ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಏಕತೆ: ನಮಗಾಗಿ, ಎಲ್ಲರಿಗಾಗಿ

Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಕಡ್ಡಿಯನ್ನು ಮುರಿದಂತೆ ಕಡ್ಡಿಗಳ ಕಟ್ಟನ್ನು ಮುರಿಯ ಲಾಗದು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಬೋಧಿಸಲು ಈ ನಿದರ್ಶನ ಘನವಾಗಿದೆ. ಕಂಟಕಗಳು ಕಾಡಿದಾಗ ದೇಶ, ರಾಜ್ಯಗಳ ನಡುವೆ ಏನೇ ವಾದ, ವ್ಯಾಜ್ಯಗಳಿರಲಿ ಅವನ್ನು ಬದಿಗೊತ್ತಿ ಸ್ವಯಂಪ್ರೇರಣೆಯ ಸಹಾಯಹಸ್ತಗಳು ಚಾಚಿರುತ್ತವೆ.

ಟರ್ಕಿಯಲ್ಲಿ ಇತ್ತೀಚೆಗೆ ಘೋರ ಭೂಕಂಪವಾದಾಗ ಭಾರತ ಕೂಡಲೇ ಆಹಾರ, ಔಷಧಿ, ಬಟ್ಟೆಯಂತಹ ಅಗತ್ಯ ಸಾಮಗ್ರಿಗಳನ್ನು ಕಳಿಸಿ ಕೊಟ್ಟಿತು. ಚೆನ್ನೈನಲ್ಲಿ ಮಳೆ ಅವಾಂತರವಾದಾಗ ಬೆಂಗಳೂರಿನ ಹಲವು ಮನೆಗಳಲ್ಲಿ ಚಪಾತಿಗಳು ಬೆಂದವು. ಟಿ.ವಿ. ಚಾನೆಲ್ಲುಗಳ ಕಚೇರಿಗಳತ್ತ ಜನ ಸಿದ್ಧಆಹಾರ, ಸ್ವೆಟರ್, ಸೋಪು, ರಗ್ಗು, ಕಂಬಳಿಗಳಿದ್ದ ಬಂಡಲ್‍ಗಳ ಸಮೇತ ಧಾವಿಸಿದರು. ಮಿಡಿದ ಮಂದಿ ನಾನು ತಾನೆಂದು ಸರದಿ ಸಾಲಿನಲ್ಲಿ ನಿಂತರು. ಜನರಿಗೆ ಜನರು ಆಗುವುದೆಂದರೆ ಇದೇ ಅಲ್ಲವೇ ಅಂತ ಮೂಗಿನ ಮೇಲೆ ಕೈಯಿಟ್ಟ ಇತರರೂ ಕೈಕಟ್ಟಿ ಕೂರದೆ ಯಥೋಚಿತ ಪರೋಪಕಾರಕ್ಕೆ ಮುಂದಾದರು.

ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬತ್ತಿದಾಗ ಜನರ ಸ್ಪಂದನ ಹೃದಯಸ್ಪರ್ಶಿಯಾಗಿತ್ತು. ಜನ ದೂರದ ಊರುಗಳಿಂದಲೂ ದೊಡ್ಡ ದೊಡ್ಡ ನೀರಿನ ಬಾಟಲಿಗಳನ್ನು ಲಾರಿಗಳಲ್ಲಿ ಪೇರಿಸಿಕೊಂಡು ಹೋಗಿ ಅಲ್ಲಿಗೆ ಅರ್ಪಿಸಿದರು. ಕೋವಿಡ್-19 ಕಾಡಿದಾಗ ಜಗತ್ತಿನ ಜನರೆಲ್ಲ ಒಂದಾಗಿ ಅದನ್ನು ಎದುರಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ‘ಕೋವಿಡ್ ವ್ಯಾಧಿಯ ವಿರುದ್ಧ ಮನುಷ್ಯರೆಲ್ಲ ಒಟ್ಟಿಗೇ ನಿಲ್ಲದಿದ್ದರೆ ಅದು ಕೋವಿಡ್ ವ್ಯಾಧಿಗಿಂತಲೂ ಭಯಾನಕವಾದುದು’ ಎಂದಿದ್ದೇ ಎಲ್ಲರ ಐಕಮತ್ಯಕ್ಕೆ ಪ್ರೇರಣೆಯಾಯಿತು. ಜೆಕ್ ಗಣರಾಜ್ಯದಲ್ಲಿ ನೆಲೆಸಿರುವ ಜೆಕ್ ವಿಯಟ್ನಾಮೀಸ್ ಸಮುದಾಯ ಹೊಲಿಗೆ ಯಂತ್ರಗಳಲ್ಲಿ ಹಗಲಿರುಳು ಮಗ್ನವಾಯಿತು, ಲಕ್ಷಗಟ್ಟಲೆ ಮುಖಗವಸುಗಳನ್ನು ಸಿದ್ಧಪಡಿಸಿತು. ಜಗತ್ತಿನಲ್ಲಿ ಪ್ರತಿಯೊಬ್ಬರೂ ಸುರಕ್ಷಿತವಾಗಿರುವ ತನಕ ಯಾರೂ ಸುರಕ್ಷಿತರಲ್ಲ ಎಂಬ ನಿಲುವಿಗೆ ಮಂದಿ ಪಣತೊಟ್ಟರು.

ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ ಎಂಬ ತತ್ವದಡಿ ನಾವು ಒಂದು ಬಾಗಿಲು ತೆರೆದರೆ, ಅದು ಎಲ್ಲ ಬಾಗಿಲುಗಳನ್ನೂ ತೆರೆಯುತ್ತದೆ. ವ್ಯಕ್ತಿಗಳೆಂದು ಭಾವಿಸದೆ ನೊಂದವರಿಗೆ ಸಹಾಯ ಮಾಡಿದರೆ ಅದು ಏಕತೆಯಲ್ಲ, ದಯೆ. ಯಾವುದೇ ಶ್ರೇಷ್ಠ ಕಾರ್ಯ, ಆವಿಷ್ಕಾರ ನಿರ್ವಾತದಲ್ಲಿ ಆಗಿಲ್ಲ. ಅದು ಸಾಧ್ಯವಾಗುವುದು ನಮ್ಮ ಒಗ್ಗಟ್ಟಿನ ಪರಿಶ್ರಮದಲ್ಲಿ. ನಮ್ಮ ಒಬ್ಬೊಬ್ಬರಿಂದಲೂ ನಾವು ಎನ್ನುವುದು ಆಗಿದೆ.

ನಮ್ಮ ಆಚಾರ ವಿಚಾರಗಳು, ಕೌಶಲ, ಆಸಕ್ತಿ ಒಂದೇ ತರಹ ಇದ್ದರೆ ಪರಸ್ಪರ ಕಲಿಯುವುದಕ್ಕಾ
ದರೂ ಏನಿದೆ? ಹಾಗಾಗಿ ವೈವಿಧ್ಯವೇ ಜೀವಾಳ. ನಮ್ಮ ದೃಷ್ಟಿ, ಚಿಂತನೆ, ಗ್ರಹಿಕೆಗಳು ಭಿನ್ನ ವಿಭಿನ್ನವಾಗಿ
ರುವುದೇ ಅದ್ಭುತ ಚೈತನ್ಯ. ಪ್ರತಿಯೊಬ್ಬ ವಿಶ್ವಪ್ರಜೆಯಲ್ಲೂ ಒಂದೊಂದು ಕಥೆ, ನೋವು, ಹಿಗ್ಗು ಇರುತ್ತದೆ. ಅವೆಲ್ಲವನ್ನೂ ಹಂಚಿಕೊಳ್ಳಬೇಕು, ಸಡಗರಿಸಬೇಕು. ಜಾಗತಿಕವಾಗಿ ನಂಬಿಕೆಗಳು, ಸಂಸ್ಕೃತಿಗಳು, ದೌರ್ಬಲ್ಯ ಗಳು, ಧ್ಯೇಯಗಳು ಬೆರೆಯಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಒಗ್ಗಟ್ಟು ಬಲಗೊಂಡಷ್ಟೂ ಬಡತನ, ರೋಗರುಜಿನ, ಅನಕ್ಷರತೆಗೆ ಪರಿಹಾರ ಸುಲಭವಾಗುತ್ತದೆ. ಭೂಗ್ರಹದ ಮಾನವರೆಲ್ಲ ಒಂದಾದರೆ ಪ್ರಾಕೃತಿಕ ವಿಕೋಪಗಳನ್ನು ಮಾತ್ರವಲ್ಲ, ಮನುಷ್ಯಕೃತ ಸಮರ, ಅಶಾಂತಿ, ಪರಿಸರ ಮಾಲಿನ್ಯ, ಅತಿವೃಷ್ಟಿ, ಅನಾವೃಷ್ಟಿಯನ್ನೆಲ್ಲ ಸುಲಭವಾಗಿ ಎದುರಿಸಬಹುದು.

ಒಂದರ್ಥದಲ್ಲಿ ನೈಸರ್ಗಿಕ ವಿಕೋಪಗಳೇ ಜನರನ್ನು ಏಕತೆಗೆ ಪ್ರೇರೇಪಿಸುವುದು. ಸಮಗ್ರ ಜಾಗೃತಿ, ಪೂರ್ವಸಿದ್ಧತೆ ಮತ್ತು ಮುನ್ನೆಚ್ಚರಿಕೆಗಳಿಂದ ಭೂಕಂಪ, ಸುನಾಮಿ, ಚಂಡಮಾರುತ, ನೆರೆಯಂತಹ ಸವಾಲುಗಳನ್ನು ತಗ್ಗಿಸಬಹುದು. ವಿಶ್ವಸಂಸ್ಥೆಯು 2005ರಲ್ಲಿ ನಿಶ್ಚಯಿಸಿದಂತೆ, ಪ್ರತಿವರ್ಷ ಡಿಸೆಂಬರ್ 20ರಂದು ‘ವಿಶ್ವ ಮಾನವ ಒಗ್ಗಟ್ಟಿನ ದಿನ’ ಆಚರಿಸಲಾಗುತ್ತದೆ. ಈ ಬಾರಿಯ ಧ್ಯೇಯವಾಕ್ಯ ‘ಸುಧಾರಣೆ ಗಾಗಿ ವಕಾಲತ್ತು ವಹಿಸಿ’. ಮಾನವ ಏಕತೆಯು ಸಮಾನತೆ, ಒಳಗೊಳ್ಳುವಿಕೆ ಹಾಗೂ ಸಾಮಾಜಿಕ ನ್ಯಾಯ ಆಧಾರಿತ ಮಾನವೀಯ ಮೌಲ್ಯ.

ಯಾವುದೇ ಬಗೆಯ ವೈವಿಧ್ಯವು ಜನರ ಒಗ್ಗಟ್ಟನ್ನು ಬಾಧಿಸಬಾರದು. ಇನ್ನೊಬ್ಬರ ಮೇಲೆ ನಮ್ಮ
ಅಭಿಪ್ರಾಯಗಳನ್ನು ಹೇರದೆ ನಾವು ನಾವಾಗಿರಬೇಕು. ಈ ದಿಸೆಯಲ್ಲಿ ಭಾರತ ವಿಶ್ವಕ್ಕೇ ಮಾದರಿಯಾದ ದೇಶ. ಪರಮ ಸಹಿಷ್ಣುತೆಯಿಂದ ಶತಮಾನಗಳಿಂದಲೂ ಧರ್ಮ, ಜಾತಿ, ವರ್ಗ, ಪಂಥ, ಪಂಗಡ ಮೀರಿ ಇಲ್ಲಿ ಜನ ಬದುಕುತ್ತಿದ್ದಾರೆ. ಋಗ್ವೇದದಲ್ಲಿ ಹೇಳಿರುವ ‘ಉದಾರಚರಿತಾನಾಂ ತು ವಸುಧೈವ ಕುಟುಂಬಕಂ’ ಪರಿಕಲ್ಪನೆಗಿಂತ ಉದಾಹರಣೆ ಬೇಕಿಲ್ಲ.

ಇಂಗ್ಲಿಷ್ ಪ್ರಬಂಧಕಾರನಾಗಿದ್ದ ಎಮರ್ಸನ್‌ನ ಅಭಿಪ್ರಾಯದಂತೆ, ಜಗತ್ತಿನಲ್ಲಿ ಏಕತೆಯ ಕೊರತೆ ಏಕೆಂದರೆ ಮನುಷ್ಯ ಸ್ವತಃ ತನ್ನೊಳಗೇ ಸಂಘರ್ಷವನ್ನು ಎದುರಿಸುತ್ತಿದ್ದಾನೆ. ಪರರ ಭಿನ್ನ ಭಿನ್ನ ಬೇಕು, ಬೇಡಗಳನ್ನು ಗೌರವಿಸಿದಾಗ ಏಕತೆ ಯಶಸ್ವಿಯಾಗು ತ್ತದೆ. ಏಕತೆ ಮತ್ತು ಸ್ಥಿರತೆ ಒಂದೇ ನಾಣ್ಯದ ಎರಡು ಮುಖಗಳು. ವರ್ಣಭೇದದ ನಿವಾರಣೆ ವರ್ಣಭೇದದಿಂದಲ್ಲ, ಏಕತೆಯಿಂದ. ಮಾನವರೆಲ್ಲ ಒಂದೇ ಎಂಬ ಮಾನಸಿಕ ಪ್ರಜ್ಞೆ ಇಂದು ಜಗತ್ತನ್ನು ಕಾಡುತ್ತಿರುವ ಅನೇಕ ಸವಾಲುಗಳನ್ನು ಬಗ್ಗುಬಡಿಯಬಲ್ಲದು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಆದಿಕವಿ ಪಂಪ ಸಾರಿ ವರ್ಷಗಳೇ ಸಂದಿವೆ. ಐಕಮತ್ಯ ಎನ್ನುವುದು ಗುಂಪುಗಾರಿಕೆಯಲ್ಲ. ಅದು ವ್ಯಕ್ತಿಗಳನ್ನು ಸಮಾಜದ ಮೂಲವೆಂದು ಪರಿಭಾವಿಸುತ್ತದೆ, ಬದುಕಿನ ಪ್ರತಿಕೂಲಗಳನ್ನು ವಿರೋಧಿಸುತ್ತದೆ. ಪರಸ್ಪರ ಹಕ್ಕುಗಳಿಗಾಗಿ ಹೋರಾಟ, ಕನಿಷ್ಠತಮ ಸಂಘರ್ಷ, ಅಗತ್ಯವಾದಾಗ ನೆರವು- ಇವು ಮಾನವ ಏಕತೆಯ ಮುಖ್ಯ ಗುರಿಗಳು. ಜಾಗತಿಕ ಏಕತೆಯಿಲ್ಲದೆ ಮಾನವ ಹಕ್ಕುಗಳು ಈಡೇರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT