ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 14 ಮಾರ್ಚ್ 2024, 23:34 IST
Last Updated 14 ಮಾರ್ಚ್ 2024, 23:34 IST
ಅಕ್ಷರ ಗಾತ್ರ

ಮಾದರಿ ಪ್ರಜೆಗಳಾಗೇ ಇರಲಿ

ಕರ್ನಾಟಕದಂಥ ಯಾವುದೇ ರಾಜ್ಯಕ್ಕೆ ತನ್ನ ಒಡಲಿನಲ್ಲಿ ಚುನಾವಣಾ ರಾಜಕಾರಣಕ್ಕೆ ಹೊರತಾದ ಸಾಂಸ್ಕೃತಿಕ ರಾಯಭಾರವನ್ನು ನಿಭಾಯಿಸುವ ಮತ್ತು ಸಾಮಾಜಿಕ ಕಳಕಳಿಯಿರುವ ಮಾದರಿ ಪ್ರಜೆಗಳನ್ನು ಹೊಂದುವ ಹಂಬಲ ಇರುತ್ತದೆ. ಅಂಥವರು ರಾಜ್ಯದ ಏಳಿಗೆಗೆ ಬಹಳ ಅಗತ್ಯ. ಆದರೆ, ಅಂತಹ ಪ್ರಜೆಗಳು ಪಕ್ಷರಾಜಕಾರಣಕ್ಕೆ ಇಳಿದಾಗ ರಾಜ್ಯಕ್ಕೆ ಆಗುವ ನಷ್ಟವನ್ನು ಸರಿದೂಗಿಸುವುದು ಕಷ್ಟ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ಹೃದ್ರೋಗ ತಜ್ಞ ಡಾ. ಸಿ.ಎನ್‌.ಮಂಜುನಾಥ್‌ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸುದ್ದಿ ಖಚಿತವಾಗಿದೆ. ಸಾಮಾನ್ಯ ಪ್ರಜೆಗಳಲ್ಲದವರು ಚುನಾವಣಾ ರಂಗಕ್ಕೆ ಧುಮುಕಿರುವುದು ಇದು ಮೊದಲಲ್ಲ. ಆದರೆ, ಇಂಥವರನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಡುವುದು ರಾಜ್ಯದ ಹಿತಕ್ಕೆಶ್ರೇಯಸ್ಕರವಲ್ಲ.

ಜನರಿಗೆ ಒಡೆಯರ್ ಮನೆತನದ ಮೇಲೆ ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್‌, ಜಯಚಾಮರಾಜೇಂದ್ರ
ಒಡೆಯರ್‌ ಅವರ ಮೇಲಿರುವ ಪೂಜ್ಯ ಭಾವವನ್ನು ಬಂಡವಾಳ ಮಾಡಿಕೊಂಡು ‘ನನಗೆ ಮತ ಹಾಕಿ ಗೆಲ್ಲಿಸಿ’ ಎಂದು ಯದುವೀರ್‌ ಅವರು ಕೇಳಿಕೊಳ್ಳುವುದು ಜನರ ವಿಶ್ವಾಸವನ್ನು ಅಧಿಕಾರ ರಾಜಕಾರಣಕ್ಕೆ ಬಳಸಿಕೊಳ್ಳುವುದಕ್ಕೆ ಸಮನಾದೀತು. ಇದಕ್ಕೂ ಅರ್ಹತೆಯ ಚೌಕಟ್ಟು ಮೀರಿದ ಕುಟುಂಬ ರಾಜಕಾರಣಕ್ಕೂ ಯಾವ ಅಂತರವೂ ಇಲ್ಲ (ಕುಟುಂಬಗಳ ಪಾರುಪತ್ಯವನ್ನು ವಿರೋಧಿಸುವವರಿಂದಲೇ ಮಣೆ ಬಂದಿರುವುದು ವಿಪರ್ಯಾಸ). ಅಂತೆಯೇ, ‘ನಾನು ಹತ್ತು ಸಾವಿರ ಜನರ ಎದೆಬಡಿತ ಉಳಿಸಿದ್ದೇನೆ. ನನಗೆ ಮತ ಕೊಡಿ’ ಎಂದು ಮಂಜುನಾಥ್‌ ಕೇಳಿದರೆ, ಅವರು ಮಾಡಿದ ಶಸ್ತ್ರಚಿಕಿತ್ಸೆಗಳೆಲ್ಲಕ್ಕೂ ಮತರೂಪದ ಪ್ರತಿಫಲಾಪೇಕ್ಷೆ ಇತ್ತೆಂಬ ಅನುಮಾನ ಮೂಡುವಂತೆ ಆಗುತ್ತದೆ. ಇದು ಬೇಕೇ? ಇನ್ನೂ ಕಾಲ ಮಿಂಚಿಲ್ಲ. ಇವರೆಲ್ಲ ಇನ್ನೊಮ್ಮೆ ಯೋಚಿಸುವಂತಾಗಲಿ ಮತ್ತು ಹಿಂದಡಿಯಿಡಲಿ. ಇಂತಹವರಲ್ಲಿ ತಾವು ಶಾಸಕಾಂಗದ ಭಾಗವಾಗಲೇಬೇಕು ಎಂಬ ವೈಚಾರಿಕ ಸ್ಪಷ್ಟತೆ ಇದ್ದಲ್ಲಿ, ಸರ್ಕಾರಗಳಿಗೆ ಅಗತ್ಯವಾಗಿರುವ ಅನೇಕ ಮೇಲುಸ್ತುವಾರಿ ಸಮಿತಿಗಳಲ್ಲಿ ಸೇವೆ ಸಲ್ಲಿಸಲಿ. ಅದನ್ನು ಜನ ಸ್ವಾಗತಿಸುತ್ತಾರೆ. ಪ್ರತಿ ಚುನಾವಣೆಯಲ್ಲೂ ಕಾರಣ ಕೊಡದೆ ಅಭ್ಯರ್ಥಿಗಳನ್ನು ಬದಲಾಯಿಸುವ ಕೆಟ್ಟ ಚಾಳಿಗೆ ಯಾವ ಪಕ್ಷವೂ ಹೊರತಾಗಿಲ್ಲ. ಹೊಸ ಮುಖಗಳನ್ನು ತೋರಿಸಿ ಹಳೆ ತುತ್ತೂರಿ ಊದಿಸುವ ಹೊಣೆಗೇಡಿತನವನ್ನು ಜನ ಗಮನಿಸಿ ತಿರಸ್ಕರಿಸಬೇಕಾಗಿದೆ.

ಶ್ರೀಕಂಠ, ಬೆಂಗಳೂರು

ಪ್ರಭಾವಿ ಕುಟುಂಬಗಳಿಗೆ ಮಣೆ: ಎಷ್ಟು ಸರಿ?

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾರಂಭಿಸಿವೆ. ದುರಂತವೆಂದರೆ, ಪ್ರಮುಖ ಪಕ್ಷಗಳ ಅಭ್ಯರ್ಥಿಗಳಾಗಿ ರಾಜಕೀಯವಾಗಿ ಪ್ರಭಾವಿಯಾಗಿರುವ ಕುಟುಂಬಗಳ ಸದಸ್ಯರ ಹೆಸರುಗಳೇ ಹೆಚ್ಚಾಗಿ ಚಾಲ್ತಿಯಲ್ಲಿವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಹೊರತಾಗಿಲ್ಲ. ಕುಟುಂಬ ರಾಜಕಾರಣವನ್ನು ಪೋಷಿಸುತ್ತಾ ಬಂದಿರುವ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಎರವಾಗುತ್ತಿವೆ. ಜನಸಾಮಾನ್ಯರು ಮತ್ತು ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲದ ರೀತಿಯಲ್ಲಿ ಈ ಪಕ್ಷಗಳು ನಡೆದುಕೊಳ್ಳುತ್ತಿವೆ. ಹಣದ ಪ್ರಭಾವ ಮತ್ತು ಕುಟುಂಬ ರಾಜಕಾರಣವು ಇಂದು ರಾಜಕಾರಣವನ್ನು ನಿಯಂತ್ರಿಸುತ್ತಿವೆ. ಇದರಿಂದ, ಪ್ರಜ್ಞಾವಂತರು, ಬುದ್ಧಿಜೀವಿಗಳು ಹಾಗೂ ಸಾಮಾನ್ಯ ಜನರಿಗೆ ಹಣ, ಕುಟುಂಬದ ಹಿನ್ನೆಲೆ ಇಲ್ಲದಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವೇ ಇರುವುದಿಲ್ಲ. ಆಗ ಪ್ರಜಾಪ್ರಭುತ್ವಕ್ಕೆ ಅರ್ಥ ಇರದು.

ಬೀದರ್‌ನಿಂದ ಚಾಮರಾಜನಗರದವರೆಗೂ ಹಲವು ಕ್ಷೇತ್ರಗಳಿಗೆ ಎರಡೂ ಪಕ್ಷಗಳಲ್ಲಿ ರಾಜಕೀಯದಲ್ಲಿ ಹಿಡಿತ ಸಾಧಿಸಿರುವ ಕುಟುಂಬಗಳ ಸದಸ್ಯರೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಆತಂಕದ ವಿಷಯ. ರಾಜಕಾರಣ ಎಂಬುದು ಹಣ ಉತ್ಪಾದಿಸುವ ಕಾರ್ಖಾನೆ ಎಂದು ತಿಳಿದಿರುವುದರಿಂದಲೇ ಕುಟುಂಬ ರಾಜಕಾರಣ ರಾರಾಜಿಸುತ್ತಿರುವುದು. ರಾಷ್ಟ್ರೀಯ ಪಕ್ಷಗಳಿಗೆ ಸ್ವಲ್ಪವಾದರೂ ಪ್ರಜ್ಞೆ ಇದ್ದರೆ ಅವು ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡಲಿ.

ಎಂ.ಟಿ.ಸುಭಾಶ್ಚಂದ್ರ, ದಾವಣಗೆರೆ

ಅಭ್ಯರ್ಥಿ ಆಯ್ಕೆ ಮತ್ತು ಸಂವಿಧಾನ

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮೈಸೂರಿನ ಯದುವಂಶದ ಕುಡಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಪಕ್ಷ ಮುಂದಾಗಿದೆ. ರಾಜಮನೆತನದವರೂ ರಾಜಕಾರಣಕ್ಕಿಳಿದು ಉತ್ತಮ ಕೆಲಸ ಮಾಡುವುದಕ್ಕೆ ನಮ್ಮ ಸಂವಿಧಾನವು ಅವಕಾಶ ಮಾಡಿಕೊಡುತ್ತದೆ. ಒಂದು ವೇಳೆ ಗೆಲುವು ಇವರದಾದರೆ, ಸಂವಿಧಾನಬದ್ಧವಾಗಿ, ಸಂವಿಧಾನಕ್ಕೆ ಋಣಿಯಾಗಿ ಜನಸೇವೆ ಮಾಡುವಂತಾಗಲಿ. 

ಪವನ್ ಜಯರಾಂ, ಚಾಮರಾಜನಗರ

ಚಿಕಿತ್ಸೆಗೆ ನೆರವಾಗಿ

ನನ್ನ ಮಗಳಾದ ಸೃಷ್ಟಿ ಎಸ್‌. ಗೌಡ ಎಂ.ಎಸ್ಸಿ. ವಿದ್ಯಾರ್ಥಿನಿಯಾಗಿದ್ದು, ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಅವಳ ಎಡಗಾಲಿಗೆ ತೀವ್ರ ಹಾನಿಯಾಗಿದೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ₹ 4 ಲಕ್ಷ ಖರ್ಚಾಗಿದೆ. ಮುಂದಿನ ಹಂತದ ಚಿಕಿತ್ಸೆಗೆ ₹ 10 ಲಕ್ಷ ವೆಚ್ಚವಾಗುವುದೆಂದು ವೈದ್ಯರು ತಿಳಿಸಿದ್ದಾರೆ. ನಾನು ಗಾರ್ಮೆಂಟ್ಸ್‌ ಉದ್ಯೋಗಿಯಾಗಿದ್ದು, ನನ್ನ ಪತ್ನಿ ಗೃಹಿಣಿಯಾಗಿದ್ದಾಳೆ. ಚಿಕಿತ್ಸೆಗಾಗಿ ಇಷ್ಟೊಂದು ಹಣವನ್ನು ಭರಿಸಲು ನಮಗೆ ಸಾಧ್ಯ ಆಗುತ್ತಿಲ್ಲ. ದಾನಿಗಳು ದಯಮಾಡಿ ನೆರವಾಗಿ. ಕೆನರಾ ಬ್ಯಾಂಕ್‌, ಖಾತೆ ಸಂಖ್ಯೆ– 3194101009760, ನಾಗರಬಾವಿ ಶಾಖೆ, ಬೆಂಗಳೂರು, IFSC: CNRB0003194, ಗೂಗಲ್‌ ಪೇ ಮತ್ತು ಸಂಪರ್ಕ ಸಂಖ್ಯೆ 9535663040.

ಸತೀಶ್‌ ಜಿ. ಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT