ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ | ಹರಿಜನರು ರಾಜಕೀಯವಾಗಿ ಶಕ್ತರಾದರೆ ಶೋಷಣೆ ತಪ್ಪುವುದು: ಅರಸು

Published 3 ಜೂನ್ 2024, 23:43 IST
Last Updated 3 ಜೂನ್ 2024, 23:43 IST
ಅಕ್ಷರ ಗಾತ್ರ

ಬೆಂಗಳೂರು, ಜೂನ್‌ 3: ರೈತ ಸ್ವಂತ ಉಪಯೋಗಕ್ಕಾಗಿ ಅಕ್ಕಿಯನ್ನು ಪಡೆಯಲು ಗಿರಣಿಗೆ ಭತ್ತ ತಂದಿರುವಾಗ, ಅಲ್ಲಿ ಶೇ 20ರಷ್ಟು ಲೆವಿಯನ್ನು ಕೊಡಬೇಕಾಗಿಲ್ಲ ಎಂದು ಆಹಾರ ಸಚಿವ ಕೆ.ಎಚ್‌.ಪಾಟೀಲ್‌ ಅವರು ವಿಧಾನಪರಿಷತ್ತಿನಲ್ಲಿ ಇಂದು ಸ್ಪಷ್ಟಪಡಿಸಿದರು.

ಗಿರಣಿ ಹಂತದಲ್ಲಿ ಲೆವಿ ಕೊಡಬೇಕೆಂದು ಸರ್ಕಾರ ಇತ್ತೀಚೆಗೆ ಹೊರಡಿಸಿದ ಆಜ್ಞೆಯಲ್ಲಿ ಇದು ಸ್ಪಷ್ಟವಾಗಿಲ್ಲವಾದರೂ ಸ್ವಂತ ಉಪಯೋಗಕ್ಕೆಂದು ರೈತ ಅರ್ಜಿ ಸಲ್ಲಿಸಿದರೆ ಆ ಹಂತದ ಲೆವಿಯಿಂದ ವಿನಾಯಿತಿ ನೀಡಲಾಗುವುದೆಂದರು.

ಮುನಿರೆಡ್ಡಿ ಪಾಳ್ಯದ ನ್ಯಾಯಬೆಲೆ ಅಂಗಡಿಯೊಂದಕ್ಕೆ ಸಂಬಂಧಿಸಿದಂತೆ 21 ಖೋಟಾ ರೇಷನ್‌ ಕಾರ್ಡುಗಳನ್ನು ನೀಡಿರುವುದಕ್ಕೆ ಕಾರಣಕರ್ತರಾದವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಸಚಿವರು ಗಮನ ಸೆಳೆಯುವ ಸೂಚನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹರಿಜನರು ರಾಜಕೀಯ ಶಕ್ತಿ ಬೆಳೆಸಿಕೊಂಡರೆ ಶೋಷಣೆ ತಪ್ಪುವುದು: ದೇವರಾಜ ಅರಸು

ಮಂಡ್ಯ, ಜೂನ್ 3: ‘ನನ್ನ ವೋಟು ಎರಡು ರೂಪಾಯಿಗೆ ಮಾರಲಿಕ್ಕಾಗಿ ಇಲ್ಲ. ಮತದಾನದ ದಿನ ಕೂಲಿ ಹೋದರೂ ಉಪವಾಸ ಇರುತ್ತೇನೆ. ಜಾತಿ ಆಧಾರದ ಮೇಲೆ ಮತ ನೀಡುವುದಿಲ್ಲ.’

ಇದೇ ಜಾಗೃತಿ ಹಿಂದುಳಿದವರು, ಹರಿಜನ–ಗಿರಿಜನ ಹಾಗೂ ಅಲ್ಪಸಂಖ್ಯಾತರಲ್ಲಿ ಬೆಳೆದು ಬರಬೇಕೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ಒತ್ತಿ ಹೇಳಿದರು.

48ನೇ ಸಾಹಿತ್ಯ ಸಮ್ಮೇಳನ ನಡೆದ ಚಪ್ಪರದಲ್ಲಿ ಮಂಡ್ಯ ಜಿಲ್ಲೆಯ ಈ ವರ್ಗಗಳ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು, ಈ ದೃಷ್ಟಿಯಿಂದ ಈ ವರ್ಗಗಳು ಮತ ಚಲಾಯಿಸಿದರೆ ಅವರಿಗಾಗಿ ಹೋರಾಡುವ ಪ್ರಾಮಾಣಿಕ ನಾಯಕರು ದೊರಕುವರು. ಇಲ್ಲದಿದ್ದರೆ ಹಣ–ಜಾತಿಯ ಮೇಲೆ ಮೋಸ ಮಾಡುವ ನಾಯಕರು ಸಲ್ಲುವರೆಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT