ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನ ರೇಖೆ: ಬಿಜೆಪಿ ಹೇಳಿದ ಅರ್ಧ ಸತ್ಯ

Last Updated 17 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಗುಜರಾತಿನಲ್ಲಿ  ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ  ರೂ.೧೦.೮೦ ಹಾಗೂ ನಗರ ಪ್ರದೇಶದಲ್ಲಿ ರೂ.೧೬.­೭೦ಕ್ಕಿಂತ ಕಡಿಮೆ ಗಳಿಕೆ ಇರುವವರನ್ನು ಮಾತ್ರ ಬಡತನದ ರೇಖೆಗಿಂತ ಕೆಳಗಿರುವವರೆಂದು ಪರಿ­ಗಣಿಸಲಾಗುತ್ತದೆ ಎಂದು ಕಾಂಗ್ರೆಸ್‌ನ ವಕ್ತಾರ ಅಜಯ್ ಮಾಕನ್ ಇತ್ತೀಚೆಗೆ ಪತ್ರಿಕಾಗೋಷ್ಠಿ ಯೊಂದರಲ್ಲಿ ಆರೋಪಿಸಿದ್ದರು. ಇದಕ್ಕೆ ಪೂರಕ­ವಾಗಿ ಅವರು, ಗುಜರಾತ್ ಸರ್ಕಾರದ ಆಹಾರ ಸರಬರಾಜು ಇಲಾಖೆಯ ಸುತ್ತೋಲೆಯನ್ನು ಪ್ರದರ್ಶಿಸಿದ್ದರು.

ಗುಜರಾತ್‌ನ ಬಿಜೆಪಿ ಸರ್ಕಾರ ಇತ್ತೀಚೆಗೆ ತನ್ನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್ ಸೈಟಿನಲ್ಲಿ ಗುಜರಾತಿನ ಗ್ರಾಮಿಣ ಪ್ರದೇಶದಲ್ಲಿ ದಿನಕ್ಕೆ ರೂ.೧೦.೮೦ ಮತ್ತು ನಗರ ಪ್ರದೇಶದಲ್ಲಿ ದಿನಕ್ಕೆ ರೂ.೧೬.೭೦ಕ್ಕಿಂತ ಕಡಿಮೆ ಆದಾಯ ಇರುವವರನ್ನು ಮಾತ್ರ ಬಡ­ತನ ರೇಖೆಗಿಂತ ಕೆಳಗಿರುವ ಬಡವರೆಂದು ಪರಿ­ಗಣಿಸಲಾಗುವುದು ಎಂಬ ಹೇಳಿಕೆ ನೀಡಿದ್ದು ಸತ್ಯ. ಆದರೆ ಇದರ ಬಗ್ಗೆ ವಿವಾದ ಎದ್ದ ಕೂಡಲೇ ಗುಜರಾತ್ ಸರ್ಕಾರ ಸ್ಪಷ್ಟೀಕರಣ ಕೊಟ್ಟು ತಾವು  ಬಡತನ ಅಳೆಯಲು ಯಾವುದೇ ಹೊಸ ಮಾನ­ದಂಡ ರೂಪಿಸಿಲ್ಲವೆಂದೂ, ಇಲಾಖೆ­ಯವರು ಇತ್ತಿಚೆಗೆ ಕೆಲವು ಸ್ಪಷ್ಟೀಕರಣ ಕೇಳಿದ್ದರಿಂದ ಆ ಸುತ್ತೋಲೆ  ಹೊರಡಿಸಲಾಗಿದೆಯೆಂದೂ, ಆ ಮಾನ­­ದಂಡವನ್ನು ೨೦೦೪ರಲ್ಲಿ ಕೇಂದ್ರ ಸರ್ಕಾ­ರವೇ ನಿಗದಿ ಮಾಡಿದ್ದೆಂದೂ ಹೇಳಿಕೆ ನೀಡಿದೆ.

ಅದರ ಜೊತೆಗೆ ಕೇಂದ್ರ ಸರ್ಕಾರ ಗುಜ­ರಾತಿನಲ್ಲಿ ಕೇವಲ ೨೧ ಲಕ್ಷ ಬಿಪಿಲ್ ಫಲಾ­ನು­ಭವಿಗಳನ್ನು ಗುರುತಿಸಿದ್ದರೂ ಗುಜರಾತ್ ಸರ್ಕಾರ ಅದನ್ನು ಸಡಿಲಿಸಿ ೧೧ ಲಕ್ಷ ಅಧಿಕ ಫಲಾ­ನುಭವಿಗಳನ್ನು ಗುರುತಿಸಿ ಒಟ್ಟು ೩೩ ಲಕ್ಷ ಬಡವರಿಗೆ ಬಿಪಿಎಲ್ ಸೌಲಭ್ಯ ನೀಡುತ್ತಿದೆ­ಯೆಂದೂ ಹೇಳಿಕೊಳ್ಳುತ್ತಿದೆ. ಅಜಯ್ ಮಾಕನ್ ಮತ್ತು ಬಿಜೆಪಿ ಹೇಳಿಕೆಗಳಲ್ಲಿ ಯಾವುದು ಸತ್ಯ? ಇದನ್ನು ಅರಿಯುವುದಕ್ಕೆ ಬಡತನ ರೇಖೆ­ಯನ್ನು ಗುರುತಿಸುವ ಕ್ರಿಯೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಭಾರತದ ಯೋಜನಾ ಆಯೋಗ ಬಡತನ ರೇಖೆಯನ್ನು ನಿರ್ಧರಿಸುತ್ತದೆ. ಆದರೆ ಅದಕ್ಕೆ ರಾಜಕೀಯ ಮಾರ್ಗದರ್ಶನ  ನೀಡುವುದು ಸರ್ಕಾರ.

ಭಾರತೀಯ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್  (ಎನ್‌ಎಸ್ಎಸ್‌ಒ)  ಪ್ರತಿ ಐದು ವರ್ಷಕ್ಕೊಮ್ಮೆ ಇದಕ್ಕೆಂದೇ ನಡೆಸುವ ವಿಶೇಷ ಮತ್ತು ವಿಸ್ತೃತ ಸಮೀಕ್ಷೆಯನ್ನು ಆಧಾರವಾಗಿಟ್ಟುಕೊಂಡು ಯೋಜನಾ ಆಯೋಗ ಮಾನದಂಡವನ್ನು ನಿರ್ಧರಿಸುತ್ತದೆ. ನಿರ್ದಿಷ್ಟ ಕ್ಯಾಲೊರಿ­ಯಷ್ಟು ಶಕ್ತಿಯನ್ನು ಪಡೆದುಕೊಳ್ಳಲು ಬೇಕಾದ ಆಹಾರ ಖರೀದಿಸುವ ಆದಾಯ ಇರುವವರು ಮತ್ತು ಇಲ್ಲದವರನ್ನು ಆಧರಿಸಿ ಬಡತನ ರೇಖೆಯನ್ನು ನಿರ್ಧರಿಸಲಾಗುತ್ತದೆ. ಇದೊಂದು ಹಾಸ್ಯಾಸ್ಪದ ವಿಧಾನ. ಇದಕ್ಕೆ ಈತನಕ ಬಿಜೆಪಿಯಾಗಲೀ ಕಾಂಗ್ರೆಸ್ ಆಗಲೀ ವಿರೋಧ ವ್ಯಕ್ತಪಡಿಸಿಲ್ಲ.

ಹೀಗೆ ರಾಜಕೀಯವಾಗಿ ಎಲ್ಲರೂ ಒಪ್ಪಿದ  ಮಾನದಂಡಗಳನ್ನು ಆಧರಿಸಿ ಎನ್ಎಸ್ಎಸ್ಒ ೨೦೦೪ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿ ಇರುವಾಗ ನಡೆಸಿದ ಸಮೀಕ್ಷೆಯನ್ನು ಆಧಾರ­ವಾಗಿ­ಟ್ಟುಕೊಂಡು ಕೇಂದ್ರ ಸರ್ಕಾರ ೨೦೦೭ರಲ್ಲಿ ಹೊಸ ಬಡತನ ರೇಖೆಯ ಮಾನ ದಂಡಗಳನ್ನು ಬಿಡುಗಡೆ ಮಾಡಿತು. ಅದರ ಪ್ರಕಾರ ಗುಜ­ರಾತಿನ ಗ್ರಾಮೀಣ ಪ್ರದೇಶದಲ್ಲಿ ತಿಂಗಳಿಗೆ  ರೂ.೩೫೩.೯೬ ಮತ್ತು ನಗರ ಪ್ರದೇಶದಲ್ಲಿ ರೂ.೫೪೧.೬­ಕ್ಕಿಂತ ಕಡಿಮೆ ಆದಾಯ ಇರು­ವರರನ್ನು ಅಂದರೆ ದಿನಕ್ಕೆ  ರೂ.೧೦.೮೦ ಮತ್ತು ರೂ.೧೬.೭೦ ಕ್ಕಿಂತ ಆದಾಯ ಕಡಿಮೆ ಇರುವವರನ್ನು ಬಿಪಿಎಲ್ ಕುಟುಂಬಗಳೆಂದು ಗುರುತಿಸಲಾ­ಯಿತು. ಇದು ಎಂಥಾ ಹಾಸ್ಯಾಸ್ಪದ ಮತ್ತು ಕ್ರೂರ ಮಾನದಂಡವೆಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದರೂ ೨೦೦೭ ರಿಂದ ಈವರೆಗೂ ಬಿಜೆಪಿ ಸಹ ಬೇರೆ ಸರ್ಕಾರ ಅಥವಾ ಪಕ್ಷ­ಗ­ಳಿಗಿಂತ ವಿಶೇಷವಾದ ವಿರೋಧವನ್ನೇನೂ ವ್ಯಕ್ತಪಡಿಸಿರಲಿಲ್ಲ.

ಆದರೆ ಪ್ರತಿ ಐದು ವರ್ಷಕ್ಕೊಮ್ಮೆ ಎನ್ಎಸ್­ಎಸ್ಒ ಬಡತನ ರೇಖೆಯನ್ನು ಅಳೆಯಲು ನಡೆ­ಸುವ ಸಮೀಕ್ಷೆಯನ್ನು ೨೦೧೧ರಲ್ಲೂ ನಡೆಸಿತು. ಅದನ್ನು ಆಧರಿಸಿಯೇ ಯೋಜನಾ ಆಯೋಗದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ರೂ. ೩೨ ಆದಾಯ ಇದ್ದವರನ್ನು ಬಡವರಲ್ಲವೆಂದು ಹೇಳಿದ್ದು. ಅದರ ವಿರುದ್ಧ ಕಾಂಗ್ರೆಸ್ ಆದಿಯಾಗಿ ಬಿಜೆಪಿಯೂ ಒಳಗೊಂಡಂತೆ ಎಲ್ಲರೂ ಕೂಗಾಡಿ­ದ್ದರೂ ಬಡತನವನ್ನು ಅಳೆಯುವ ಮಾನದಂಡ­ಗಳನ್ನು ಮಾತ್ರ ಬದಲು ಮಾಡುವ ಗೋಜಿಗೇ ಹೋಗಿಲ್ಲ. ಅದೇನೇ ಇರಲಿ. ಈ ಸಮೀಕ್ಷೆಯನ್ನು ಆಧರಿಸಿ ೨೦೧೩ರ ಜುಲೈನಲ್ಲಿ ಕೇಂದ್ರ ಸರ್ಕಾರ ಬಡತನದ ಹೊಸ ಮಾನದಂಡಗಳನ್ನು ಬಿಡುಗಡೆ ಮಾಡಿದೆ.

ಅದರ ವಿವರ ಯೋಜನಾ ಆಯೋಗದ ವೆಬ್ ಸೈಟಿನಲ್ಲಿ ಸಾರ್ವಜನಿಕರಿಗೂ ಅಂದಿನಿಂದಲೂ ಲಭ್ಯವಿದೆ. ಈ ಹೊಸ ಮಾನ­ದಂಡದ ಪ್ರಕಾರ ಗುಜರಾತ್ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ತಿಂಗಳಿಗೆ ರೂ. ೯೩೨ ಅಥವಾ ದಿನಕ್ಕೆ ರೂ. ೩೧.೦೬ ಮತ್ತು ನಗರ ಪ್ರದೇಶದಲ್ಲಿ ತಿಂಗಳಿಗೆ ರೂ. ೧೧೫೨ ಅಥವಾ ದಿನಕ್ಕೆ ರೂ.೩೮.೪ ಕ್ಕಿಂತಲೂ ಕಡಿಮೆ ಆದಾಯ ಇರು­ವವರನ್ನು ಬಡವರೆಂದು ಘೋಷಿಸಿದೆ. ಹೀಗಾಗಿ ಇದರಲ್ಲಿ ಗುಜರಾತ್ ಸರ್ಕಾರ ಮತ್ತು ಬಿಜೆಪಿ ಪಕ್ಷ ಅರ್ಧ ಸತ್ಯವನ್ನಷ್ಟೇ ಹೇಳಿರುವುದು ಸ್ಪಷ್ಟ.

ಬಡತನ ರೇಖೆ ಕುರಿತು ಕೇಂದ್ರ ಸರ್ಕಾರದ ೨೦೧೩ರ ಮಾರ್ಗದರ್ಶಿ ಆದೇಶ ಲಭ್ಯವಿದ್ದರೂ ೨೦೦೪ರ ಸಮೀಕ್ಷೆಯನ್ನು ಆಧರಿಸಿದ ೨೦೦೭ರ ಮಾನದಂಡವನ್ನೇ ಉದ್ದೇಶಪೂರ್ವಕವಾಗಿ ಉಲ್ಲೇ­ಖಿಸಿದೆ. ಇದರ ಹಿಂದೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ತಂತ್ರ ಸ್ಪಷ್ಟ. ಏಕೆಂದರೆ ಇದು ಇಲಾಖೆಯ ಅಧಿಕಾರಿಗಳು ಹೊರಡಿಸುವ ಆದೇಶವೇ ಆದರೂ ಈ ವಿವಾದ ಸೃಷ್ಟಿಯಾದ ನಂತರದಲ್ಲಿ ಗುಜರಾತ್ ಸರ್ಕಾರ ಅಥವಾ ಬಿಜೆಪಿ ಪಕ್ಷ ಈವರೆಗೆ ೨೦೧೩ರ ಹೊಸ ಮಾರ್ಗ­ಸೂಚಿಯ ಕುರಿತು ಉದ್ದೇಶಪೂರ್ವಕವಾಗಿ ಮೌನವಾಗಿವೆ.
ಕೇಂದ್ರ ಸರ್ಕಾರ ಯಾವುದೇ ಮಾನದಂಡ ನಿಗದಿ ಮಾಡಿದರೂ ಎಲ್ಲಾ ಪಕ್ಷಗಳ ರಾಜ್ಯ ಸರ್ಕಾರಗಳು ಅದಕ್ಕೆ ತಮ್ಮ ಬೊಕ್ಕಸದಿಂದ ಇನ್ನೂ ಹೆಚ್ಚು ಹಣವನ್ನು ಒದಗಿಸಿ ಇನ್ನೂ ಹೆಚ್ಚು ಫಲಾನುಭವಿಗಳಿಗೆ ಪಡಿತರ ಲಾಭವನ್ನು ದೊರ­ಕುವಂತೆ ಮಾಡುತ್ತವೆ. ಇದರಲ್ಲೂ ಗುಜರಾತ್ ಸರ್ಕಾರದ ವಿಶೇಷವೇನೂ ಇಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಗುಜರಾತ್ ಸರ್ಕಾರ ತಾನು ಕೇಂದ್ರ ಸರ್ಕಾರ ಗುರುತಿಸಿದ್ದಕ್ಕಿಂತ ೧೧ ಲಕ್ಷ ಅಧಿಕ ಫಲಾನುಭವಿಗಳನ್ನು ಬಿಪಿಎಲ್ ಎಂದು ಪರಿಗಣಿಸುತ್ತಿದ್ದೇವೆ ಎಂದು ಹೇಳಿಕೊಳ್ಳು­ತ್ತದೆ. ಆದರೆ ಅದನ್ನು ಗುರುತಿಸಲು ಗುಜರಾತ್ ಸರ್ಕಾರ ಅನುಸರಿಸಿದ ಮಾನದಂಡ ದಿನಕ್ಕೆ ರೂ.೩೨  ಗಳಿಕೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಯಾರು ಹೆಚ್ಚು ಬಡವರ ಪರ ಎಂಬ ಕ್ಷುದ್ರ ರಾಜಕಾರಣ ಮಾಡು­ತ್ತಲೇ ಬಡವರ ವಿರೋಧಿ ತಂತ್ರಗಳನ್ನು ಅನುಸರಿಸುತ್ತಿವೆ. ಈ  ಎರಡೂ ಪಕ್ಷಗಳು (ಉಳಿದ ಪಕ್ಷಗಳು ತಾತ್ವಿಕವಾಗಿ ಇದಕ್ಕಿಂತ ಭಿನ್ನವಿಲ್ಲ.) ಬಡತನವನ್ನು ನಿರ್ಧರಿಸಲು ಹಾಸ್ಯಾಸ್ಪದ ಮಾನದಂಡವನ್ನು ಅನುಸರಿಸುತ್ತಿವೆ. ೧೯೯೧ರ ನಂತರದ ಆರ್ಥಿಕ ಸುಧಾರಣೆಗಳು ಜನರ ಬಡತನವನ್ನು ಕಡಿಮೆ ಮಾಡಿವೆ ಎಂದು ಸಾಬೀತು ಮಾಡಲು ಏನು ಸುಳ್ಳನ್ನಾದರೂ ಹೇಳಲು ಸಿದ್ಧವಿವೆ.

  ೧೯೭೯ರಲ್ಲಿ ಅಲಗ್ ಸಮಿತಿ ಗ್ರಾಮೀಣ ಪ್ರದೇಶದಲ್ಲಿ ೨೪೦೦ ಕ್ಯಾಲೊರಿಗಿಂತ ಕಡಿಮೆ ಆಹಾರ ಸೇವಿಸುವ ಮತ್ತು ನಗರದಲ್ಲಿ ೨೧೦೦ ಕ್ಕಿಂತ ಕಡಿಮೆ ಕ್ಯಾಲೊರಿ ಆಹಾರ ಬಳ­ಸುವವರನ್ನು ಬಡತನ ರೇಖೆ­­ಗಿಂತ ಕೆಳಗೆ ಇರು­ವವರೆಂದು ಪರಿಗಣಿಸಿತು. ಈಗಲೂ ಅದನ್ನೇ ಮುಂದುವರೆಸಲಾಗಿದೆ. ಆದರೆ ೨೦೦೪ರಲ್ಲಿ ದಿನಕ್ಕೆ ರೂ. ೧೦ ಅಥವಾ ೨೦­೧೧­ರಲ್ಲಿ ದಿನಕ್ಕೆ  ರೂ. ೩೨ ಕೊಟ್ಟು ಗ್ರಾಮೀಣ ಪ್ರದೇಶ­ದಲ್ಲಿ  ಇಷ್ಟು ಪ್ರಮಾಣದ  ಕ್ಯಾಲೊರಿ­ಯಷ್ಟು  ಆಹಾರವನ್ನು ಖರೀ­ದಿಸಲು ಮನುಷ್ಯ­ಮಾತ್ರ­­ರಿಗೆ ಸಾಧ್ಯವಿತ್ತೇ? ಅಲ್ಲದೇ ಹೆಚ್ಚುತ್ತಿರುವ ಆರೋಗ್ಯ, ಶಿಕ್ಷಣ ಮತ್ತು ವಸತಿಯ ವೆಚ್ಚ, ಹಣ­ದುಬ್ಬರ, ಗಗನ ಮುಟ್ಟು­ತ್ತಿರುವ ಆಹಾರ ಧಾನ್ಯ­ಗಳ ಬೆಲೆಯನ್ನು ವಾಸ್ತವ ನೆಲೆ­ಯಲ್ಲಿ ಕಾಂಗ್ರೆಸ್, ಬಿಜೆಪಿ  ಪರಿಗಣಿ­ಸು­ವುದೇ ಇಲ್ಲ.

ಆದ್ದರಿಂದಲೇ ವಿಶ್ವದ ಮುಂದು­ವ­ರೆದ ದೇಶಗಳು ಬಡತನವನ್ನು ಕೇವಲ ಆದಾ­ಯದ ಮೂಲಕ ಅಳೆಯುವುದನ್ನು ಕೈಬಿಟ್ಟಿವೆ. ನಮ್ಮ ದೇಶದಲ್ಲಿ ಆರೋಗ್ಯ, ಪೌಷ್ಟಿಕ ಆಹಾರ ಬಳಕೆ ಇತ್ಯಾದಿ ಆಧರಿಸಿ ವಿವಿಧ ಇಲಾಖೆಗಳು ಮಾಡಿರುವ ಸಮೀಕ್ಷೆಗಳನ್ನು ಆಧರಿಸಿ ಡೇಟನ್ ಮತ್ತು ಡ್ರೀಜ್ ಎಂಬ ವಿದ್ವಾಂಸರು ದೇಶದಲ್ಲಿ ಬಡವರ ಸಂಖ್ಯೆ ೧೯೯೧ರ ನಂತರ ಹೆಚ್ಚಾಗಿರುವು­ದನ್ನು ದಾಖಲಿಸಿ­ದ್ದಾರೆ. ಅದನ್ನು ಯೋಜನಾ ಅಯೋಗದ ಸಕ್ಸೇನಾ ಸಮಿತಿಯೂ ಅನುಮೋದಿಸು­ತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT