ ತೂರುತ್ತಾ ದಿನೇದಿನೇ ಬದಲಾಗುತ್ತಿರುವ ಚುನಾವಣೆಯ ಸ್ವರೂಪದ ಬಗ್ಗೆ ಮಾತ್ರ.

ದೇಶದ ಬಹುಮುಖ್ಯ ರೋಗವಾಗಿ ಹಬ್ಬಿರುವ ಭ್ರಷ್ಟಾಚಾರದ ತಾಯಿಬೇರು ಇರುವುದೇ ನಮ್ಮ ಈ ಚುನಾವಣಾ ಸ್ವರೂಪದಲ್ಲಿ. ಗ್ರಾಮ ಪಂಚಾಯಿತಿ ಚುನಾವಣೆಗೆ ಕೋಟಿ ಹಣ ವ್ಯಯಿಸಿದ ಉದಾಹರಣೆಗಳಿವೆ! ಶಾಸನಸಭಾ ಚುನಾವಣೆಗೆ ಹಲವು ಕೋಟಿಗಳಷ್ಟು ಹಣ ವಿನಿಯೋಗಿಸಬೇಕಾದ ಸಂದರ್ಭದಲ್ಲಿ, ಗೆದ್ದುಬಂದವರು ಚುನಾವಣೆಗಾಗಿ ತಾವು ಚೆಲ್ಲಾಡಿದ ಹಣವನ್ನು ಶಕ್ತಿಮೀರಿ ದೋಚಿಕೊಳ್ಳಲು ತಮ್ಮ ಕಾಲಾವಧಿಯನ್ನು ಮೀಸಲಿಡುತ್ತಾರೆ. ಅದಕ್ಕಾಗಿ ಅವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು, ಎಂತಹ ದಂಧೆಕೋರರೊಂದಿಗೆ ಬೇಕಾದರೂ ಕೈಜೋಡಿಸಬಲ್ಲರು ಎಂಬುದಕ್ಕೆ ನಿದರ್ಶನಗಳು ಹೇರಳವಾಗಿ ಸಿಗುತ್ತವೆ.

ದುರಂತವೆಂದರೆ, ಮತದಾನವನ್ನು ಮೂರ್ಕಾಸು ಹಣ, ಮದ್ಯ, ಸೀರೆ, ಕುಕ್ಕರ್‌ನಂತಹ ವಸ್ತುಗಳನ್ನು ಗಿಟ್ಟಿಸಿಕೊಳ್ಳುವ ಸಾಧನವನ್ನಾಗಿ ಮಾಡಿಕೊಳ್ಳುತ್ತಿರುವ ಬೇಜವಾಬ್ದಾರಿಯ ಮತದಾರರು, ದೇಶದ ಸಂಪನ್ಮೂಲಗಳನ್ನು ದೋಚಲು ರಾಜಕಾರಣಿಗಳಿಗೆ ‘ಪರವಾನಗಿ’ ಕರುಣಿಸುತ್ತಾರೆ! ನೀತಿಗೆಟ್ಟ ರಾಜಕೀಯದಲ್ಲಿ ತೊಡಗಿಕೊಂಡ ವ್ಯವಸ್ಥೆಗಳು ರಾಜಕೀಯವನ್ನು ಉದ್ದಿಮೆ ಮಾಡಿಕೊಂಡು ಹಣ ಹೂಡುತ್ತಿವೆ. ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿಯೇ ರಾಶಿ ರಾಶಿ ಹಣ ಪೇರಿಸಿಡಬೇಕಾದ ಅನಿವಾರ್ಯ ರಾಜಕಾರಣಿಗಳದ್ದು. ಇದು, ಚುನಾವಣೆಯಿಂದ, ಚುನಾವಣೆಗೋಸ್ಕರ ಭ್ರಷ್ಟಾಚಾರ ಎಂಬಂತಿರುವ ವಿಪರ್ಯಾಸದ ಕಾಲಘಟ್ಟವೂ ಹೌದು.

ವಿಷಚಕ್ರದಂತೆ ಗೋಚರಿಸುತ್ತಿರುವ ಈ ಭ್ರಷ್ಟಾಚಾರದ ಸುಳಿಯಿಂದ ದೇಶವನ್ನು ಪಾರು ಮಾಡಬೇಕಾಗಿದೆ. ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ಪ್ರಸ್ತಾವವು ಬಹಳ ಹಿಂದಿನಿಂದಲೂ ಪ್ರಸ್ತಾಪ ಆಗುತ್ತಲೇ ಇದೆ. ಆದರೆ ಅದನ್ನು ಕ್ರಿಯೆಗೆ ಇಳಿಸುವ ಇಚ್ಛಾಶಕ್ತಿಯನ್ನು ಇದುವರೆಗೆ ದೇಶವನ್ನು ಮುನ್ನಡೆಸಿದ ಯಾವ ಪಕ್ಷವೂ ಪ್ರದರ್ಶಿಸಿಲ್ಲ. ಕೋಟಿಗಟ್ಟಲೆ ಹಣ ಚೆಲ್ಲಲು ಆಸ್ಪದವೇ ಇಲ್ಲದ ಚುನಾವಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಲ್ಲಿ, ಸಮಾಜವನ್ನು ಗ್ಯಾಂಗ್ರಿನ್‌ನಂತೆ ವ್ಯಾಪಿಸಿರುವ ಭ್ರಷ್ಟಾಚಾರದ ವ್ಯಾಧಿಗೆ ಅದು ಸೂಕ್ತ ಔಷಧ ಮತ್ತು ಸಮಯೋಚಿತ ಚಿಕಿತ್ಸೆ ಆಗಬಲ್ಲದು.

ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಸದಸ್ಯರಾಗಿರುವ ಹಲವರು ಹದಿನೆಂಟನೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದವರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಅಲ್ಲಿ ಮತ್ತೊಂದು ಚುನಾವಣೆಗೆ ಕಾರಣರಾಗುತ್ತಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದವರು ಎರಡೂ ಕಡೆ ಗೆದ್ದರೆ ಫಲಿತಾಂಶ ಹೊರಬಿದ್ದ ಬಳಿಕ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಅಲ್ಲೆಲ್ಲಾ ಆರು ತಿಂಗಳೊಳಗೆ ಮರುಚುನಾವಣೆ! ಅಂತಹ ಸಂದರ್ಭಗಳಲ್ಲಿ ಆ ನಿರ್ದಿಷ್ಟ ಕ್ಷೇತ್ರಗಳ ಮತದಾರರ ತೀರ್ಪನ್ನು ಅಣಕಿಸುವಂತಹ ಪರಿ ಇದು. ಇದರಿಂದಾಗಿ ಆಡಳಿತ ಯಂತ್ರದ ಅಮೂಲ್ಯ ಸಮಯ ಮತ್ತು ಶ್ರಮದ ದುರ್ವಿನಿಯೋಗ. ಆಡಳಿತಾತ್ಮಕವಾಗಿ ಅಥವಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಯಾಪೈಸೆ ಪ್ರಯೋಜನ ಇರುವುದಿಲ್ಲ. ನಾಗರಿಕರ ತೆರಿಗೆ ಹಣ ಪೋಲಾಗುತ್ತದೆ ಅಷ್ಟೆ.

ರಾಜಕೀಯ ಪಕ್ಷಗಳ ಈ ಬಗೆಯ ಮೇಲಾಟಗಳಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ ಆಗುತ್ತದೆ ಮಾತ್ರವಲ್ಲ ಒಂದು ಚುನಾವಣೆ ಎದುರಾಯಿತೆಂದರೆ, ಆರು ತಿಂಗಳಿಗೂ ಹೆಚ್ಚುಕಾಲ ಆಡಳಿತಯಂತ್ರ ಹಗಲಿರುಳು ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಆದ್ಯತೆಯನ್ನು ಬೇಡುವ ಕೆಲಸಗಳೂ ಮೂಲೆ ಗುಂಪಾಗುತ್ತವೆ. ಜನರ ದೈನಂದಿನ ಕಾರ್ಯಗಳಿಗೂ ಅಡಚಣೆ ಆಗುತ್ತದೆ.

ಈ ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳ ಕುರಿತು ಪ್ರಜ್ಞಾವಂತ ನಾಗರಿಕರು ಮುಂದಿನ ದಿನಗಳಲ್ಲಾದರೂ ದನಿ ಎತ್ತಬೇಕು. ನಿವಾರಣೆಗೆ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಬೇಕು. ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಜನಾಂದೋಲನ ರೂಪಿಸುವ ತುರ್ತು ಇದೆ. ಇದರ ಅಗತ್ಯವನ್ನು ಜನಸಾಮಾನ್ಯರಿಗೂ ಮನಗಾಣಿಸಬೇಕು. ಚುನಾವಣೆಯ ಪೂರ್ಣ ವೆಚ್ಚವನ್ನು ಆಯೋಗವೇ ನಿಭಾಯಿಸುವಂತಾಗಬೇಕು. ಒಮ್ಮೆ ಆಯ್ಕೆಯಾದ ನಂತರ ಸ್ವಾರ್ಥ ಸಾಧನೆಗಾಗಿ ಅವಧಿಗೆ ಮುನ್ನ ರಾಜೀನಾಮೆ ನೀಡಿದರೆ ಅಂಥವರಿಂದ ಚುನಾವಣಾ ವೆಚ್ಚವನ್ನು ವಸೂಲಿ ಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಬೇಕು. ವಿಧಾನಸಭಾ ಸದಸ್ಯರಾಗಿರುವವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಯಸಿದರೆ ಅಂಥವರು ನಾಮಪತ್ರ ಸಲ್ಲಿಸುವುದಕ್ಕೂ ಮೊದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ನಿಯಮ ರೂಪಿಸುವುದು ಸೂಕ್ತವೆನಿಸುತ್ತದೆ. ಒಮ್ಮೆಗೆ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಇರಬೇಕು.

ಚುನಾವಣಾ ಆಯೋಗವು ಸಂಪೂರ್ಣ ಸ್ವಾಯತ್ತ ನೆಲೆಯಲ್ಲಿ ಕೆಲಸ ನಿರ್ವಹಿಸುವಂತಹ ವಾತಾವರಣವನ್ನು ನಮ್ಮ ಆಡಳಿತಾರೂಢರು ಸೃಷ್ಟಿಸಬೇಕು. ಆಯೋಗದ ಕಾರ್ಯದಕ್ಷತೆಯ ಬಗ್ಗೆ ಹೆಚ್ಚು ನಿರೀಕ್ಷೆಗಳಿವೆ. ಬೇಕಾಬಿಟ್ಟಿ ನಾಲಿಗೆ ಹರಿಯಬಿಡುವ ಮುಖಂಡರ ವಿರುದ್ಧ ತ್ವರಿತವಾಗಿ ಮತ್ತು ಕಠಿಣ ರೀತಿಯಲ್ಲಿ ಕ್ರಮ ಜರುಗಿಸಬೇಕು. ಆಯೋಗ ಮತ್ತಷ್ಟು ಸುಧಾರಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ ತನ್ನ ನಡೆಯನ್ನು ಹೆಚ್ಚೆಚ್ಚು ಪಾರದರ್ಶಕ ಮತ್ತು ವಿಶ್ವಾಸಾರ್ಹಗೊಳಿಸಿಕೊಳ್ಳುತ್ತಾ ಸಾಗಬೇಕಿದೆ. ಇವೆಲ್ಲಾ ಸಾರ್ವಜನಿಕ ಹಿತಾಸಕ್ತಿಯಿಂದ ಅತ್ಯಂತ ಜರೂರಾಗಿ ಆಗಬೇಕಾದ ಕ್ರಮಗಳು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಉಳಿವು ಮುಕ್ತ, ನ್ಯಾಯಸಮ್ಮತ ಚುನಾವಣೆ-ಮತದಾನದ ಯಶಸ್ಸಿನ ಮೇಲೆಯೇ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT