ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನೀತಿ ಶಿಕ್ಷಣ: ಗುರುವಿಗೂ ಇರಲಿ

ಶಿಕ್ಷಕರಿಗೆ ತರಬೇತಿ ನೀಡುವಾಗ ಇದನ್ನು ಒಂದು ಬೋಧನಾ ವಿಷಯವಾಗಿ ಅಳವಡಿಸಬೇಕಾದ ಅಗತ್ಯ ಇದೆ
ಪು.ಸೂ.ಲಕ್ಷ್ಮೀನಾರಾಯಣ ರಾವ್
Published 9 ಫೆಬ್ರುವರಿ 2024, 20:21 IST
Last Updated 9 ಫೆಬ್ರುವರಿ 2024, 20:21 IST
ಅಕ್ಷರ ಗಾತ್ರ

‘ಗುರು, ಗೌರವ, ಗುರುತರ ಹೊಣೆ’ ಎಂಬ ಜ್ಯೋತಿ ಅವರ ವಿಶ್ಲೇಷಣಾತ್ಮಕ ಲೇಖನವು (ಪ್ರ.ವಾ., ಫೆ. 2) ಮಕ್ಕಳ ಬೆಳವಣಿಗೆಯಲ್ಲಿ ಸಮಾಜ ಹಾಗೂ ಪೋಷಕರ ಪಾತ್ರ ನಿರಾಶಾದಾಯಕವಾಗಿ ಇರುವುದನ್ನು ಗುರುತಿಸಿದೆ. ಆ ಕಾರಣದಿಂದಾಗಿ ಶಿಕ್ಷಕರ ಜವಾಬ್ದಾರಿ ಇಂದು ಇನ್ನೂ ಹೆಚ್ಚಾಗಿದೆ ಎಂಬ ಖಚಿತವಾದ ಅಭಿಪ್ರಾಯವನ್ನು 
ಸೂಕ್ತವಾಗಿಯೇ ತಿಳಿಸಿದೆ. ಇದರ ಜೊತೆಗೆ ಶಿಕ್ಷಣ ಇಲಾಖೆಯು ಮಕ್ಕಳ ಶೇಕಡಾವಾರು ಫಲಿತಾಂಶವನ್ನು ಹೆಚ್ಚಿಸುವುದರ ಮೂಲಕ ತನ್ನ ಸಾಧನೆಯನ್ನು ಬಿಂಬಿಸಿಕೊಳ್ಳುವ ಹಂತಕ್ಕೆ ಬಂದು ತಲುಪಿರುವುದು ಶಿಕ್ಷಣ ಕ್ಷೇತ್ರದ ದುಃಸ್ಥಿತಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಮೂರು, ನಾಲ್ಕು ಸಿದ್ಧತಾ ಪರೀಕ್ಷೆಗಳನ್ನು ಮಾಡಬೇಕೆಂದು ಇಲಾಖೆಯವರೇ ಸುತ್ತೋಲೆಗಳನ್ನು ಹೊರಡಿಸುತ್ತಾರೆ. ಎಸ್ಎಸ್ಎಲ್‌ಸಿ ಸಿದ್ಧತಾ ಪರೀಕ್ಷೆಯ ನಂತರ ಕ್ಷೇತ್ರಶಿಕ್ಷಣಾಧಿಕಾರಿ ಪ್ರತಿ ಶಾಲೆಗೆ ಭೇಟಿ ಕೊಟ್ಟು, ಎಲ್ಲ ಶಿಕ್ಷಕರನ್ನು ಕಲೆಹಾಕಿ, ಆಯಾ ವಿಷಯದಲ್ಲಿನ ಶೇಕಡಾವಾರು ತೇರ್ಗಡೆಯ ಬಗ್ಗೆ ವಿಚಾರಿಸುತ್ತಾರೆ. ನಂತರ, ‘ನನಗೆ ಎಲ್ಲ ವಿಷಯಗಳಲ್ಲೂ ಶೇ 100ರಷ್ಟು ಫಲಿತಾಂಶ ಬರಬೇಕು!’ ಎಂದು ಮೌಖಿಕ ಆದೇಶ ಹೊರಡಿಸುತ್ತಾರೆ.

ಕರ್ನಾಟಕದ ಉತ್ತರ ಭಾಗದ ಒಂದು ಜಿಲ್ಲೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ತಮ್ಮ ವಲಯದ ಶಾಲಾ ಶಿಕ್ಷಕರ ಸಮಾವೇಶವನ್ನು ಏರ್ಪಡಿಸಿ, ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶೇಕಡಾವಾರು ಫಲಿತಾಂಶವನ್ನು ಹೆಚ್ಚಿಸುವುದರ’ ಬಗ್ಗೆ ತರಬೇತಿ ಕೊಡಿಸಿದರು ಎಂದು ವರದಿಯಾಗಿತ್ತು. ಇದು ಶಿಕ್ಷಣದ ಗುರಿಯೇ? ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು ಎಂದರೆ ಪರೀಕ್ಷೆಯ ಶೇಕಡಾವಾರು ಫಲಿತಾಂಶವನ್ನು ಹೆಚ್ಚಿಸುವುದೇ? ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೇ ಶೈಕ್ಷಣಿಕ ಮೌಲ್ಯಗಳ ಬಗ್ಗೆ ಇಂತಹ ಒಂದು ಚಿಂತನೆ ಇದೆ ಎಂದಾದರೆ, ಶಿಕ್ಷಣ ಕ್ಷೇತ್ರವನ್ನು ಕಾಪಾಡುವವರು ಯಾರು? ಹೀಗಾಗಿ ಜ್ಯೋತಿಯವರು, ‘ಸಂಸ್ಕಾರ ಎನ್ನುವುದು ಇಂದು ‘ಔಟ್ ಆಫ್ ಸಿಲಬಸ್’ ಎಂದು ಹೇಳಿರುವುದರಲ್ಲಿ ಆಶ್ಚರ್ಯವಿಲ್ಲ.

ಆದರೆ ಇವೆಲ್ಲ ಏನೇ ಇರಲಿ, ಶಿಕ್ಷಕರು ಇಂದು ಹೆತ್ತವರ ನಂತರದ ಸ್ಥಾನದಲ್ಲಿ ನಿಂತು ಮಾತೃವಾತ್ಸಲ್ಯದಿಂದ, ಜ್ಞಾನಾರ್ಜನೆ
ಯೊಂದಿಗೆ ಪರಿಪೂರ್ಣವಾಗಿ ಬದುಕುವ ಕಲೆಯನ್ನು ಕೂಡ ಮಕ್ಕಳಿಗೆ ಹೇಳಿಕೊಡುತ್ತಾ, ಕೈಹಿಡಿದು ಮುನ್ನಡೆಸಬೇಕು. ಮೂಲತಃ ಇದೊಂದು ಸಮಾಜ ಸೇವೆ ಎಂದು ಭಾವಿಸಿ ತಮ್ಮ ಬದುಕನ್ನು ಸಾರ್ಥಕ
ಗೊಳಿಸಿಕೊಳ್ಳಬೇಕು.

ಶಿಕ್ಷಕರಾದವರು ಎರಡು ರೀತಿಯಲ್ಲಿ ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡರೆ, ಆಗ ಮಕ್ಕಳು, ಪೋಷಕರು ಹಾಗೂ ಸಮಾಜದಿಂದ ಅವರಿಗೆ ತನಗೆ ತಾನೇ ಗೌರವ ಲಭಿಸುತ್ತದೆ. ಮೊದಲನೆಯದಾಗಿ, ಅವರು ತಾವು ಬೋಧಿಸಬೇಕಾಗಿರುವ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಶಿಕ್ಷಣ ಇಲಾಖೆಯು ಸಂಪನ್ಮೂಲ ವ್ಯಕ್ತಿಗಳ ಮೂಲಕ ಆಸರೆಯಾಗಿ ನಿಲ್ಲಬೇಕು. ಬೋಧಿಸಬೇಕಾಗಿರುವ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಲು ಶಿಕ್ಷಕರಿಗೆ ನೆರವಾಗಬೇಕು.

ಬೋಧನಾ ವಿಧಾನಕ್ಕಿಂತ ಮುಖ್ಯವಾಗಿ ವಿಷಯಜ್ಞಾನದ ಸ್ಪಷ್ಟ ಅರಿವು ಆದ್ಯತೆ ಆಗಬೇಕು. ಏಕೆಂದರೆ ತನಗೇ ಅರ್ಥವಾಗದ್ದನ್ನು ಮಕ್ಕಳಿಗೆ ಹೇಗೆ ತಾನೇ ಅರ್ಥೈಸಲು ಸಾಧ್ಯ?! ಉದಾಹರಣೆಗೆ, ಒಂದು ಕ್ಲಿಷ್ಟವಾದ ಗಣಿತ ಪ್ರಮೇಯವನ್ನು ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ವಿವರಿಸಿದರೆ, ಆಗ ಆ ಮಗುವಿಗೆ ಆಗುವ ಜ್ಞಾನಾನಂದವೇ ಅದಕ್ಕೆ ಗುರುವಿನ ಬಗ್ಗೆ ಕೃತಜ್ಞತಾಭಾವವನ್ನು ಮೂಡಿಸುತ್ತದೆ. ಅಷ್ಟೇಅಲ್ಲದೆ ವಿದ್ಯಾರ್ಥಿಗಳಿಗೆ ಜ್ಞಾನದ ಬಗೆಗಿನ ಆಸೆ ಅಂಕುರಿಸ
ತೊಡಗುತ್ತದೆ.

ಎರಡನೆಯದಾಗಿ, ಪಠ್ಯೇತರವಾದ ಜವಾಬ್ದಾರಿ. ಶಿಕ್ಷಕ ವೃತ್ತಿಯಲ್ಲಿ ತಾನು ಎದುರಿಸುತ್ತಿರುವ ಸಕಲೆಂಟು ಸಮಸ್ಯೆಗಳನ್ನೂ ಪಕ್ಕಕ್ಕೆ ಇಟ್ಟು, ಜೀವನಮೌಲ್ಯಗಳ ಬಗೆಗಿನ ತಿಳಿವಳಿಕೆಯನ್ನು ಮಕ್ಕಳಲ್ಲಿ ಪರೋಕ್ಷವಾಗಿ ಬಿತ್ತನೆ ಮಾಡುವುದು. ಅಂತಹ ಸಂದರ್ಭದಲ್ಲಿ ವ್ಯಷ್ಟಿಯ ಬದುಕಿಗೆ ಸಮಷ್ಟಿಪ್ರಜ್ಞೆಯೂ ಹೇಗೆ ಮುಖ್ಯವಾಗುತ್ತದೆ ಎಂಬ ಅರಿವನ್ನು ಮೂಡಿಸುವುದು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ವಿವೇಕಾ
ನಂದರಂತಹ ಮಹಾತ್ಮರ ವಿಚಾರಗಳನ್ನು ಅರಿತುಕೊಂಡು ಸಾಧ್ಯವಾದಷ್ಟು ತಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳಲು ಪದೇಪದೇ ಪ್ರಯತ್ನಿ
ಸುತ್ತಿರಬೇಕು.

ಮಕ್ಕಳನ್ನು ಪ್ರೀತಿ ಮತ್ತು ಗೌರವದಿಂದ ಕಾಣತೊಡಗಿದರೆ ಅವರೂ ಶಿಕ್ಷಕರನ್ನು ಗೌರವಿಸುತ್ತಾರೆ. ‘ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ’ ಎಂಬ, ಆಯ್ದಕ್ಕಿ ಲಕ್ಕಮ್ಮನ ವಚನದ ಪಾಠ ಮಾಡುವಾಗ ಅದು ತನಗೂ ಪಾಠವಾಗಬೇಕು. ಕನಿಷ್ಠ ಆ ಮಾತು ತನ್ನಲ್ಲಿರುವ ದುರಾಸೆಯನ್ನು ಕೆಣಕ ಬೇಕಲ್ಲವೇ? ಹಾಗಾದಾಗ ಮಾತ್ರ ಮಕ್ಕಳಿಗೂ ಆಸೆ, ದುರಾಸೆಯ ನಡುವಿನ ವ್ಯತ್ಯಾಸದ ಅರಿವು ಮನಸ್ಸಿಗೆ ಹೊಳೆಯಲು ಸಾಧ್ಯ. ಹೀಗಾಗಿ, ಶಿಕ್ಷಕರ ತರಬೇತಿಯಲ್ಲಿ ‘ನೀತಿ ಶಿಕ್ಷಣ’ವೂ ಒಂದು ಬೋಧನಾ ವಿಷಯವಾದರೆ ಒಳಿತು.

ಪ್ರಸ್ತುತ ನಮ್ಮ ದೇಶದ ಎಲ್ಲ ಅಧಃಪತನಗಳಿಗೆ ಅನೈತಿಕತೆಯೇ ಕಾರಣ ಎಂದು ಅನ್ನಿಸಿದರೆ ಸಾಲದು. ಅದು ನಮ್ಮ ಪ್ರಜ್ಞೆಯ ಸ್ತರದಲ್ಲಿ ಕ್ರಿಯಾಶೀಲವಾಗ
ಬೇಕು. ‘ಅನೈತಿಕತೆ, ಅಜ್ಞಾನದ ವಿರುದ್ಧ ಹೋರಾಡಲು ಶಿಕ್ಷಕರ ಹುದ್ದೆಗೆ ಆರಿಸಲ್ಪಟ್ಟ ಸೈನಿಕರು ನಾವು’ ಎಂದು ಕಂಕಣಬದ್ಧರಾಗಿ ದುಡಿಯಲು ನಿರಂತರ ಸ್ವವಿಮರ್ಶೆ ಮಾಡಿಕೊಳ್ಳುತ್ತ ಜೀವನ ಸಾಗಿಸಬೇಕು. ಆಗ ಶಿಕ್ಷಕನಿಗೆ ಧನಕನಕರಾಶಿ ನೀಡದ ಆನಂದವು ಪ್ರಾಪ್ತವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT