ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕವಿತೆ ಹುಟ್ಟುವ ಈ ಹೊತ್ತು...

ಆಂತರ್ಯ ಧ್ವನಿಸುವ ಕಾವ್ಯಕ್ಕೂ ಮೀಸಲಾಗಿದೆ ಒಂದು ದಿನ!
Published 21 ಮಾರ್ಚ್ 2024, 0:09 IST
Last Updated 21 ಮಾರ್ಚ್ 2024, 0:09 IST
ಅಕ್ಷರ ಗಾತ್ರ

ಮೌನವನ್ನು ‘ಮೌನ’ ಎಂದೇ ನೋಡಲಾಗದು, ಮೌನವು ಎಷ್ಟೋ ಅರ್ಥಗಳನ್ನು ಧ್ವನಿಸಬಲ್ಲದು ಎನ್ನುತ್ತದೆ ಮನೋವಿಜ್ಞಾನ. ಕವಿತೆಯಾದರೂ ಈ ‘ಮೌನ’ದ ಹಾಗೇ ತತ್‍ಕ್ಷಣಕ್ಕೆ ಹೊಳೆಯುವ, ಹೊಳೆಯದ ಬಹು ಅರ್ಥಗಳನ್ನು ತನ್ನೊಳಗೇ ಹುದುಗಿಸಿಕೊಂಡಿರುತ್ತದೆ. ಕವಿತೆಯ ಇಂತಹ ಮಹತ್ವವನ್ನು ಮನಗಂಡು ಯುನೆಸ್ಕೊ ‘ವಿಶ್ವ ಕಾವ್ಯ ದಿನ’ ಎಂಬ ಒಂದು ಆಚರಣೆಯನ್ನೇ 1999ರಿಂದ ಜಾರಿಗೆ ತಂದಿದೆ.

ಮಾರ್ಚ್ 21ರ ಈ ದಿನದ ಈ ಬಾರಿಯ ಧ್ಯೇಯವಾಕ್ಯ ‘ಸ್ಟ್ಯಾಂಡಿಂಗ್‌ ಆನ್ ದಿ ಶೋಲ್ಡರ್ಸ್‌ ಆಫ್‌ ಜಯಂಟ್ಸ್‌’– ‘ಹಿಂದೆ ಸಾಧನೆಗಳನ್ನು ಮಾಡಿದ ಹಿರಿಯರ ಭುಜದ ಮೇಲೆ ನಿಂತು ಮತ್ತಷ್ಟನ್ನು ನೋಡು’ ಎಂಬ ಅರ್ಥದ ಈ ಪ್ರಸಿದ್ಧ ಹೇಳಿಕೆಯ ಮೂಲವು ವಿಜ್ಞಾನಿ ಐಸಾಕ್ ನ್ಯೂಟನ್‍ನ ಬಹು ಪ್ರಚಲಿತ ಮಾತಾಗಿತ್ತು ಎಂಬುದು ಕುತೂಹಲಕರ. 1675ರಲ್ಲಿ ನ್ಯೂಟನ್ ತನ್ನ ಗೆಳೆಯ, ಮೇಧಾವಿ ರಾಬರ್ಟ್ ಹುಕ್‍ಗೆ ಹೀಗೆ ಬರೆದನಂತೆ: ‘ನಾನು ಮತ್ತಷ್ಟನ್ನು ನೋಡಿದ್ದೇನೆಂದರೆ, ಸಂಶೋಧಿಸಿದ್ದೇನೆಂದರೆ, ಅದು ನನಗಿಂತ ಮೊದಲು ಸಾಧಿಸಿದ ಹಿರಿಯರಿಂದ ವಿಷಯಗಳನ್ನು ಕಲಿತು, ಅವರ ಭುಜದ ಮೇಲೆ ನಿಂತಿದ್ದರಿಂದಷ್ಟೇ ಸಾಧ್ಯವಾಗಿರುವುದು’. ಅಂದರೆ, ನಿರ್ವಾತದಲ್ಲಿ ಹೊಸತೊಂದು ಸೃಷ್ಟಿಯಾಗದು, ವೈಜ್ಞಾನಿಕ ಪ್ರಗತಿ ಮುಂದುವರಿಯಬೇಕೆಂದರೆ ಅದು ಹಿಂದಿನವರ ಸಂಶೋಧನೆಗಳನ್ನು ಗಮನಿಸಿಯೇ ಮುಂದೆ ಸಾಗಬೇಕು ಎನ್ನುವ ಅರ್ಥದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಇಂದಿಗೂ ಬಳಕೆಯಾಗುತ್ತದೆ.

ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್‌ ಪ್ರಕಾರ, ಪ್ರತಿನಿತ್ಯ ರಾತ್ರಿ ಕನಸು ಕಾಣುವ ನಾವೆಲ್ಲರೂ ‘ಕವಿ’ಗಳೇ! ನಮ್ಮ ಸುಪ್ತ ಮನಸ್ಸಿನ ಕೆಲವನ್ನು, ನೆನಪಿನ ಕೋಶದ ಹಲವನ್ನು ಮೆದುಳು ಹೊರಹಾಕುತ್ತದೆ ಎನ್ನುವ ಕಾರಣಕ್ಕೆ ಕನಸು ಕಾವ್ಯದಂತೆ ಕೆಲಸ ಮಾಡುತ್ತದೆ. ನಾಲ್ಕು ಸಾವಿರ ವರ್ಷಗಳ ಹಿಂದೆ ಹುಟ್ಟಿದ ಬ್ಯಾಬಿಲೋನ್‍ನ ಗಿಲ್ಗಮೇಷ್ ಮಹಾಕಾವ್ಯದಿಂದ ಆರಂಭಿಸಿ ಇಂದಿನವರೆಗೆ ಬೇರೆ ಬೇರೆ ಬಗೆಯ ಕಾವ್ಯಗಳು ಹುಟ್ಟಿಕೊಂಡಿವೆ. ಮಾನವ ಅನುಭವಗಳನ್ನು ಶೋಧಿಸುವ ಪ್ರಕ್ರಿಯೆಯೇ ಕಾವ್ಯ ಎನ್ನುವುದು ನಾವು ಒಪ್ಪಬಹುದಾದ ಮಾತು. ಹಾಗೆ ಮಾಡುವ ಮೂಲಕ ಸಾಮಾಜಿಕ ಮೌಲ್ಯಗಳ ಬಗ್ಗೆ ಕಾವ್ಯ ನಮ್ಮನ್ನು ಮತ್ತೆ ಮತ್ತೆ ಎಚ್ಚರಿಸುತ್ತದೆ.

ಕಾವ್ಯ ಮತ್ತು ಆರೋಗ್ಯಕ್ಕೂ ಸಂಬಂಧ ಇದೆ ಎನ್ನುತ್ತವೆ ಅಧ್ಯಯನಗಳು. ಕಾವ್ಯವನ್ನು ಬರೆಯಲೇ ಬೇಕೆಂದಿಲ್ಲ. ಕೇಳಿದರೂ, ಓದಿದರೂ ಅದರಿಂದ ಮಾನಸಿಕ, ದೈಹಿಕ ಸ್ವಾಸ್ಥ್ಯಗಳೆರಡೂ ಹೆಚ್ಚುತ್ತವೆ. 2016ರಲ್ಲಿ ಕ್ಯಾನ್ಸರ್ ರೋಗಿಗಳನ್ನು ಒಳಗೊಂಡು ನಡೆದ ಅಧ್ಯಯನವೊಂದರಲ್ಲಿ, ನೋವಿನ ತೀವ್ರತೆ ಕಡಿಮೆ ಮಾಡುವಲ್ಲಿ ಸಂಗೀತ ಮತ್ತು ಕವಿತೆಯ ಓದಿನ ಪರಿಣಾಮವನ್ನು ಪರಿಶೀಲಿಸಲಾಯಿತು. ಎರಡೂ ನೋವಿನ ತೀವ್ರತೆಯನ್ನು ಕಡಿಮೆ ಮಾಡಿದವು. ಆದರೆ ಕಾವ್ಯದ ಓದುವಿಕೆ ಅಥವಾ ಕೇಳುವಿಕೆ ‘ಭರವಸೆ’ಯ ಮಟ್ಟವನ್ನು ಗಮನಾರ್ಹವಾಗಿ ಏರಿಸಿತು. ಮತ್ತೊಂದು ಅಧ್ಯಯನದಲ್ಲಿ, ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿ
ಗಳಲ್ಲಿ ಕಾವ್ಯವು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ ಆಗಿತ್ತು. ಅನಾರೋಗ್ಯ, ಸಂಕಷ್ಟದ ಸಮಯದಲ್ಲಿ ವೇದನೆಯನ್ನೇ ವಸ್ತುವಾಗುಳ್ಳ ಕಾವ್ಯ ‘ನಮಗೊಬ್ಬರಿಗೇ ಅಲ್ಲ ಈ ಅನುಭವ’ ಎಂಬ ಅರಿವು ಮೂಡಿಸಿ, ಒಂಟಿತನದ ಭಾವವನ್ನು ದೂರವಾಗಿಸಬಹುದು.

ಅಧ್ಯಯನವೊಂದರ ಸಲುವಾಗಿ, ವಿವಿಧ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ‘ಕಾವ್ಯದ ಕಿಟ್’ ನೀಡಿ ಪರೀಕ್ಷಿಸಲಾಯಿತು. ಅಮೆರಿಕದ ಕವಯತ್ರಿ ಎಮಿಲಿ ಡಿಕಿನ್‍ಸನ್‍ಳ ‘ಹೋಪ್‌ ಈಸ್‌ ದ ಥಿಂಗ್‌ ವಿತ್‌ ಫೆದರ್ಸ್‌’ ಎನ್ನುವ ಕವನವೊಂದನ್ನು ಅವರಿಗೆ ಓದಿ ಹೇಳಲಾಯಿತು. ಭಯ, ದುಃಖ, ದಣಿವು, ಕೋಪದಿಂದ ತುಂಬಿದ್ದ ಈ ಪುಟಾಣಿಗಳು ತಮ್ಮ ಭಾವನೆಗಳನ್ನು ಹೊರಹಾಕುವುದು ಸುಲಭವಾಯಿತು.

ಕಾವ್ಯ ರಚನೆಯ ಉದ್ದೇಶ ಬಹುಮುಖಿಯಾದುದು. ಮನಸ್ಸಿನ ಭಾವನೆಗಳನ್ನು ಕಾಗದದ ಮೇಲೆ ಹೊರಹಾಕುವ, ಭಾವನೆಗಳಿಗೆ ಅಕ್ಷರ ರೂಪ ನೀಡಿ ಅವುಗಳಿಂದ ಮುಕ್ತರಾಗುವ ಉದ್ದೇಶವೂ ಕಾವ್ಯ ಬರೆಯಲು ಕಾರಣವಾಗಬಹುದು. ಆರೋಗ್ಯದ ಸಮಸ್ಯೆಗಳಲ್ಲಂತೂ ಇದು ಒಂದು ಉಪಯುಕ್ತ ಸಾಧನ. ಕನ್ನಡದಲ್ಲಿಯೇ ಬಂದಿರುವ ಕೊರೊನಾ ಕಾವ್ಯ, ಕೀಮೋ ಕವನಗಳನ್ನು ನೋಡಿದರೆ ಇದು ಸುಸ್ಪಷ್ಟ. ತನ್ನ ಒಳಗನ್ನು ತಾನೇ ಹೆಚ್ಚು ಕರುಣೆಯಿಂದ, ಸಹಾನುಭೂತಿಯಿಂದ ನೋಡುವ ಅಪರೂಪದ
ಪ್ರಕ್ರಿಯೆಯನ್ನು ಕವಿತೆ ಬರೆಯುವುದು ಸಾಧ್ಯವಾಗಿಸುತ್ತದೆ. ಹೀಗೆ ನಿರಾಳವಾಗುವ ಮನಸ್ಸು ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದು, ಶಸ್ತ್ರಚಿಕಿತ್ಸೆಗೆ ಸಿದ್ಧವಾಗುವುದು, ಕಾಲಕಾಲಕ್ಕೆ ವೈದ್ಯರ ಭೇಟಿಯನ್ನು ಮುಂದುವರಿಸುವಂತಹ ಚಿಕಿತ್ಸೆಯ ಅಂಶಗಳಿಗೆ ದಾರಿ ಮಾಡಿಕೊಡುತ್ತದೆ. ರೋಗಿಯೊಬ್ಬನ ‘ಮೌನ’ದಲ್ಲಿ, ಕವಿತೆಯೊಂದರ ಸಾಲುಗಳ ಮಧ್ಯೆ ಅಡಗಿರುವಂತಹ ಅರ್ಥವೇ ಇದೆ ಎಂಬ ಅರಿವು ವೈದ್ಯ-ರೋಗಿ ಬಾಂಧವ್ಯಕ್ಕೆ ಬಹು ಸಹಕಾರಿ.

ಸಾಮಾಜಿಕ ಆರೋಗ್ಯಕ್ಕೆ, ಕ್ರಾಂತಿಕಾರಕ ಬೆಳವಣಿಗೆಗಳಿಗೆ, ಬೇರೆ ಬೇರೆ ಬಗೆಯ ಪಲ್ಲಟಗಳಿಗೆ ಕಾವ್ಯ ಕಾರಣವಾಗಿರುವ ನಿದರ್ಶನಗಳು ಕನ್ನಡ ಸಾಹಿತ್ಯದ ತುಂಬ ಎದ್ದು ಕಾಣುತ್ತವೆ. ಅಂತಹ ದೈತ್ಯ ಪ್ರತಿಭೆಗಳ ಭುಜದ ಮೇಲೆ ನಿಂತು, ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಆಯಾಮಗಳಿಂದ ಕೂಡಿದ ಸಮಗ್ರ ಆರೋಗ್ಯದ ದಾರಿಯನ್ನು ದಿಟ್ಟಿಸಿ ನೋಡಬೇಕಾದ, ವಿಜ್ಞಾನ, ಕಲೆಗಳೆರಡರ ಗುರಿಯೂ ಒಂದೇ ಎಂದು ಮನಗಾಣಬೇಕಾದ ಸತ್ಯವನ್ನು ‘ವಿಶ್ವ ಕಾವ್ಯ ದಿನ’ ನಮಗೆ ನೆನಪಿಸಬೇಕು. ಅರಿವಿನಿಂದ ಕಾವ್ಯವನ್ನು ಓದಿ ಆರೋಗ್ಯ ಪಡೆಯೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT