ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 2 ಮೇ 2024, 20:39 IST
Last Updated 2 ಮೇ 2024, 20:39 IST
ಅಕ್ಷರ ಗಾತ್ರ

ಶುದ್ಧ ಗಾಳಿ, ನೀರಿನ ಗ್ಯಾರಂಟಿ ಕೊಡಿ

ಕಲಬುರಗಿಯಲ್ಲಿ ಈಗ ರಣರಣ ಬಿಸಿಲು. ಹನಿ ಹನಿ ನೀರಿಗೂ ಹಾಹಾಕಾರ. ಬಹುತೇಕ ಕೊಳವೆಬಾವಿಗಳು ಬತ್ತಿಹೋಗಿವೆ. ಪಾಲಿಕೆಯವರು ಹತ್ತು ದಿನಗಳಿಗೊಮ್ಮೆ ಅರ್ಧ ಗಂಟೆಯಷ್ಟೇ ನೀರು ಬಿಡುತ್ತಾರೆ. ಆ ನೀರನ್ನು ಸಂಪಿಗೆ ಪಂಪ್ ಮಾಡಲು ಜನ ಹವಣಿಸುತ್ತಾರೆ. ನಾನು ಎಲ್ಲೇ ವಾಸವಾಗಿದ್ದರೂ ನಾನು ಹುಟ್ಟಿ ಬೆಳೆದ ಈ ಕಲಬುರಗಿಯಲ್ಲಿ ಬೇಸಿಗೆ ಕಾಲ ಕಳೆಯದಿದ್ದರೆ ನನಗೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಈಗ ಕಲಬುರಗಿಯಲ್ಲಿ 45 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ಉಷ್ಣಾಂಶ ದಾಖಲಾಗಿದೆ. ಉಷ್ಣಾಂಶ 40 ಡಿಗ್ರಿ ತಲುಪಿದರೇನೇ ಹೈರಾಣಾಗುತ್ತಾರೆ ಬೆಂಗಳೂರು, ಮೈಸೂರಿನ ಜನ. ಆದರೆ ಕಲಬುರಗಿಯಲ್ಲಿ ಕೆಂಡದಂತೆ ಬಿಸಿಲಾದ ಮೇಲೆಯೇ ಜನರ ಚಟುವಟಿಕೆ ಆರಂಭ. ಬೆಳ್ಳಂಬೆಳಿಗ್ಗೆ ಆರ್.ಒ. ಘಟಕಗಳ ಮುಂದೆ ಪ್ಲಾಸ್ಟಿಕ್ ವಾಟರ್ ಕ್ಯಾನ್‌ ಹಿಡಿದು ಜನ ಸರದಿಯಲ್ಲಿ ನಿಲ್ಲುತ್ತಾರೆ.

ನಾವು ಸಣ್ಣವರಿದ್ದಾಗ ಬರಗಾಲದಲ್ಲೊಮ್ಮೆ, ನಮ್ಮ ಹಳ್ಳಿಯಲ್ಲಿ ಬತ್ತಿಹೋಗಿದ್ದ ಹಳ್ಳದಲ್ಲಿ ತಗ್ಗು ತೆಗೆದು, ಕುಡಿಯುವ ನೀರಿನ ಒರತೆಯನ್ನು ಹುಡುಕಿ ಬಟ್ಟಲಿನಲ್ಲಿ ತುಂಬಿ ಕೊಡಕ್ಕೆ ಸುರಿದದ್ದು ನೆನಪಿದೆ. ಅರ್ಧ ಗಂಟೆಗೆ ಒಂದು ಕೊಡ ತುಂಬುತ್ತಿತ್ತು. ಇಡೀ ಊರಿನ ಜನ ಹಗಲಿರುಳೆನ್ನದೆ ಪಾಳಿ ನಿಲ್ಲುತ್ತಿದ್ದರು. ಬೇರೆ ಕಾರ್ಯಗಳಿಗೆ ಬಳಸಲು ಎತ್ತಿನ ಮೇಲೆ ನಾಲ್ಕು ಕೊಡಗಳ ಲಗಳಿ ಹಾಕಿ ಹರದಾರಿ ಸಾಗಿ ಯಾವುದೋ ಸವುಳು ಬಾವಿಯಿಂದ ನೀರು ತರುತ್ತಿದ್ದರು. ಈಗ ನೀರಿನ ಟ್ಯಾಂಕರ್‌ಗಳು ಬಂದಿವೆ. ಕಾಲ ಬದಲಾದರೂ ಪರಿಸ್ಥಿತಿಯೇನೂ ಬದಲಾದಂತೆ ತೋರುತ್ತಿಲ್ಲ. ಸರ್ಕಾರವು ಜನರಿಗೆ ಶುದ್ಧ ಗಾಳಿ, ನೀರು ಕಲ್ಪಿಸುವ ಸಂಕಲ್ಪ ಮಾಡಲಿ.

ರಾಜಶೇಖರ ಕುಕ್ಕುಂದಾ, ಬಾಗಲಕೋಟೆ 

ಪೋಷಕಾಂಶ ಒದಗಿಸುವ ಮಾದರಿ ಫಸಲು

‘ಅನ್ನದಾತನ ಜ್ಞಾನ ಸಂಗತಿಗಳು’ ಎಂಬ ‘ನುಡಿ ಬೆಳಗು’ ಬರಹವನ್ನು (ಪ್ರ.ವಾ., ಮೇ 1) ಓದಿದಾಗ, ನನಗಾದ ಅನುಭವವೊಂದು ನೆನಪಿಗೆ ಬಂದಿತು. ಇತ್ತೀಚೆಗೆ ನನ್ನ ಸ್ನೇಹಿತನೊಬ್ಬನ ಮನೆಗೆ ಭೇಟಿ ನೀಡಿದ್ದೆ. ಮನೆಯ ಸುತ್ತಲೂ ಸುಮಾರು 40 ಎಕರೆ ಅಡಿಕೆ ತೋಟ. ಹೆಚ್ಚು ಕಡಿಮೆ ಎಲ್ಲಾ ಅಡಿಕೆ ಮರಗಳಿಗೂ ಕಾಳುಮೆಣಸು ಬಳ್ಳಿಗಳನ್ನು ಹಬ್ಬಿಸಿದ್ದಾನೆ. ತೋಟದ ತುಂಬಾ ನೆಲದ ಮೇಲೆ ‘ಮುಕೋನ’ ಎಂಬ ಬಳ್ಳಿಯನ್ನು ಹಬ್ಬಿಸಿದ್ದಾನೆ. ನೀರು ಹಾಯಿಸುವುದನ್ನು ಬಿಟ್ಟರೆ ಆ ಅಡಿಕೆ ಮರಗಳಿಗೆ ಗೊಬ್ಬರವನ್ನೇನೂ ಹಾಕುವುದಿಲ್ಲ. ಬೇಸಾಯ ಮಾಡುವುದಿಲ್ಲ. ಆದರೂ ಆತ ಅಡಿಕೆ, ಕಾಳುಮೆಣಸು ಬೆಳೆಗಳಿಂದ ಅಧಿಕ ಫಸಲು ತೆಗೆಯುತ್ತಾನೆ. ಅಡಿಕೆ ಮರ ಹಾಗೂ ಕಾಳುಮೆಣಸು ಬಳ್ಳಿಗಳು ಯಾವ ರೋಗದ ಸೋಂಕೂ ಇಲ್ಲದೆ ಆರೋಗ್ಯಕರವಾಗಿ ಬೆಳೆದುನಿಂತಿವೆ. ಆತ ಆ ನೆಲದ ಮೇಲೆ ಹಬ್ಬಿಸಿರುವ ಬಳ್ಳಿ ಆ ಮರಗಳಿಗೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಒದಗಿಸುತ್ತದೆ.

ಒಂದು ಕೆಮ್ಮು ಬಂದರೂ ಸಾಕು, ವೈದ್ಯರ ಬಳಿ ಹೋಗಿ ಬಂದು ಮಾತ್ರೆ ನುಂಗುವ, ಬೆಳೆಯುವ ಬೆಳೆಗಳಿಗೆ ಏನೇನೋ ವಿಷಕಾರಿ ಪದಾರ್ಥಗಳನ್ನು ಉಣಬಡಿಸಿ ಗಂಭೀರ ರೋಗಗಳಿಗೆ ಕಾರಣವಾಗುವ ನಾವು ಇದರಿಂದ ಕಲಿತುಕೊಳ್ಳುವುದು
ಬಹಳಷ್ಟಿದೆ. ಸಕಲ ಜೀವಚರಗಳ ರಕ್ಷಣೆಗೆ ಬೇಕಾದ ಮದ್ದನ್ನು ಪ್ರಕೃತಿ ತನ್ನ ಒಡಲಲ್ಲೇ ಇರಿಸಿಕೊಂಡಿದೆ. ನಾವು ಅದರ ಅರಿವಿಲ್ಲದೆಯೇ ವಿಷಕಾರಿ ವಸ್ತುಗಳ ಮೊರೆ ಹೋಗಿ ನಮಗೆ ನಾವೇ ಗಂಡಾಂತರವನ್ನು ತಂದುಕೊಳ್ಳುತ್ತಿದ್ದೇವೆ.

ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

ಆಧಾರರಹಿತ ಆರೋಪ ಎಷ್ಟು ಸರಿ?

‘ದೇಶದ ಹಿತ ಮರೆತ ಪ್ರಣಾಳಿಕೆಗಳು’ ಎಂಬ ಲೇಖನದಲ್ಲಿ (ಪ್ರ.ವಾ., ಮೇ 2) ಎ.ಸೂರ್ಯ ಪ್ರಕಾಶ್ ಅವರು
ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳು ಏಕಪಕ್ಷೀಯವಾಗಿವೆ. ಸಿಪಿಎಂ ಪಕ್ಷವನ್ನು ಅವರು ಲೇಖನದಲ್ಲಿ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ‘ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಈಗಿನ ಸಂದರ್ಭದಲ್ಲಿ ಸಿಪಿಎಂ ಜೊತೆ ಪಾಲುದಾರಿಕೆ ಹೊಂದಿರುವುದು ವಿಷಕಾರಿ. ಕಾಂಗ್ರೆಸ್ ಪಕ್ಷವು ನಿಜಕ್ಕೂ ಕೆಟ್ಟವರ ಸಹವಾಸಕ್ಕೆ ಬಿದ್ದಿದೆ’ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಸಿಪಿಎಂ ಪಕ್ಷವೂ ದೇಶದ ಬೆರಳೆಣಿಕೆಯಷ್ಟಿರುವ ಪ್ರಮುಖ ಪಕ್ಷಗಳಲ್ಲಿ ಒಂದು. ಅಂತಹ ಒಂದು ಪಕ್ಷವು ತನ್ನ ಪ್ರಣಾಳಿಕೆಯನ್ನು ‘ಸಂವಿಧಾನ ಹಾಗೂ ದೇಶದ ಹಿತಾಸಕ್ತಿ’ಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ರೂಪಿಸಿರುತ್ತದೆ. ಪಶ್ಚಿಮ ಬಂಗಾಳ ಹಾಗೂ ತ್ರಿಪುರಾದಲ್ಲಿ ಹಲವಾರು ವರ್ಷ ಆಳ್ವಿಕೆ ಮಾಡಿರುವ ಸಿಪಿಎಂ, ಕೇರಳದಲ್ಲಿ ಈಗ ಸತತ ಎರಡನೆಯ ಅವಧಿಗೆ ಆಡಳಿತದಲ್ಲಿದೆ. ಅಂತಹ ಒಂದು ಪಕ್ಷದ ಮೇಲೆ ಈ ರೀತಿಯ ಆಧಾರರಹಿತ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ?

ಭೀಮನಗೌಡ ಕಾಶಿರೆಡ್ಡಿ, ಬೆಂಗಳೂರು

ಆಗಲಿಲ್ಲವೇ ‘ಶೀಲ್ಡ್‌’? 

‘ಕೋವಿಶೀಲ್ಡ್’ ಲಸಿಕೆಯ ಗಂಭೀರ ಅಡ್ಡಪರಿಣಾಮ ಕುರಿತು ಓದಿದಾಗ (ಆಳ-ಅಗಲ,
ಪ್ರ.ವಾ., ಮೇ 1, 2) ಅನ್ನಿಸಿದ್ದು: ಈ ಲಸಿಕೆಯು ಪಡೆದ ಕೆಲವರ ಪಾಲಿಗೆ ‘ಕೋವಿ’ (ಬಂದೂಕು) ಆಗಿದೆ, ‘ಶೀಲ್ಡ್’ (ರಕ್ಷಣೆ) ಆಗಿಲ್ಲ! ಇಂಥ ಲಸಿಕೆಯನ್ನು ಶಿಫಾರಸು ಮಾಡಿದ ‘ಕೋವಿದ’ರಿಗೆ (ಪಂಡಿತರಿಗೆ) ‘ಶೀಲ್ಡ್’ (ಪ್ರಶಸ್ತಿ ಫಲಕ) ಕೊಡತಕ್ಕದ್ದು!

ಅಂದಹಾಗೆ, ನಮ್ಮದೇ ಆದ ‘ಕೋವ್ಯಾಕ್ಸಿನ್’ ಲಸಿಕೆಯ ಪರಿಣಾಮಗಳ ಬಗ್ಗೆ ಯಾರಾದರೂ ಅಧ್ಯಯನ ನಡೆಸಿದ್ದಾರೆಯೇ? ನಡೆಸಿದ್ದರೆ ಆ ಅಂಶಗಳೂ ಹೊರಬರಲಿ.

ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ತಾಪ...ಮಾನ!

ರಾಜ್ಯದ ಜನರಿಗೆ ಈಗ
ಪರಿಪರಿ ತಾಪ...
ಮನೆಯ ಹೊರಗೆ ಬಂದರೆ
ರಣ ಬಿಸಿಲ ಕಾವೋಕಾವು...
ಮನೆಯಲ್ಲಾದರೂ ಇದ್ದು
ಟಿ.ವಿ. ನೋಡೋಣವೆಂದು
ಯಾವ ವಾಹಿನಿ ಹಾಕಿದರೂ
ಪೆನ್‌ಡ್ರೈವ್ ಮೋಹಿನಿಯ ಕಾಟ!

ಮ.ಗು.ಬಸವಣ್ಣ, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT