ಗುರುವಾರ , ಮೇ 26, 2022
30 °C

ಪ್ರಚಾರಕ್ಕೆ ತೋರುವ ಕಾಳಜಿ ವಿಚಾರಕ್ಕೆ ಯಾಕಿಲ್ಲ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಮತ್ತೊಂದು ಅಂಬೇಡ್ಕರ್ ಜಯಂತಿ ಬಂದಿದೆ. ಆಳುವ ಪಕ್ಷ, ವಿರೋಧ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಅಂಬೇಡ್ಕರ್ ಜಯಂತಿ ಆಚರಿಸಲು ಭರದಿಂದ ತಯಾರಿ ನಡೆಸುತ್ತಿವೆ. ಸರ್ಕಾರವು ಅಂಬೇಡ್ಕರ್ ಜಯಂತಿ ಕುರಿತು‌ ಸಾಲು ಸಾಲು ಜಾಹೀರಾತು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರಬಹುದು. ಆದರೆ ಅದು ಜಯಂತಿ ಪ್ರಚಾರಕ್ಕಾಗಿ ವಹಿಸುವ ಮುತುವರ್ಜಿಯನ್ನು ಅಂಬೇಡ್ಕರ್ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವಲ್ಲಿ ತೋರಿಸುತ್ತಿಲ್ಲ.

ಈ ಹಿಂದೆ ಅಂಬೇಡ್ಕರ್ ಅವರ ವಿಚಾರಗಳು ಜನಸಾಮಾನ್ಯರಿಗೆ ಸುಲಭವಾಗಿ ಮತ್ತು ಒಂದೇ ಕಡೆ ಸಿಗುವಂತೆ ಮಾಡಲು ‘ಅಂಬೇಡ್ಕರ್ ಸಮಗ್ರ ಬರಹ ಭಾಷಣಗಳು’ ಎಂಬ ಶೀರ್ಷಿಕೆಯಡಿ ಸುಮಾರು 22 ಕೃತಿಗಳನ್ನು ಸರ್ಕಾರದ ವತಿಯಿಂದಲೇ ಮುದ್ರಣ ಮಾಡಿ ಎಲ್ಲೆಡೆಯೂ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಲಾಗಿತ್ತು. ಇದೊಂದು ಮಾದರಿ ಕಾರ್ಯವಾಗಿತ್ತು. ಇದರಿಂದ ಅಂಬೇಡ್ಕರ್ ಅವರನ್ನು ಅರಿತುಕೊಳ್ಳುವ ಇಚ್ಛೆಯುಳ್ಳ ಪ್ರತಿಯೊಬ್ಬರಿಗೂ ಅನುಕೂಲವಾಗಿತ್ತು. ಆದರೆ ಈ ಪುಸ್ತಕಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ಈ ಸಂಬಂಧ, ಮುದ್ರಣದ ಹೊಣೆ ಹೊತ್ತಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಒಂದು ವರ್ಷದಿಂದ ಅನೇಕ ಬಾರಿ ಕರೆ ಮಾಡಿದಾಗಲೂ ಅದೇ ಸಿದ್ಧ ಮಾದರಿಯ ‘ಪ್ರತಿಗಳು ಲಭ್ಯವಿಲ್ಲ, ಸರ್ಕಾರ ಹಣಕಾಸಿನ ಒಪ್ಪಿಗೆ ನೀಡಿದ ತಕ್ಷಣ ಪ್ರತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ’ ಎಂಬ ಉತ್ತರ ದೊರೆಯುತ್ತಿದೆ. ವಾಸ್ತವದಲ್ಲಿ ಎರಡು ವರ್ಷಗಳಿಂದ ಈ ಸರಣಿ ಪುಸ್ತಕಗಳ ಮುದ್ರಣವೇ ಸ್ಥಗಿತವಾಗಿದೆ. ಪುಸ್ತಕಗಳನ್ನು ಮುದ್ರಿಸಲೂ ಹಣವಿಲ್ಲದಷ್ಟು ಬಡವಾಗಿದೆಯೇ ಸರ್ಕಾರ? ಇದು, ಅಂಬೇಡ್ಕರ್ ಅವರ ವಿಚಾರಗಳ ಕುರಿತು ಸರ್ಕಾರ ಹೊಂದಿರುವ ಧೋರಣೆಯನ್ನು ತೋರಿಸುತ್ತದೆ. ಇದೊಂದು ಗಂಭೀರ ನಿರ್ಲಕ್ಷ್ಯವಾಗಿದ್ದು, ಸಂಬಂಧಪಟ್ಟವರು ತಕ್ಷಣವೇ ಕ್ರಮ ಕೈಗೊಂಡು, ಅಂಬೇಡ್ಕರ್ ವಿಚಾರಧಾರೆ ಎಲ್ಲರಿಗೂ ಎಲ್ಲೆಡೆಯೂ ದೊರೆಯುವಂತೆ ಮಾಡಲಿ.

- ಸುರೇಶ ಮಾ. ತಾಕತರಾವ, ಹಲ್ಯಾಳ, ಅಥಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು