ಮಂಗಳವಾರ, ಜೂನ್ 22, 2021
21 °C
ಪಾಕಿಸ್ತಾನದ ಪರ ಘೋಷಣೆ ಕೂಗಿದವರ ಬಗ್ಗೆ ವ್ಯಕ್ತವಾಗುತ್ತಿರುವ ವಿವಿಧ ಬಗೆಯ ಅಭಿಪ್ರಾಯಗಳನ್ನು ನೋಡಿದರೆ, ಕಾಫ್ಕಾ ಚಿತ್ರಿಸುವ ‘ಪ್ರಕ್ಷುಬ್ಧ ಅಸಂಗತ ಲೋಕ’ದಲ್ಲಿ ನಾವಿದ್ದೇವೆಯೇ ಎನಿಸುತ್ತದೆ

ಸಂಗತ| ಅಪ್ರಬುದ್ಧ ವರ್ತನೆ ಮತ್ತು ಸಭ್ಯ ಸಮಾಜ

ಸಿ.ಎನ್. ರಾಮಚಂದ್ರನ್ Updated:

ಅಕ್ಷರ ಗಾತ್ರ : | |

Prajavani

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, ಅಮೂಲ್ಯಾ ಲಿಯೋನ್ ಎಂಬ ತರುಣಿ ಇದ್ದಕ್ಕಿದ್ದಂತೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಲು ಯಾವ ಕಾರಣವೂ ಇರಲಿಲ್ಲ. ಈ ಕ್ರಿಯೆ ಎಲ್ಲರೂ ಖಂಡಿಸಬೇಕಾದ ತಪ್ಪು; ಸಮಯ- ಸ್ಥಳ ವಿವೇಚನೆಯಿಲ್ಲದ ಆವೇಶಭರಿತ ತಪ್ಪು. ಆಗ ನಡೆದ ಗಲಾಟೆಯಲ್ಲಿ ಪೊಲೀಸರು ಅವಳನ್ನು ಬಂಧಿಸಿದರು, ಅವಳು ಬಂಧನಕ್ಕೆ ಒಳಗಾದ ನಂತರವೂ ಎರಡು ಬೆರಳುಗಳನ್ನು ಎತ್ತಿ ಹಿಡಿದು ವಿಜಯದ ಸಂಕೇತವನ್ನು ಕೊಟ್ಟುದ್ದಂತೂ ತುಂಬಾ ಬಾಲಿಶ ಹಾಗೂ ಅಪ್ರಬುದ್ಧ ವರ್ತನೆ. ಅವಳ ಪೂರ್ವಾಪರ, ಅವಳ ಹಿಂದಿರಬಹುದಾದ ಶಕ್ತಿಗಳು ಹಾಗೂ ಸಂಘಟನೆಗಳನ್ನು ಪತ್ತೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇದು ಶ್ಲಾಘನೀಯ.

ಇಲ್ಲಿ ಗಮನಿಸಬೇಕಾದ ಕೆಲವು ಸಂಗತಿಗಳಿವೆ. ಘಟನೆಯು ನಡೆದ ದಿನ ಸುದ್ದಿವಾಹಿನಿಗಳು ತೋರಿಸಿದಂತೆ, ಅಮೂಲ್ಯಾಳ ಕೈಯಿಂದ ಸಂಘಟಕರು ಮೈಕನ್ನು ಕಿತ್ತುಕೊಳ್ಳುವ ಮೊದಲು ಅವಳು ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ಎರಡು ಬಾರಿ ಹೇಳಿದ್ದಳು. ಈ ಘೋಷಣೆಯನ್ನು ಮೊದಲಿಗೆ ತೋರಿಸಿದ್ದ ಸುದ್ದಿವಾಹಿನಿಗಳು ಸ್ವಲ್ಪ ಸಮಯದ ನಂತರ ಅವಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಹೇಳಿದ್ದನ್ನು ಮಾತ್ರ ತೋರಿಸಲು ಪ್ರಾರಂಭಿಸಿದವು; ಮುದ್ರಣ ಮಾಧ್ಯಮಗಳೂ ಇದನ್ನು ಅನುಸರಿಸಿವೆ. ಒಂದು ರಾಷ್ಟ್ರೀಯ ಅಂತರ್ಜಾಲ ಸುದ್ದಿವಾಹಿನಿಯು ಅಮೂಲ್ಯಾ ತನ್ನ ಫೇಸ್‍ಬುಕ್ ತಾಣದಲ್ಲಿ ‘ಬಾಂಗ್ಲಾದೇಶ್ ಜಿಂದಾಬಾದ್’, ‘ಶ್ರೀಲಂಕಾ ಜಿಂದಾಬಾದ್’ ಇತ್ಯಾದಿ ಎಂಟು ದೇಶಗಳಿಗೆ ಜಯಕಾರವನ್ನು ದಾಖಲಿಸಿದ್ದಳು ಎಂಬುದನ್ನು ಮತ್ತು ‘ನಾನು ಭಾರತೀಯ ಪ್ರಜೆ, ನಾನು ನನ್ನ ದೇಶವನ್ನು ಗೌರವಿಸುತ್ತೇನೆ...’ ಇತ್ಯಾದಿ ಇಂಗ್ಲಿಷ್‍ನಲ್ಲಿ ಬರೆದುಕೊಂಡಿರುವುದನ್ನೂ ಪ್ರಕಟಿಸಿದೆ.

ಇವೆಲ್ಲವನ್ನೂ ಮರೆತು ಅಥವಾ ನಿರ್ಲಕ್ಷಿಸಿ, ಪಾಕಿಸ್ತಾನದ ಪರ ಘೋಷಣೆ ಕೂಗಿದ ಕೂಡಲೇ ಅವಳು ದೇಶದ್ರೋಹಿಯೆಂದು ಒಬ್ಬರು, ಅವಳಿಗೆ ಉಗ್ರಗಾಮಿಗಳ- ನಕ್ಸಲರ ನಂಟಿದೆ ಎಂದು ಮತ್ತೊಬ್ಬರು, ಅಂತಹ ದೇಶದ್ರೋಹಿಗಳನ್ನು ಎನ್‍ಕೌಂಟರ್ ಮಾಡಿ ಮುಗಿಸಬೇಕೆಂದು ಇನ್ನೊಬ್ಬರು, ಅವಳಿಗೆ ಗುಂಡಿಟ್ಟು ಕೊಂದವರಿಗೆ₹ 10 ಲಕ್ಷದ ಇನಾಮನ್ನು ಘೋಷಿಸುವ ಮಗದೊಬ್ಬರು (ಇವರೆಲ್ಲರೂ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು), ಇಂತಹವರ ಪರವಾಗಿ ಯಾರೂ ವಕಾಲತ್ತು ವಹಿಸಬಾರದು ಎಂದು ವಕೀಲರಿಗೆ ಎಚ್ಚರಿಕೆ, ಅನೇಕ ಸ್ಥಳಗಳಲ್ಲಿ ದೇಶದ್ರೋಹಿಗಳ ವಿರುದ್ಧ ಸಭೆ-ಸಮಾರಂಭಗಳು, ಕೊನೆಗೆ ಅಮೂಲ್ಯಾಳ ಪರ ವಕಾಲತ್ತು ವಹಿಸುವ ವಕೀಲರಿಗೆ ಸರ್ಕಾರವು ರಕ್ಷಣೆ ಕೊಡಬೇಕೆಂದು ಹೈಕೋರ್ಟ್ ಆದೇಶ ನೀಡಿರುವುದು– ಇವೆಲ್ಲವನ್ನೂ ಹೇಗೆ ಅರ್ಥಮಾಡಿಕೊಳ್ಳುವುದು ಗೊತ್ತಾಗುವುದಿಲ್ಲ. ಕಾಫ್ಕಾ ಚಿತ್ರಿಸುವ ‘ಪ್ರಕ್ಷುಬ್ಧ ಅಸಂಗತ ಲೋಕ’ದಲ್ಲಿ ನಾವಿದ್ದೇವೆಯೇ ಎಂಬ ಭೀತಿಯುಂಟಾಗುತ್ತದೆ.

ಅಮೂಲ್ಯಾಳನ್ನು ಬಂಧಿಸಿರುವುದು ಐಪಿಸಿ 124ಎ, 153ಎ ಇತ್ಯಾದಿ ಸೆಕ್ಷನ್‌ಗಳ ಅಡಿಯಲ್ಲಿ. ಇವುಗಳಲ್ಲಿ ‘ದೇಶದ್ರೋಹ’ವನ್ನು ಕುರಿತಾದ ಐಪಿಸಿ 124ಎ, ಬ್ರಿಟಿಷರು 150 ವರ್ಷಗಳ ಹಿಂದೆ ರಚಿಸಿದ ಕಾನೂನು. ಅದು ಕೂಡಾ ಆ ಪರಿಚ್ಛೇದವನ್ನು ಮಂಡಿಸಿದ ನಂತರ, ಅದನ್ನು ಸ್ಪಷ್ಟಪಡಿಸಲು ಅತಿ ಮುಖ್ಯವಾದ ಮೂರು ವಿವರಣೆಗಳನ್ನು ಕೊಡುತ್ತದೆ. ಅವುಗಳಲ್ಲಿ ಎರಡನೆಯದು, ‘ಸರ್ಕಾರದ ಕ್ರಮಗಳ ಬಗ್ಗೆ ಅಸಂತೋಷವನ್ನು ವ್ಯಕ್ತಪಡಿಸುವ ಹಾಗೂ ಅವುಗಳಲ್ಲಿ ಬದಲಾವಣೆಯನ್ನು ತರುವ ಉದ್ದೇಶದಿಂದ, ದ್ವೇಷ- ತಿರಸ್ಕಾರ- ಅಥವಾ ನಿಷ್ಠೆಯಿಲ್ಲದಿರುವುದು ಇವುಗಳನ್ನು ಪ್ರಚೋದಿಸದ ಅಥವಾ ಪ್ರಚೋದಿಸಲು ಪ್ರಯತ್ನಿಸದ ನ್ಯಾಯಸಮ್ಮತ
ಟೀಕೆ- ಟಿಪ್ಪಣಿಗಳು ಈ ಪರಿಚ್ಛೇದದ ಅಡಿ ಅಪರಾಧವಾಗುವುದಿಲ್ಲ’.

‘ಸರ್ಕಾರದ ವಿರುದ್ಧದ ಟೀಕೆ ದೇಶದ್ರೋಹವಲ್ಲ’ ಎಂದು ಸುಪ್ರೀಂ ಕೋರ್ಟ್‌ ಸಹ ಅನೇಕ ಸಂದರ್ಭಗಳಲ್ಲಿ ಘೋಷಿಸಿದೆ.

ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳು ಚುನಾವಣಾ ಸಂದರ್ಭದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವುದು ‘ತಮ್ಮ ಮೇಲೆ ಇರುವುದು ಆಪಾದನೆ ಮಾತ್ರ, ಆಪಾದಿತನು ಅಪರಾಧಿಯಲ್ಲ’ ಎಂದು. ಇದೇ ವಾದವನ್ನು ಆಧರಿಸಿದರೆ, ಅಮೂಲ್ಯಾ ಮತ್ತು ಅವಳಂತಹವರ ಮೇಲೆ ಇರುವುದು ದೇಶದ್ರೋಹದ ಆಪಾದನೆ ಮಾತ್ರ. ವಿಶೇಷ ತನಿಖಾದಳ ಮತ್ತು ನ್ಯಾಯಾಲಯವು ತಮ್ಮ ಆಮೂಲಾಗ್ರ ವಿಚಾರಣೆಯನ್ನು ಮುಗಿಸಿ, ಅವರನ್ನು ‘ಅಪರಾಧಿಗಳು’ ಎಂದು ಘೋಷಿಸುವವರೆಗೂ ಇವರೆಲ್ಲರೂ ಆಪಾದಿತರೇ ಹೊರತು ಅಪರಾಧಿಗಳಲ್ಲ.

ತನಿಖೆ, ವಿಚಾರಣೆ ಮುಗಿದ ನಂತರ ಇವರು ಅಪರಾಧಿಗಳು ಎಂಬುದು ಸಾಬೀತಾದರೆ ನಿಸ್ಸಂಶಯವಾಗಿ ಇವರಿಗೆ ಶಿಕ್ಷೆಯಾಗಬೇಕು. ಆದರೆ, ಅಲ್ಲಿಯತನಕ ಸಮಾಧಾನದಿಂದ ಇರುವುದು ಒಂದು ಆರೋಗ್ಯಕರ, ಸಭ್ಯ ಸಮಾಜದ ಲಕ್ಷಣ ಎಂದು ತೋರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು