ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದೂ– ಮುಸ್ಲಿಂ ಧರ್ಮದ ನಡುವಿನ ಚುನಾವಣೆ’

Last Updated 20 ಏಪ್ರಿಲ್ 2018, 11:14 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿಯ ಚುನಾವಣೆ ನಡೆಯುವುದು ರಸ್ತೆ, ಚರಂಡಿ, ಕುಡಿಯುವ ನೀರಿಗಲ್ಲ; ಹಿಂದೂ–ಮುಸ್ಲಿಂ ಧರ್ಮದ ಮಧ್ಯೆ ನಡೆಯುತ್ತಿದೆ..’ಹೀಗೆಂದು ಇಲ್ಲಿನ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ವೈರಲ್‌ ಆಗಿದೆ.‌

ತಾಲ್ಲೂಕಿನ ಸುಳೇಭಾವಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅವರು ಮಾಡಿರುವ ಭಾಷಣದ ದೃಶ್ಯಗಳು ಫೇಸ್‌ಬುಕ್‌, ವಾಟ್ಸ್ಆ್ಯಪ್‌ನಲ್ಲಿ ಹರಿದಾಡುತ್ತಿವೆ.

‘ಯಾರಿಗೆ ಬಾಬ್ರಿ ಮಸೀದಿ ಕಟ್ಟಬೇಕಾಗಿದೆಯೋ, ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಬೇಕಾಗಿದೆಯೋ ಅವರು ಕಾಂಗ್ರೆಸ್‌ಗೆ ಮತ ಹಾಕಲಿ. ಶಿವಾಜಿ ಮಹಾರಾಜ್‌, ಸಂಭಾಜಿ ಮಹಾರಾಜರು, ವೀರ ಸಾವರ್ಕರ್‌, ಸ್ವಾಮಿ ವಿವೇಕಾನಂದ ಹಾಗೂ ಲಕ್ಷ್ಮಿ ಗುಡಿಯಲ್ಲಿ ಪೂಜೆ ಮಾಡುವವರು ಬೇಕಾಗಿದ್ದರೆ ನೀವು ಬಿಜೆಪಿಗೆ ಮತ ಹಾಕಿ. ಸಂಜಯ ಪಾಟೀಲನನ್ನು ನೋಡೋಕೆ ಹೋಗಬೇಡಿ’ ಎಂದು ಕೋರಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ ಹೇಳಲಿ: ‘ನಾನು ಎದೆ ಮೇಲೆ ಕೈಇಟ್ಟು ಜೋರಾಗಿ ಹೇಳುವುದಕ್ಕೆ ತಯಾರಿದ್ದೇನೆ. ಇದು ಭಾರತ ದೇಶ, ಹಿಂದೂಗಳ ದೇಶ. ರಾಮ ಹುಟ್ಟಿದ ದೇಶ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕು. ಇದಕ್ಕಾಗಿ ಎಲ್ಲದಕ್ಕೂ ತಯಾರಿದ್ದೇನೆ. ರಾಮಮಂದಿರ ಕಟ್ಟೋಣ ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಲಿ, ನೀವೆಲ್ಲಾ ಆಕೆಗೇ ವೋಟ್ ಹಾಕಿ. ಅವರು ಹೇಳೋಕೆ ಸಾಧ್ಯವಿಲ್ಲ. ಅವರು ಮಸೀದಿ ಕಟ್ಟುವವರು, ಬಾಬ್ರಿ ಮಸೀದಿ ಕಟ್ಟುವವರು. ರಾಮಮಂದಿರ ಕಟ್ಟುವವರಲ್ಲ’ ಎಂದು ಟೀಕಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳಕ್ಕೆ ಹೋದರು. ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಉಪವಾಸ
ವಿದ್ದು ಮಂಜುನಾಥನ ದರ್ಶನಕ್ಕೆ ಹೋಗುತ್ತಾರೆ. ಇಂತಹ ವ್ಯತ್ಯಾಸಗಳನ್ನು ಗುರುತಿಸಿ, ನಿಮಗೆ ಯಾರು ಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದಿದ್ದಾರೆ.

ಧರ್ಮ ಉಳಿಸಲು ಒಗ್ಗಟ್ಟಾಗಿ:‌ ‘ಹಿಂದೂಗಳು ಇರುವುದು ಭಾರತ ದೇಶದಲ್ಲಿ ಮಾತ್ರ. ಇಲ್ಲಿ ಹಿಂದೂ ಧರ್ಮ ಉಳಿಸಲು ಎಲ್ಲರೂ ಒಗ್ಗಟ್ಟಾಗಬೇಕು. ಅಭಿವೃದ್ಧಿ ಬೇಕು ನಿಜ. ಆದರೆ, ಯಾರು ಧರ್ಮದ ಪರವಿದ್ದಾರೆ, ಯಾರು ವಿರುದ್ಧ ಇದ್ದಾರೆ ಎನ್ನುವುದನ್ನು ಮತದಾರರು ನೋಡಬೇಕು’ ಎಂದರು.

‘ರಾಮ ಇಲ್ಲ ಎಂದು ಹೇಳುವ ಪಕ್ಷವಿದ್ದರೆ ಅದು ಕಾಂಗ್ರೆಸ್‌. ನಾವು ವಿಷ್ಣು, ರಾಮ, ಶಿವ ಎಲ್ಲರನ್ನೂ ಪೂಜಿಸುತ್ತೇವೆ. ಹಿಂದೂಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸಲು ಯತ್ನಿಸಿದ ಟಿಪ್ಪುವಿನ ಜಯಂತಿಯನ್ನು ಕಾಂಗ್ರೆಸ್‌ನವರು ಮಾಡುತ್ತಾರೆ’ ಎಂದು ಕಟಕಿಯಾಡಿದ್ದಾರೆ.

‘ಸುಳೇಭಾವಿ ಗ್ರಾಮವೊಂದಕ್ಕೇ ₹10 ಕೋಟಿ ಅನುದಾನ ತಂದಿದ್ದೇನೆ. ಇಲ್ಲ ಎಂದು ಯಾರಾದರೂ ಸಾಬೀತುಪಡಿಸಿದರೆ ರಾಜಕೀಯ ಬಿಟ್ಟು ಮನೆಗೆ ಹೋಗುವುದಕ್ಕೆ ಸಿದ್ಧ ಇದ್ದೇನೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯೆ: ‘ಮೂರು ದಿನಗಳ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದೇನೆ. ಅದು ಸಾರ್ವಜನಿಕ ಸಮಾರಂಭವಲ್ಲ’ ಎಂದು ಸಂಜಯ ಪಾಟೀಲ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ಧರ್ಮದ ಹೆಸರಿನಲ್ಲಿ ಪ್ರಚಾರ ನಡೆಸುತ್ತಿರುವ ಸಂಜಯ ಪಾಟೀಲ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ‍ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT