ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾದ ಕಾಂಗ್ರೆಸ್‘ದ್ವಾರಪಾಲಕ’

Last Updated 11 ಆಗಸ್ಟ್ 2018, 20:19 IST
ಅಕ್ಷರ ಗಾತ್ರ

ಅಂದಿನ ದಿನಗಳಲ್ಲಿ ದಿಗ್ಗಜರಿಗೆ ಟೈಪಿಸ್ಟ್- ಸ್ಟೆನೋಗಳಾಗಿದ್ದ ಅನೇಕರು, ಶಕ್ತಿರಾಜಕಾರಣದ ಚದುರಂಗದ ಕಾಯಿಗಳನ್ನು ತೆರೆಮರೆಯಿಂದ ನಡೆಸಿದ್ದುಂಟು. ಇಂತಹ ಬಲಾಢ್ಯರ ಪೈಕಿ ತೆರೆ ಸರಿಸಿ ಹೊರಬಂದು ರಂಗದ ಮೇಲೆ ಹೊಳೆದವರು ಬೆರಳೆಣಿಕೆಯಷ್ಟು. ಅಂತಹವರ ಪೈಕಿ ಇತ್ತೀಚೆಗೆ ತಮ್ಮ 81ನೆಯ ವಯಸ್ಸಿನಲ್ಲಿ ನಿಧನರಾದ ಆರ್.ಕೆ. ಧವನ್ (ರಾಜಿಂದರ್ ಕುಮಾರ್ ಧವನ್) ಪ್ರಮುಖರು.

ಮಹಾತ್ಮ ಗಾಂಧಿಯ ಆಪ್ತಕಾರ್ಯದರ್ಶಿ, ಟೈಪಿಸ್ಟ್ ಪ್ಯಾರೇಲಾಲ್ ನಯ್ಯರ್, ಗಾಂಧಿ ಕುರಿತು ಅನೇಕ ನೆನಪಿನ ನುಡಿಚಿತ್ರಗಳನ್ನು ಬರೆದರು. ನೆಹರೂ ಟೈಪಿಸ್ಟ್, ಆಪ್ತಕಾರ್ಯರ್ಶಿಯಾಗಿದ್ದ ಎಂ.ಒ. ಮಥಾಯ್ ಬರೆದ ಕೃತಿಗಳು ವಿವಾದದ ಸುಂಟರಗಾಳಿಯನ್ನೇ ಎಬ್ಬಿಸಿದ್ದುಂಟು. ರಾಜೀವ್- ಸೋನಿಯಾ ಗಾಂಧಿಯವರ ಜೊತೆ ಕೆಲಸ ಮಾಡಿದ ಮತ್ತೊಬ್ಬ ಶಕ್ತಿಶಾಲಿ ಆಪ್ತ ಕಾರ್ಯದರ್ಶಿ ವಿನ್ಸೆಂಟ್ ಜಾರ್ಜ್, ಆದಾಯ ಮೀರಿದ ಆಸ್ತಿ ಗಳಿಕೆಯ ಆರೋಪದ ದೂಳು ಅಡಗಿ ಪ್ರಚಾರದಿಂದ ದೂರ ಬದುಕಿದ್ದಾರೆ.

ಸಾಧಾರಣ ಸ್ಟೆನೋಗ್ರಾಫರ್ ಆಗಿದ್ದ ಧವನ್, ಇಂದಿರಾ ದರ್ಬಾರಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲೊಬ್ಬರಾಗಿ ಬೆಳೆದು ‘ಸೂಪರ್ ಸ್ಟೆನೋ’ ಎಂಬ ಅಭಿಧಾನ ಪಡೆದ ಕತೆ ಕುತೂಹಲಕರ.

70 ಮತ್ತು 80ರ ದಶಕಗಳಲ್ಲಿ ದೇಶದ ಅತ್ಯಂತ ಪ್ರಬಲರಲ್ಲಿ ಒಬ್ಬರೆಂದು ಧವನ್ ಅವರನ್ನು ಗುರುತಿಸಲಾಗುತ್ತಿತ್ತು. ಇಂದಿರಾ ಗಾಂಧಿಯವರ ಜೊತೆ ಯಾರು ಮಾತಾಡಬೇಕು, ಯಾರು ಭೇಟಿ ಮಾಡಬೇಕು ಎಂಬುದನ್ನು ನಿರ್ಧರಿಸುತ್ತಿದ್ದವರೇ ಅವರು. ಕಾಂಗ್ರೆಸ್ ಪಕ್ಷದ ಹೇಮಾಹೇಮಿಗಳು ಕೂಡ ಗೌರವ, ಆದರ ತೋರಿಸಿ ಧವನ್ ಮರ್ಜಿ ಕಾಯಬೇಕಿತ್ತು. ‘ಮುಖ್ಯಮಂತ್ರಿಗಳನ್ನು ಮಾಡುತ್ತಿದ್ದರು ಮತ್ತು ಕೆಡವುತ್ತಿದ್ದರು’ ಎಂಬ ಮಾತಿಗೆ ಅವರ ಪ್ರತಿಕ್ರಿಯೆ, ‘ಇಂದಿರಾಜಿ ಇಷಾರೆ- ಇಂಗಿತಗಳನ್ನು ಜಾರಿಗೆ ತರುವುದು ನನ್ನ ಕರ್ತವ್ಯ ಆಗಿತ್ತು. ಯಾರನ್ನಾದರೂ ಮುಖ್ಯಮಂತ್ರಿ ಮಾಡುವುದು ನನ್ನ ಕೈಲಿರಲಿಲ್ಲ. ಆರ್. ಗುಂಡೂರಾವ್ ನನ್ನ ಮಿತ್ರರಾಗಿದ್ದರು. ಮಿತ್ರರಿಗೆ ಸಹಾಯ ಮಾಡದೆ ಶತ್ರುಗಳಿಗೆ ಸಹಾಯ ಮಾಡಲು ಬರುತ್ತದೆಯೇ?’

ಈ ಹಿನ್ನೆಲೆಯಲ್ಲಿ ಹಲವು ಮುಖ್ಯಮಂತ್ರಿಗಳಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಳ್ಳುವಷ್ಟು ಅಧಿಕಾರ ಇವರಿಗಿತ್ತು!

ಇಂದಿರಾ ಗಾಂಧಿಯವರ ಕಣ್ಣು, ಕಿವಿಗಳಾಗಿದ್ದ ರಾಜಿಂದರ್ ಕುಮಾರ್ ಧವನ್, ಬಾಯಿ ತೆರೆದಿದ್ದರೆ ರಾಜಕೀಯ ವಲಯದಲ್ಲಿ ಭೂಕಂಪಗಳು ಘಟಿಸುತ್ತಿದ್ದವು. ‘ಪುಸ್ತಕವೊಂದನ್ನು ಬರೆಯುತ್ತೇನೆ, ಹಲವು ಹೇಮಾಹೇಮಿಗಳ ಜಾತಕ ಬಿಚ್ಚಿಡುತ್ತೇನೆ’ ಎಂದು ಆಗಾಗ ಹೇಳುತ್ತಲೇ ಬಂದರು. ಆದರೆ ನೆನಪುಗಳ ಪದರಗಳಲ್ಲಿ ಅವಿತಿದ್ದ ಅವರ ಪುಸ್ತಕ ಹೊರಬಿದ್ದು ಕಾಗದಕ್ಕೆ ಇಳಿಯಲೇ ಇಲ್ಲ. ಎರಡು ದಶಕಗಳ ಕಾಲ ಇಂದಿರಾ ಅವರನ್ನು ನೆರಳಿನಂತೆ ಹಿಂಬಾಲಿಸಿದ ಆಕೆಯ ಈ ಬಲಗೈ ಬಂಟ, ಹಲವಾರು ಅತಿ ಮಹತ್ವದ ದಾಖಲೆಗಳ ನಕಲು ಪ್ರತಿಗಳನ್ನು ಇರಿಸಿಕೊಂಡಿದ್ದ ವರದಿಗಳಿವೆ. ನೆಹರೂ- ಇಂದಿರಾ ಕುಟುಂಬದ ‘ಒಳಮನೆಯ ಗೋಪ್ಯ’ಗಳಷ್ಟೇ ಅಲ್ಲದೆ, ನೆಹರೂ, ಇಂದಿರಾ, ಫಿರೋಜ್, ಸಂಜಯ್- ರಾಜೀವ್ ಗಾಂಧಿ ಯುಗದ ಅತಿರಥ ಮಹಾರಥರ ಒಳಗುಟ್ಟುಗಳು ಮತ್ತು ರಾಜಕಾರಣದ ತೆರೆಮರೆಯ ಆಗು ಹೋಗುಗಳಿಗೆ ನೇರ ಸಾಕ್ಷಿಯಾಗಿದ್ದವರು ಧವನ್. ನೂರಾರು ಆಸ್ಫೋಟಕ ಸತ್ಯಗಳನ್ನು ಒಡಲಲ್ಲಿ ಅಡಗಿಸಿಕೊಂಡೇ ಕೊನೆಯುಸಿರೆಳೆದರು. ಈ ಸಾವಿನಿಂದ ನೆಮ್ಮದಿಯ ನಿಟ್ಟುಸಿರೆಳೆದವರ ಸಂಖ್ಯೆ ಸಣ್ಣದೇನಲ್ಲ.

1947ರ ದೇಶ ವಿಭಜನೆಯ ದಳ್ಳುರಿಯಲ್ಲಿ ಪಾಕಿಸ್ತಾನದಿಂದ ದೆಹಲಿಗೆ ವಲಸೆ ಬಂದಿತ್ತು ಧವನ್ ಕುಟುಂಬ. ಆಗ ಧವನ್‌ ಹತ್ತು ವರ್ಷದ ಹುಡುಗ. ಕರೋಲ್ ಬಾಗ್‌ನ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ, ಶಾಲಾ ಶಿಕ್ಷಣ. ಟೈಪಿಂಗ್, ಶೀಘ್ರಲಿಪಿ ಕಲಿಕೆಯಿಂದಾಗಿ ಆಕಾಶವಾಣಿಯಲ್ಲಿ ನೌಕರಿ. ಟೈಪಿಸ್ಟ್ ಆಗಿ ನೆಹರೂ ಕಚೇರಿ ಹೊಕ್ಕು ಆನಂತರ ರಾಜಕಾರಣದ ಏಣಿ ಹತ್ತಿದವರು ಯಶಪಾಲ ಕಪೂರ್. ಸಂಬಂಧಿಕ ಧವನ್‌ನನ್ನು ನೆಹರೂ ಕಚೇರಿಗೆ ಸೇರಿಸಿದರು. ಆದರೆ ಈ ತರುಣ ಅಲ್ಲಿ ಬಹಳ ಕಾಲ ನಿಲ್ಲಲಿಲ್ಲ. ಇಂದಿರಾಗೆ ಆಪ್ತಸಹಾಯಕನಾಗಿ ತೀನ್ ಮೂರ್ತಿ ಭವನ ಹೊಕ್ಕರು. ಅವರ ಬದುಕಿನ ದಿಕ್ಕು ದೆಸೆಗಳೇ ಬದಲಾದವು.

ಧವನ್ ಮಾತಿನ ಹಿಂದೆ ಇಂದಿರಾ ತೂಕವಿತ್ತು. ಸ್ವತಂತ್ರ ಭಾರತದ ದೈತ್ಯ ರಾಜಕಾರಣಿಯ ನೆರಳಿನಲ್ಲಿ ಅವರು ಪ್ರಯೋಗಿಸಿದ ಪ್ರಖರ ಪ್ರಭಾವ ದೊಡ್ಡ ದೊಡ್ಡವರ ಬೆವರಿಳಿಸಿ ಭಯ ಬಿತ್ತಿ ಬಿಡುತ್ತಿತ್ತು. ಈ ಕಾರಣದಿಂದಲೇ ಕಾಣದ ಶತ್ರುಗಳನ್ನು ಧವನ್, ಕೈಯಾರೆ ಸೃಷ್ಟಿಸಿಕೊಂಡಿದ್ದರು. ತುರ್ತುಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಗು ಹೋಗುಗಳಲ್ಲಿ ಸಂಜಯ್‌ಗಾಂಧಿ ಮೂಗು ತೂರಿಸಿದ್ದು ಇದೇ ಮಹಾಶಯನ ಮೂಲಕ. ತಾಯಿ ಇಂದಿರಾ ನೇರವಾಗಿ ಹೇಳಲು ಹಿಂಜರಿಯುತ್ತಿದ್ದ ಸಲಹೆ, ಸೂಚನೆ, ಬುದ್ಧಿ ಮಾತುಗಳನ್ನು ಎಷ್ಟೋ ಸಲ ಧವನ್ ಅವರೇ ಸಂಜಯ್‌ಗೆ ಮುಟ್ಟಿಸುತ್ತಿದ್ದರು. ಪ್ರಧಾನಿ ಕಾರ್ಯಾಲಯ ತಲುಪುತ್ತಿದ್ದ ಹತ್ತು ಹಲವು ನೇಮಕಾತಿ ಕಡತಗಳ ತೀರ್ಮಾನ ಸಂಜಯ್ ಮತ್ತು ಧವನ್ ಜೋಡಿಯದಾಗಿತ್ತು. ಅಲಹಾಬಾದ್ ಹೈಕೋರ್ಟ್ ಇಂದಿರಾ ವಿರುದ್ಧ ತೀರ್ಪು ನೀಡಿದ್ದ ಸುದ್ದಿಯನ್ನು ಮೊದಲು ಇಂದಿರಾಗೆ ತಿಳಿಸಿದ್ದು ಧವನ್. ಆಕೆ ತಕ್ಷಣವೇ ರಾಜೀನಾಮೆ ಪತ್ರ ಟೈಪ್ ಮಾಡಿಸಿ ಸಿದ್ಧಪಡಿಸಿಟ್ಟರು. ಸಹಿ ಮಾಡಿರಲಿಲ್ಲ. ತುರ್ತುಪರಿಸ್ಥಿತಿಯ ದಿನಗಳಲ್ಲಿ ಅಂಬಿಕಾ ಸೋನಿ ಮತ್ತು ಕಮಲನಾಥ್ ಜೊತೆಗೆ ಇಂದಿರಾ ಅವರ ಅತ್ಯಂತ ಒಳವಲಯದ ಸದಸ್ಯರಾಗಿದ್ದರು. 1962ರಲ್ಲಿ ಇಂದಿರಾ ಸೇವೆಗೆ ನಿಂತ ಅವರು, 1984ರಲ್ಲಿ ಆಕೆಯ ಹತ್ಯೆಯ ಗಳಿಗೆಯಲ್ಲೂ ಜೊತೆಗಿದ್ದರು. 22 ವರ್ಷಗಳ ಏಳುಬೀಳಿನಲ್ಲಿ ‘ಒಡತಿ’ಯೆಡೆಗಿನ ನಿಷ್ಠೆ ಕಡೆಗಳಿಗೆಯ ತನಕ ಕದಲಲಿಲ್ಲ.

1984ರ ಅಕ್ಟೋಬರ್ ತಿಂಗಳ ಒಂದು ಮುಂಜಾನೆ ತಮ್ಮ ಮೈಗಾವಲಿನವರ ಗುಂಡಿನ ದಾಳಿಗೆ ಇಂದಿರಾ ನೆಲಕ್ಕೆ ಕುಸಿದ ಗಳಿಗೆಗಳಲ್ಲೂ, ಅವರಿಂದ ಧವನ್ ಕೆಲವೇ ಅಡಿಗಳ ಅಂತರದಲ್ಲಿದ್ದರು. ಸಿಖ್ ಅಂಗರಕ್ಷಕರು ಸಿಡಿಸಿದ್ದ 33 ಗುಂಡುಗಳ ಪೈಕಿ ಒಂದೂ ಧವನ್‌ಗೆ ತಗುಲಿರಲಿಲ್ಲ. ಈ ‘ಕೌತುಕ’ವೇ ವಿರೋಧಿಗಳ ಅಸ್ತ್ರ ಆಯಿತು. ಹತ್ಯೆಯ ಪಿತೂರಿಯಲ್ಲಿ ಧವನ್ ಕೈವಾಡ ಇತ್ತೆಂಬ ವದಂತಿಗಳು ಹರಿದಾಡಿದವು.

ಇಂದಿರಾ ಹತ್ಯೆಯ ನಂತರ ‘ಪಟ್ಟ’ಕ್ಕೆ ಬಂದ ರಾಜೀವ್ ಗಾಂಧಿಯವರ ಕಿವಿ ಊದಿದ್ದರು ಧವನ್ ವಿರೋಧಿಗಳು. ಇಂದಿರಾ ಹತ್ಯೆಯಲ್ಲಿ ಧವನ್ ಕೈವಾಡದ ಸಂಶಯ ರಾಜೀವ್ ತಲೆ ಹೊಕ್ಕಿತ್ತು. ಹತ್ಯೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಪಿ. ಠಕ್ಕರ್ ಆಯೋಗವು ಸಂಶಯದ ಸೂಜಿ ಮೊನೆಯನ್ನು ಧವನ್ ಕಡೆಗೆ ತಿರುಗಿಸಿತ್ತು. ಧವನ್ ಕೈವಾಡದ ಗುಮಾನಿ ಪ್ರಕಟಿಸಿತ್ತು. ತಮ್ಮ ನಾಯಕಿಗೆ ನಿಷ್ಠೆ ತೋರುವ ಬದಲು ಆಕೆಯ ಮೇಲೆ ಬೇಹುಗಾರಿಕೆ ನಡೆಸಿದರೆಂದೂ, ಅಮೆರಿಕೆಯ ಸಿ.ಐ.ಎ. ಜೊತೆ ಸಂಬಂಧ ಹೊಂದಿರಬಹುದೆಂದೂ ಪುಟಗಟ್ಟಲೆ ವರದಿ ಬರೆದಿತ್ತು. ಈ ಸಂಶಯಕ್ಕೆ ಆಧಾರಗಳಿರಲಿಲ್ಲ. ಆದರೂ ನಿಂತ ನಿಲುವಿನಲ್ಲೇ ಎತ್ತಂಗಡಿ ಆಗಿದ್ದರು ಧವನ್. ತುಂಡು ಕಾಗದವನ್ನೂ ಕೊಂಡು ಹೋಗಲು ಬಿಟ್ಟಿರಲಿಲ್ಲ ರಾಜೀವ್!

ಧುಃಖಿಯಾದ ಧವನ್‌ಗೆ ಗುಂಡೇಟು ತಗುಲಿ ಇಂದಿರಾ ಜೊತೆ ಸಾಯುವುದೇ ಲೇಸಿತ್ತು ಎಂದು ಎನಿಸಿತ್ತಂತೆ. ಆದರೆ ಅಜ್ಞಾತವಾಸ ಐದೇ ವರ್ಷಗಳಲ್ಲಿ ಕೊನೆಗೊಂಡಿತು. ಬೊಫೋರ್ಸ್ ಹಗರಣ, ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಜೊತೆ ವಿನಾ ಕಾರಣ ವಿವಾದದ ಸುಳಿಗೆ ಸಿಲುಕಿದ್ದ ರಾಜೀವ್‌ಗೆ ತಮ್ಮ ತಾಯಿಯೊಂದಿಗೆ ಕೆಲಸ ಮಾಡಿದ್ದಧವನ್ ‘ಸೇವೆ’ ನೆನಪಾಗಿತ್ತು. 1989ರಲ್ಲಿ ಪ್ರಧಾನಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯ ಕುರ್ಚಿ ಮತ್ತೆ ಧವನ್‌ಗೆ ದೊರೆತಿತ್ತು. ರಾಜೀವ್ ಹತ್ಯೆಯ ನಂತರವೂ ಅವರ ಪ್ರಭಾವ ಅಳಿಯಲಿಲ್ಲ. ಪಿ.ವಿ. ನರಸಿಂಹರಾವ್ ಸಂಪುಟದಲ್ಲಿ ಮಂತ್ರಿಯಾದರು.

ನೆಹರೂ, ಸಂಜಯ್, ಇಂದಿರಾ, ರಾಜೀವ್ ಕಳೇಬರಗಳಿಗೆ ಹೆಗಲು ಕೊಟ್ಟದ್ದನ್ನು ಅವರು ಹೆಗ್ಗಳಿಕೆ ಎಂಬಂತೆ ಸ್ಮರಿಸಿಕೊಳ್ಳುತ್ತಿದ್ದರು. ಧವನ್ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಮುಖ್ಯಾಲಯಕ್ಕೆ ತಂದು ಅಂತಿಮ ಗೌರವ ಸಲ್ಲಿಸಲಾಯಿತು. ಪಿ.ವಿ. ನರಸಿಂಹರಾವ್ ಅವರ ಕಳೇಬರಕ್ಕೂ ಈ ಗೌರವ ಲಭಿಸಿರಲಿಲ್ಲ.

ಹಲವು ವರ್ಷಗಳ ಸಂಗಾತಿ ಅಚಲಾ ಅವರನ್ನು 2012ರಲ್ಲಿ ವಿವಾಹ ಆದಾಗ ಧವನ್ ವಯಸ್ಸು 74. ‘ವೈವಾಹಿಕ ಬದುಕಿಗೆ ಸಮಯ ಇರಲಿಲ್ಲ. ಮದುವೆ ಮಾಡಿಕೊಂಡಿದ್ದರೆ ಒಂದೋ ವಿಚ್ಛೇದನ ಆಗುತ್ತಿತ್ತು, ಇಲ್ಲವೇ ನೆರೆಮನೆಯವನು ಈಕೆಯನ್ನು ಹಾರಿಸಿಕೊಂಡು ಹೋಗುತ್ತಿದ್ದ’ ಎಂದು ಧವನ್ ನಗೆಚಟಾಕಿ ಸಿಡಿಸಿದ್ದುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT