ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 12 ಮಾರ್ಚ್ 2024, 0:19 IST
Last Updated 12 ಮಾರ್ಚ್ 2024, 0:19 IST
ಅಕ್ಷರ ಗಾತ್ರ

ಬ್ಯಾಂಕ್‌ ಕಾರ್ಯಾವಧಿ: ಬದಲಾವಣೆ ಸಲ್ಲ

ಬ್ಯಾಂಕುಗಳು ಇನ್ನು ಮುಂದೆ ವಾರದಲ್ಲಿ ಐದು ದಿನವಷ್ಟೇ ವ್ಯವಹಾರ ನಡೆಸುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿ ಬೇಸರವಾಯಿತು. ಇದು ಸರಿಯಲ್ಲ. ತಂತ್ರಜ್ಞಾನ ಎಷ್ಟೇ ಬೆಳೆದರೂ ಗ್ರಾಹಕರು ತಮ್ಮ‌ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವುದು ಅನಿವಾರ್ಯ. ಅದರಲ್ಲೂ ಹಿರಿಯ ನಾಗರಿಕರಿಗೆ ಇದರ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಇನ್ನು ಈ ರಜೆಗಳ ಜೊತೆ ಇತರ ಸಾರ್ವಜನಿಕ ರಜೆಗಳೂ ಜೋಡಣೆಯಾದರೆ ಅದೊಂದು ದೀರ್ಘ ರಜಾ ಸಮಯವಾಗುತ್ತದೆ. ಹೀಗಾಗಿ, ಈಗಿರುವ ಪದ್ಧತಿಯಲ್ಲಿ ಬದಲಾವಣೆ ಮಾಡದಿರುವುದು ಸೂಕ್ತ.

ಕೆ.ಎಸ್.ಸೋಮೇಶ್ವರ, ಬೆಂಗಳೂರು

ಕರ್ತವ್ಯಪಾಲನೆಗೆ ಜಾಹೀರಾತೇಕೆ?

ಪತ್ರಿಕೆಯಲ್ಲಿ ಪ್ರಕಟವಾದ ಕೇಂದ್ರ ಸರ್ಕಾರದ ಜಾಹೀರಾತೊಂದು (ಪ್ರ.ವಾ., ಮಾರ್ಚ್‌ 11) ಗಮನ ಸೆಳೆಯಿತು. ವಿದೇಶಗಳಲ್ಲಿ ಬಿಕ್ಕಟ್ಟು ಉಂಟಾದಾಗ, ಅಲ್ಲಿ ಉದ್ಯೋಗ, ಶಿಕ್ಷಣದ ನಿಮಿತ್ತ ನೆಲೆಸಿರುವ ಭಾರತೀಯ ಮೂಲದವರ ರಕ್ಷಣೆಗಾಗಿ ಕೈಗೊಳ್ಳುವ ‘ಆಪರೇಷನ್‌’ಗಳ ವಿವರಣೆಯನ್ನು ಅದರಲ್ಲಿ ಕೊಡಲಾಗಿದೆ. ಭಾರತೀಯರು ಸಂಕಷ್ಟದಲ್ಲಿರುವಾಗ ರಕ್ಷಿಸಿ ಅವರನ್ನು ವಿದೇಶದಿಂದ ವಾಪಸ್‌ ಕರೆತರುವುದು ಕೇಂದ್ರ ಸರ್ಕಾರದ ಪ್ರಾಥಮಿಕ
ಕರ್ತವ್ಯವಲ್ಲವೇ? ಹೀಗಿರುವಾಗ, ಅದನ್ನು ಜಾಹೀರಾತಿನ ಮುಖಾಂತರ ಪ್ರಕಟಿಸಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ಎಷ್ಟು ಸರಿ?

ಪ್ರಜೆಗಳಾದ ನಮಗೆ ಇರುವ ಹಾಗೆ ಸರ್ಕಾರಕ್ಕೂ ಕರ್ತವ್ಯಗಳು ಇದ್ದೇ ಇರುತ್ತವೆ. ಹಾಗೆ ನೋಡಿದರೆ, ಕೊರೊನಾ ಕಾಲಘಟ್ಟದಲ್ಲಿ ಬರಿಗಾಲಲ್ಲಿ ತಮ್ಮ ಮನೆಗಳಿಗೆ ಮಕ್ಕಳು ಮರಿ ಸಮೇತ ಹೊರಟಿದ್ದ ಸಾವಿರಾರು ಜನರಿಗೆ ಸಾರಿಗೆ ವ್ಯವಸ್ಥೆ, ಊಟದ ನೆರವು ನೀಡಿದ ಚಿತ್ರನಟ ಸೋನು ಸೂದ್ ಅಂತಹವರದು ಸಹೃದಯ, ಮಾನವೀಯ ಗುಣಅನ್ನಿಸಿಕೊಳ್ಳುತ್ತದೆ. ಅವರ ಈ ನಡೆ ಜಾಹೀರಾತು ಯೋಗ್ಯ. ಆದರೆ ಅದೇ ಕೆಲಸವನ್ನು ಸರ್ಕಾರ ಏನಾದರೂ ಮಾಡಿದ್ದಿದ್ದರೆ ಅದು ಕರ್ತವ್ಯ ಆಗುತ್ತಿತ್ತು.

⇒ಶಾಂತಕುಮಾರ್, ಸರ್ಜಾಪುರ

ವಿಶೇಷ ಅನುದಾನ: ತಾರತಮ್ಯ ಸರಿಯಲ್ಲ

ಕಾಂಗ್ರೆಸ್ ಶಾಸಕರಿರುವ ಬೆಂಗಳೂರಿನ ಒಂಬತ್ತು ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ₹ 225 ಕೋಟಿ ವೆಚ್ಚದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿರುವುದು ವರದಿಯಾಗಿದೆ. ಈ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಜನರು ಪ್ರಜೆಗಳಲ್ಲವೇ? ಅವರ ಕ್ಷೇತ್ರಗಳಿಗೂ ಇಂತಹ ವಿಶೇಷ ಅನುದಾನ ಏಕಿಲ್ಲ? ಆ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಮತ ಹಾಕಿದವರು ಇರುತ್ತಾರೆ. ಅಂತೆಯೇ, ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಮತ ಹಾಕಿದವರೂ ಇರುತ್ತಾರೆ. ಅನುದಾನ ನೀಡುವಲ್ಲಿ ಇಂತಹ ತಾರತಮ್ಯ ಸಲ್ಲದು. 

ಚುನಾವಣೆಗೆ ಮುನ್ನ ಆ ಪಕ್ಷ ಈ ಪಕ್ಷ ಎಂಬ ಹೋರಾಟ ಸಹಜ. ಆದರೆ ಅಧಿಕಾರಕ್ಕೆ ಬಂದ ನಂತರ ಅದೆಲ್ಲಾ ಗೌಣವಾಗಬೇಕು. ಮುಖ್ಯಮಂತ್ರಿ ಆದವರಿಗೆ ಎಲ್ಲರೂ ಪ್ರಜೆಗಳೇ ಮತ್ತು ಎಲ್ಲ ಪ್ರಜೆಗಳಿಗೂ ಆತ ಮುಖ್ಯಮಂತ್ರಿಯೇ. ಹಾಗಾಗಿ ಮುಖ್ಯಮಂತ್ರಿ ಮತ್ತು ಆಡಳಿತವು ಎಲ್ಲ ಕ್ಷೇತ್ರಗಳನ್ನೂ ಸಮನಾಗಿಯೇ ಕಾಣಬೇಕು. ಈ ರೀತಿ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ಹಂಚಿದರೆ ಭವಿಷ್ಯದಲ್ಲಿ ಜನರಲ್ಲೇ ಒಡಕು ಉಂಟಾಗಬಹುದು. ಸರ್ಕಾರ ಇಂತಹ ವರ್ತನೆ ಅಥವಾ ನೀತಿಯನ್ನು ಕೂಡಲೇ ಕೈಬಿಟ್ಟು ಸರ್ವರನ್ನೂ ಸಮನಾಗಿ ಕಾಣಲಿ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

‘ಬಿಸಿ ತುಪ್ಪ’ವನ್ನು ಹದ್ದುಬಸ್ತಿನಲ್ಲಿ ಇಡಲಾಗದೇ?

ಸಂಸದ ಅನಂತಕುಮಾರ ಹೆಗಡೆ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಬಿಜೆಪಿಗೆ ‘ಬಿಸಿ ತುಪ್ಪ’ವಾಗಿ ಪರಿಣಮಿಸಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಮಾರ್ಚ್‌ 11). ಹಾಗಾದರೆ ಹೆಗಡೆ ಅವರಿಗೆ ಎಚ್ಚರಿಕೆ ನೀಡಿ, ವಿವಾದಾತ್ಮಕ ಹೇಳಿಕೆ ನೀಡದಂತೆ ಅವರನ್ನು ಹದ್ದುಬಸ್ತಿನಲ್ಲಿಡಲು ಆಗದಂತಹ ದುರ್ಬಲ ಸ್ಥಿತಿಗೆ ಬಿಜೆಪಿ ಹೈಕಮಾಂಡ್ ಬಂದಿದೆಯೇ ಅಥವಾ ಆ ಪಕ್ಷದ ಆಂತರ್ಯವನ್ನು ಹೆಗಡೆ ಅವರು ಆಗಾಗ್ಗೆ ಬಹಿರಂಗಪಡಿಸುತ್ತಿದ್ದಾರೆಯೇ? ಅದಕ್ಕಾಗಿ ಪಕ್ಷದ ಹೈಕಮಾಂಡ್ ಜಾಣ ಮೌನಕ್ಕೆ ಜಾರುತ್ತಿದೆಯೇ? ಇದರಲ್ಲಿ ಯಾವುದು ಸತ್ಯ?

→→ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ಕಾರ್ಯಕರ್ತರಿಗೆ ಸಿಗಲಿ ಮನ್ನಣೆ

ರಾಜ್ಯದಲ್ಲಿ ಕೆಲವೆಡೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಮುಖಂಡರ ವಿರುದ್ಧ ಧ್ವನಿ ಎತ್ತುವ ಮೂಲಕ ಅವರ ನಿದ್ದೆಗೆಡಿಸಿರುವುದು ಒಂದು ಒಳ್ಳೆಯ ಬೆಳವಣಿಗೆಯೇ ಸರಿ. ಚುನಾಯಿತರಾದ ನಾಯಕರು ತಳಮಟ್ಟದ ಕಾರ್ಯಕರ್ತರನ್ನು‌ ನಿರ್ಲಕ್ಷಿಸುವುದು ಸಾಮಾನ್ಯವಾಗಿದೆ. ಪಕ್ಷಕ್ಕೆ ನಿಷ್ಠರಾಗಿ ಹತ್ತಾರು ವರ್ಷ ಶ್ರಮವಹಿಸಿ ಕೆಲಸ ಮಾಡಿ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಬಯಸಿದ ಹಲವರ ಕನಸು ಕನಸಾಗಿಯೇ ಉಳಿಯುತ್ತದೆ.

ಈಗಾಗಲೇ ಚುನಾಯಿತರಾದ ನಾಯಕರು ತಮ್ಮ ಹಣ ಹಾಗೂ ಜಾತಿ ಪ್ರಭಾವ ಬಳಸಿ ಹೈಕಮಾಂಡ್‌ನಿಂದ ತಮಗೆ ಅಥವಾ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಮಾತ್ರ ಟಿಕೆಟ್ ಗಿಟ್ಟಿಸಿಕೊಳ್ಳಲು ಹವಣಿಸುತ್ತಾರೆ. ಇದರಿಂದ, ಪಕ್ಷಕ್ಕೆ
ತನು ಮನ ಧನ ಸಮೇತ ಸೇವೆ ಸಲ್ಲಿಸಿ, ನಾಯಕರಾಗಿ ಜನಸೇವೆ ಮಾಡುವ ಕನಸು ಕಟ್ಟಿಕೊಂಡ ಕಾರ್ಯಕರ್ತರ ಬಯಕೆ ಪೂರ್ಣಗೊಳ್ಳುವುದೇ ಇಲ್ಲ.

ಇಂತಹ ಬೆಳವಣಿಗೆಯಿಂದ, ಸರ್ವರಿಗೂ ಸಮಪಾಲು, ಸಮಬಾಳು, ಸಮನಾದ ಅಧಿಕಾರ ಎನ್ನುವ ಸಂವಿಧಾನದ ಹಕ್ಕುಗಳ ವಂಚನೆಯಾದಂತೆ ಆಗುವುದಿಲ್ಲವೇ? ಕುಟುಂಬ ರಾಜಕಾರಣವನ್ನು ವಿರೋಧಿಸುವ, ಶಿಸ್ತಿನ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿಯು ಪ್ರಧಾನಮಂತ್ರಿಯವರ ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್ ಘೋಷಣೆಯನ್ನು
ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತರುತ್ತದೆ ಎಂಬುದನ್ನು, ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಕಾದುನೋಡಬೇಕಿದೆ.

ಹುಸೇನಬಾಷಾ ತಳೇವಾಡ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT