ಮಾಹಿತಿ ಹಕ್ಕು ಕಾಯ್ದೆಗೆ ತಿಥಿಯೇ...?

7

ಮಾಹಿತಿ ಹಕ್ಕು ಕಾಯ್ದೆಗೆ ತಿಥಿಯೇ...?

Published:
Updated:

ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಯುವ ವಕೀಲ ಕೆ.ಬಿ.ಕೆ.ಸ್ವಾಮಿ ಈ ಕುರಿತಂತೆ ತಮ್ಮ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಅವರ ಯಥಾವತ್‌ ಬರಹ ಇಲ್ಲಿದೆ...

ಕಳೆದ ಎರಡು ವಾರದ ಹಿಂದೆ ಆರಂಭವಾದ ಲೋಕಸಭಾ ಅಧಿವೇಶನದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ಮಹತ್ವದ ತಿದ್ದುಪಡಿ ತರುವ ವಿಷಯಸೂಚಿ ಸೇರ್ಪಡೆಯಾಗಿತ್ತು. ಆದರೆ ಕೆಲವು ಆಯ್ದ ಸಾಮಾಜಿಕ ಕಳಕಳಿಯ ನಾಗರಿಕರ ಹದ್ದಿನ ಕಣ್ಣುಗಳನ್ನು ತಪ್ಪಿಸಲು ಸಾಧ್ಯವಾಗದೆ, ತಿದ್ದುಪಡಿಯ ಕರಡು ತಾತ್ಕಾಲಿಕವಾಗಿ ಗುಮ್ಮನಂತೆ ಹಿಂದೆ ಸರಿದು ನಿಂತಿದೆ.

ಮಾಹಿತಿ ಹಕ್ಕು ಕಾಯ್ದೆ–2005 (RIGHT TO INFORMATION ACT–2005) ಜಾರಿಗೆ ಬರುವ ಮೊದಲು, ಸರ್ಕಾರಿ ಕಚೇರಿ, ಸಾರ್ವಜನಿಕ ಸಂಸ್ಥೆಗಳಿಂದ ಅಗತ್ಯ ಮಾಹಿತಿ ಪಡೆಯುವುದು ಬಹು ಪ್ರಯಾಸದ ಸಂಗತಿಯಾಗಿತ್ತು. ನಾಗರಿಕರ ದೈನಂದಿನ ಬದುಕಿನಲ್ಲಿ ಸರ್ಕಾರದ ಸಂಸ್ಥೆಗಳ ಒಡನಾಟವನ್ನು ಸರಳಗೊಳಿಸುವ ಮತ್ತು ಪಾರದರ್ಶಕವಾಗಿ ಇರಿಸುವ ಮಹತ್ತರ ಆಶಯವನ್ನು ಹೊಂದಿದ್ದ ಈ ಕಾಯ್ದೆ ಜಾರಿಗೆ ಬಂದ ಒಂದು ವರ್ಷದ ಅವಧಿಯಲ್ಲೇ ಕಾರ್ಯಾಂಗದ (ಆಯಕಟ್ಟಿನ ಜಾಗದಲ್ಲಿದ್ದ ಸರ್ಕಾರಿ ನೌಕರರ) ಅವಕೃಪೆಗೆ ಗುರಿಯಾಗಿತ್ತು. ಅದರ ಪರಿಣಾಮವಾಗಿ 2006ರ ಜುಲೈನಲ್ಲಿ ಅಂದಿನ ಯುಪಿಎ ಸರ್ಕಾರವೂ ಮಾಹಿತಿ ಹಕ್ಕು ಕಾಯ್ದೆಗೆ ಕತ್ತರಿ ಪ್ರಯೋಗ ಮಾಡಲು ಮುಂದಾಗಿ ಮುಖಭಂಗಕ್ಕೆ ಗುರಿಯಾಗಿತ್ತು.

ಇಂತಹುದೇ ಪ್ರಯತ್ನಗಳು 2009ರ ಅಕ್ಟೋಬರ್, 2013ರ ಆಗಸ್ಟ್ ಮತ್ತು 2017ರ ಏಪ್ರಿಲ್‌ನಲ್ಲಿಯೂ ನಡೆದವು. ಇಂತಹ ಪ್ರಯತ್ನಗಳು ನಡೆದಾಗಲೆಲ್ಲಾ ಕೆಲವು ಆಯ್ದ ನಾಗರಿಕರು ಪ್ರತಿಭಟಿಸುವುದನ್ನು ನೋಡಿದರೆ ದೇಶದ ಸಾಮೂಹಿಕ ಪ್ರಶ್ನಾ (Collective Conscience) ಶಕ್ತಿ ನಶಿಸಿ ಹೋಗಿದೆಯೇ ಎಂಬ ಸಂಶಯ ಮೂಡುತ್ತದೆ.

‘ಅಧಿಕಾರ ಲಭಿಸುವ ಪೂರ್ವದಲ್ಲಿ ನಾಗರಿಕರೆಡಗಿನ ಧನ್ಯತೆಯ ಭಾವ, ಅಧಿಕಾರ ಲಭಿಸಿದ ನಂತರ ಬದಲಾಗುತ್ತದೆ’ ಎಂಬ ಖ್ಯಾತ ತತ್ವಜ್ಞಾನಿ ಆರಿಸ್ಟಾಟಲ್ ಮಾತು ಈಗ ಸಾರ್ವಕಾಲಿಕ ಸತ್ಯದಂತೆ ಪುನಾರವರ್ತನೆಯಾಗುತ್ತಲೇ ಇದೆ.

ಪಾರದರ್ಶಕತೆ ಮತ್ತು ಉತ್ತರದಾಯಿತ್ವ (Transparency and accountability) ಎಂಬುದು ಸಾರ್ವಜನಿಕ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಲು ಮತ್ತು ನಾಗರಿಕ ಸ್ನೇಹಿಯಾಗಿರಲು ಅಗತ್ಯವಾದ ಅಂಶ. ಗುಡ್ ಗವರ್ನೆನ್ಸ್‌ (GOOD GOVERNENCE) ಎಂದರೆ ಮತ್ತೇನು ?

ಕನಿಷ್ಠ ಪಕ್ಷ ನಮ್ಮನ್ನು ಆಳುವ ನಾಯಕ, ನಾಯಕಿಯ ಶೈಕ್ಷಣಿಕ ಹಿನ್ನೆಲೆ, ಆದಾಯ, ಆಸ್ತಿ, ಅವರ ಕುಟುಂಬದ ಸದಸ್ಯರ ವಿವರ ಮತ್ತವರ ಆಸ್ತಿ, ಅಪರಾಧ ಪ್ರಕರಣಗಳ ಮಾಹಿತಿಯಾದರೂ ಬೇಕಲ್ಲವೇ?.

ಅದನೆಲ್ಲಾ ಗೋಪ್ಯತೆಯ (CONFIDENTIAL) ಲೇಪನದಲ್ಲಿ ಮುಳುಗಿಸಿಟ್ಟರೆ ಯಾವ ಬಗೆಯ ಪಾರದರ್ಶಕತೆ ಲಭಿಸಿದಂತಾಗುತ್ತದೆ, ಚುನಾವಣಾ ಸಂಬಂಧಿ ರಾಜಕೀಯ ಪಕ್ಷಗಳಿಗೆ ಲಭಿಸುವ ಡೊನೇಷನ್, ಯಾವ ಉದ್ಯಮಿ ಯಾವ್ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ಹಣ ನೀಡಿದ್ದಾರೆಂದು ತಿಳಿಯುವುದು ಬೇಡವೇ?

ಆ ಬಗೆಯಲ್ಲಿ ದೇಣಿಗೆ ನೀಡಿದ ಉದ್ಯಮಿ ರಾಜಕೀಯ ಪಕ್ಷಗಳ ಮುಖಾಂತರ ಏನು ಲಾಭದ ನಿರೀಕ್ಷೆ ಇಟ್ಟುಕೊಂಡು ಇರುತ್ತಾನೆ ಎಂಬುದನ್ನು ತಿಳಿಯದಷ್ಟು ಜಾಣ ಕುರುಡರೇ ನಮ್ಮ ನಾಗರಿಕರು? ಕೊಡುವವನು ಸುಮ್ಮನೆ ದೇಣಿಗೆ ನೀಡುತ್ತಾನೆಯೇ ?

ವ್ಯಾವಹಾರಿಕ ಪ್ರಪಂಚದಲ್ಲಿ ರಾಜಕೀಯ ಪಕ್ಷಗಳು ಪ್ರಜಾತಂತ್ರ ವ್ಯವಸ್ಥೆಯನ್ನು ಹಾಯಿ ದೋಣಿಯನ್ನಾಗಿಸಿ ಕುಟಿಲ (CROOKED) ಮತ್ತು ಲಾಭಕೋರ ಉದ್ಯಮಿಗಳಿಗೆ ಪೂರಕವಾದ ನೀತಿ ನಿರೂಪಣೆ ಮಾಡಿ ದಡ ಮುಟ್ಟಿಸುವುದು ಸುಳ್ಳೇ ?

ಕಾನೂನಿನ ಪರಿಭಾಷೆಯಲ್ಲಿ ಬಳಸುವ Quid Pro Quo (This for that) ‘ಅದಕ್ಕಾಗಿ ಇದು’ ಎಂಬ ತತ್ವ ಏಕೆ ಮರೆಯಾಗುತ್ತಿದೆ.

ನ್ಯಾಯಶಾಸ್ತ್ರದಲ್ಲಿನ ಈ ಜಾಗತಿಕ ತತ್ವ ಅವಕಾಶವಾದಿತನಕ್ಕೆ ಬಲಿಯಾಗಬಾರದು ಮತ್ತು ಅನುಕೂಲಸಿಂಧು ವಾದಕ್ಕೆ ಈಡಾಗಬಾರದು. ಮೆಚ್ಚಿನ ವ್ಯಕ್ತಿಯ ಇಲ್ಲವೇ ಪಕ್ಷದ ವಿರುದ್ಧ ಬಳಸಲು ಹಿಂಜರಿಕೆಯೇ ಆಗಿದ್ದಲ್ಲಿ ಸರ್ಕಾರದ ಮುಖ್ಯಸ್ಥರಾದಿಯಾಗಿ (ಸದ್ಯ ಕಾಯ್ದೆಯಡಿ ಇದ್ದು, ತಾಂತ್ರಿಕ ಕಾರಣದ ನೆಪವೊಡ್ಡಿ ಮಾಹಿತಿಯನ್ನು ನಿರಾಕರಿಸಿದ ಹಲವು ಉದಾಹರಣೆಗಳು ಸಾಕಷ್ಟಿವೆ), ರಾಜಕೀಯ ಪಕ್ಷಗಳನ್ನು ಒಳಗೊಂಡಂತೆ ಮಾಹಿತಿ ಹಕ್ಕು ಕಾಯ್ದೆಯಡಿ ತರಬಾರದೇಕೇ ?

ಯಾವ ರಾಜಕೀಯ ಪಕ್ಷ ಅಥವಾ ಮುಖಂಡರಾದರೇನು, ‘ನಾವು ಭಾರತೀಯರು, ಮಾಹಿತಿಯ ಹಕ್ಕು–ನಮ್ಮ ಹಕ್ಕು’ ಎಂದು ಗಟ್ಟಿಯಾಗಿ ಹೇಳುವ ಸಮಯ ಈಗ ಬಂದಿದೆ.

ಸಾರ್ವಜನಿಕ ವಿರೋಧಕ್ಕಾಗಿ ಹಿಂದೆ ಸರಿದು ನಿಂತಿರುವ ತಿದ್ದುಪಡಿಯ (AMENDMENT PROPOSAL) ಮಸೂದೆ ಇನ್ನೂ ನಿರ್ಜೀವವಾಗಿಲ್ಲ...!!!

ಸಾಂವಿಧಾನಿಕ ಆಶಯಗಳಲ್ಲೊಂದಾದ RIGHT TO KNOW ಅಥವಾ RIGHT TO QUESTION ನಮ್ಮ ಬದುಕಿನ ಭಾಗವಾಗಲಿ. ಭವ್ಯ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಹೊಸ ಭಾಷ್ಯ ಬರೆದ ಮಾಹಿತಿ ಹಕ್ಕು ಕಾಯ್ದೆ ಉಳಿಯಲಿ ಮತ್ತು ನಮ್ಮನ್ನು ಉಳಿಸಲಿ.

(ಲೇಖಕರು ವಕೀಲರು, ಬೆಂಗಳೂರು)

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !