ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸ್ವಾಮ್ಯದ ಕಾಡಿಗೆ ಖಾಸಗಿ ಒಡೆತನ ಸಾಧುವೇ?

Last Updated 24 ಜುಲೈ 2013, 19:59 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ವಿಷಯದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇನ್ನೊಂದೆಡೆ, ಒತ್ತುವರಿಯಾದ ಸರ್ಕಾರಿ ಜಮೀನನ್ನು ಸಕ್ರಮಗೊಳಿಸಬೇಕು ಎಂದು ಶಾಸನಸಭೆಯ ಸದಸ್ಯರು ಒತ್ತಡ ಹೇರಲಾರಂಭಿಸಿದ್ದಾರೆ. ಅವರ ಈ ನಡೆ ಆಶ್ಚರ್ಯ ಹುಟ್ಟಿಸುವಂತಹುದು. ಈ ಸಂಬಂಧ ಈಗಾಗಲೇ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ನಡೆಸಿ ಚರ್ಚೆ ನಡೆಸಲಾಗಿದೆ. ಕಾನೂನಿನ ಪ್ರಕಾರ ಅರಣ್ಯ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಪರಿಗಣಿಸಲಾಗಿದೆ. ಈ ನಡುವೆ, ಸರ್ಕಾರ ವಿರೋಧಾಭಾಸದ ತಂತ್ರಗಳನ್ನು ರೂಪಿಸುತ್ತಿರುವಂತೆ ಭಾಸವಾಗುತ್ತಿದೆ.

ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ಕಾನೂನುಬದ್ಧವಾಗಿ ಅಥವಾ ಅಕ್ರಮವಾಗಿ ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸುತ್ತಿರುವುದರ ಹಿಂದೆ ಒಂದು ಸಮಾನ ಉದ್ದೇಶ ಇರುವುದನ್ನು ಗಮನಿಸಬಹುದು.

ಈಚಿನ ಚರ್ಚೆಗಳು ಸಂಪೂರ್ಣ ತದ್ವಿರುದ್ಧವಾಗಿರುವುದನ್ನು ನೋಡುತ್ತಿದ್ದೇವೆ. ಭೂಮಿಯ ಬೆಲೆಯನ್ನು ಸದ್ಯದ ಆರ್ಥಿಕ ಮೌಲ್ಯದ ಮೇಲೆ ನಿಗದಿ ಮಾಡಬೇಕೋ ಅಥವಾ ಈ ಭೂಮಿಯ ದೀರ್ಘಕಾಲೀನ ಮೌಲ್ಯಗಳು, ಅವು ಸಮಾಜಕ್ಕೆ ನೀಡುವ ಕೊಡುಗೆ ಮತ್ತು ಮುಂಬರುವ ತಲೆಮಾರುಗಳಿಗೆ ನ್ಯಾಯ ಸಲ್ಲುವಂತಹ ದೃಷ್ಟಿಕೋನದಿಂದ ವಿಶ್ಲೇಷಿಸಬೇಕೋ ಎಂಬುದು ಚರ್ಚಾರ್ಹ ವಿಷಯ.

ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುವ ಮೊದಲು ನಾವು ಈ ಸಮಸ್ಯೆಗೆ ಕಾರಣವಾಗಿರುವ ಅಂಶಗಳತ್ತ ಗಮನಹರಿಸಬೇಕು. ದೇಶದ ಜನಸಂಖ್ಯೆ 120 ಕೋಟಿಯನ್ನು ದಾಟಿದೆ. ಅತಿಕ್ರಮಿಸಬಾರದ ಕೆಲವು ಮೀಸಲು ವನ್ಯಜೀವಿಧಾಮಗಳಲ್ಲೂ ಚದರ ಕಿ.ಮೀ.ಗೆ ಹತ್ತು ಜನರನ್ನೂ ಮೀರಿದ ಜನಸಾಂದ್ರತೆ ಇದೆ. ದೇಶಕ್ಕೆ ಮೂಲಭೂತವಾಗಿ ಬೇಕಾದ ಸಮಗ್ರ ಭೂಬಳಕೆ ಕಾಯ್ದೆಯೇ ಇಲ್ಲಿ ಜಾರಿಗೆ ಬಂದಿಲ್ಲ.
ಅಧಿಕಾರಕ್ಕೆ ಬರುವ ಸರ್ಕಾರಗಳು ಪದೇ ಪದೇ ಜಾರಿಗೊಳಿಸುತ್ತಿರುವ `ಅಕ್ರಮ- ಸಕ್ರಮ'ದಂತಹ ರಾಜಕೀಯ ಅನುಕೂಲಸಿಂಧು ಕಾರ್ಯಕ್ರಮಗಳಿಂದಾಗಿಯೇ ಇಂತಹ ಒತ್ತುವರಿ ಚಟುವಟಿಕೆಗಳಿಗೆ ಉತ್ತೇಜನ ದೊರಕುತ್ತಿದೆ.

ಜತೆಗೆ, ಭೂ ಮಾಫಿಯಾ ಹಾಗೂ ಅಧಿಕಾರದಲ್ಲಿರುವವರ ನಡುವೆ ಬಲವಾಗಿ ಬೇರುಬಿಟ್ಟಿರುವ ನಂಟನ್ನು ಕಿತ್ತೊಗೆಯುವಲ್ಲಿ ಘೋರ ವೈಫಲ್ಯ ಕಂಡಿರುವುದರಿಂದ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ. ಭೂರಹಿತರನ್ನು ಸಬಲರನ್ನಾಗಿಸಲು ನ್ಯಾಯೋಚಿತ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರಲು ಬೇಕಾದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಸಾಮರಸ್ಯ ರೂಢಿಸುವಲ್ಲಿನ ವೈಫಲ್ಯದಿಂದ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಇಂತಹ ಸಕ್ರಮಗೊಳಿಸುವ ವಿಷಚಕ್ರಗಳೇ ಪ್ರಬಲ ಹಾಗೂ ಅಧಿಕಾರಯುತ ಒತ್ತುವರಿಗಾರರಲ್ಲಿಯೂ ಶಿಕ್ಷೆಯ ಭಯವಿಲ್ಲದೆ ಒತ್ತುವರಿಗಳನ್ನು ಪೋಷಿಸುತ್ತಿವೆ. ಲೋಪದೋಷಗಳಿರುವ ಇಂತಹ ನೀತಿಗಳು ಅನೇಕ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಇಂತಹ ಬೆಳವಣಿಗೆಗಳು, ಸರ್ಕಾರಿ ಜಮೀನನ್ನು ಉಳಿಸಿಕೊಳ್ಳಲು ನಿತ್ಯ ಹೋರಾಟ ನಡೆಸುತ್ತಿರುವ ಪ್ರಾಮಾಣಿಕ ಅಧಿಕಾರಿಗಳ ಮತ್ತು ನೌಕರರ ನೈತಿಕ ಸ್ಥೈರ್ಯವನ್ನೇ ಅಡಗಿಸುತ್ತವೆ. ಸುಪ್ರೀಂ ಕೋರ್ಟ್ ಕಠಿಣ ತೀರ್ಮಾನ ತೆಗೆದುಕೊಂಡಿರದೇ ಇದ್ದಲ್ಲಿ ಚಿಕ್ಕಮಗಳೂರಿನಲ್ಲಿ ಅರಣ್ಯ ಒತ್ತುವರಿ ಮಾಡಿದ್ದ ಬಲಾಢ್ಯರು ನುಣುಚಿಕೊಳ್ಳುತ್ತಿದ್ದರು.

ರಾಜ್ಯದಲ್ಲಿ 10 ಲಕ್ಷ ಹೆಕ್ಟೇರಿಗೂ ಅಧಿಕ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಎ.ಟಿ.ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ನೇತೃತ್ವದ ಸಮಿತಿಗಳ ವರದಿಗಳು ಬೆಳಕು ಚೆಲ್ಲಿವೆ.

ಅರಣ್ಯ ಭೂಮಿ ವಿಷಯದಲ್ಲೂ ಇದೇ ಬಗೆಯ ಅಪಾಯದ ಕರೆಗಂಟೆ ಬಾರಿಸುತ್ತಿದೆ. 1950 ಮತ್ತು 1980ರ ಅವಧಿಯಲ್ಲಿ (ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಯಾಗುವ ಮೊದಲು) ದೇಶದಾದ್ಯಂತ 50 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗಳಿಗಾಗಿ ಪರಿವರ್ತಿಸಿಕೊಳ್ಳಲಾಗಿತ್ತು ಎಂದು ಅಂದಾಜಿಸಲಾಗಿದೆ. ಇದರಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ಕೃಷಿ ಚಟುವಟಿಕೆಗಾಗಿ ಬಳಸಿಕೊಳ್ಳಲಾಗಿದೆ. ಕರ್ನಾಟಕದಲ್ಲೇ 1997ರಲ್ಲಿ ಸುಮಾರು 15,000 ಹೆಕ್ಟೇರ್ ಅರಣ್ಯ ಭೂಮಿಯ ಒತ್ತುವರಿಯನ್ನು ಸಕ್ರಮ ಮಾಡಲಾಯಿತು.

ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 2011ರ ಮೇ ತಿಂಗಳವರೆಗೆ ಹೊಸ ಅರಣ್ಯ ಹಕ್ಕು ಕಾಯ್ದೆಯ ವ್ಯಕ್ತಿಗತ ಹಾಗೂ ಸಮುದಾಯ ಹಕ್ಕಿನಡಿಯಲ್ಲಿ 14 ಲಕ್ಷ ಹೆಕ್ಟೇರ್ ಅರಣ್ಯಪ್ರದೇಶವನ್ನು ಜನರಿಗೆ ಹಸ್ತಾಂತರ ಮಾಡಲಾಗಿದೆ.

ತಜ್ಞರು ನಡೆಸಿದ ವೈಜ್ಞಾನಿಕ ಅಧ್ಯಯನಗಳನ್ನು ಕಡೆಗಣಿಸಿ ಇಂತಹ ಜನಾಕರ್ಷಕ ಹಾಗೂ ದೂರದೃಷ್ಟಿರಹಿತ ಯೋಜನೆಗಳನ್ನು ಈಗಲೂ ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಯೋಜನೆಗಳು ಛಿದ್ರೀಕರಣಕ್ಕೊಳಗಾದ ಅಥವಾ ಕುಗ್ಗುತ್ತಿರುವ ಕಾಡುಗಳನ್ನು ಮಾನವ ವಸಾಹತುಗಳು, ಹೆದ್ದಾರಿಗಳು, ಅಣೆಕಟ್ಟೆಗಳು, ಗಣಿ ಅಥವಾ ಅಭಿವೃದ್ಧಿ ಮತ್ತಿತರ ಕಾರಣಗಳಿಗಾಗಿ ಸಣ್ಣ ತುಣುಕುಗಳನ್ನಾಗಿ ಮಾರ್ಪಾಡು ಮಾಡುತ್ತಿವೆ.

ಈ ಬೆಳವಣಿಗೆ ಜೀವಿವೈವಿಧ್ಯ ಹಾಗೂ ಅರಣ್ಯ ಸಂರಕ್ಷಣೆಗಿರುವ ಅತಿದೊಡ್ಡ ಗಂಡಾಂತರ ಎಂದು ಅಧ್ಯಯನಗಳು ಹೇಳಿವೆ. ನಮ್ಮ ಪರ್ವತಗಳು, ತೇವಭರಿತ ಭೂಮಿ ಮತ್ತು ಅರಣ್ಯಗಳು ನದಿಗಳ ರಕ್ಷಣೆ ಸೇರಿದಂತೆ ಪರಿಸರ ವ್ಯವಸ್ಥೆಯ ಉಳಿವಿಗೆ ಬೆಲೆ ಕಟ್ಟಲಾಗದ ಕೊಡುಗೆ ನೀಡುತ್ತಿವೆ. ಯೋಜನೆಗಳಲ್ಲಿ ದೂರದೃಷ್ಟಿಯ ಕೊರತೆಯಿಂದ ಮಾನವನಿಗೆ ಬೇಕಾದ ಈ ಸೂಕ್ಷ್ಮ ವ್ಯವಸ್ಥೆಯೇ ತೀವ್ರಗತಿಯಲ್ಲಿ ನಶಿಸುತ್ತಿದೆ. 

ಅರಣ್ಯಗಳಲ್ಲದೆ, ಗೋಮಾಳಗಳು, ಕಾವಲುಗಳು, ದೇವರಕಾಡುಗಳು, ಕೆರೆಗಳು, ಸಾರ್ವಜನಿಕ ಉದ್ಯಾನ ಸೇರಿದಂತೆ ಸರ್ಕಾರಿ ಜಮೀನಿನ ಸ್ಥಿತಿಯೂ ಭಿನ್ನವಾಗಿಲ್ಲ. ಈ ಜಮೀನು ಸಹ ಹರಿದು ಹಂಚಿ ಹೋಗಿದೆ. ಒತ್ತುವರಿಯಾದ ಸರ್ಕಾರಿ ಜಮೀನನ್ನು ತೆರವುಗೊಳಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೂ, ಶಕ್ತಿಯುತ ಭೂಮಾಫಿಯಾ ಒಡ್ಡುವ ಪ್ರತಿರೋಧದ ನಡುವೆ ಇದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದು ಕುತೂಹಲದ ಅಂಶ. ಜಿಐಎಸ್ ತಂತ್ರಜ್ಞಾನವನ್ನು ಅನುಸರಿಸಿ ಉಪಗ್ರಹದಿಂದ ಪಡೆದ ಚಿತ್ರಗಳ ವಿಶ್ಲೇಷಣೆ ಮಾಡಿ ಅರಣ್ಯಪ್ರದೇಶಗಳು ಒತ್ತುವರಿಗಳ ಸಕ್ರಮಗಳಿಂದಾಗಿ ಮತ್ತಷ್ಟು ಛಿದ್ರೀಕರಣವಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕಿದೆ.

ಮತ್ತೊಂದು ಹಂತದಲ್ಲಿ, ಸರ್ಕಾರ ಭದ್ರಾ ಮತ್ತು ನಾಗರಹೊಳೆ ಅರಣ್ಯಗಳಲ್ಲಿ ಜಾರಿಗೆ ತಂದ ಮಾದರಿಯಾಗಬಲ್ಲ ಸ್ವಇಚ್ಛಾ ಪುನರ್ವಸತಿ ಯೋಜನೆಯನ್ನು ಎಲ್ಲೆಡೆ ವಿಸ್ತರಿಸಿದರೆ ದಟ್ಟಾರಣ್ಯಗಳಲ್ಲಿ ಹಕ್ಕು ಪ್ರತಿಪಾದಿಸುವ ಅರಣ್ಯವಾಸಿಗಳ ನೈಜ ಸಮಸ್ಯೆಗೆ ಪರಿಹಾರ ದೊರಕುತ್ತದೆ.

ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ಮುಖ್ಯಮಂತ್ರಿ ಅವರು ತೆರವುಗೊಳಿಸಲು ಮುಂದಾಗಿರುವುದು ಶ್ಲಾಘನಾರ್ಹ. ಇದೇ ತತ್ವವನ್ನು (ತೆರವಿಗೆ, ಸಕ್ರಮಕ್ಕಲ್ಲ) ಒತ್ತುವರಿಯಾದ ಅರಣ್ಯ ಜಮೀನಿಗೂ ಅನ್ವಯಿಸಬೇಕು.

ಏನೇ ಆದರೂ, ಸುಸ್ಥಿರ ಕೃಷಿ, ನೀರಿನ ಲಭ್ಯತೆ, ಗಂಡಾತರಕ್ಕೊಳಗಾಗಿರುವ ಪ್ರಭೇದಗಳ ರಕ್ಷಣೆ ಮತ್ತು ಹವಾಮಾನ ಬದಲಾವಣೆಯ ತೊಂದರೆಗಳ ನಿಭಾವಣೆ ನಗರಪ್ರದೇಶಗಳಲ್ಲಿನ ಸರ್ಕಾರಿ ಜಮೀನಿನ ಒತ್ತುವರಿಗಿಂತ ಅಮೂಲ್ಯವಾದದ್ದು ಎಂಬುದನ್ನು ಸರ್ಕಾರ ಮನಗಾಣಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT