ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಬೇಕಿರುವ ಮಹಿಳಾ ಆಯೋಗದ ಸ್ವರೂಪ

ಆಯೋಗ ನೀಡುವ ಶಿಫಾರಸ್ಸುಗಳ ಜಾರಿಗೆ ಸರ್ಕಾರ ಗಮನ ನೀಡಿದಾಗ ಮಾತ್ರ ಆಯೋಗದ ಅಸ್ತಿತ್ವ ಅರ್ಥಪೂರ್ಣವಾಗಲಿದೆ
Last Updated 6 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕಳೆದೆರಡು ವರ್ಷಗಳಿಂದ ನಾನಾ ಕಾರಣಗಳಿಂದ ಸುದ್ದಿ ಮಾಡಿತ್ತು. ಈಗ ಅದರ ಅಧ್ಯಕ್ಷರಾಗಿದ್ದ ಸಿ.ಮಂಜುಳ ಹಾಗೂ ಮತ್ತೊಬ್ಬ ಸದಸ್ಯರು ರಾಜಿನಾಮೆ ಸಲ್ಲಿಸಿದ್ದಾರೆ. ಸರ್ಕಾರ  ಆಯೋಗದ  ಹಲವು ಶಿಫಾರಸ್ಸುಗಳನ್ನು ನಿರ್ಲಕ್ಷಿಸಿದೆ ಹಾಗೂ ಬಜೆಟ್ ಪೂರ್ವ ಸಮಾಲೋಚನಾ ಸಭೆಗೆ ಆಯೋಗವನ್ನಾಗಲೀ ಅಥವಾ ಮಹಿಳಾ ಸಂಘಟನೆಗಳನ್ನಾಗಲೀ ಆಹ್ವಾನಿಸಿಲ್ಲ ಎಂಬ ಆರೋಪ ಅವರದ್ದು.ಇದೇ ಸಂದರ್ಭದಲ್ಲಿ ಮಹಿಳಾ ಆಯೋಗದ ಒಟ್ಟಾರೆ ಪುನಶ್ಚೇತನದ ಬಗ್ಗೆ ಗಂಭೀರವಾಗಿ ಪರಿಗಣಿಸ ಬೇಕಾಗಿದೆ.

ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ 1995ರ ಅಡಿಯಲ್ಲಿ ರಾಜ್ಯ ಮಹಿಳಾ ಆಯೋಗವನ್ನು ರಚಿಸಿತ್ತಾದರೂ ಅದು 1996ರಿಂದ ಕಾರ್ಯನಿರ್ವಹಿಸಲು ಆರಂಭಿಸಿತು. ಆದರೆ ಆಯೋಗವು ಸ್ಥಾಪನೆಗೊಂಡು 16-17 ವರ್ಷಗಳಾದರೂ ರಾಜ್ಯದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಸಮುದಾಯದ ಆಶಯವನ್ನು ಪ್ರತಿನಿಧಿಸುವ ಸಮರ್ಥ ವೇದಿಕೆಯಾಗಲಿಲ್ಲ. ಇದಕ್ಕೆ ಅದರೊಳಗಿನ ಆಂತರಿಕ ವೈರುಧ್ಯ ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕಾರಣ.

ರಾಷ್ಟ್ರದಲ್ಲಿ,  ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಆತಂಕಕಾರಿಯಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಆಯೋಗವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಕೆಳಗಿನ ಆಡಳಿತಾತ್ಮಕ ಕ್ರಮ ಕೈಗೊಳ್ಳುವುದು ಸೂಕ್ತ.

ರಾಜಕೀಯಕರಣ ಆಯೋಗದ ಪ್ರಮುಖ ಸಮಸ್ಯೆ. ಇದರ ಅಧ್ಯಕ್ಷರು ಮತ್ತು ಆರು ಸದಸ್ಯರ ನಾಮಕರಣದಲ್ಲಿ ಪಕ್ಷಗಳ ಹಾಗೂ ಆಡಳಿತಾರೂಢ ಸರ್ಕಾರಗಳ ನೇರ ಹಸ್ತಕ್ಷೇಪ ಕಾಣಬಹುದು. ಮಹಿಳಾ ಆಯೋಗವನ್ನು ಪಕ್ಷಗಳ ಕಾರ್ಯಕರ್ತರ ಪುನರ್ವಸತಿ ಕೇಂದ್ರ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಮಹಿಳಾ ಸಮುದಾಯದ ಹಿತ ಕಾಪಾಡಲು ಪ್ರ್ರಾಮಾಣಿಕವಾಗಿ ದುಡಿಯುತ್ತಿರುವವರನ್ನು ಗುರುತಿಸಿ ಪಕ್ಷಾತೀತವಾಗಿ ನಾಮಕರಣ ಮಾಡಲು ಸಾಧ್ಯವಾಗಬೇಕು. ಒಮ್ಮೆ ನೇಮಕವಾದವರು ಸರ್ಕಾರ ಬದಲಾದರೂ ಕೂಡ ಅವಧಿ ಪೂರ್ಣಗೊಳಿಸಲು (3ವರ್ಷ) ಅವಕಾಶ ಇರಬೇಕು. ಆಯೋಗದ ಕಾಯ್ದೆಯು, ಆರು ಸದಸ್ಯರ ನೇಮಕ ಕಡ್ಡಾಯಗೊಳಿಸಿದ್ದರೂ ಸರ್ಕಾರ ಎಂದೂ ಇದನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಿರಲಿಲ್ಲ. ಆದ್ದರಿಂದ ಆಯೋಗದ ಕಾರ್ಯ, ಅಧ್ಯಕ್ಷರೂ ಸೇರಿದಂತೆ ಒಂದಿಬ್ಬರು ಸದಸ್ಯರ ಮನೋಇಂಗಿತಕ್ಕೆ ಪೂರಕವಾಗಿ ಮಾತ್ರ ಕೆಲಸ ಮಾಡುವಂತಾಗಿದೆ.

ನಾಮಕರಣಗೊಂಡ ಸದಸ್ಯರಿಲ್ಲದ ಸಂದರ್ಭದಲ್ಲಿ ಆಯೋಗದ ಕೆಲಸ ಒಂದು ಔಪಚಾರಿಕ ಸರ್ಕಾರಿ ಕೆಲಸವಾಗಿ ರೂಪಾಂತರಗೊಳ್ಳುವುದನ್ನು ತಪ್ಪಿಸಬೇಕು. ಆರು ಜನ ಸದಸ್ಯರಲ್ಲಿ ಕನಿಷ್ಠ ಒಬ್ಬರಾದರೂ ಪರಿಶಿಷ್ಟ ಜಾತಿ, ಪಂಗಡದವರಿರುವುದು ಕಡ್ಡಾಯ. ಆದರೆ ಈ ಬಗ್ಗೆ ಸರ್ಕಾರದ ಕಾಳಜಿ ಪ್ರಶ್ನಾರ್ಹ.

ಆಯೋಗವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಹೊರ ತಂದು ಲೋಕಾಯುಕ್ತ ಮಾದರಿಯಲ್ಲಿ  ಸ್ವತಂತ್ರ ಸ್ವಾಯತ್ತ ಸಂಸ್ಥೆನ್ನಾಗಿಸುವುದು ಸೂಕ್ತ. ಇದರಿಂದ ಸರ್ಕಾರದ ಹಸ್ತಕ್ಷೇಪವನ್ನು ತಪ್ಪಿಸಬಹುದು. ಆಯೋಗದಲ್ಲಿ ಈಗ ಇರುವ ಸಿಬ್ಬಂದಿಗಳ ಸಂಖ್ಯೆ ತೀರಾ ಕಡಿಮೆ. ಕೇವಲ ಹತ್ತು ಹದಿನೈದು ಸಿಬ್ಬಂದಿಗಳ ನೆರವಿನಿಂದ ಅಲ್ಲಿನ ಕೆಲಸ ನಡೆಯುತ್ತಿದ್ದು ಇದರಿಂದ ಮೂರು ಕೋಟಿ ಮಹಿಳೆಯರ ಧ್ವನಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಆಯೋಗಕ್ಕೆ ರಾಜಧಾನಿಯಲ್ಲಿ  ಸುಸಜ್ಜಿತವಾದ-ವಿಶಾಲವಾದ ಕಚೇರಿಯನ್ನು ಒದಗಿಸಬೇಕು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಇದರ ಉಪ ಕಚೇರಿಗಳನ್ನು ತೆರೆದು ನೊಂದ ಮಹಿಳೆಯರು ದೂರದ ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಿದರೆ ಅನುಕೂಲ. ಬಡ, ಅಸಹಾಯಕ ಮಹಿಳೆಯರು ಆಯೋಗದ ಕಚೇರಿಗೆ ನೆರವು ಕೋರಿ ಬಂದಾಗ ಕನಿಷ್ಠ ಅವರಿಗೆ ಊಟ, ಪ್ರಯಾಣ ವೆಚ್ಚ ಭರಿಸಲು ಸಾಧ್ಯವಾಗಬೇಕು.

ಆಯೋಗಕ್ಕೆ ಈಗ ಒದಗಿಸುತ್ತಿರುವ ಹಣ ತೀರಾ ಅತ್ಯಲ್ಪ. ಈ ಹಿಂದೆ ಕೇವಲ 1 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿತ್ತು. ಅದನ್ನು ಯಡಿಯೂರಪ್ಪರವರ ನೇತೃತ್ವದ ಸರ್ಕಾರದಲ್ಲಿ 5 ಕೋಟಿಗೆ ಏರಿಸಲಾಯಿತು. ಜಿಲ್ಲಾ ಕೇಂದ್ರಗಳಲ್ಲೂ ಶಾಖೆಗಳನ್ನು ಆರಂಭಿಸಿ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡಿದರೆ ಹಣದ ಅವಶ್ಯಕತೆ ಹೆಚ್ಚಾಗಬಹುದು. ಬಜೆಟ್ ಪೂರ್ವ ಸಮಾಲೋಚನೆ ಸಂದರ್ಭದಲ್ಲಿ ಮಹಿಳಾ ಆಯೋಗ,  ಮಹಿಳೆಯರ ನಡುವೆ ಕೆಲಸ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು, ಪ್ರಮುಖ ವ್ಯಕ್ತಿಗಳನ್ನು ಕರೆದು ಈ ಬಗ್ಗೆ ಸರ್ಕಾರ ಅಭಿಪ್ರಾಯ ಪಡೆದು ಅಗತ್ಯವಿರುವ  ಸೌಲಭ್ಯಗಳನ್ನು ಬಜೆಟ್‌ನಲ್ಲಿ ಒದಗಿಸಬೇಕು.

ರಾಷ್ಟ್ರೀಯ ಮಹಿಳಾ ಆಯೋಗ 1992ರಲ್ಲಿ ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅದಕ್ಕೂ ರಾಜ್ಯ ಮಹಿಳಾ ಆಯೋಗಗಳಿಗೂ ಯಾವುದೇ ಸೌಹಾರ್ದಯುತ ಸಂಬಂಧ ಕಂಡು ಬರುತ್ತಿಲ್ಲ.  ಕೆಲವೊಮ್ಮೆ ಅವರವರ ಹಿತಾಸಕ್ತಿಗಳಿಂದಾಗಿ ಪರಸ್ಪರ ಭಿನ್ನ ನಿಲುವು ತಳೆಯುವುದನ್ನೂ ಗಮನಿಸಿದ್ದೇವೆ. ಹೀಗಾಗದೆ ಕನಿಷ್ಠ ವರ್ಷಕ್ಕೆ ಒಂದೆರಡು ಬಾರಿಯಾದರೂ ಪರಸ್ಪರ ಎಲ್ಲಾ ರಾಜ್ಯಗಳ ಆಯೋಗಗಳ ಸದಸ್ಯರು ಒಂದೆಡೆ ಕಲೆತು ರಾಷ್ಟ್ರಮಟ್ಟದ ಮಹಿಳಾ ಕಾಯ್ದೆ, ರಕ್ಷಣೆ ವಿಚಾರದಲ್ಲಿ ಒಮ್ಮತ ಅಭಿಪ್ರಾಯ ಮೂಡಿಸಲು, ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ಸಾಧ್ಯವಾಗಬೇಕು. ರಾಜ್ಯದಲ್ಲಿ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡುವಾಗ  ಸ್ಥಳೀಯ ಮಹಿಳಾ ಸಂಘ ಸಂಸ್ಥೆಗಳು, ಹೋರಾಟಗಾರರ ಅಭಿಪ್ರಾಯ ಪಡೆಯುವುದು ಸೂಕ್ತ.

ಆಯೋಗದ ಅಧ್ಯಕ್ಷರಿಗೆ ಕ್ಯಾಬಿನೆಟ್ ಸ್ಥಾನ ನೀಡಿರುವುದು ಸ್ವಾಗತಾರ್ಹವಾದರೂ, ಆಯೋಗ ನೀಡುವ ವರದಿ, ಸಲಹೆ, ಶಿಫಾರಸ್ಸುಗಳ ಜಾರಿಗೆ ಅಷ್ಟೇ ಗಂಭೀರವಾಗಿ ಸರ್ಕಾರ ಗಮನ ನೀಡಿದಾಗ ಮಾತ್ರ ಆಯೋಗದ ಅಸ್ತಿತ್ವ ಅರ್ಥಪೂರ್ಣವಾಗಲಿದೆ ಹಾಗೂ ಮಹಿಳೆಯರ ಧ್ವನಿಯಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT