ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ನಾಡಿನಲ್ಲಿರುವ ಅಲ್ಪ ಪ್ರಮಾಣದ ಕಾಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಿರುವುದು ಆತಂಕಕಾರಿಯಾದುದು. ನಾಡಿನ ಪ್ರಾಕೃತಿಕ ಸಂಪತ್ತಾದ ಬಿಳಿಗಿರಿರಂಗನ ಬೆಟ್ಟದ ಕಾಡಿಗೆ ಬೆಂಕಿ ಬಿದ್ದಿದೆ
Published 6 ಮಾರ್ಚ್ 2024, 23:53 IST
Last Updated 6 ಮಾರ್ಚ್ 2024, 23:53 IST
ಅಕ್ಷರ ಗಾತ್ರ

ಕಾಡಿಗೆ ಬೆಂಕಿ: ಗಂಭೀರವಾಗಿ ಪರಿಗಣಿಸಿ

ನಾಡಿನಲ್ಲಿರುವ ಅಲ್ಪ ಪ್ರಮಾಣದ ಕಾಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಿರುವುದು ಆತಂಕಕಾರಿಯಾದುದು. ನಾಡಿನ ಪ್ರಾಕೃತಿಕ ಸಂಪತ್ತಾದ ಬಿಳಿಗಿರಿರಂಗನ ಬೆಟ್ಟದ ಕಾಡಿಗೆ ಬೆಂಕಿ ಬಿದ್ದಿದೆ. ಇದೇ ರೀತಿ ರಾಜ್ಯದ ಪೂರ್ವದಲ್ಲಿನ ಘಟ್ಟ ಪ್ರದೇಶಗಳು, ಸಂರಕ್ಷಿತ ಹಾಗೂ ಇತರ ಅರಣ್ಯಗಳಿಗೂ ಬೆಂಕಿ ಬಿದ್ದಿದೆ. ಇದರಿಂದ ಗಿಡ ಮರಗಳು ಸುಟ್ಟು ಬೂದಿಯಾಗುವುದಲ್ಲದೆ ಕಾಡಿನಲ್ಲಿ ವಾಸಿಸುವ ಲಕ್ಷಾಂತರ ಜೀವರಾಶಿಗಳು ಅವಸಾನವನ್ನು ಹೊಂದುತ್ತವೆ. ಬೆಂಕಿಯಿಂದ ನಾಶವಾದ ಕಾಡು ಮತ್ತೆ ಬೆಳೆಯಲು ನೂರಾರು ವರ್ಷಗಳು ಬೇಕಾಗುತ್ತದೆ. ಪ್ರಾಕೃತಿಕ ಸಮತೋಲನದಲ್ಲಿ ಮಾನವನ ಉಳಿವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಮುಂಗಾರಿನಲ್ಲಿ ಸ್ವತಃ ನಾನು ಬೀಜದುಂಡೆ ಮೂಲಕ ಕಾಡನ್ನು ಬೆಳೆಸಲು ಶ್ರಮಿಸುವ ಅದರಂಗಿ ಕಾಡು ಸಹ ಬೆಂಕಿಗೆ ದಹಿಸಿದೆ. ಕಾಡಂಚಿನ ಗ್ರಾಮಗಳ ಕೆಲವರ ಕಿಡಿಗೇಡಿತನದ ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ. ಇಲಾಖೆಯು ಕಾಡಿಗೆ ಬೆಂಕಿ ಬೀಳುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಶೀಘ್ರ ಅತ್ತ ಗಮನಹರಿಸಬೇಕು. ಬೆಂಕಿಯನ್ನು ತಡೆಗಟ್ಟುವ ಕ್ರಮಗಳಾದ ಬೆಂಕಿಯ ಗೆರೆ ಹಾಕುವುದು, ಕಂದಕ ನಿರ್ಮಾಣ, ಒಂದು ಕಡೆಯಿಂದ ಮತ್ತೊಂದು ಪ್ರದೇಶಕ್ಕೆ ಹರಡದಂತೆ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಅರಣ್ಯ ಸಿಬ್ಬಂದಿಯ ಗಸ್ತನ್ನು ಹೆಚ್ಚು ಮಾಡಲಿ. ಕಾಡಿಗೆ ಅತಿಕ್ರಮ ಪ್ರವೇಶ ಮತ್ತು ಮಳೆಗಾಲ ಬರುವವರೆಗೆ ಪ್ರವಾಸಿಗರ ಪ್ರವೇಶವನ್ನು ಕೂಡ ನಿಷೇಧಿಸಲಿ. ಭದ್ರತೆ ಹೆಚ್ಚಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಿ.

-ರುದ್ರೇಶ್ ಅದರಂಗಿ, ಬೆಂಗಳೂರು

ರೋಗಗ್ರಸ್ತ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಕೊಡುವವರಾರು?

ಕೋಲಾರವು ಆರೋಗ್ಯ ಕ್ಷೇತ್ರದಲ್ಲೂ ಅತಿ ನಿರ್ಲಕ್ಷಿತ ಜಿಲ್ಲೆಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯ ಸಾವು, ಅದಕ್ಕೆ ಸಂಬಂಧಿಸಿದ ಆರೋಪ ಮತ್ತು ಸ್ಪಷ್ಟನೆಗಳು ಏನೇ ಇರಲಿ, ಆಸ್ಪತ್ರೆಯು ಅವ್ಯವಸ್ಥೆಯ ಆಗರ ಆಗಿರುವುದನ್ನು ಮಾತ್ರ ಯಾರೂ ಅಲ್ಲಗಳೆಯಲಾರರು. ಇಂತಹ ಸ್ಥಿತಿ ಇರುವುದರಿಂದ ಜಿಲ್ಲೆಯ ಜನ ಅನಾರೋಗ್ಯಕ್ಕಿಂತ ಹೆಚ್ಚಾಗಿ ಆಸ್ಪತ್ರೆಯ ಸೇವೆ ಬಗ್ಗೆ ಭಯ ಬೀಳುವಂತಾಗಿದೆ. ಕೂಲಿ ಮಾಡಿ, ಸೊಪ್ಪುಸದೆ ಮಾರಿ ಜೀವನ ಸಾಗಿಸುತ್ತಿರುವವರು ಅನಾರೋಗ್ಯಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಾಗದೆ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿ ನರಳುತ್ತಿರುವ ರೋಗಿಗಳಿಗೆ ಕೂರಲೂ ಸರಿಯಾದ ವ್ಯವಸ್ಥೆ ಇಲ್ಲ. ನಿಲ್ಲಿಸಿಯೇ ರಕ್ತಪರೀಕ್ಷೆ ಮಾಡುವ ಅಮಾನವೀಯ ದೃಶ್ಯ ಸಾಮಾನ್ಯ.

ಆಸ್ಪತ್ರೆಗೆ ಸಮೀಪದಲ್ಲೇ ಹತ್ತಾರು ಹಾಸ್ಟೆಲ್‌ಗಳಿವೆ. ಆದರೂ ಹೆಚ್ಚಿನ ವಿದ್ಯಾರ್ಥಿಗಳು  ಆರೋಗ್ಯ ಸಮಸ್ಯೆ
ಆದಾಗ ಈ ಆಸ್ಪತ್ರೆಗೆ ಹೋಗುವುದಿಲ್ಲ. ವಿದ್ಯಾರ್ಥಿನಿಯರು ಮುಟ್ಟಿನ ಸಮಸ್ಯೆ ಬಗ್ಗೆ ಹೇಳಿದರೆ, ಕೆಲವು ಸಿಬ್ಬಂದಿ ಅಸ್ಪೃಶ್ಯರಂತೆ ಕಾಣುತ್ತಾರೆ. ವಿದ್ಯಾರ್ಥಿನಿಯರಿಗೇ ಮುಜುಗರವಾಗುವಂತೆ, ಲಿಂಗ ಸೂಕ್ಷ್ಮತೆ ಇಲ್ಲದವರಂತೆ ವರ್ತಿಸುತ್ತಾರೆ. ಆರೋಗ್ಯವು ಮೂಲಭೂತ ಹಕ್ಕಾಗಿರುವುದರಿಂದ ಇಡೀ ಅವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರವೇ ನೇರವಾಗಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಸಿಬ್ಬಂದಿಗೆ ಲಿಂಗ ಸಂವೇದನೆ ಕುರಿತು ಕಡ್ಡಾಯವಾಗಿ ತರಬೇತಿ ನೀಡಬೇಕು. ಅಗತ್ಯ ಸೌಲಭ್ಯ ಗಳನ್ನು ತುರ್ತಾಗಿ ಒದಗಿಸಬೇಕು. ತಾಯಿ, ಮಗು ಹಾಗೂ ರೋಗಿಗಳಿಗೆ ಭದ್ರತೆ, ಉತ್ತಮ ಸೇವೆ ಒದಗಿಸಬೇಕು.

-ಅಂಕಿತ, ಗಂಗೋತ್ರಿ, ಭೂಮಿಕಾ, ಕೋಲಾರ

ಪ್ರಾಮಾಣಿಕತೆ ಮೆರೆದ ಪೋರ

ಸಮಾಜದಲ್ಲಿ ಪ್ರಾಮಾಣಿಕತೆ ಉಳಿದುಕೊಂಡಿರುವುದರ ಮಹತ್ವವನ್ನು ವಿವರಿಸಿರುವ ಡಾ. ಕೆ.ಎಸ್‌.ಪವಿತ್ರ ಅವರ ಲೇಖನವನ್ನು, ಇತ್ತೀಚೆಗೆ ನನಗಾದ ಅನುಭವವೊಂದು ಅನುಮೋದಿಸುವಂತಿದೆ. ಒಂದು ದಿನ ದ್ರಾಕ್ಷಿ ಹಣ್ಣು ಕೊಂಡ ನನಗೆ, ಮನೆಗೆ ಬರುವಷ್ಟರಲ್ಲಿ ಹಣ್ಣಿದ್ದ ಆ ಚೀಲವನ್ನು ಎಲ್ಲಿ ಬಿಟ್ಟೆ ಎಂಬುದೇ ನೆನಪಾಗಲಿಲ್ಲ. ಚೀಲ ಹೊಸತಾದ್ದರಿಂದ ಮಡದಿಗೆ ಅಸಮಾಧಾನವಾಗಿತ್ತು. ಮರುದಿನ ಮತ್ತೆ ದ್ರಾಕ್ಷಿ ಖರೀದಿಗೆ ತೆರಳಿದೆವು. ಅಂಗಡಿಯಲ್ಲಿ ನಾವು ಯಾವಾಗಲೂ ಹಣ್ಣು ಕೊಳ್ಳುತ್ತಿದ್ದ ಅಜ್ಜ ಇರಲಿಲ್ಲ. ಆತನಿಂದ ಕೊಳ್ಳುವಾಗ ನಾವು ಹಣ್ಣನ್ನು ಆರಿಸಬೇಕಾಗಿರಲಿಲ್ಲ, ಆತನೇ ಸೂಕ್ತವಾದುದನ್ನು ಕೊಡುತ್ತಿದ್ದ. ಆದರೆ, ಈ ಬಾರಿ ಅಲ್ಲಿ ಒಬ್ಬ ಬಾಲಕನಿದ್ದ. ಆತನೂ ಅಜ್ಜ ಕೊಡುವ ಹಾಗೆಯೇ ಸರಿಯಾದ ಹಣ್ಣನ್ನೇ ಆರಿಸಿಕೊಟ್ಟ. ಅದೇವೇಳೆ, ಅವನ ಅಂಗಡಿಯ ಮೂಲೆಯಲ್ಲಿ ಕಂಡ ಚೀಲದ ಬಗ್ಗೆ ವಿಚಾರಿಸಿದಾಗ, ಯಾರೋ ಬಿಟ್ಟುಹೋಗಿದ್ದು, ಅವರು ಬಂದು ಕೇಳಿದರೆ ಕೊಡಬೇಕೆಂದು ಕೊಂಡಿರುವುದಾಗಿ ಹೇಳಿದ. ‘ನೀವು ಉಪಯೋಗಿಸಿಕೊಳ್ಳಬಹುದಿತ್ತು’ ಎಂದಳು ನನ್ನ ಮಡದಿ. ‘ಛೇ ಛೇ ನಾವು ನಮ್ಮದಲ್ಲದ ವಸ್ತುಗಳನ್ನು ಮುಟ್ಟುವುದಿಲ್ಲ’ ಎಂದ ಹತ್ತು ವರ್ಷದ ಆ ಪೋರ! ಬಳಿಕ ಅದು ನಮ್ಮದೇ ಚೀಲ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಅದನ್ನು ನಮಗೆ ಕೊಟ್ಟ. ಇದಲ್ಲವೇ ಪ್ರಾಮಾಣಿಕತೆ? ಆತ ಶಾಲೆಗೆ ಹೋಗುತ್ತಾನೋ ಮದರಸಾಕ್ಕೆ ಹೋಗುತ್ತಾನೋ ಗೊತ್ತಿಲ್ಲ. ದೇವರು ಅವನಿಗೆ ಆಯುರಾರೋಗ್ಯ ನೀಡಿ, ಈ ವಯಸ್ಸಿನಲ್ಲಿ ಇರುವ ಸದ್ಬುದ್ಧಿ ಸದಾ ಇರುವಂತೆ ರಕ್ಷಿಸಲಿ ಎಂದು ಬೇಡಿಕೊಂಡೆ.

-ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ಇಂಥ ಕುಕೃತ್ಯಗಳಿಗೆ ಕೊನೆ ಇಲ್ಲವೇ?

ವಿಶ್ವ ಪರ್ಯಟನೆ ಕೈಗೊಂಡಿದ್ದ ಸ್ಪೇನ್ ಮಹಿಳೆಯೊಬ್ಬರು ಜಾರ್ಖಂಡ್ ಬಳಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಅದೂ ಪ್ರಿಯಕರ ಜೊತೆಯಲ್ಲಿದ್ದೂ. ಒಂಟಿ ಮಹಿಳೆಯರಿಗೆ ಭಾರತ ಎಷ್ಟು ಸುರಕ್ಷಿತ? ಮೇರಾ ಭಾರತ್ ಮಹಾನ್ ಎನ್ನುತ್ತೇವೆ, ಸಾವಿರಾರು ವರ್ಷಗಳ ಸಂಸ್ಕೃತಿ ನಮ್ಮದು ಎನ್ನುತ್ತೇವೆ. ಆದರೆ ಇಂತಹ
ಪ್ರಕರಣಗಳಿಂದ ವಿಶ್ವದಲ್ಲಿ ಭಾರತದ ಮಾನ ಏನಾಗುತ್ತದೆ? ನೈತಿಕತೆ ಇಲ್ಲದ, ನಶೆಯಲ್ಲಿರುವ ಜನ ಸರಿಹೋಗದ ವಿನಾ ಇಂಥ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

-ಗುರು ಜಗಳೂರು, ಹರಿಹರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT