ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾದ’ದ ಬಾಣ ಸರ್ಕಾರದ ಕಡೆ ತಿರುಗಲಿ

ಒಂದಲ್ಲ ಒಂದು ವರ್ಗವನ್ನು ಓಲೈಸುವ ಸಲುವಾಗಿಯೇ ಹುಟ್ಟಿಕೊಂಡ ಜಯಂತಿ ಆಚರಣೆಗಳು ಸಮಾಜದಲ್ಲಿ ಬಿರುಕುಗಳನ್ನು ಮೂಡಿಸಿವೆ
Last Updated 8 ಜುಲೈ 2018, 20:08 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಂಕರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಎಂದು ಘೋಷಿಸಿ, ಬ್ರಾಹ್ಮಣರ ಕಲ್ಯಾಣಕ್ಕಾಗಿ ಒಂದಿಷ್ಟು ಮೊತ್ತವನ್ನು ಮೀಸಲಿಟ್ಟಿದ್ದಾರೆ. ಶಂಕರಾಚಾರ್ಯರ ಅನುಯಾಯಿಗಳಿಗೆ ಇದರಿಂದ ಸಂತೋಷವಾಗಿದ್ದರೆ, ಇನ್ನೊಂದು ವರ್ಗಕ್ಕೆ ಅತ್ಯಂತ ಬೇಸರವಾಗಿದೆ.

ಸರ್ಕಾರ ಯಾವ ಜಯಂತಿಯನ್ನೂ ಆಚರಿಸದಿದ್ದರೆ ಒಳ್ಳೆಯದು. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂಥ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಿಸಿದರೆ ಸಾಕು. ಒಂದಲ್ಲ ಒಂದು ವರ್ಗವನ್ನು ಓಲೈಸುವ ಸಲುವಾಗಿ ಹುಟ್ಟಿಕೊಂಡ ಜಯಂತಿಗಳು ಸಮಾಜದಲ್ಲಿ ಒಂದು ರೀತಿಯ ಬಿರುಕುಗಳನ್ನು ಮೂಡಿಸಿವೆ.

ಶಂಕರ ಜಯಂತಿ ಆಚರಣೆಯ ಸುತ್ತ ಎದ್ದಿರುವ ವಿವಾದವು ಶಂಕರರನ್ನು ಹೀಗಳೆಯಲು, ತೆಗಳಲು, ಅವರ ಜೀವನವನ್ನು ತಮ್ಮ ದೃಷ್ಟಿಕೋನಕ್ಕೆ ಅನುಕೂಲವಾಗುವಂತೆ ನೋಡಲು ಕಾರಣವಾಗುತ್ತಿದೆ. ಚರಿತ್ರೆಯ ಸಹಾಯದಿಂದ ವಿವಿಧ ಸರಕುಗಳನ್ನು ಹೊರತೆಗೆದು ಬಳಸಿಕೊಳ್ಳಲಾಗುತ್ತಿದೆ. ಇನ್ನೊಂದು ವರ್ಗವು ಶಂಕರರ ಕಾರ್ಯಗಳನ್ನು ವೈಭವೀಕರಿಸಿ ಸಾದರಪಡಿಸುತ್ತಿದೆ. ಇದನ್ನು ನೋಡಿದರೆ ಟಿಪ್ಪು ಜಯಂತಿಯ ಸುತ್ತ ಎದ್ದಿದ್ದ ವಿವಾದವೇ ನೆನಪಾಗುತ್ತದೆ. ನನ್ನ ಕೆಲವು ಸ್ನೇಹಿತರಿಗೆ ಟಿಪ್ಪುವಿನ ಮೇಲೆ ಸಿಟ್ಟಿದೆ. ಇನ್ನು ಕೆಲವರಿಗೆ ಕನ್ನಡ ನಾಡನ್ನು ಬ್ರಿಟಿಷರಿಂದ ರಕ್ಷಿಸಲು ಹೋರಾಡಿದ ಆ ವೀರನ ಬಗ್ಗೆ ಅಭಿಮಾನವಿದೆ. ಶಂಕರರ ಬಗ್ಗೆಯೂ ಇದೇ ರೀತಿಯ ಭಿನ್ನ ಭಾವನೆಗಳಿವೆ.

ಮಾತನಾಡುವವರು ವಾದದ ಯಾವ ತುದಿಯಲ್ಲಿದ್ದಾರೆ, ಯಾವ ರೀತಿಯ ರಾಜಕೀಯವನ್ನು ಆಯ್ಕೆ ಮಾಡಿಕೊಂಡು, ಈ ಕಾಲಘಟ್ಟದಲ್ಲಿ ಯಾವ ‘ಪ್ರಿವಿಲೇಜ್’ಗಳನ್ನು ಅನುಭವಿಸುತ್ತಾ ಅಥವಾ ಅದರ ಕೊರತೆಯನ್ನು ದ್ವೇಷಿಸುತ್ತಾ ಹೇಳುತ್ತಾರೆ ಎನ್ನುವುದರ ಮೇಲೆ ಅವರ ಅಭಿಪ್ರಾಯಗಳು ಮೂಡುತ್ತವೆಯೇ ಹೊರತು, ಸರಿ-ತಪ್ಪುಗಳ ವಿಶ್ಲೇಷಣೆ ಆಗಿರುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಶಂಕರರಾಗಲಿ, ಬಸವಣ್ಣನಾಗಲಿ, ಮಧ್ವರಾಗಲಿ, ಟಿಪ್ಪುವಾಗಲಿ ಅವರ ಕಾಲಕ್ಕೆ ಸತ್ಯವೆನಿಸಿದ, ಧರ್ಮವೆನಿಸಿದ ಹಾಗೂ ತಾವು ಒಪ್ಪಿಕೊಂಡ ಪಾತ್ರಕ್ಕೆ ಕರ್ತವ್ಯನಿಷ್ಠರಾಗಿ ಕೆಲಸ ಮಾಡಿದರೇ ವಿನಾ ಚರಿತ್ರೆಯಲ್ಲಿ ತಮ್ಮ ಹೆಸರು ಹೇಗೆ ದಾಖಲಾಗಬೇಕು ಎನ್ನುವುದರ ಮೇಲೆ ಅವರ ನಿಯಂತ್ರಣ ಇರಲಿಲ್ಲ. ಮನುಷ್ಯನ ಮಧ್ಯಸ್ಥಿಕೆ ಇಲ್ಲದೆ, ಕೃತಕ ಬುದ್ಧಿಮತ್ತೆಯಿಂದ ಚರಿತ್ರೆ ದಾಖಲಾಗುವ ದಿನಗಳು ಬಂದರೆ ಮಾತ್ರ ನಾವು ಚರಿತ್ರೆಯನ್ನು ಪೂರ್ವಗ್ರಹರಹಿತ, ವಸ್ತುನಿಷ್ಠ ವ್ಯಾಖ್ಯಾನ ಅಂತ ಒಪ್ಪಬಹುದು. ಅಲ್ಲಿಯವರೆಗೂ ನಾವು ಓದುವ ಚರಿತ್ರೆ ನಮ್ಮ ವಾದಗಳಿಗೆ ಹೊಂದುವಂತೆಯೇ ಇರುತ್ತದೆ. ಅದನ್ನು ದಾಖಲಿಸಿದವರೂ ರಾಗ-ದ್ವೇಷಗಳಿಂದ ಹೊರತಾದವರೇನಲ್ಲ.

ನಾನು, ತಮಿಳುನಾಡಿನ ಸಮಾಜ ಸೇವಾ ಸಂಸ್ಥೆಯೊಂದರ ಮೀಟಿಂಗಿಗೆ ಹೋದ ಸಂದರ್ಭದಲ್ಲಿ ಅಲ್ಲಿನಸ್ವಯಂ ಸೇವಕರೊಬ್ಬರು ‘ಬಸವಣ್ಣ ಮಾಡಿದ್ದು ಮತಾಂತರ ಅಲ್ಲವೇ, ತಳ ಸಮುದಾಯಗಳನ್ನು ನಾಶ ಮಾಡಿಬಿಡಲಿಲ್ಲವೇ ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮ’ ಎಂದು ಕೇಳಿ, ‘ಇದನ್ನು ಕುತೂಹಲಕ್ಕಾಗಿ ಮಾತ್ರ ಕೇಳುತ್ತಿದ್ದೇನೆ, ಅನ್ಯಥಾ ಭಾವಿಸಬಾರದು’ ಎಂದೂ ಹೇಳಿದರು. ನನಗೆ ಅಲ್ಲಿ ಬರೀ ತಲೆ ಬಿಸಿ ಆದದ್ದು ಮಾತ್ರ ನೆನಪು. ಆಮೇಲೆ ನನಗೆ ಹೀಗೂ ಒಂದು ವ್ಯಾಖ್ಯಾನ ಇರಬಹುದಲ್ಲ? ಇದ್ದಿದ್ದರೆ ಬಸವಣ್ಣನೂ ಇಂತಹ ಭಿನ್ನಾಭಿಪ್ರಾಯಗಳನ್ನು ಒಪ್ಪುತ್ತಿದ್ದ ಅನ್ನಿಸಿತು. ಇದು ಅವರ ಲಿಂಗಾಯತದ ನಿಜ ಪರಿಕಲ್ಪನೆ. ತನ್ನದಲ್ಲದ್ದನ್ನೂ ತನ್ನದಾಗಿಸಿಕೊಳ್ಳುವುದು.

ಅಂತೆಯೇ ಶಂಕರರ ಧರ್ಮಪ್ರಚಾರ ಹಾಗೂ ಕಾರ್ಯಗಳು ಸಾಕಷ್ಟು ಒಳ್ಳೆಯದನ್ನೂ ಕೆಲವು ಕೆಟ್ಟ ಪರಿಣಾಮಗಳನ್ನೂ ಉಂಟು ಮಾಡಿರಲು ಸಾಧ್ಯ.

ತಮ್ಮ ಉದ್ಧಾರಕ್ಕೆ ಇಂತಿಂಥ ಕೆಲಸಗಳನ್ನು ಮಾಡಿಕೊಡಿ ಎಂದು ಸರ್ಕಾರದ ಬಳಿ ಕೇಳಲು ಎಲ್ಲಾ ಸಮುದಾಯಗಳಿಗೂ ಸಂವಿಧಾನಬದ್ಧ ಅವಕಾಶವಿದೆ. ಲಿಂಗಾಯತರು ತಮ್ಮ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಿ ಎಂದು ಮನವಿ ಮಾಡಿಲ್ಲವೇ? ಜೈನರು ಹಿಂದೂ ಧರ್ಮದಿಂದ ಪ್ರತ್ಯೇಕವಾಗಿಲ್ಲವೇ?

ಪ್ರಸ್ತುತದ ಅರಿವಿನಲ್ಲಿ ನೋಡುವಾಗ ಎಲ್ಲಾ ಧರ್ಮಗಳೂ ತನ್ನ ಬೆಳವಣಿಗೆಗೆ ಬೇಕಾದಷ್ಟು ಹಿಂಸೆಯನ್ನೋ ತಾರತಮ್ಯವನ್ನೋ ಅಧಿಕಾರದ ಭ್ರಷ್ಟಾಚಾರವನ್ನೋ ಮಾಡಿಯೇ ತೀರಿವೆ. ಹಿಂಸೆ ಎನ್ನುವುದು ತಪ್ಪಲ್ಲದ ಅಂದಿನ ದಿನಗಳಲ್ಲಿ ರಾಜರೂ ಸಾಮಂತರೂ ಯುದ್ಧಗಳ ಮೂಲಕ ತಮ್ಮ ನಾಡನ್ನು ರಕ್ಷಿಸಿ ಬೆಳೆಸಿದ್ದಾರೆ. ಅದನ್ನುಇಂದಿನ ಬೆಳಕಲ್ಲಿ ಅರ್ಥ ಮಾಡಿಕೊಳ್ಳುವಾಗ ಅಂದಿನದುರ್ಗಮ ಸನ್ನಿವೇಶಗಳು ಮತ್ತು ಪ್ರಸ್ತುತವಿದ್ದ ಮೌಲ್ಯಗಳು ನಮ್ಮ ಮುಂದಿರಬೇಕೇ ವಿನಾ ‘ಟಿಪ್ಪು ಕೊಂದ’ ‘ಹಿಂದೂ ಅರಸರು ಕೊಲ್ಲಲಿಲ್ಲ’ ಹೀಗೆ ನೇರ ವಾದಗಳನ್ನು ಹೂಡಲಾಗದು.

ಶಂಕರರನ್ನು ವಿರೋಧಿಸಲು ವ್ಯಾಖ್ಯಾನವಾಗಿ ಯಾವ ಬೌದ್ಧ ಧರ್ಮವನ್ನು ಬಳಸಲಾಗುತ್ತಿದೆಯೋ ಅದೇಬೌದ್ಧ ಧರ್ಮ ಶ್ರೀಲಂಕಾದಲ್ಲಿ ಬೇರೂರಿ ಸಾಕಷ್ಟು ‘ಎಲೀಟ್’ ಆಗಿ, ಹಿಂಸಾತ್ಮಕವೂ ಆಗಿ ಮೂಲ ನಿವಾಸಿಗಳಿಗೆ ತೊಂದರೆ ಕೊಟ್ಟಿದೆ, ಅದು ಈಗಲೂ ಮುಂದುವರಿದಿದೆ. ಸಸ್ಯಾಹಾರ ಶ್ರೇಷ್ಠ, ಮಾಂಸ ತಿನ್ನಬಾರದು ಇತ್ಯಾದಿ ತಾಕೀತುಗಳನ್ನು ಬೌದ್ಧ ಸನ್ಯಾಸಿಗಳು ಬಹಳ ಅಧಿಕಾರಯುತವಾಗಿ ಮಾಡುತ್ತಾರೆ. ಇದರಿಂದ ಅವರಿಗೂ, ಮೂಲ ನಿವಾಸಿಗಳಿಗೂ ಸಾಕಷ್ಟು ತಿಕ್ಕಾಟವಿದೆ. ಇದನ್ನು ‘ಬೌದ್ಧೀಕರಣ’ ಎನ್ನಬೇಕೋ ಅಥವಾ ‘ಬೌದ್ಧ ಧರ್ಮದ ಶುದ್ಧೀಕರಣ’ ಎನ್ನಬೇಕೋ?

ಸರ್ಕಾರ, ಯಾವ ಜಯಂತಿಯನ್ನೂ ಆಚರಿಸಬೇಕಿಲ್ಲ ಎನ್ನುವ ಮಾತು ಅಂತಿಮ. ಈ ಕೂಗು ಸರ್ಕಾರಕ್ಕೆ ಮುಟ್ಟಬೇಕು. ಆದರೆ ಶಂಕರ ಜಯಂತಿಯಿಂದ ಅಥವಾ ಟಿಪ್ಪು ಜಯಂತಿಯಿಂದ ಮಾತ್ರ ಜಾತ್ಯತೀತತೆಗೆ ಧಕ್ಕೆ ಬರುತ್ತದೆ ಎನ್ನುವುದಾರೆ ಅದಕ್ಕೆ ಸೂಚಿಸುವ ಯಾವುದೇ ಪರ್ಯಾಯ ಹೆಸರೂ ಪ್ರಶ್ನಾತೀತವಲ್ಲ. ಹಾಗಾಗಿ ವಾದವುಸರ್ಕಾರವನ್ನು ಜಯಂತಿಮುಕ್ತ ಮಾಡುವತ್ತ ಹಾಗೂ ಸಂವಿಧಾನವನ್ನು ಉಳಿಸುವತ್ತ ಇದ್ದರೆ ಅದಕ್ಕೆ ಬಲವಿರುತ್ತದೆ.

ಹಾಲಿ ಪರಿಸ್ಥಿತಿಯಲ್ಲಿ ಶಂಕರಾಚಾರ್ಯರನ್ನು ಅಥವಾಮುಂದೆ ಇನ್ಯಾರನ್ನೋ ನಿಂದಿಸಲು ನಿಂತಿರುವ ಜನರಲ್ಲಿನನ್ನ ನಿವೇದನೆ ಇಷ್ಟೇ. ನಿಮ್ಮ ವಾದವನ್ನು ಸಂವಿಧಾನದತ್ತ ಸರ್ಕಾರದತ್ತ ಗುರಿ ಮಾಡಿ ಸ್ಪಷ್ಟವಾಗಿ ಹೇಳಿ. ಅದು ಬಿಟ್ಟು ವ್ಯಕ್ತಿಗತ ತೆಗಳಿಕೆಗೆ ಸೀಮಿತವಾದರೆ ಮಾತು ನೋಯುತ್ತವಷ್ಟೆ, ಅದರಿಂದ ಯಾವ ಗುರಿಯೂ ಮುಟ್ಟಲಾಗದು. ಸರ್ಕಾರವು ಮುಂದಿನ ವರ್ಷ ಹೊಸ ಜಯಂತಿ ಘೋಷಿಸಿದರೂ ಘೋಷಿಸೀತು.

ಅಂದಹಾಗೆ, ಮತ ಜಯಂತಿಗಳ ಜೊತೆ ಹೆಣ್ಣು ಮಕ್ಕಳಿಗೊಂದು ಜಯಂತಿ ಮೀಸಲಿಡಿ ಅಂತ ನಾವು ಕೇಳಬೇಕಲ್ಲ! ಏನಂತೀರಿ!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT