ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | RCB vs PBKS: ಆರ್‌ಸಿಬಿಗೆ ಸತತ ನಾಲ್ಕನೇ ಗೆಲುವಿನ ಗುರಿ

ಏಳುಬೀಳು ಕಾಣುತ್ತಿರುವ ಪಂಜಾಬ್ ಕಿಂಗ್ಸ್‌ ವಿರುದ್ಧ ಪಂದ್ಯ ಇಂದು
Published 9 ಮೇ 2024, 0:13 IST
Last Updated 9 ಮೇ 2024, 0:13 IST
ಅಕ್ಷರ ಗಾತ್ರ

ಧರ್ಮಶಾಲಾ: ದಯನೀಯ ಸ್ಥಿತಿಯಿಂದ ಗೆಲುವಿನ ಹಳಿಗೆ ಮರಳಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು, ಏಳುಬೀಳುಗಳನ್ನು ಕಾಣುತ್ತಿರುವ ಪಂಜಾಬ್ ತಂಡವನ್ನು ಗುರುವಾರ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್ ಪಂದ್ಯದಲ್ಲಿ ಎದುರಿಸಲಿದೆ. ಫಫ್‌ ಡುಪ್ಲೆಸಿ ಬಳಗ ನಿರಂತರ ನಾಲ್ಕನೇ ಗೆಲುವಿನ ಯತ್ನದಲ್ಲಿದೆ.

ಇತ್ತೀಚಿನ ಗೆಲುವುಗಳಿಂದ ಆರ್‌ಸಿಬಿ ತಂಡದ ಮನೋಸ್ಥೈರ್ಯ ಹೆಚ್ಚಾಗಿದ್ದು, ಕೊನೆಯ (ಹತ್ತನೇ) ಸ್ಥಾನದಿಂದ ಏಳನೇ ಸ್ಥಾನಕ್ಕೆ ಏರಿದೆ. 11 ಪಂದ್ಯಗಳನ್ನು ಆಡಿ ಎಂಟು ಪಾಯಿಂಟ್ಸ್ ಅಷ್ಟೇ ಗಳಿಸಿದೆ. ಎಲ್ಲ ಗೆದ್ದರೂ ಪ್ಲೇ ಆಫ್‌ ಸಾಧ್ಯತೆ ತೀರಾ ಕಮ್ಮಿ. ಉಳಿದ ಮೂರೂ ಪಂದ್ಯ ಗೆದ್ದು, ಇತರ ಪಂದ್ಯಗಳ ಫಲಿತಾಂಶ ತಾನು ಅಂದುಕೊಂಡ ಹಾಗೆ ಬರಲಿ ಎಂದು ಹಾರೈಸಬೇಕಷ್ಟೇ.

ಪಂಜಾಬ್ ಕಿಂಗ್ಸ್‌ ಸಹ 11 ಪಂದ್ಯಗಳಿಂದ ಎಂಟು ಪಾಯಿಂಟ್ಸ್‌ ಪಡೆದಿದೆ. ಈ ಪಂದ್ಯದ ನಂತರ ಒಬ್ಬರಷ್ಟೇ 14 ಪಾಯಿಂಟ್ಸ್ ತಲುಪಲು ಸಾಧ್ಯ. ಸೋತ ತಂಡಕ್ಕೆ ಅಧಿಕೃತವಾಗಿ ಪ್ಲೇಆಫ್‌ ಬಾಗಿಲು ಮುಚ್ಚಲಿದೆ.

ಸತತ ಮೂರು ಪಂದ್ಯಗಳನ್ನು ಗೆದ್ದ ಉಮೇದಿನಲ್ಲಿರುವ ಆರ್‌ಸಿಬಿ, ಆತಿಥೇಯರಿಗಿಂತ ಹೆಚ್ಚು ವಿಶ್ವಾಸದಲ್ಲಿದೆ. ಆರ್‌ಸಿಬಿ ತನ್ನ ಈ ಆವೃತ್ತಿಯ ಮೊದಲ ಜಯವನ್ನು ಇದೇ ತಂಡದ ವಿರುದ್ಧ ಬೆಂಗಳೂರಿನಲ್ಲಿ ಗಳಿಸಿತ್ತು.

ವಿರಾಟ್‌ ಕೊಹ್ಲಿ ಈ ಬಾರಿಯೂ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಕೆಲವು ಪಂದ್ಯಗಳಲ್ಲಿ ಫ್ಲಾಪ್‌ ಆಗಿದ್ದ ಫಫ್ ಡುಪ್ಲೆಸಿ ಕೂಡ ಲಯಕ್ಕೆ ಮರಳಿದಂತಿದೆ. ವಿಲ್ ಜಾಕ್ಸ್‌, ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರಿಸಿದ್ದರು. ದಿನೇಶ್ ಕಾರ್ತಿಕ್ ಫಿನಿಷರ್ ಪಾತ್ರ ನಿಭಾಯಿಸುತ್ತಿದ್ದಾರೆ. ಕ್ಯಾಮರಾನ್ ಗ್ರೀನ್ ಕೂಡ ವಿಕೆಟ್‌ ಪಡೆಯಲು ಆರಂಭಿಸಿದ್ದಾರೆ.

ಬೌಲಿಂಗ್ ಕೂಡ ಮೊದಲಿನಷ್ಟು ದುರ್ಬಲವಾಗಿ ಕಾಣುತ್ತಿಲ್ಲ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಮೊಹಮ್ಮದ್ ಸಿರಾಜ್ ಕೊನೆಗೂ ಲಯ ಕಂಡುಕೊಂಡಿದ್ದಾರೆ. ಯಶ್ ದಯಾಳ್ ಮತ್ತು ವೈಶಾಖ ವಿಜಯಕುಮಾರ್ ಕೂಡ ಮೊದಲಿನಷ್ಟು ರನ್‌ ಗಳಿಸುತ್ತಿಲ್ಲ.

ಪಿಬಿಕೆಎಸ್‌ ಮೂರು ದಿನಗಳ ಹಿಂದೆ ತವರಿನಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋತಿದ್ದು ಅದರ ವಿಶ್ವಾಸಕ್ಕೆ ಪೆಟ್ಟು ನೀಡಿದೆ. ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರೂ, ಬ್ಯಾಟರ್‌ಗಳು ಕೈಕೊಟ್ಟಿದ್ದರು.

ಪಂಜಾಬ್‌ ಈ ಋತುವಿನುದ್ದಕ್ಕೂ ಏಳುಬೀಳಿನ ಆಟವಾಡಿದೆ. ಈಡನ್‌ಗಾರ್ಡನ್‌ನಲ್ಲಿ ದಾಖಲೆ ಮೊತ್ತ ಚೇಸ್‌ ಮಾಡಿ ಕೆಕೆಆರ್ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದ ಪಂಜಾಬ್‌, ಸಿಎಸ್‌ಕೆ ತಂಡವನ್ನೂ ಚೆಪಾಕ್‌ನಲ್ಲೇ ಸದೆಬಡಿದಿತ್ತು. ಆದರೆ ತವರಿನಲ್ಲಿ ಅದೇ ತಂಡದೆದುರು ಮುಗ್ಗರಿಸಿತು.

ಈಗ ತವರಿನ ಕೊನೆಯ ಪಂದ್ಯವನ್ನು ಗೆಲುವಿನೊಡನೆ ಮುಗಿಸುವ ಗುರಿಯಲ್ಲಿದೆ.

ಪಂದ್ಯ ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಮತ್ತು ಜಿಯೊ ಸಿನಿಮಾ ಆ್ಯಪ್.


ಆಡಿರುವ ಪಂದ್ಯಗಳು: 32

ಪಂಜಾಬ್‌ ತಂಡಕ್ಕೆ ಜಯ: 17

ಬೆಂಗಳೂರು ತಂಡಕ್ಕೆ ಜಯ: 15

ಪಂಜಾಬ್‌ ಕಿಂಗ್ಸ್‌ ನಾಯಕ ಸ್ಯಾಮ್ ಕರನ್
ಎಎಫ್‌ಪಿ ಚಿತ್ರ
ಪಂಜಾಬ್‌ ಕಿಂಗ್ಸ್‌ ನಾಯಕ ಸ್ಯಾಮ್ ಕರನ್ ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT