ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೀರಿನ ಹಿಂದಿನ ಕಳಕಳಿ

Last Updated 1 ಮೇ 2016, 19:44 IST
ಅಕ್ಷರ ಗಾತ್ರ

‘ಹರ ಕೊಲ್ಲಲ್ ಪರ ಕಾಯ್ವನೆ?’  ಈ ಮಾತು ಈಗ ಹೇಳಹೊರಟಿರುವ ವಿಷಯಕ್ಕೆ ಸ್ವಲ್ಪ ಅತಿರೇಕ ಅನ್ನಿಸಿದರೂ ಅದರ ತಾತ್ಪರ್ಯದಿಂದ ದೂರವಲ್ಲ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ದೇಶದ ಪ್ರಧಾನಿಯವರ ಎದುರೇ ಇತ್ತೀಚೆಗೆ ಭಾವುಕರಾಗಿ ಕಣ್ಣೀರಿಟ್ಟ ಘಟನೆ ಬಹುತೇಕ ಎಲ್ಲ ಮಾಧ್ಯಮಗಳಲ್ಲೂ ಪ್ರಮುಖವಾಗಿ ಬಿಂಬಿತವಾಯಿತು. ಅವರ ಕಣ್ಣೀರಿಗೆ ಕಾರಣ ಅಸಹಾಯಕತೆ, ಹತಾಶೆ. ದೇಶದ ಮುಖ್ಯ ನ್ಯಾಯಮೂರ್ತಿ ಸ್ಥಾನದಲ್ಲಿದ್ದೂ ನ್ಯಾಯವನ್ನು ನೀಡಲಾಗದ ಸಂಕಟ ಅವರನ್ನು ಬಹುವಾಗಿ ಬಾಧಿಸಿದ್ದು ಕಣ್ಣೀರಾಗಿ ಪ್ರಕಟವಾಗಿದೆ.

ನಮ್ಮ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಮೂರು ಮುಖ್ಯ ದೀಪಸ್ತಂಭಗಳಂತೆ ಇವೆ. ದೇಶದಲ್ಲಿ ನ್ಯಾಯವ್ಯವಸ್ಥೆ, ನೈತಿಕತೆ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಸುವ್ಯವಸ್ಥೆ ಕಾಪಾಡುವಲ್ಲಿ ನ್ಯಾಯಾಂಗ ಬಹಳ ಮಹತ್ತರ ಪಾತ್ರ ವಹಿಸುತ್ತದೆ. ಅಂತಹ ನ್ಯಾಯವ್ಯವಸ್ಥೆಗೆ  ಗ್ರಹಣ ಹಿಡಿದಿದೆ ಎಂದು ಆ ವ್ಯವಸ್ಥೆಯ ಹಿರಿಯರೇ ಕಂಗಾಲಾಗಿ ನಿಲ್ಲುವುದು, ಅಸಹಾಯಕರಾಗುವುದು, ಹತಾಶರಾಗುವುದು ಸಾರ್ವಜನಿಕರಲ್ಲಿ ಗೊಂದಲವನ್ನು, ಭಯವನ್ನು ಹುಟ್ಟಿಸುತ್ತವೆ. ಹಾಗೆಂದ ಮಾತ್ರಕ್ಕೆ ಇದು ನ್ಯಾಯಮೂರ್ತಿಯವರ ಆ ಹೊತ್ತಿನ ಪ್ರತಿಕ್ರಿಯೆ ಕುರಿತ  ಟೀಕೆ ಖಂಡಿತಾ ಅಲ್ಲ. ಬದಲಾಗಿ ನ್ಯಾಯಪರತೆಯ ಬಗ್ಗೆ ಅವರಿಗೆ ಇರುವ ಕಾಳಜಿ, ಬದ್ಧತೆ ಬಗೆಗಿನ ಅನನ್ಯ ಗೌರವವೇ ಆಗಿದೆ. 

ನಮ್ಮ ದೇಶದಲ್ಲಿ ನ್ಯಾಯಾಂಗಕ್ಕೆ ಸದಾ ವಿಶೇಷ ಸ್ಥಾನವಿದೆ. ದೇಶದ ಜನರು ಶಾಸಕಾಂಗ ಹಾಗೂ ಕಾರ್ಯಾಂಗದ ಬಗ್ಗೆ ಆಗಾಗ್ಗೆ ನಂಬಿಕೆ ಕಳೆದುಕೊಳ್ಳುವುದನ್ನು ನಾವು ಕಾಣುತ್ತೇವೆ. ಆ ಅಪನಂಬಿಕೆ ಹಳೆಯ ಸರ್ಕಾರವನ್ನು ಬದಲಾಯಿಸಿ ಹೊಸ ಸರ್ಕಾರ ತರುವುದರ ಮೂಲಕ ಪ್ರಕಟವಾಗುತ್ತದೆ. ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ದೇಶದ ಜನರಿಗೆ ಅಚಲವಾದ ನಂಬಿಕೆಯಿದೆ. ಶಾಸಕಾಂಗ, ಕಾರ್ಯಾಂಗಗಳು ಭ್ರಷ್ಟವಾಗಿವೆ ಎಂದು ಒಂದೊಮ್ಮೆ ದೂರಿದರೂ ನ್ಯಾಯಾಂಗದ ಶುದ್ಧತೆಯ ಬಗ್ಗೆ ಎರಡು ಮಾತಿಲ್ಲ. ನಿಧಾನಗತಿಯ ನ್ಯಾಯ ಪ್ರಕ್ರಿಯೆಯ ಬಗ್ಗೆ ಯಾವತ್ತೂ ತೀವ್ರ  ವಿರೋಧ ವ್ಯಕ್ತವಾಗಿಲ್ಲ. ದಶಕಗಳ ಕಾಲ ನಡೆಯುವ ನ್ಯಾಯಪ್ರಕ್ರಿಯೆಯನ್ನು ಇಂದಿಗೂ ಜನ ಸಹನೆಯಿಂದಲೇ ಸ್ವೀಕರಿಸುತ್ತಾರೆ. ಅನೇಕ ವರ್ಷಗಳ, ಹಲವೊಮ್ಮೆ ದಶಕಗಳ ನಂತರ ಬರುವ ತೀರ್ಪಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಸಾಮಾಜಿಕ, ಆರ್ಥಿಕ ಕಾರಣಗಳಿಗಾಗಿ ಎಷ್ಟೆಲ್ಲ ಆಂದೋಲನಗಳು, ಹೋರಾಟಗಳು ನಡೆದರೂ ನ್ಯಾಯಾಂಗದ ಕಾರ್ಯವೈಖರಿಗೆ  ಸಂಬಂಧಿಸಿದಂತೆ  ಒಂದೇ ಒಂದು ಆಂದೋಲನ ನಡೆದ ನಿದರ್ಶನ  ಇಲ್ಲ. ಇದು ನ್ಯಾಯವ್ಯವಸ್ಥೆಯ ಬಗ್ಗೆ ಜನರಿಗಿರುವ ಗೌರವವಲ್ಲದೆ ಇನ್ನೇನು?

ಪರಿಸ್ಥಿತಿ ಹೀಗಿರುವಾಗ ಜನರ ಸಹನೆ ಸ್ವತಃ ನ್ಯಾಯಮೂರ್ತಿಯವರಿಗೆ ಅಸಹನೀಯ ಆಗಿದೆ ಎಂದು ಅವರ ಕಣ್ಣೀರಿನಿಂದ ಭಾವಿಸಬಹುದು. ಕೋಟಿಗಟ್ಟಲೆ ಪ್ರಕರಣಗಳು ದಶಕಗಳಿಂದ ತೀರ್ಪಿಗಾಗಿ ಕಾಯುತ್ತ  ಕುಳಿತಿರುವುದು, ಇವುಗಳನ್ನು ಶೀಘ್ರವಾಗಿ ಪರಿಹರಿಸಲು ಅವಶ್ಯವಿರುವ ನ್ಯಾಯಾಧೀಶರ, ಸಿಬ್ಬಂದಿಯ ಕೊರತೆ, ನಡೆಯದ ನೇಮಕಾತಿ ಮೊದಲಾದ ಪರಿಹರಿಸಬಹುದಾದ ಸಮಸ್ಯೆಗಳ ಕಗ್ಗಂಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಬಳಲುತ್ತಿದೆ ಎಂಬುದನ್ನು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಅದು ಪ್ರಯೋಜನಕ್ಕೆ ಬಾರದೆ ಕೊನೆಗೆ ಪ್ರಧಾನಿಯವರ ಎದುರೇ ಅದನ್ನು ಅಸಹಾಯಕವಾಗಿ ವ್ಯಕ್ತಪಡಿಸಬೇಕಾಗಿ ಬಂದ ಸಂದರ್ಭದಲ್ಲಿ ನ್ಯಾಯಮೂರ್ತಿಯವರು ಎದುರಿಸಿರಬಹುದಾದ ನೋವು, ಸಂಕಟವನ್ನು ಸಾಮಾಜಿಕ ಕಳಕಳಿಯಿರುವ ಯಾರಾದರೂ ಅರ್ಥಮಾಡಿಕೊಳ್ಳಬಹುದು.

ನ್ಯಾಯಪ್ರಕ್ರಿಯೆ ಎಂದರೆ ಅದೊಂದು ಪವಿತ್ರ ಕಾರ್ಯ. ಆ ಪ್ರಕ್ರಿಯೆ ಅನೇಕ ಜನರ ಜೀವನ ಉಳಿಸಬಲ್ಲದು, ಬದುಕು ಹಸನಾಗಿಸಬಲ್ಲದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಲ್ಲದು, ನೈತಿಕ ಅಧಃಪತನವನ್ನು ತಡೆಯಬಲ್ಲದು... ಹೀಗೆ ಪಟ್ಟಿ ಮಾಡುತ್ತ ಹೋಗಬಹುದು. ಅಂತಹ ಘನಕಾರ್ಯ  ಒಂದು ಕಚೇರಿಯ ಕೆಲಸದಂತೆ ಖಂಡಿತ ಪರಿಗಣಿತವಾಗಬಾರದು. ಆದರೆ ವರ್ಷದಿಂದ ವರ್ಷಕ್ಕೆ ಹಾಗೆ ಆಗುತ್ತಿರುವುದೂ  ನ್ಯಾಯಮೂರ್ತಿಯವರ ನೋವಿಗೆ ಕಾರಣವಾಗಿರಬಹುದು. ಅಪರಾಧ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವಂತೆಯೇ ಅಪರಾಧದ ಸ್ವರೂಪಗಳೂ ಬದಲಾಗುತ್ತಿವೆ. ಜತೆಗೆ ಹೆಚ್ಚುತ್ತಲೂ ಇವೆ. ಎರಡು ದಶಕಗಳ ಹಿಂದೆ ನಮ್ಮ ದೇಶದಲ್ಲಿ ನಡೆಯುತ್ತಿದ್ದ ಅಪರಾಧಗಳನ್ನು ಗಣನೆಗೆ ತೆಗೆದುಕೊಂಡು ನೋಡಿದರೆ ಈ ಮಾತು ಸರಿಯೆನ್ನಿಸೀತು. ಈ ಬದಲಾದ ಸನ್ನಿವೇಶದಲ್ಲಿ ನ್ಯಾಯಾಂಗ ಎಷ್ಟು ಚುರುಕಾಗಿದೆ? ಅದಕ್ಕೆ ಬೆಂಬಲವಾಗಿ ನಿಲ್ಲಬೇಕಾದ ವ್ಯವಸ್ಥೆ ಎಷ್ಟು ಸದೃಢವಾಗಿದೆ? ಎಷ್ಟು ಆಧುನೀಕರಣಗೊಂಡಿದೆ? ಆಧುನೀಕರಣದ ತರಬೇತಿ ಎಲ್ಲ ಸಿಬ್ಬಂದಿಗೆ ಲಭ್ಯವಾಗಿದೆಯೇ? ಆಗಿದ್ದರೆ ಅದನ್ನು ಎಷ್ಟು ಜನ ಸಮರ್ಥವಾಗಿ ಬಳಸಬಲ್ಲರು? ಎಂಬಂಥ ಪ್ರಶ್ನೆಗಳಿಗೆ ಇನ್ನೂ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

ನ್ಯಾಯಾಂಗದಂಥ ಉನ್ನತ ವ್ಯವಸ್ಥೆಯ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಉಳಿದ ಇಲಾಖೆಗಳು, ಅವುಗಳ ಕಾರ್ಯವೈಖರಿ ಹೇಗಿರಬೇಡ? ವ್ಯವಸ್ಥೆಯನ್ನು ಪ್ರಶ್ನೆ ಮಾಡಿದರೆ ಅಂಥವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವ ಮಂದಿ ವ್ಯವಸ್ಥೆಯನ್ನು ಸರಿಯಾದ ಹಾದಿಯಲ್ಲಿ ನಡೆಸಲು ಏಕೆ ಮನಸ್ಸು ಮಾಡುವುದಿಲ್ಲ? ವ್ಯವಸ್ಥೆ ಎಂಬುದು ಸಿದ್ಧ ಆಹಾರದಂತೆ ಪೊಟ್ಟಣದಲ್ಲಿ ಸಿಗುವುದಲ್ಲ. ಅದು ಹಲವು ಜನರು ಸೇರಿ ಆದ ಒಂದು ಕೂಟ. ಅದಕ್ಕೆ ನಿರ್ದಿಷ್ಟ ಉದ್ದೇಶಗಳಿವೆ. ಬಹುತೇಕವಾಗಿ ಅವು ಸಮಾಜ ಮುಖಿಯಾಗಿಯೇ ಇರುತ್ತವೆ. ಈಗಾಗಲೇ ಹತ್ತು ಹಲವು ಸರ್ಕಾರಿ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ನಿಗಮ-ಮಂಡಳಿಗಳೇ ಮೊದಲಾದವುಗಳ ಕಾರ್ಯವೈಖರಿಗೆ ಜನ ಬೇಸತ್ತು ಹೋಗಿದ್ದಾರೆ. ಅವುಗಳ ಹುಳುಕನ್ನು ಬಯಲಿಗೆಳೆಯಲು, ಅವುಗಳನ್ನು ಸರಿಯಾದ ದಾರಿಯಲ್ಲಿ ನಡೆಸಲು ಜನಸಾಮಾನ್ಯರಿಗಿರುವ ಏಕೈಕ ಮಾರ್ಗವೆಂದರೆ ನ್ಯಾಯಮಾರ್ಗ ಅರ್ಥಾತ್ ಕೋರ್ಟು. ಇದಕ್ಕೆ ಕಾರಣ ದಶಕಗಳಿಂದ ನ್ಯಾಯವ್ಯವಸ್ಥೆ ನೀಡುತ್ತಿರುವ ಕಾನೂನಿನ ಅರಿವಿನಿಂದ ಜನರಲ್ಲಿ ಹೆಚ್ಚಿರುವ ಜಾಗೃತಿ. ಇಂತಹ ನ್ಯಾಯವ್ಯವಸ್ಥೆಯನ್ನು ಕಾಲಕಾಲಕ್ಕೆ ಬಲಪಡಿಸುವುದು ಭಾರತದಂತಹ ಬಹುವಿಸ್ತೃತ, ಬಹುಭಾಷೆಯ, ಬಹು ಜಾತಿ-ಪಂಗಡಗಳ ರಾಷ್ಟ್ರಕ್ಕೆ ತೀರ ಅವಶ್ಯವಾಗಿದೆ. ಅದರ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಮಾತ್ರವಲ್ಲ ಸದ್ಯದ ಪರಿಸ್ಥಿತಿಯಲ್ಲಿ ತೀರ ಅಗತ್ಯ ಕೂಡಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT