ಮಂಗಳವಾರ, ಸೆಪ್ಟೆಂಬರ್ 21, 2021
28 °C

ಜಾತಿ ಎಲ್ಲಿದೆ ಎನ್ನುವವರಿಗೆ...

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಈ ದಿನಗಳಲ್ಲಿ ನೀವು ಯಾರೊಡನೆಯಾದರೂ ಜಾತಿಗಳ ಮೇಲು ಕೀಳಿನ ಸಾಮಾಜಿಕ ವ್ಯವಸ್ಥೆಯಿಂದ ಭರತಖಂಡದ ಇತಿಹಾಸದ ಉದ್ದಕ್ಕೂ ಕೋಟಿಗಟ್ಟಲೆ ಜನ ಹಸಿವು, ಅಪಮಾನ ಮತ್ತು ಬಡತನದಿಂದ ನರಳುತ್ತಿರುವುದರ ಬಗ್ಗೆ ಮಾತನಾಡಲು ತೊಡಗಿದರೆ, ಮರುಗಳಿಗೆಯಲ್ಲಿಯೇ ಅವರು ‘ರೀ, ಈಗ ಜಾತಿ ಎಲ್ಲಿದೆ? ...ಪ್ರತಿಭೆ ಮತ್ತು ಪರಿಶ್ರಮ ಇದ್ದರೆ ಯಾರು ಬೇಕಾದರೂ ಮುಂದೆ ಬರಬಹುದು’ ಎನ್ನುತ್ತಾರೆ. ಆದರೆ ಕಳೆದ ವಾರ, ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕೆಂಬ ಪ್ರಶ್ನೆ ಬಂದಾಗ, ವಿಧಾನಸಭಾ ಸದಸ್ಯರ ಪ್ರತಿಭೆ ಮತ್ತು ಪರಿಶ್ರಮದ ಬಗ್ಗೆ ಮಾತನಾಡುವ ಬದಲು, ಮೂರು ಜಾತಿಗಳಲ್ಲಿ ಯಾವ ಜಾತಿಯವರು ಮುಖ್ಯಮಂತ್ರಿ ಆಗಬೇಕು ಎಂಬುದೇ ದೊಡ್ಡ ಸಂಗತಿಯಾಗಿತ್ತು. ಆದ್ದರಿಂದ ಇನ್ನುಳಿದ ನೂರಾರು ಬಗೆಯ ಜಾತಿ, ಉಪಜಾತಿಗಳಿಗೆ ಸೇರಿದ ವಿಧಾನಸಭಾ ಸದಸ್ಯರು ಜಾತಿಯ ಕಾರಣದಿಂದಲೇ ಅವಕಾಶ ವಂಚಿತರಾದರು.

ಸಾವಿರಾರು ವರ್ಷಗಳಿಂದಲೂ ನಮ್ಮ ದೇಶದಲ್ಲಿ  ಜಾತಿ ಎನ್ನುವುದು ಕೇವಲ ಹೆಸರಿನ ಸೂಚಕವಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಅವಕಾಶಗಳನ್ನು ಹುಟ್ಟಿನಿಂದಲೇ ತೆರೆಯುವ ಇಲ್ಲವೇ ಮುಚ್ಚುವ ಬಾಗಿಲು. ಬಸ್ ಇಲ್ಲವೇ ರೈಲುಗಳಲ್ಲಿ ಸಂಚರಿಸುವಾಗ ಅದನ್ನು ಮುನ್ನಡೆಸುವ ಡ್ರೈವರ್ ನಮ್ಮ ಜಾತಿಯವನಾಗಿರಬೇಕು ಎಂದು ಯಾರೊಬ್ಬರೂ ಯೋಚಿಸುವುದಿಲ್ಲ. ಏಕೆಂದರೆ ಆಗ ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಒಳ್ಳೆಯ ಡ್ರೈವರ್ ಬೇಕು. ಆದರೆ ನಾಡನ್ನು ಮುನ್ನಡೆಸುವ ಡ್ರೈವರ್ ನಮ್ಮ ಜಾತಿಯವನೇ ಆಗಿರಬೇಕು ಎಂದು ನಾವೆಲ್ಲರೂ ಹಂಬಲಿಸುವಂತೆ ಮಾಡಿರುವುದೇ ಜಾತಿ. ಜಾತಿ ಎಲ್ಲಿದೆ ಎನ್ನುವ ಪ್ರಶ್ನೆಗೆ ಉತ್ತರ ‘ನಾವೆಲ್ಲರೂ ಸಾಮಾಜಿಕ ವ್ಯಕ್ತಿಗಳಾಗಿ ಬೆಳೆಯುವಾಗಲೇ ಜಾತಿ ಎಂಬುದು ನಮ್ಮ ನರನಾಡಿಗಳಲ್ಲಿ ಸೇರಿಕೊಂಡಿದೆ’.

- ಸಿ.ಪಿ.ನಾಗರಾಜ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು