ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕಾಳಿಂಗಕ್ಕೆ ಬೇಡ ನಮ್ಮ ಕಳಕಳಿ!

ವೈಜ್ಞಾನಿಕ ದೃಷ್ಟಿಕೋನವಿಲ್ಲದ ನಮ್ಮ ಕಳಕಳಿಯು ಕಾಳಿಂಗ ಸರ್ಪದ ಲೋಕದಲ್ಲಿ ಕೋಲಾಹಲವನ್ನೇ ಉಂಟುಮಾಡುತ್ತದೆ
ನಾಗರಾಜ ಕೂವೆ
Published 27 ಫೆಬ್ರುವರಿ 2024, 23:30 IST
Last Updated 27 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಇತ್ತೀಚೆಗೆ ಕರೆ ಮಾಡಿದ ಗೆಳೆಯನೊಬ್ಬ ‘ನಮ್ಮ ತೋಟದಲ್ಲಿ ಕಾಳಿಂಗ ಸರ್ಪವೊಂದು ಓಡಾಡುತ್ತಿದೆ. ಕಾರ್ಮಿಕರು ಕೃಷಿ ಕೆಲಸಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಏನು ಮಾಡುವುದೆಂದೇ ತೋಚುತ್ತಿಲ್ಲ’ ಎಂದು ಅಲವತ್ತುಕೊಂಡ. ಹೀಗೆಂದ ಅವನ ತೋಟವು ಪಶ್ಚಿಮಘಟ್ಟದ ಕಣಿವೆಯಲ್ಲಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳುಗಳಲ್ಲಿ ಕಾಳಿಂಗ ಸರ್ಪಗಳ ಓಡಾಟವಿರುವುದು ತೀರಾ ಸಹಜ. ಏಕೆಂದರೆ ಬೇಸಿಗೆಯು ಅವುಗಳ ಮಿಲನದ ಕಾಲ.

ಕಾಳಿಂಗ ಸರ್ಪ ದೈತ್ಯ ದೇಹಿ. ಹೆಣ್ಣು  ಏಳೆಂಟು ಅಡಿ ಉದ್ದವಿದ್ದರೆ, ಗಂಡು ಅದರ ದುಪ್ಪಟ್ಟು ಉದ್ದ ಬೆಳೆಯಬಲ್ಲದು. ಅವು ಸರಿಸುಮಾರು ಆರರಿಂದ ಹತ್ತು ಕೆ.ಜಿ.ಯವರೆಗೆ ತೂಗಬಲ್ಲವು. ಅವುಗಳ ಭಾರಿ ಗಾತ್ರ ಎಂಥವರಲ್ಲೂ ಒಮ್ಮೆ ನಡುಕ ಹುಟ್ಟಿಸಿಬಿಡುತ್ತದೆ. ಜಗತ್ತಿನ ಅತ್ಯಂತ ವಿಷಕಾರಿ ಸರ್ಪಗಳಾದ ಇವು ಬೇರೆಡೆ ಇದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದು ನಮ್ಮ ಪಶ್ಚಿಮಘಟ್ಟದ ಕಾಡುಗಳಲ್ಲಿ. ಮನುಷ್ಯರ ಮೇಲೆ ದಾಳಿ ಮಾಡಿದ ನಿದರ್ಶನಗಳು ಕಡಿಮೆ. 

ಕಾಳಿಂಗಗಳು ಇಲಿ, ಹೆಗ್ಗಣವನ್ನು ತಿನ್ನಲಾರವು. ಕೇರೆಹಾವು, ನಾಗರಹಾವು, ಹೆಬ್ಬಾವು, ನೀರುಹಾವಿನಂತಹವುಗಳನ್ನು ತಿಂದು ಅವೆಲ್ಲವುಗಳ ಸಂತತಿಯನ್ನು ನಿಯಂತ್ರಣದಲ್ಲಿರಿಸಿ ಪ್ರಕೃತಿಯ ಸಮತೋಲನ ಕಾಪಾಡುತ್ತವೆ. ಅಲ್ಲದೆ ತಮ್ಮ ಸಂಖ್ಯಾಬಾಹುಳ್ಯವನ್ನು ಹತೋಟಿಯಲ್ಲಿಡಲು ಬಲಿಷ್ಠ ಗಂಡುಗಳು ಹೆಣ್ಣನ್ನು, ಹೆಣ್ಣುಗಳು ಮರಿಗಳನ್ನು ತಿನ್ನುತ್ತವೆ. ಹೀಗಿರುವ ಇವುಗಳ ಪಾತ್ರ ಜೀವಪರಿಸರ ವ್ಯವಸ್ಥೆಯಲ್ಲಿ ತುಂಬಾ ಮಹತ್ವವಾದುದು. 

ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ದೇಹದಿಂದ ಫೆರೊಮೋನು ಎಂಬ ಅದೃಶ್ಯ ರಾಸಾಯನಿಕ ಹೊರಹಾಕಿ, ತಾನು ಮಿಲನಕ್ಕೆ ಸಿದ್ಧ ಎಂಬ ಸಂದೇಶವನ್ನು ಗಂಡುಗಳಿಗೆ ರವಾನಿಸುತ್ತದೆ. ಈ ಸೂಚನೆ ಸಿಕ್ಕ ಕೂಡಲೇ ಗಂಡುಗಳು ಹೆಣ್ಣಿನ ಹುಡುಕಾಟವನ್ನು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಕಾಳಿಂಗಗಳು ನಿರ್ದಿಷ್ಟ ಪ್ರದೇಶದಲ್ಲಿ ಒಂಟಿಯಾಗಿ ಬದುಕುತ್ತಿರುತ್ತವೆ. ಐದಾರು ಕಿಲೊಮೀಟರ್ ವ್ಯಾಪ್ತಿಯೊಳಗೆ ಹೆಣ್ಣುಗಳು ವಾಸಿಸಿದರೆ, ಗಂಡುಗಳು ಏಳೆಂಟು ಕಿಲೊಮೀಟರ್ ವ್ಯಾಪ್ತಿಯಲ್ಲಿ ಬದುಕುತ್ತವೆ. ಆದರೆ ಮಿಲನದ ಸಂದರ್ಭದಲ್ಲಿ ಹೆಣ್ಣನ್ನು ಹುಡುಕಿಕೊಂಡು ಗಂಡುಗಳು ಬಹು ದೂರದವರೆಗೂ ಹೋಗುತ್ತವೆ. ಹೆಣ್ಣು ಹೊರಹಾಕಿದ ರಾಸಾಯನಿಕದ ಜಾಡು ಹಿಡಿದು ಹೋಗುವ ಗಂಡುಗಳ ಮಧ್ಯೆ ಭೀಕರ ಕಾಳಗ ಏರ್ಪಡುತ್ತದೆ. ಈ ಕದನದಲ್ಲಿ ಗೆದ್ದ ಗಂಡು ಹೆಣ್ಣನ್ನು ಕೂಡುತ್ತದೆ.

ಕಾಳಿಂಗಗಳ ಮಿಲನ ಕಾಲವಾದ ಬೇಸಿಗೆಯಲ್ಲಿಯೇ ಅವುಗಳ ಓಡಾಟ ಅಧಿಕವಾಗಿರುವುದು‌. ಆಗಲೇ ಅವು ತಿರುಗಾಡುತ್ತಾ ಬಂದು ತೋಟಗಳಲ್ಲಿ, ಮನೆ ಸಮೀಪದಲ್ಲಿ, ಕೊಟ್ಟಿಗೆಯಲ್ಲಿ ಕಾಣಿಸಿಕೊಳ್ಳುವುದು‌. ಆಗ ತಮ್ಮ ಜಾಗಕ್ಕೆ ಹಾವು ಬಂತೆಂಬ ಗಾಬರಿಯಲ್ಲಿ ಜನ ಅದನ್ನು ಹಿಡಿಸಿ ದೂರ ಬಿಡುತ್ತಾರೆ. ಆಗ ಹಿಡಿಸಿ ಬಿಟ್ಟಿದ್ದು ಹೆಣ್ಣಾದರೆ, ಅದಕ್ಕೆ ಗಂಡು ಸಿಗದೇ ಹೋಗಬಹುದು. ಗಂಡು ಸಿಕ್ಕರೂ ಅದರ ಬೆದೆ ಅವಧಿ ಮುಗಿದಿದ್ದರೆ, ಹೆಣ್ಣು ಅದರ ಆಹಾರವೇ ಆಗಿಬಿಡಬಹುದು. ಒಂದುವೇಳೆ ಹಿಡಿಸಿ ದೂರ ಬಿಟ್ಟಿದ್ದು ಗಂಡಾದರೆ, ಅದಕ್ಕೆ ಹೆಣ್ಣಿನ ಜಾಡು ಹಿಡಿಯುವುದು ಕಷ್ಟವಾಗಿ ಮಿಲನ ಸಾಧ್ಯವಾಗದೇ ಹೋಗಬಹುದು. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಹಿಡಿದು ದೂರ ಬಿಡುವುದು ಎಂದಿಗೂ ಸಂರಕ್ಷಣೆ ಆಗುವುದಿಲ್ಲ. ಬದಲಾಗಿ ಕಾಳಿಂಗಗಳ ಬೆದೆ ಚಕ್ರದೊಳಗೆ ಮಾನವನ ಹಸ್ತಕ್ಷೇಪವಾಗುತ್ತದೆ. 

ಹೆಣ್ಣು ಕಾಳಿಂಗ ಗರ್ಭ ಧರಿಸಿದ್ದು ಖಚಿತವಾದೊಡನೆ ಗಂಡಿನಿಂದ ದೂರವಾಗಿ, ಒಂದಷ್ಟು ದಿನ ಎಡೆಬಿಡದೆ ಆಹಾರಾನ್ವೇಷಣೆಯಲ್ಲಿ ತೊಡಗುತ್ತದೆ. ಆಗ ಹಾವುಗಳನ್ನು ಅಟ್ಟಿಸಿಕೊಂಡು ಅದು ಜನವಸತಿ ಪ್ರದೇಶಗಳಿಗೆ ಬರುವುದು. ಆಗ ಅದನ್ನು ಮನುಷ್ಯರು ಹಿಡಿಸಿ ದೂರ ಬಿಟ್ಟಾಗ, ತನ್ನ ವ್ಯಾಪ್ತಿಯಿಂದ ದೂರವಾಗುವ ಅದು ಗಂಡಿನ ಆಹಾರವಾಗಿ ಬಿಡುತ್ತದೆ. ಹೆಣ್ಣಿನೊಂದಿಗೆ ಮುಂದೆ ಹೊರಬರಬೇಕಿದ್ದ ಮರಿಗಳೂ ನಾಶವಾಗು
ತ್ತವೆ. ಕೇರೆಹಾವುಗಳನ್ನು ಅಟ್ಟಿಸಿಕೊಂಡು ಕೃಷಿ ಭೂಮಿಗೆ ಬರುವ ಗಂಡು ಕಾಳಿಂಗವನ್ನು ನಾವು ಹಿಡಿಸಿ ದೂರದ ಕಾಡಿಗೆ ಬಿಟ್ಟರೆ ಅದು ಬದುಕುವ ಸಾಧ್ಯತೆ ತೀರಾ ಕಡಿಮೆ. ತನ್ನ ವ್ಯಾಪ್ತಿ ಬಿಟ್ಟು ಬೇರೆಡೆ ಹೋದಾಗ ಅಲ್ಲಿ ನಡೆಯುವ ಕಾಳಗವು ಒಂದನ್ನು ಬಲಿ ತೆಗೆದುಕೊಳ್ಳುತ್ತದೆ. ಸಂರಕ್ಷಣೆಯ ಹೆಸರಿನಲ್ಲಿ ನಾವು ಅವುಗಳ ಸಮತೋಲನವನ್ನೇ ಹಾಳುಗೆಡವಿದಂತೆ ಆಗುತ್ತದೆ.

‘ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಂಡ ಕೂಡಲೇ ಹಿಡಿದು ದೂರದ ಕಾಡಿಗೆ ಬಿಡುವುದು ಸಂರಕ್ಷಣೆ’ ಎಂಬ ಅಭಿಪ್ರಾಯ ಹಲವು ಉರಗ ಸಂರಕ್ಷಕರಲ್ಲಿದೆ. ಹಾವುಗಳಿಗೆ ತೊಂದರೆಯಾಗಬಾರದೆಂಬ ಕಾಳಜಿಯಿಂದ ಅವರು ಈ ಕೆಲಸ ಮಾಡಿದರೂ ಹೆಚ್ಚಿನ ಬಾರಿ ಇದು ಅವಘಡಕ್ಕೆ ಕಾರಣವಾಗುತ್ತದೆ.

ಆಹಾರ ಹುಡುಕಿಕೊಂಡೋ ಹೆಣ್ಣಿನ ಜಾಡು ಹಿಡಿದೋ ನಾಯಿಗಳ ಭಯಕ್ಕೋ ಇವು ಜನವಸತಿ
ಗಳಲ್ಲಿ ಕಾಣಿಸಿಕೊಳ್ಳಬಹುದು. ಆಗ ಭಯಪಡದೆ ಜಾಗೃತರಾಗಿದ್ದು, ಅವುಗಳ ಪಾಡಿಗೆ ಬಿಟ್ಟರೆ, ಸುರಕ್ಷಿತ ಜಾಗದತ್ತ ತೆರಳುತ್ತವೆ. ತೀರಾ ಅಪಾಯ ಎನಿಸಿದರೆ, ಹಿಡಿದು ಅಲ್ಲೇ ಒಂದೆರಡು ಕಿಲೊಮೀಟರ್ ಒಳಗಿನ ಕಾಡೊಳಗೆ ಬಿಟ್ಟರೆ ಪಾರಾಗುತ್ತವೆ.

ಹಾವುಗಳಿಗೆ ತೊಂದರೆಯಾಗದೆ ಎಂದೂ ಅವು ಮನುಷ್ಯರ ಮೇಲೆ ದಾಳಿ ಮಾಡಲಾರವು. ಆದರೆ ಹಾವುಗಳನ್ನು ಕಂಡಲ್ಲಿ ಹೊಡೆಯುವ, ಅವುಗಳ ಮೊಟ್ಟೆ ನಾಶ ಮಾಡುವ ಕೆಲಸ ಎಲ್ಲೆಡೆ ಅವ್ಯಾಹತವಾಗಿ ನಡೆಯುತ್ತಿದೆ. ಮನುಷ್ಯರ ಅಜ್ಞಾನವು ಅಪೂರ್ವವಾದ  ಜೀವಿಯೊಂದರ ನೆಮ್ಮದಿಯನ್ನೇ ಇಂದು ಕಸಿದಿದೆ. ಹೀಗಾಗಿ, ಉರಗ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಅತಿ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT