ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 28 ಏಪ್ರಿಲ್ 2024, 23:30 IST
Last Updated 28 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

‘ಬದಲಾದ ಭಾರತ’: ಅರ್ಥೈಸುವುದು ಹೇಗೆ?

‘ಬದಲಾದ ಭಾರತ’ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಬಗೆಯ ಸಂದೇಶಗಳು ಹರಿದಾಡುತ್ತಿವೆ. ನಿಜ, ಎಳನೀರು, ಸೀಬೇಕಾಯಿ ಮಾರುವಂತಹವರು ಸಹ ಡಿಜಿಟಲ್ ವಹಿವಾಟು ನಡೆಸುವುದು ಸಾಮಾನ್ಯವಾಗಿದೆ. ವಿಮಾನ ನಿಲ್ದಾಣಗಳಲ್ಲಿನ ಜನಸಂದಣಿಯು ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿನ ಜನಸಂದಣಿಯನ್ನು ನೆನಪಿಸುವಂತೆ ಇರುತ್ತದೆ. ದೇಶ, ವಿದೇಶಗಳಿಗೆ ಪ್ರವಾಸ ತೆರಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅತಿ ವೇಗದ ಐಷಾರಾಮಿ ರೈಲುಗಳು, ಫ್ಲೈಓವರ್‌ಗಳು, ಸುಸಜ್ಜಿತ ವಿಮಾನ ನಿಲ್ದಾಣಗಳು, ವಿಶಾಲವಾದ ರಸ್ತೆಗಳು ಕಾಣುತ್ತಿವೆ. ವ್ಯೆರುಧ್ಯವೆಂದರೆ, ಇಷ್ಟೆಲ್ಲಾ ಬೆಳವಣಿಗೆ ಕಾಣುತ್ತಿದ್ದರೂ ವ್ಯಾಸಂಗಕ್ಕಾಗಿ ಹಾಗೂ ಉದ್ಯೋಗದ ಸಲುವಾಗಿ ವಿದೇಶಗಳಿಗೆ ಹೋಗುವ ಹಪಹಪಿ ಮಾತ್ರ ನಮ್ಮ ದೇಶದ ಯುವಜನ ಹಾಗೂ ಪೋಷಕರಲ್ಲಿ ಕಡಿಮೆಯಾಗಿಲ್ಲ. ಬದಲಿಗೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋಗುವ ಭಾರತೀಯರ ಬಗ್ಗೆಯೂ ವರದಿಯಾಗುತ್ತಿರುತ್ತದೆ. ಒಂದೆಡೆ, ನಮ್ಮ ದೇಶ ಇದೀಗ ಜಗತ್ತಿನ ಯಾವ ದೇಶಕ್ಕೂ ಕಡಿಮೆಯಿಲ್ಲ ಎಂದು ಹೆಮ್ಮೆಪಡುವ ಮನಃಸ್ಥಿತಿ, ಮತ್ತೊಂದೆಡೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ವಿದೇಶಿ ವ್ಯಾಮೋಹ. ಈ ವಿಪರ್ಯಾಸವನ್ನು ಯಾವ ರೀತಿ ಅರ್ಥೈಸುವುದು?

-ಟಿ.ಜಯರಾಂ, ಕೋಲಾರ

ಮತದಾನದ ಪ್ರಮಾಣ: ಸಂಶೋಧನೆ ನಡೆಯಲಿ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ನಗರದ ಮತದಾರರು ಕಡಿಮೆ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ವರದಿಯಾಗಿದೆ. ಸುಶಿಕ್ಷಿತ ಮತದಾರರು ತಮ್ಮ ಹಕ್ಕು ಚಲಾಯಿಸುವಲ್ಲಿ ಅಸಡ್ಡೆ ತೋರಿರುವುದು ತುಂಬಾ ಗಂಭೀರವಾದ ವಿಷಯ. ನಗರವಾಸಿಗಳ ಇಂತಹ ಧೋರಣೆಯ ಹಿಂದಿನ ಕಾರಣಗಳನ್ನು ನಮ್ಮ ಸಂಶೋಧಕರು ಪತ್ತೆ ಮಾಡಿ ವೈಜ್ಞಾನಿಕ ವರದಿ
ಸಿದ್ಧಪಡಿಸಲಿ. ಅದರ ಅನುಸಾರ, ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಸಲಹೆ, ಸೂಚನೆಗಳನ್ನು ನೀಡಲಿ. ಮುಂಬರುವ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಅದರಿಂದ ಅನುಕೂಲವಾಗಬಹುದು. 

-ಗಿರಿಯಪ್ಪ ಕೊಳ್ಳಣ್ಣವರ, ತುಮಕೂರು 

ದೂರ ಉಳಿದರು... ದೂರದಿಂದ ಬಂದರು!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರನಟಿ ರಮ್ಯಾ ಅವರು ಮಂಡ್ಯ ಕ್ಷೇತ್ರದಲ್ಲಿ ಮತದಾನ ಮಾಡದೆ ದೂರ ಉಳಿದರು ಎಂಬ ವರದಿಯನ್ನು ಓದಿ ಬೇಸರದ ಜೊತೆಗೆ ಕೋಪವೂ ಬಂದಿತು. ಒಬ್ಬ ವಿದ್ಯಾವಂತೆ, ಹಿಂದೆ ಸಂಸದೆಯೂ ಆಗಿದ್ದವರು ಮತದಾನ ಮಾಡಲು ಬೇಜವಾಬ್ದಾರಿತನ ತೋರಿದ್ದು ದುರದೃಷ್ಟಕರ. ಮತ್ತೊಂದೆಡೆ, ಅದೇ ಮಂಡ್ಯದ ಯುವತಿಯೊಬ್ಬರು ಲಂಡನ್‌ನಿಂದ ಬಂದು ಮತದಾನ ಮಾಡಿದ ವಿಚಾರವನ್ನು ಟಿ.ವಿ.ಯಲ್ಲಿ ನೋಡಿ, ಆ ಯುವತಿಯ ಬಗ್ಗೆ ಹೆಮ್ಮೆಯೆನಿಸಿತು.

⇒ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ಮತದಾರರ ಹೀಯಾಳಿಕೆ ಸಲ್ಲ

ಪ್ರತಿ ಬಾರಿ ಸಾರ್ವತ್ರಿಕ ಚುನಾವಣೆ ನಡೆದಾಗಲೂ ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಮತದಾನ ದಾಖಲಾಗುವ ಬೆಂಗಳೂರಿನ ನಾಗರಿಕರನ್ನು ಅದಕ್ಕಾಗಿ ಹೀಯಾಳಿಸುವುದು ಒಂದು ರೂಢಿಯಾಗಿಬಿಟ್ಟಿದೆ. ಸರಿಯಾಗಿಪರಿಷ್ಕರಣೆಯಾಗದ ಮತದಾರರ ಪಟ್ಟಿಯೂ ಇಂತಹ ಸ್ಥಿತಿಗೆ ಒಂದು ಕಾರಣ ಆಗಿರಬಹುದು. ಪರಿಷ್ಕರಣೆ ಎಂದರೆ ಬರೀ ಮತದಾರರ ಸೇರ್ಪಡೆಯಲ್ಲ. ಬೇರೆ ಊರುಗಳಿಗೆ ವಾಸಕ್ಕಾಗಿ ತೆರಳಿದವರ ಹೆಸರುಗಳನ್ನು ತೆಗೆದುಹಾಕಬೇಕಾಗುತ್ತದೆ. ಹಾಗೆ ಮಾಡದಿದ್ದರೆ ಶೇಕಡಾವಾರು ಮತದಾನದ ಪ್ರಮಾಣ ಕಡಿಮೆ ಇರುತ್ತದೆ. ಎಷ್ಟೋ ಮತದಾರರು ಚುನಾವಣೆಯ ಸಲುವಾಗಿಯೇ ಪರವೂರುಗಳಿಂದ ಬಂದು ಮತ ಚಲಾಯಿಸಿ ಹೋಗುತ್ತಾರೆ. ಕಡಿಮೆ ಪ್ರಮಾಣದ ಮತದಾನಕ್ಕೆ ಕಾರಣ ಹುಡುಕಿ ಲೋಪದೋಷ ಸರಿಪಡಿಸುವ ಬದಲು, ಬಾಯಿಗೆ ಬಂದಂತೆ ಜರಿಯುವುದು
ಎಷ್ಟರಮಟ್ಟಿಗೆ ಸರಿ?

ಗ್ರಾಮಾಂತರ ಪ್ರದೇಶದಲ್ಲಿ ಕೆಲವು ಮತದಾರರಿಗೆ ನಾನಾ ಬಗೆಯ ಆಮಿಷಗಳನ್ನು ಒಡ್ಡಿ ಮತ ಹಾಕಿಸುವ ಸಾಧ್ಯತೆ ಇರುತ್ತದೆ. ಆದರೆ ಅಂತಹ ಕೆಲಸವನ್ನು ಬೆಂಗಳೂರಿನಂತಹ ನಗರದಲ್ಲಿ ಮಾಡುವುದು ಸುಲಭವಲ್ಲ. ಪವಿತ್ರ ಮತ, ಚುನಾವಣೆ, ಹಕ್ಕು, ಕರ್ತವ್ಯ ಇವೆಲ್ಲ ಮತದಾರನಿಗೆ ಮಾತ್ರವೇ? ರಾಜಕಾರಣಿಗಳಿಗೆ ಇಲ್ಲವೇ?

-ಟಿ.ವಿ.ಬಿ. ರಾಜನ್, ಬೆಂಗಳೂರು

ಮಹಿಳೆಯರ ಬಗೆಗಿನ ಧೋರಣೆ ಬದಲಾಗಲಿ

ಸರ್ಕಾರಗಳು ಮಹಿಳೆಯರ ಪರವಾಗಿ ಕೆಲವು ಯೋಜನೆಗಳನ್ನು ಜಾರಿಗೆ ತಂದಂತೆ ಮೇಲ್ನೋಟಕ್ಕೆ ಕಂಡರೂ ರಾಜಕಾರಣಿಗಳಿಗೆ ಹೆಣ್ಣಿನ ಬಗ್ಗೆ ಇರುವ ಕೀಳರಿಮೆ ಹಲವಾರು ಸಂದರ್ಭಗಳಲ್ಲಿ ಹೇಗೆ ಪ್ರಕಟ
ಆಗಿಬಿಡುತ್ತದೆ ಎಂಬುದನ್ನು ಸಿ.ಜಿ.ಮಂಜುಳಾ ತಮ್ಮ ಲೇಖನದಲ್ಲಿ (ಪ್ರ.ವಾ., ಏ. 27) ಚೆನ್ನಾಗಿ ಅನಾವರಣ
ಗೊಳಿಸಿದ್ದಾರೆ. ಮಹಿಳೆಯು ಸಾರ್ವಜನಿಕವಾಗಿ ಪುರುಷರ ಜೊತೆ ಹೆಚ್ಚು ವ್ಯಾವಹಾರಿಕವಾದ ಒಡನಾಟ ಇಟ್ಟುಕೊಂಡರೂ ಅವಳ ಶೀಲದ ಬಗ್ಗೆ ಅನುಮಾನಪಡುವುದು, ಅತ್ಯಾಚಾರ ಪ್ರಕರಣಗಳಲ್ಲಿ ಅವಳನ್ನೇ ಆರೋಪಿ ಸ್ಥಾನದಲ್ಲಿಟ್ಟು ನೋಡುವಂತಹ ಕ್ರಿಯೆಗಳು ಪುರುಷಪ್ರಧಾನ ಮನಃಸ್ಥಿತಿಯನ್ನು ಬಿಂಬಿಸುತ್ತವೆ. ಇಂತಹ ಧೋರಣೆ ಆಮೂಲಾಗ್ರವಾಗಿ ಬದಲಾಗಬೇಕು. ಅದಿಲ್ಲದೆ ಮಹಿಳೆಯರ ಪರವಾಗಿ ನಾವು ಎಂತಹ ಮಾತುಗಳನ್ನು ಆಡಿದರೂ ಪ್ರಯೋಜನವಿಲ್ಲ.

⇒ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT