ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟ್ಟು ಬರುತಿದೆ... ಹಲ್ಲು ಕಡಿಯುವಷ್ಟು

Last Updated 23 ಜುಲೈ 2019, 19:40 IST
ಅಕ್ಷರ ಗಾತ್ರ

‘ನಗೆಯು ಬರುತಿದೆ ಎನಗೆ ನಗೆಯು ಬರುತಿದೆ, ಜಗದಲಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು’ ಎಂದು ದಾಸರು ಹೇಳಿರುವ ಸಾಲುಗಳು, ಇಂದಿನ ನಮ್ಮ ವಿಧಾನಸೌಧಕ್ಕೆ ಹೇಳಿ ಮಾಡಿಸಿದಂತೆ ಹೊಂದುತ್ತಿವೆ. ನಾಡನ್ನು ಆಳಬೇಕಾದ, ಪ್ರಜಾಹಿತ ಕಾಯಬೇಕಾದ ನಾಯಕರ ಈ ಕಲಹ, ಕಿತ್ತಾಟ, ಅಧಿಕಾರದ ಹುಚ್ಚು ಓಟಕ್ಕೆ ಬಲಿಯಾಗುತ್ತಿರುವುದು ಅಮಾಯಕ ಜನರೇ ಹೊರತು ಜನಪ್ರತಿನಿಧಿಗಳಲ್ಲ. ಜನರ ಸೇವೆ ಮಾಡಲು ಬಂದವರು ನಾವು ಎಂಬ ಭಾವನೆ ಕಿಂಚಿತ್ತೂ ಇಲ್ಲದಂತೆ ನಮ್ಮ ಕೆಲವು ಶಾಸಕರು ನಡೆದುಕೊಂಡಿದ್ದಾರೆ.

‘ನಾನು ಪಡೆದಿರುವ ಈ ಅಧಿಕಾರ ಯಾರಿಂದ, ಯಾರಿಗಾಗಿ ಮತ್ತು ಯಾತಕ್ಕಾಗಿ ಬಳಕೆಯಾಗಬೇಕಿತ್ತು ಹಾಗೂ ಅದು ಹಾಗೆಯೇ ಬಳಕೆಯಾಗುತ್ತಿದೆಯೇ?’ ಎಂದು ಶಾಸಕರು ಒಮ್ಮೆ ತಮ್ಮ ಅಂತಃಸಾಕ್ಷಿಯನ್ನು ಕೇಳಿಕೊಳ್ಳಬೇಕಿದೆ. ಅಧಿಕಾರವು ಸಾರ್ವಜನಿಕ ಹಿತಕ್ಕಾಗಿ ಬಳಕೆಯಾಗುವ ಬದಲು ಸ್ವಹಿತಾಸಕ್ತಿಯಬ್ರಹ್ಮಾಸ್ತ್ರವಾಗಿ ಮಾರ್ಪಟ್ಟಿರುವುದು, ಚುನಾವಣೆಯಲ್ಲಿ ಮತ ಚಲಾಯಿಸಿದ ನಾವೆಲ್ಲರೂ ಮೂಕಪ್ರೇಕ್ಷಕರಾಗಿ ಇದನ್ನೆಲ್ಲ ನೋಡಬೇಕಾಗಿ ಬಂದುದು ನಾಡಿನ ದುರಂತ. ಇವರು ಅಧಿಕಾರದ ಚುಕ್ಕಾಣಿಗಾಗಿ ಮಾಡುತ್ತಿರುವಷ್ಟು ಸಾಹಸವನ್ನು ನಾಡಿನ ಪ್ರಗತಿಗಾಗಿ ಮಾಡಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡಾಗ, ಎಂಥವರಿಗಾದರೂ ಜನಪ್ರತಿನಿಧಿಗಳ ಈ ರಾಜಕಾರಣ ಕಂಡು ಹಲ್ಲು ಕಡಿಯುವಷ್ಟು ಕೋಪ ಬರುವುದು ಸಹಜ. ರಾಜಕಾರಣವು ರಾಜ್ಯದ ಏಳಿಗೆಯತ್ತ ಮುಖ ಮಾಡಿದರೆ ಅದೇ ಈ ನಾಡಿನ ಪುಣ್ಯ.

– ಡಾ. ಅನ್ನಪೂರ್ಣ ಎನ್.ಎಸ್.,ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT