ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸರ್ಕಾರದ ನೆರವು ಮತ್ತು ಜನರ ಹಕ್ಕು

ಸರ್ಕಾರದ ಉಚಿತ ಕೊಡುಗೆಗಳ ಬಗ್ಗೆ ರಾಜಕೀಯ ನಾಯಕರ ಧೋರಣೆಗಿಂತ ತಜ್ಞರ ಅಭಿಪ್ರಾಯ ಮತ್ತು ಸಲಹೆಗಳನ್ನು ಗಮನಿಸುವುದು ಅವಶ್ಯ
Last Updated 20 ಜುಲೈ 2022, 18:45 IST
ಅಕ್ಷರ ಗಾತ್ರ

ಕಾದಂಬರಿಕಾರ ರಾವಬಹಾದ್ದೂರ (ಆರ್.ಬಿ. ಕುಲಕರ್ಣಿ) ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಅನೇಕರು ಅವರಿಗೆ ಚೆಕ್ ಮತ್ತು ಡಿ.ಡಿ. ಮೂಲಕ ಹಣ ಕಳಿಸತೊಡಗಿದರು. ವರದಿಗಾರರೊಬ್ಬರನ್ನು ಕರೆದು, ‘ನನಗೆ ಸಾರ್ವಜನಿಕರಿಂದ ಸಹಾಯ ಬೇಡ. ಯಾರೂ ಹಣ ಕಳಿಸಬಾರದು’ ಎಂದು ಹೇಳಿ, ಆ ಹೇಳಿಕೆ ಪ್ರಕಟಿಸಲು ಕೋರಿದರು. ಎಲ್ಲ ಪತ್ರಿಕೆಗಳಲ್ಲಿ ಈ ವರದಿ ಪ್ರಕಟವಾಗುವಂತೆಯೂ ನೋಡಿಕೊಂಡರು. ತಮಗೆ ಬಂದ ಚೆಕ್, ಡಿ.ಡಿ. ವಾಪಸ್ ಕಳಿಸಿಕೊಟ್ಟರು.

ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ, ರಾವಬಹಾದ್ದೂರ ಅವರ ಆರೈಕೆಗೆ ₹10 ಸಾವಿರ ಸಹಾಯಧನ ಪ್ರಕಟಿಸಿದರು. ಅರಣ್ಯ ಸಚಿವರಾಗಿದ್ದ ಜಿ.ಎಸ್.ಬಾಗಲಕೋಟ ಅವರು ರಾವಬಹಾದ್ದೂರ ನಿವಾಸಕ್ಕೆ ಬಂದು ಚೆಕ್ ನೀಡಿದರು. ‘ಅಭಿಮಾನಿಗಳ ಹಣ ನಿರಾಕರಿಸಿದ ನೀವು ಸರ್ಕಾರದ ಚೆಕ್ ಯಾಕೆ ಸ್ವೀಕರಿಸಿದ್ದೀರಿ’ ಎಂದು ಪ್ರಶ್ನಿಸಿದಾಗ, ‘ಸರ್ಕಾರದ ಹಣ ನಮ್ಮೆಲ್ಲರ ಹಣ, ನಾವು ತೆರಿಗೆ ಕೊಟ್ಟ ದುಡ್ಡು, ಈ ಹಣವನ್ನು ಜನಕಲ್ಯಾಣಕ್ಕೆ ಬಳಸುವುದು ಸರ್ಕಾರದ ಜವಾಬ್ದಾರಿ ಮತ್ತು ಧರ್ಮ. ಸರ್ಕಾರದ ಸಹಾಯ ಪಡೆಯುವುದು ನನ್ನ ಹಕ್ಕು. ಅದು ಭಿಕ್ಷೆ ಅಲ್ಲ’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ, ‘ಸರ್ಕಾರದ ಉಚಿತ ಕೊಡುಗೆಗಳ ಸಂಸ್ಕೃತಿ (ರೇವ್ರಿ ಕಲ್ಚರ್‌) ದೇಶಕ್ಕೆ ಅತ್ಯಂತ ಅಪಾಯಕಾರಿ’ ಎಂದು ಎಎಪಿಯನ್ನು ಗುರಿಯಾಗಿಸಿ ಟೀಕಾಪ್ರಹಾರ ಮಾಡಿದ್ದಾರೆ. ‘ಉಚಿತ ಯೋಜನೆಗಳು ಪ್ರಚಾರಕ್ಕಾಗಿ ಅಲ್ಲ, ದೇಶ ಕಟ್ಟಲು’ ಎಂದು ಎಎಪಿಯ ಸಂಚಾಲಕರೂ ಆದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿ
ದ್ದಾರೆ. ಈ ನಾಯಕರ ಭಿನ್ನ ವಾದ ಕೇಳಿದಾಗ ರಾವಬಹಾದ್ದೂರ ಅವರ ಮಾತು ಥಟ್ಟನೆ ನೆನಪಾಯಿತು.

ರಾಜಕೀಯ ನಾಯಕರು ಚುನಾವಣೆಗಳನ್ನು ಕಣ್ಣಮುಂದೆ ಇಟ್ಟುಕೊಂಡು ಮಾತನಾಡುವುದು ಉಂಟು. ಆದರೆ ಸರ್ಕಾರದ ಉಚಿತ ಕೊಡುಗೆಗಳ ಮಹತ್ವದ ಬಗ್ಗೆ ಹಣಕಾಸು ಸಂಸ್ಥೆಗಳು, ಚಿಂತಕರು, ತಜ್ಞರು, ಸಮಾಜ ವಿಜ್ಞಾನಿಗಳ ಅಭಿಪ್ರಾಯ ಮತ್ತು ಸಲಹೆಗಳನ್ನು ಗಮನಿಸುವುದು ಅವಶ್ಯ.

ಅಂತರರಾಷ್ಟ್ರೀಯ ಹಣಕಾಸು ನಿಧಿಯು ಏಪ್ರಿಲ್‍ನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ, ನಾಗರಿಕರಿಗೆ ಸರ್ಕಾರ ಒದಗಿಸುವ ಉಚಿತ ಸೌಲಭ್ಯಗಳಿಂದಾದ ಸಕಾರಾತ್ಮಕ ಬದಲಾವಣೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಉಚಿತ ಪಡಿತರ ಒದಗಿಸುವ ಯೋಜನೆಯಿಂದ ಕಡುಬಡತನದ ನಿವಾರಣೆಗೆ ಬಹು ದೊಡ್ಡ ನೆರವಾಗಿದೆ. ಅವರ ಆರೋಗ್ಯ ವೃದ್ಧಿಸಿದೆ. ದುಡಿಯುವ ಉತ್ಸಾಹ ಹೆಚ್ಚಿದೆ. 2011ರಲ್ಲಿ ದೇಶದಲ್ಲಿ ಕಡುಬಡತನದ ಪ್ರಮಾಣ ಪ್ರತಿಶತ 22 ಇತ್ತು. ಈಗ 10.2ಕ್ಕೆ ಇಳಿದಿದೆ ಎಂದು ಹೇಳಿದೆ.

ನಿತ್ಯದ ಆಹಾರ ಪದಾರ್ಥಗಳನ್ನು ಪುಕ್ಕಟೆಯಾಗಿ ವಿತರಿಸುವ ಯೋಜನೆಗಳನ್ನು ಹಲವು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಅಂಗವಿಕಲ, ವಿಧವಾ, ವೃದ್ಧಾಪ್ಯ ಪಿಂಚಣಿ, ಹೆರಿಗೆ ಭತ್ಯೆ, ಹೀಗೆ ಸಾಮಾಜಿಕ ಭದ್ರತೆಯ ಹಲವು ಯೋಜನೆಗಳು ಜಾರಿಯಲ್ಲಿವೆ. ಇವು ಅಸಹಾಯಕರನ್ನು ರಕ್ಷಿಸುತ್ತಿವೆ. ಅಮರ್ತ್ಯ ಸೇನ್, ಎಲಿನಾರ್ ಆಸ್ಟ್ರಂ ಮುಂತಾದ ಚಿಂತಕರು ಸರ್ಕಾರದ ಉಚಿತ ಕೊಡುಗೆಗಳನ್ನು ಬೆಂಬಲಿಸಿದ್ದಾರೆ.

ಸಂಪತ್ತು ಮತ್ತು ಅನುಕೂಲಗಳು ಕೆಲವೇ ಜನರ ಪಾಲಾಗಿವೆ. ಉಳ್ಳವರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದೆ. ಸರ್ಕಾರದ ಸೌಲಭ್ಯ ಗಳನ್ನು ನೆಚ್ಚಿಕೊಂಡು ಬಹಳಷ್ಟು ಜನ ಬದುಕುತ್ತಿದ್ದಾರೆ. ಬಸವಾದಿ ಶರಣರ ದಾಸೋಹ ಪರಿಕಲ್ಪನೆಯಲ್ಲಿ ಈ ಘನವಾದ ಉದ್ದೇಶ ಅಡಗಿದೆ. ಉಚಿತ ಕೊಡುಗೆಗಳನ್ನು ನಿಲ್ಲಿಸಿದರೆ, ವರ್ಗ ಸಂಘರ್ಷ ಖಂಡಿತವಾಗಿಯೂ ಹುಟ್ಟಿಕೊಳ್ಳುತ್ತದೆ. ಸಮಾಜದ ಶಾಂತಿ ಹಾಳಾಗುತ್ತದೆ.

ಉಚಿತ ಪಡಿತರ ಉಂಡು ಫಲಾನುಭವಿಗಳು ಆಲಸಿಗಳಾಗಿದ್ದಾರೆ, ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ ಎಂದು ಕೆಲವರು ಟೀಕೆ ಮಾಡುತ್ತಾರೆ. ಇವರಿಗೆ ಬಡವರ ಹಸಿವಿನ ಸಂಕಟ ಗೊತ್ತಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ.

ಬೆಳಗಾವಿ ಜಿಲ್ಲೆಯ ಹಂದಿಗುಂದ ಗ್ರಾಮದ 75 ವರ್ಷದ ಜನಪದ ಕಲಾವಿದ ವೀರಭದ್ರಪ್ಪ ಅವರು ಕಲಾವಿದರ ಮಾಸಾಶನಕ್ಕೆ ಅರ್ಜಿ ಸಲ್ಲಿಸಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ. ಸರ್ಕಾರ ಮಂಜೂರು ಮಾಡಿಲ್ಲ. ಅವರು ನನ್ನೆದುರು ಅಳಲು ತೋಡಿಕೊಂಡಾಗ, ಕಲಾವಿದರ ಮಾಸಾಶನಕ್ಕೆ ಬದಲು ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿದೆ. ಅವರು ಕೆಂಡಾಮಂಡಲರಾದರು. ‘ನಾನು ಕಲಾವಿದ. ಕಲಾವಿದರಿಗೆ ಕೊಡುವ ಮಾಸಾಶನ ಬೇಕು’ ಎಂದು ಸ್ಪಷ್ಟವಾಗಿ ಹೇಳಿದರು. ಅವರು ತಮ್ಮ ಹಕ್ಕು ಮಂಡಿಸುವ ಧೋರಣೆ ಕಂಡು ಹೆಮ್ಮೆ ಎನಿಸಿತು.

ಆಸ್ಟ್ರೇಲಿಯಾದಲ್ಲಿ ನಿರುದ್ಯೋಗಿಗಳಿಗೆ ಭತ್ಯೆ ನೀಡಲಾಗುತ್ತದೆ. ಸರ್ಕಾರವೇ ನಿರುದ್ಯೋಗಿಗಳಿಗೆ
ಉದ್ಯೋಗ ಹುಡುಕಿಕೊಡುತ್ತದೆ. ನಮ್ಮಲ್ಲಿಯೂ ಎಲ್ಲರಿಗೂ ಉದ್ಯೋಗ ಕೊಡಿಸುವ ವ್ಯವಸ್ಥೆಗೆ ಸರ್ಕಾರ ಮುಂದಾಗಬೇಕು. ಇದು ಖಂಡಿತವಾಗಿ ಬಹು ದೊಡ್ಡ ಬದಲಾವಣೆಗೆ ನಾಂದಿ ಹಾಡುತ್ತದೆ.

ಬಡತನಕ್ಕೆ ಪ್ರಜೆಗಳು ಮಾತ್ರವೇ ಕಾರಣರಲ್ಲ; ಸರ್ಕಾರವು ಬಡತನವನ್ನು ನಿವಾರಿಸದಿರುವುದು ತಪ್ಪು ಎಂದು ಚಿಂತಕರೊಬ್ಬರು ಹೇಳಿದ ಮಾತು, ಎಲ್ಲ ಸರ್ಕಾರಗಳ ಮುಖಕ್ಕೆ ಕನ್ನಡಿ ಹಿಡಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT