ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒ.ಒ.ಡಿ. ಸೌಲಭ್ಯ ಎಂಬ ವ್ಯಸನ!

ಒ.ಒ.ಡಿ. ಎಂದರೆ ರಜೆಯ ಹಕ್ಕಲ್ಲ, ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿಯಷ್ಟೆ ಎಂಬುದನ್ನು ಸರ್ಕಾರಿ ನೌಕರರಿಗೆ ಮನದಟ್ಟು ಮಾಡಿಸಬೇಕಾಗಿದೆ
Last Updated 13 ಮಾರ್ಚ್ 2019, 18:48 IST
ಅಕ್ಷರ ಗಾತ್ರ

ಸರ್ಕಾರಿ ನೌಕರರು, ಅದರಲ್ಲಿಯೂ ಸರ್ಕಾರಿ ಶಾಲೆಯ ಶಿಕ್ಷಕರು ತರಬೇತಿ, ಸಮಾವೇಶ, ಸಮ್ಮೇಳನಗಳಿಗೆ ಹೋಗಲು ‘ಅನ್ಯ ಕಾರ್ಯನಿಮಿತ್ತ ರಜೆ’ಯನ್ನು ನೀಡಲಾಗುತ್ತದೆ. ಅದು ಒ.ಒ.ಡಿ. ಎಂದು ಜನಜನಿತವಾಗಿದೆ. ಇದು ಇತ್ತೀಚೆಗಂತೂ ಒಂದು ವ್ಯಸನದಂತಾಗಿದೆ. ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಸಾಕು, ‘ಒಒಡಿ ಇದೆಯೇ’ ಎಂಬ ಪ್ರಶ್ನೆ ಎದುರಾಗುತ್ತದೆ.

ದಶಕಗಳ ಹಿಂದೆ ತಮಗೆ ಇಷ್ಟವಾದ ಸಭೆ, ಸಮಾರಂಭಗಳಿಗೆ ಹೋಗುವವರು ರಜೆ ಹಾಕಿಕೊಂಡು ಹೋಗುತ್ತಿದ್ದರು. ನಂತರದ ದಿನಗಳಲ್ಲಿ, ಶೈಕ್ಷಣಿಕ ಮೌಲ್ಯವುಳ್ಳ ಸಭೆ ಸಮಾರಂಭಗಳಿಗೆ ಹೋಗಲು ಸರ್ಕಾರ ಒ.ಒ.ಡಿ. ನೀಡಲು ಪ್ರಾರಂಭಿಸಿತು. ಶಿಕ್ಷಕರನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮುನ್ನ ಒ.ಒ.ಡಿ. ವ್ಯವಸ್ಥೆ ಮಾಡಿಸಿದ್ದರೆ ಮಾತ್ರ ಹಾಜರಾತಿ ಪ್ರಮಾಣ ಹೆಚ್ಚುತ್ತದೆ.

ಹೋಗಲಿ, ಒ.ಒ.ಡಿ. ಪಡೆದು ಕಾರ್ಯಕ್ರಮಕ್ಕೆ ಬಂದ ಎಲ್ಲರೂ ಕೊನೆಯವರೆಗೂ ಹಾಜರಿರುತ್ತಾರಾ ಎಂದರೆ ಅದೂ ಇಲ್ಲ. ಕೆಲವರು ಅಲ್ಲಿಯೂ ವೈಯಕ್ತಿಕ ಕೆಲಸ, ಸ್ಥಳೀಯ ಪ್ರವಾಸ ಇವುಗಳನ್ನೆಲ್ಲ ಮುಗಿಸಿಕೊಂಡು, ಕಾರ್ಯಕ್ರಮ ನಡೆಯುತ್ತಿರುವಾಗಲೇ ಮನೆಯ ಕಡೆ ಮುಖ ಮಾಡುತ್ತಾರೆ.ಇತ್ತೀಚೆಗೆ ಇದನ್ನೆಲ್ಲ ಗಮನಿಸಿದ ಸರ್ಕಾರ, ವರ್ಷದಲ್ಲಿ ಒಂದು ಸಂಸ್ಥೆಗೆ ಎರಡು ಬಾರಿ ಮಾತ್ರ ಒ.ಒ.ಡಿ. ನೀಡಲಾಗುವುದು ಎಂದು ಸುತ್ತೋಲೆ ಹೊರಡಿಸಿದೆ. ಇದು ಸಕಾಲಿಕವಾಗಿದೆ ಮತ್ತು ಜಾರಿಯಾಗಬೇಕಾಗಿದೆ.

ಒ.ಒ.ಡಿ. ಎಂದರೆ ರಜೆಯ ಹಕ್ಕಲ್ಲ, ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿಯಷ್ಟೆ. ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದರೆ ಅವರು ಕಚೇರಿಗೋ, ಶಾಲೆಗೋ ಹಾಜರಾಗಬೇಕಾಗುತ್ತದೆ. ಕೆಲವರು ‘ನಾನು ಸಮ್ಮೇಳನಕ್ಕೆ ಬರಲು ಆಗುತ್ತಿಲ್ಲ, ನೋಂದಾಯಿಸಿಕೊಂಡಿದ್ದೇನೆ, ಹಾಜರಾತಿ ಪತ್ರ ತರುತ್ತೀರಾ’ ಎಂದು ಗೆಳೆಯರಿಗೆ ಹೇಳುವುದುಂಟು.

ವಾಸ್ತವವಾಗಿ, ಸಂಘಟಕರು ನೀಡುವ ಒ.ಒ.ಡಿ. ಪ್ರತಿಯನ್ನು ನೌಕರರು ತಮ್ಮ ಮೇಲಧಿಕಾರಿಗೆ ಮನವಿ ಸಹಿತ ಸಲ್ಲಿಸಿ ಅನುಮತಿ ಪತ್ರ ಪಡೆಯಬೇಕು. ಆ ಪತ್ರವನ್ನು ತಮ್ಮ ಕಚೇರಿಗೆ ಇಲ್ಲವೇ ಶಾಲೆಯ ಮುಖ್ಯಸ್ಥರಿಗೆ ನೀಡಿ ಬಿಡುಗಡೆ ಪತ್ರ ಪಡೆದ ನಂತರವೇ ಒ.ಒ.ಡಿ. ಸೌಲಭ್ಯ ಉಪಯೋಗಿಸಲು ಸಾಧ್ಯ! ಬಿಡುಗಡೆ ಪತ್ರವನ್ನು ಕಾರ್ಯಕ್ರಮ ಸಂಘಟಕರಿಗೆ ನೀಡಿ, ಅಲ್ಲಿನ ನೋಂದಣಿ ಪುಸ್ತಕದಲ್ಲಿ ತಮ್ಮ ವಿಳಾಸ ಹಾಗೂ ಸಹಿಯನ್ನು ದಾಖಲಿಸಬೇಕು.

ಒಂದಕ್ಕಿಂತ ಹೆಚ್ಚು ದಿನಗಳಿದ್ದಲ್ಲಿ ಪ್ರತಿ ದಿನವೂ ಸಹಿ ಮಾಡಬೇಕು. ಕೊನೆಯಲ್ಲಿ ಸಂಘಟಕರು ಹಾಜರಾತಿ ಪತ್ರವನ್ನು ನೀಡಬೇಕು. ಅದನ್ನು ತಂದು ತಮ್ಮ ಸಂಸ್ಥೆಗೆ ನೀಡಬೇಕು. ಆದರೆ ಇಂದು ಈ ಎಲ್ಲ ಪ್ರಕ್ರಿಯೆಗಳೂ ಮಾಯವಾಗಿವೆ. ಒ.ಒ.ಡಿ. ಸುತ್ತೋಲೆ ವಾಟ್ಸ್‌ ಆ್ಯಪ್‌ನಲ್ಲಿ ಪ್ರಸಾರವಾದರೆ ಅದನ್ನೇ ಆಧರಿಸಿ ಕೆಲವರು ಒ.ಒ.ಡಿ. ಎಂದು ಪರಿಗಣಿಸಿ ಹೊರಟುಬಿಡುತ್ತಾರೆ. ಇನ್ನು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಹಾಜರಾತಿ ಪತ್ರ ಹೊರತುಪಡಿಸಿ ಬೇರಾವುದೇ ದಾಖಲೆಗಳಿರುವುದಿಲ್ಲ.

ಇನ್ನು ಸಂಘಟಕರ ಸಂಕಟವೇ ಬೇರೆ. ಒಂದೆಡೆ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಅವರು ನಿರತರಾಗಿದ್ದರೆ ‘ಹಾಜರಾತಿ ಪತ್ರ ಕೊಡಿ, ನಾವು ಹೊರಡಬೇಕು, ದೂರದ ಪ್ರಯಾಣ’ ಎಂಬ ಕಾರಣಗಳನ್ನು ಹೇಳಿ ಸಂಘಟಕರ ಹಿಂದೆ ಮುಂದೆ ಸುತ್ತುತ್ತಾರೆ ಪ್ರತಿನಿಧಿಗಳು. ಧಾರವಾಡದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಂತೂ ಪ್ರತಿನಿಧಿಗಳಾಗಿ ನೋಂದಾಯಿಸಿಕೊಂಡವರು ಮೊದಲ ದಿನವೇ ಗಲಾಟೆ ಮಾಡಿ ಎಲ್ಲ ದಿನಗಳಿಗೂ ಹಾಜರಾತಿ ಪತ್ರ ಪಡೆದಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ! ಪುಂಡಲೀಕ ಹಾಲಂಬಿಯವರು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ‘ಒಒಡಿ ಕೊಡುವುದಿಲ್ಲ, ಆಸಕ್ತರು ಭಾಗವಹಿಸಿ’ ಎಂದು ಹೇಳಿದ್ದುಂಟು!

ಮತ್ತೊಂದು ವಿಷಯವೆಂದರೆ ಶಿಕ್ಷಕರ ತರಬೇತಿಗಳು. ಇಲ್ಲಿಯೂ ತರಬೇತಿಗೆ ಹೋಗುವವರಿಗೆ ಯಾವ ತರಬೇತಿ, ಅದು ತನಗೆ ಅಗತ್ಯವಿದೆಯೇ, ಎಷ್ಟು ದಿನ, ಎಲ್ಲಿ ಎಂಬಂಥ ಮಾಹಿತಿಗಳು ಕಡಿಮೆಯೇ. ಹಿಂದೆ ಅಭ್ಯರ್ಥಿಗಳಿಗೆ ನೇರವಾಗಿ ಪತ್ರ ಬರುತ್ತಿತ್ತು. ಅದನ್ನು ಮುಖ್ಯ ಶಿಕ್ಷಕರಿಗೆ ನೀಡಿ ಬಿಡುಗಡೆ ಪತ್ರ ಪಡೆದು ತರಬೇತಿಗೆ ಹಾಜರಾಗುತ್ತಿದ್ದರು. ನಂತರ ಹಾಜರಾತಿ ಪತ್ರ ಪಡೆದು ಮುಖ್ಯ ಶಿಕ್ಷಕರಿಗೆ ಸಲ್ಲಿಸುತ್ತಿದ್ದರು. ಈಗ ಎಲ್ಲವೂ ವಾಟ್ಸ್‌ಆ್ಯಪ್ ವ್ಯವಹಾರ! ಇಂದು ತರಬೇತಿಗೆ ಹೋಗಬೇಕೆಂದರೆ ಕೆಲವೊಮ್ಮೆ ಅದೇ ದಿನ ಮಾಹಿತಿ ರವಾನೆಯಾಗುತ್ತದೆ. ಶಾಲೆಗೆ ಬಂದವರು ನಂತರ ತರಬೇತಿಗೆ ಹೋಗಬೇಕಾಗುತ್ತದೆ. ಅಷ್ಟರ ವೇಳೆಗೆ ಕೆಲವು ಗಂಟೆಗಳು ಕಳೆದಿರುತ್ತವೆ. ಒಮ್ಮೊಮ್ಮೆ ತರಬೇತಿ ರದ್ದಾಗಿರುತ್ತದೆ, ಆದರೂ ಶಿಕ್ಷಕರಿಗೆ ಮಾಹಿತಿ ಇರುವುದಿಲ್ಲ. ಅವರು ಕಿಲೊಮೀಟರುಗಟ್ಟಲೆ ಪ್ರಯಾಣಿಸಿ ತರಬೇತಿ ಕೇಂದ್ರಕ್ಕೆ ಹೋದಾಗ, ತರಬೇತಿ ರದ್ದಾಗಿರುವ ಮಾಹಿತಿ ತಿಳಿಯುತ್ತದೆ. ಮತ್ತೆ ಶಾಲೆಗೆ ಬರುವ ವೇಳೆಗೆ ಅರ್ಧ ದಿನ ಮುಗಿದಿರುತ್ತದೆ.

ಇಂಥ ಒ.ಒ.ಡಿ.ಗಳು ಸರ್ಕಾರಿ ನೌಕರರಿಗಷ್ಟೇ ಸೀಮಿತವಾಗಿರುವುದು ಮತ್ತೊಂದು ಸೋಜಿಗದ ಸಂಗತಿ. ಖಾಸಗಿ ಸಂಸ್ಥೆಯ ನೌಕರರಿಗೂ ವಿಸ್ತರಿಸಿದರೆ ಅವರಿಗೂ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂಬ ಆಸಕ್ತಿ ಬರಬಹುದು. ಆದರೆ ಅವರು ರಜೆ ಹಾಕಿಕೊಂಡೇ ಬರಬೇಕಾಗುತ್ತದೆ. ಅವರಿಗೆ ವಿಶೇಷವಾದ ವ್ಯವಸ್ಥೆಯಾಗಲೀ, ನೋಂದಣಿ ಶುಲ್ಕದಲ್ಲಿ ರಿಯಾಯಿತಿಯಾಗಲೀ ಇರುವುದಿಲ್ಲ. ಹಾಗಾಗಿ ಅವಕಾಶಗಳನ್ನು ಪಡೆದವರೇ ಪಡೆಯುತ್ತಾ ಹೋಗುತ್ತಾರೆ. ಈ ವಿಷಯದ ಬಗ್ಗೆ ಒ.ಒ.ಡಿ. ನೀಡುವವರು, ಪಡೆಯುವವರು ಇಬ್ಬರೂ ಯೋಚಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT