ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 2 ಜೂನ್ 2024, 23:52 IST
Last Updated 2 ಜೂನ್ 2024, 23:52 IST
ಅಕ್ಷರ ಗಾತ್ರ

ರಚನಾತ್ಮಕ ಬೆಂಬಲದಿಂದ ಸರ್ವರಿಗೂ ಒಳಿತು

ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರದಲ್ಲಿ ವಿವಿಧ ಪಕ್ಷಗಳ ನಾಯಕರ ನಡುವೆ ಬಹಳಷ್ಟು ಟೀಕೆ ಟಿಪ್ಪಣಿಗಳ ವಾಕ್ಸಮರ ನಡೆದಿದೆ. ಆದರೂ ಜಗತ್ತಿನ ಬೃಹತ್ ಜನಸಂಖ್ಯೆ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಮತದಾರರನ್ನು ಹೊಂದಿರುವ ಭಾರತದಲ್ಲಿ ಬಹುತೇಕ ಶಾಂತ ರೀತಿಯಲ್ಲಿ ಮತದಾನ ನಡೆದಿರುವುದು ನಾವೆಲ್ಲರೂ ಹೆಮ್ಮೆಪಡುವಂತಹ ವಿಚಾರ. ಇನ್ನು ನಾಳೆ (ಜೂನ್‌ 4) ಪ್ರಕಟವಾಗಲಿರುವ ಫಲಿತಾಂಶವು ಯಾರದೇ ಪರವಾಗಿರಲಿ, ಬಹುಸಂಖ್ಯೆಯ ಮತದಾರರ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಜನಪರ ಕಾರ್ಯಕ್ರಮಗಳಿಗೆ ಬೆಂಬಲ ನೀಡಬೇಕು.

ಟೀಕೆ ಟಿಪ್ಪಣಿಗಳು ರಚನಾತ್ಮಕವಾಗಿರಲಿ. ಜಾತಿ, ಧರ್ಮವನ್ನು ಆಧಾರವಾಗಿಟ್ಟು ಸಂಕುಚಿತ ನೆಲೆಯಲ್ಲಿ ಯೋಚಿಸದೆ, ದೇಶದ ಹಿತದೃಷ್ಟಿಯಿಂದ ಸರ್ಕಾರವು ಕೈಗೊಳ್ಳುವ ಒಳ್ಳೆಯ ತೀರ್ಮಾನಗಳನ್ನು ಸ್ವಾಗತಿಸೋಣ ಮತ್ತು ಬೆಂಬಲಿಸೋಣ. ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗಲು ಅಗತ್ಯವಾದ ಬೆಂಬಲವು ಎಲ್ಲರಿಗೂ ಒಳಿತನ್ನು ಉಂಟು ಮಾಡುತ್ತದೆ.

ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

ಮಕ್ಕಳ ಇಷ್ಟಾನಿಷ್ಟ ಪರಿಗಣಿಸಿ

ಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಕಟವಾದ, ಇಬ್ಬರು ಯುವಕರಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳು ಗಮನಾರ್ಹ ಎನಿಸಿದವು. ಒಂದು, ‘ನೀಟ್‌’ ಬರೆದ ಮರುದಿನ ‘ಮುಂದೆ ಓದಲು ಇಷ್ಟವಿಲ್ಲ’ ಎಂದು ಪೋಷಕರಿಗೆ ಸಂದೇಶ ರವಾನಿಸಿ, ಕೋಟಾದಿಂದ ನಾಪತ್ತೆ ಆಗಿದ್ದ 19 ವರ್ಷದ ಹುಡುಗ ಬಳಿಕ ಗೋವಾದಲ್ಲಿ ಪತ್ತೆಯಾಗಿರುವುದು. ಎರಡು, ಬೆಂಗಳೂರಿನಲ್ಲಿ 21 ವರ್ಷದ ಯುವಕನೊಬ್ಬ ಕ್ಯಾಂಪಸ್ ಸಂದರ್ಶನದಲ್ಲಿ ಕೆಲಸ ಸಿಗದ ಕಾರಣದಿಂದ ದುಃಖಿತನಾಗಿ, ಸ್ನೇಹಿತನೊಂದಿಗೆ ಅಳಲು ತೋಡಿಕೊಂಡ ಕೆಲವೇ ಸಮಯದಲ್ಲಿ ಮಾಲೊಂದರ ಮೇಲಿನಿಂದ ಬಿದ್ದಿದ್ದು, ಇದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿರುವುದು. ಈ ಎರಡೂ ಪ್ರಕರಣಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ಓದುವ ವಿಷಯದಲ್ಲಿ ಮಕ್ಕಳ ಮೇಲೆ ಪೋಷಕರು ಹಾಕುವ ಒತ್ತಡ ಮತ್ತು ಆ ಒತ್ತಡವನ್ನು ಸಹಿಸಿಕೊಂಡು ಹೇಗೋ ಓದಿದರೂ ಸೂಕ್ತ ಕೆಲಸ ಸಿಗದ ಹತಾಶೆ.

ಮಕ್ಕಳನ್ನು ಚಿಕ್ಕಂದಿನಿಂದಲೂ ಹತ್ತಿರದಿಂದ ನೋಡಿ ಬಲ್ಲವರಾಗಿ ರುವ ಪೋಷಕರು, ಅವರ ಇಷ್ಟಾನಿಷ್ಟಗಳಿಗೆ ಬೆಲೆ ಕೊಡಬೇಕಾದ ಅಗತ್ಯವನ್ನು ಮನಗಾಣಬೇಕು. ತಾವು ಇಷ್ಟಪಡುವ ಕ್ಷೇತ್ರದಲ್ಲೇ ಮುಂದುವರಿಯಲು ಅವರಿಗೆ ಅವಕಾಶ ಮಾಡಿಕೊಡಬೇಕು ಮತ್ತು ಬದುಕಿನಲ್ಲಿ ಎದುರಾಗುವ ಸಂಕಷ್ಟಗಳನ್ನು ದಿಟ್ಟತನದಿಂದ ಎದುರಿಸುವ ಆತ್ಮವಿಶ್ವಾಸ ಮೂಡಿಸಬೇಕು. ಆಗ ಮಕ್ಕಳು ಸ್ವತಃ ಆಯ್ದುಕೊಂಡ ಕ್ಷೇತ್ರದಲ್ಲಿ ಖುಷಿಯಿಂದ ತೊಡಗಿಕೊಳ್ಳಲು ಅನುವಾಗುತ್ತದೆ ಮತ್ತು ಇಂತಹ ದುರಂತಗಳನ್ನು ಸಹ ತಡೆಗಟ್ಟಲು ಸಾಧ್ಯವಾಗುತ್ತದೆ. 

ರವಿಕಿರಣ್ ಶೇಖರ್, ಬೆಂಗಳೂರು

ಮತಗಟ್ಟೆ ಸಮೀಕ್ಷೆಯ ಔಚಿತ್ಯವೇನು?

ಈ ಬಾರಿಯ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಫಲಿತಾಂಶ ಪ್ರಕಟಣೆಗೆ ಎರಡು ದಿನಗಳ ಮುನ್ನ ಹೊರಬಿದ್ದಿವೆ. ಸರಿಸುಮಾರು ಹತ್ತಕ್ಕೂ ಹೆಚ್ಚು ಸಂಸ್ಥೆಗಳು ಈ ಸಮೀಕ್ಷೆಗಳಲ್ಲಿ ಪಾಲ್ಗೊಂಡಿದ್ದುದಾಗಿ ವರದಿಯಾಗಿದೆ. ಫಲಿತಾಂಶ ಪ್ರಕಟಣೆಗೆ ಕೆಲವೇ ದಿನಗಳಿರುವಾಗ ಇಂತಹ ಸಮೀಕ್ಷೆಗಳನ್ನು ನಡೆಸಿ ಅವುಗಳ ಫಲಿತಾಂಶವನ್ನು ಪ್ರಕಟಿಸುವ ಔಚಿತ್ಯವಾದರೂ ಏನು? ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿಸಿಕೊಂಡ ಪಕ್ಷಕ್ಕೆ ಸೇರಿದವರು ಬೀಗಬಹುದು ಮತ್ತು ಕಡಿಮೆ ಸ್ಥಾನ ಪಡೆಯುವಂತೆ ಕಂಡುಬಂದ ಪಕ್ಷದವರು ಜೋಲು ಮುಖ ಹಾಕಬಹುದು ಅಷ್ಟೆ.

ವಾಸ್ತವದಲ್ಲಿ, ಚುನಾವಣಾ ಆಯೋಗವು ಮತ ಎಣಿಕೆಯ ನಂತರ ಪ್ರಕಟಿಸುವ ಫಲಿತಾಂಶಕ್ಕಷ್ಟೇ ನಿಜವಾದ ಬೆಲೆ. ಮಿಕ್ಕಂತೆ ಬೇರೆ ಯಾವ ಸಂಸ್ಥೆಯ ಸಮೀಕ್ಷೆಗೂ ಬೆಲೆಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಈ ರೀತಿ ವೃಥಾ ಶ್ರಮ ಏಕೆ? ಅದೇ ಸಮಯ, ಹಣ ಮತ್ತು ಮಾನವ ಸಂಪನ್ಮೂಲವನ್ನು ಈ ಸಂಸ್ಥೆಗಳು ಸಮಾಜಪರ ಕೆಲಸಗಳಿಗೆ ವಿನಿಯೋಗಿಸಬಹುದಲ್ಲವೇ?

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಇಂದಿರಾ ಕ್ಯಾಂಟೀನ್ ನಿರ್ವಹಣೆ: ನಿರ್ಲಕ್ಷ್ಯ ಸಲ್ಲ

‘ಹಸಿವುಮುಕ್ತ ಕರ್ನಾಟಕ’ ಯೋಜನೆಯ ಭಾಗವಾಗಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳು ಮುಚ್ಚುವ ದಾರಿಯಲ್ಲಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಈ ಕ್ಯಾಂಟೀನ್‍ಗಳು ಆರಂಭದಲ್ಲಿ ಗುಣಮಟ್ಟದ ಆಹಾರವನ್ನು ಒದಗಿಸುತ್ತಿದ್ದವು. ಬರಬರುತ್ತಾ ಗುಣಮಟ್ಟ ಹಾಳಾಗಿದ್ದು ಮಾತ್ರವಲ್ಲದೆ ಆಹಾರದ ಪ್ರಮಾಣವೂ ಕಡಿಮೆಯಾಗಿದೆ.

ರಾಗಿ ಮುದ್ದೆಯನ್ನು ನೀಡುವುದಾಗಿ ಹೇಳಲಾಗಿತ್ತಾದರೂ ಅದು ಈವರೆಗೂ ಜಾರಿಗೆ ಬಂದಿಲ್ಲ. ಇಂದಿರಾ ಕ್ಯಾಂಟೀನ್‍ಗಳ ಸಂಖ್ಯೆ ಹೆಚ್ಚಿಸುವುದಾಗಿ ಸರ್ಕಾರ ಹೇಳಿದೆ. ಆದರೆ ಇರುವ ಕ್ಯಾಂಟೀನ್‍ಗಳನ್ನೇ ಸರಿಯಾಗಿ ನಿರ್ವಹಿಸುತ್ತಿಲ್ಲ. ಮಧ್ಯಾಹ್ನ 2 ಗಂಟೆಗೆ ಹೋದರೆ ಊಟ ಇರುವುದಿಲ್ಲ. ಪ್ರಶ್ನಿಸಿದರೆ, ಇಂತಿಷ್ಟು ಊಟಗಳನ್ನು ಮಾತ್ರ ಸರಬರಾಜು ಮಾಡಲಾಗಿತ್ತು ಎಂಬ ಉತ್ತರ ಸಿಬ್ಬಂದಿಯಿಂದ ಬರುತ್ತದೆ. ದೂರು ನೀಡಲು ಅಲ್ಲಿ ನೀಡಿರುವ ಸಂಖ್ಯೆಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುವುದಿಲ್ಲ. ಇಂದಿರಾ ಕ್ಯಾಂಟೀನ್‌ನಂತಹ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರ ಉತ್ತಮವಾಗಿ ನಡೆಸುವಂತೆ ಆಗಲಿ.

ಈ.ಬಸವರಾಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT