ಭಾನುವಾರ, ಅಕ್ಟೋಬರ್ 24, 2021
23 °C

ಕಾನೂನು ಪದಕೋಶ: ಸಕಾಲಿಕ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಭಾಷೆಯಲ್ಲಿ ಕಾನೂನು ಶಿಕ್ಷಣ ಮತ್ತು ಕಾನೂನಿಗೆ ಸಂಬಂಧಿಸಿದ ಬೃಹತ್ ನಿಘಂಟು ರಚನೆಯ ಅಗತ್ಯವನ್ನು ಪ್ರತಿಪಾದಿಸಿದ ಜಿನದತ್ತ ದೇಸಾಯಿ ಅವರ ಲೇಖನ (ಸಂಗತ, ಸೆ. 21) ಹಾಗೂ ಎಚ್.ಬಿ.ಪ್ರಭಾಕರ ಶಾಸ್ತ್ರಿ ಅವರ ಪತ್ರವು (ವಾ.ವಾ., ಸೆ. 25) ಎಂದೋ ಆಗಬೇಕಾಗಿದ್ದ ಸಾಮಾಜಿಕ ಅಗತ್ಯದ ಕಾರ್ಯಯೋಜನೆಯೊಂದರ ಬಗ್ಗೆ ಸೂಕ್ತ ಚಿಂತನೆಯನ್ನು ಮಂಡಿಸಿವೆ. ಕಾನೂನು ನಿಘಂಟು 2003ರಲ್ಲಿ ಕನ್ನಡಕ್ಕೆ ತರ್ಜುಮೆಗೊಂಡು 2019ರಲ್ಲಿ ನವೀಕರಣಕ್ಕೊಳಪಟ್ಟು ‘ಕಾನೂನು ಪದಕೋಶ’ವಾಗಿ, ಈಚಿನ ಪ್ರಕಟಣೆಯು (ಕೇಂದ್ರದ 15 ನಿಯಮಗಳ ಪ್ರತ್ಯೇಕ ಕನ್ನಡ ಪುಸ್ತಕದೊಡನೆ) ಇದೇ 21ರಂದು ಬಿಡುಗಡೆಗೊಂಡಿದೆಯಷ್ಟೆ.

ಇದಲ್ಲದೆ, ಕನ್ನಡ ಅಭಿವೃದ್ಧಿ ನಿರ್ದೇಶನಾಲಯವು 1975ರಲ್ಲಿ ಪ್ರಕಟಿಸಿರುವ ‘ಕಾನೂನು ಪದಕೋಶ’ ಲಭ್ಯವಿದೆ. ಕರ್ನಾಟಕ ಲಾ ರಿಪೋರ್ಟರ್ ಪಬ್ಲಿಕೇಷನ್ಸ್ ಪ್ರಕಟಿತ ‘ಕಾನೂನು ಪದಕೋಶ’ ಹಾಗೂ ಬೆ.ಕಾ.ಮೂರ್ತೀಶ್ವರಯ್ಯ ಸಂಪಾದಿತ ‘ಕಾನೂನು ಆಡಳಿತ: ಇಂಗ್ಲಿಷ್ ಕನ್ನಡ ಪದಕೋಶ’ ಇವೂ ಇವೆ. ಆದರೆ, ಇವೆಲ್ಲ ಸಮಗ್ರವೂ ಸಾರ್ವತ್ರಿಕವೂ ಸರಳವೂ ಸಾಮಯಿಕವೂ ಆಗಿಲ್ಲ. ಈ ನಾಲ್ಕು ಅವಶ್ಯಕತೆಗಳನ್ನೂ ಪೂರೈಸುವ ಬೃಹತ್ ನಿಘಂಟು ಬೇಕಾಗಿದೆ. ಇನ್ನು, ನಿಘಂಟಿಗಾಗಿ ಕಾಯಂ ಸಮಿತಿ ಬೇಕೆಂಬ ಪ್ರಭಾಕರ ಶಾಸ್ತ್ರಿ ಅವರ ಸಲಹೆ ಯೋಗ್ಯವಾದುದು. ಸಮಿತಿಯಲ್ಲಿ ಯಾರೆಲ್ಲ ಇರಬೇಕೆಂಬ ಅಭಿಪ್ರಾಯವೂ ಸಣ್ಣ ಬದಲಾವಣೆಯೊಂದಿಗೆ ಸ್ವೀಕಾರಾರ್ಹ. ‘ಸಾಹಿತಿಮಾತ್ರ’ರು ಬೇಡ. ಸಾಹಿತಿಯೋ ಅಸಾಹಿತಿಯೋ, ಭಾಷಾತಜ್ಞರು ಇರಲಿ. ಕನ್ನಡದಲ್ಲಿ ನುರಿತ ಪ್ರಾಧ್ಯಾಪಕರು ಮತ್ತು ಜನಪದರು ಕೂಡಾ ಇರತಕ್ಕದ್ದು.

ಎ.ಆರ್.ಸೋಮಯಾಜಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.