ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಬಡ್ಡಿ ದಂಧೆಕೋರರಿಗೆ ಬೀಳಲಿ ಕಡಿವಾಣ

Published 29 ನವೆಂಬರ್ 2023, 0:34 IST
Last Updated 29 ನವೆಂಬರ್ 2023, 0:34 IST
ಅಕ್ಷರ ಗಾತ್ರ

ಬಡ್ಡಿ ದಂಧೆಕೋರರಿಗೆ ಬೀಳಲಿ ಕಡಿವಾಣ

ತುಮಕೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿಂದೆ ಬಡ್ಡಿ ವ್ಯವಹಾರ ಇದೆ ಎನ್ನಲಾಗುತ್ತಿರುವುದು ಆತಂಕಕಾರಿ. ಜನರನ್ನು ಕಾಡುತ್ತಿರುವ ಬಡ್ಡಿ ಮಾಫಿಯಾವನ್ನು ಸರ್ಕಾರ ನಿಯಂತ್ರಿಸಲೇಬೇಕು. ಇತ್ತೀಚೆಗೆ ತುಮಕೂರಿನಿಂದ ಬಂದು ಕುಣಿಗಲ್ ಬಸ್‌ ನಿಲ್ದಾಣದಲ್ಲಿ ರಾತ್ರಿ ಏಳು ಗಂಟೆಯ ಹೊತ್ತಿಗೆ ಮಂಗಳೂರಿಗೆ ಹೋಗುವ ಬಸ್‌ಗಾಗಿ ಕಾಯುತ್ತಿದ್ದೆ. ಒಬ್ಬ ಹಣ್ಣಿನ ವ್ಯಾಪಾರಿಯ ಮೇಲೆ ಏರಿ ಹೋದ ಒಬ್ಬ ಬಡ್ಡಿ ವ್ಯಾಪಾರಸ್ಥ, ಅವಾಚ್ಯವಾಗಿ ನಿಂದಿಸಿ ಸಾಲ ವಸೂಲಾತಿಗಾಗಿ ಪೀಡಿಸುತ್ತಿದ್ದ. ಆತನ ಮಾತುಗಳೇ ಇದು ಬಡ್ಡಿ ವಸೂಲಾತಿ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದವು. ಕೊನೆಗೆ ಆತ ಹಣ್ಣಿನ ವ್ಯಾಪಾರಿಯ ಕೊರಳಪಟ್ಟಿಯನ್ನು ಹಿಡಿದು ಹೊಡೆಯಲು ಮುಂದಾದ. ಅಷ್ಟರಲ್ಲಿ ನನ್ನ ಬಸ್ ಬಂದದ್ದರಿಂದ ನಾನು ಹೊರಟೆ.

ಇಂತಹ ಬಡ್ಡಿ ವ್ಯವಹಾರಗಳು ಬಡ ಕುಟುಂಬಗಳನ್ನು ನಾಶಪಡಿಸುತ್ತಿವೆ. ಆಸೆಗಣ್ಣಿನಿಂದ ನೋಟಿನ ಕಂತೆಗಳನ್ನು ಪಡೆಯುವ ಕುಟುಂಬಗಳು ಕೊನೆಗೆ ಸಾಲ ತೀರಿಸಲಾಗದೆ ಒದ್ದಾಡುತ್ತವೆ. ಜನರ ಅಸಹಾಯಕ ಸ್ಥಿತಿಯನ್ನು ಬಡ್ಡಿ ದಂಧೆಕೋರರು ಸುಲಿಗೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರ ಈ ಪಿಡುಗನ್ನು ಕೂಡಲೇ ನಿಯಂತ್ರಿಸಬೇಕು.

–ಸಲೀಮ್ ಬೋಳಂಗಡಿ, ಮಂಗಳೂರು

___________________________

ಸ್ಥಳೀಯ ಮಟ್ಟದಲ್ಲೇ ಸಮಸ್ಯೆ ಬಗೆಹರಿಸಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ಬಂದಿದ್ದುದು ವರದಿಯಾಗಿದೆ. ರಾತ್ರಿಯಿಡೀ ವೃದ್ಧರು, ಅಂಗವಿಕಲರು, ಮಹಿಳೆಯರು ನೂರಾರು ಕಿಲೊಮೀಟರ್ ಪ್ರಯಾಣಿಸಿ ರಾಜಧಾನಿಯತ್ತ ದೌಡಾಯಿಸಿದ್ದು, ಅಧಿಕಾರಿಗಳ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಂತಿದೆ.

ಯಾವುದೇ ಸಾರ್ವಜನಿಕ ಸಮಸ್ಯೆಯು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿದಿದ್ದರೆ ಇಷ್ಟೊಂದು ಶ್ರಮಪಟ್ಟು ಅವರು ರಾಜಧಾನಿಗೆ ಬರುವ ಅವಶ್ಯಕತೆ ಇರುತ್ತಿರಲಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಲು ಆದಷ್ಟು ಸ್ಥಳೀಯ ಮಟ್ಟದಲ್ಲಿಯೇ ಜಿಲ್ಲಾಧಿಕಾರಿ, ಶಾಸಕರು, ಅಧಿಕಾರಿಗಳ ನೇತೃತ್ವದಲ್ಲಿ ಆಗಾಗ್ಗೆ ಅಹವಾಲು ಆಲಿಸುವ ಕಾರ್ಯಕ್ರಮ ಪರಿಣಾಮ ಕಾರಿಯಾಗಿ ಜರುಗಲಿ.

–ಮುರುಗೇಶ ಡಿ., ದಾವಣಗೆರೆ

___________________________

ಬೇಕು ಇಲ್ಲೊಂದು ಸುಸಜ್ಜಿತ ಆಸ್ಪತ್ರೆ

ಉಪಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಅವರ ರಾಜಕೀಯ ಜಿದ್ದಾಜಿದ್ದಿಯಿಂದ ರಾಮನಗರ ಮತ್ತು ಕನಕಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸೌಲಭ್ಯ ಒದಗುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಜನರು ಮೂರು ವರ್ಷಗಳಿಂದಲೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಒಕ್ಕೊರಲಿನಿಂದ ಮನವಿ ಮಾಡುತ್ತಿದ್ದರೂ ಸರ್ಕಾರ ಅದನ್ನು ಕಿವಿಯ ಮೇಲೆ ಹಾಕಿಕೊಂಡಂತಿಲ್ಲ. ಹಿಂದೊಮ್ಮೆ ಉದ್ಯಮಿ ಬಿ.ಆರ್.ಶೆಟ್ಟಿ ಈ ದಿಸೆಯಲ್ಲಿ ಪ್ರಯತ್ನಿಸಿದ್ದ ರಾದರೂ ಅವರೇ ಸ್ವತಃ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಅದು ಕೂಡ ನಿಂತುಹೋಯಿತು.

ಈಗಂತೂ ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆ ಅಪಘಾತವಾದಾಗ, ಹೃದಯ ಸಮಸ್ಯೆ ಉಲ್ಬಣಿಸಿದಾಗ ನೆರೆಯ ಉಡುಪಿ ಜಿಲ್ಲೆಯ ಮಣಿಪಾಲ ಅಥವಾ ಮಂಗಳೂರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಆದರೆ ಮಂಗಳೂರು ಮತ್ತು ಮಣಿಪಾಲ ಬಹಳ ದೂರ ಇರುವುದರಿಂದ, ತೀವ್ರ ಹೃದಯಾಘಾತ ಅಥವಾ ರಸ್ತೆ ಅಪಘಾತಕ್ಕೆ ಈಡಾದವರು ಅಲ್ಲಿಗೆ ಕರೆದೊಯ್ಯುವ ಮುನ್ನವೇ ಪ್ರಾಣ ಬಿಡುವ ಸಾಧ್ಯತೆಯೇ ಹೆಚ್ಚು. ಇಂತಹ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವುದು ಒಳ್ಳೆಯದು.

–ಚಂದ್ರಕಾಂತ ನಾಮಧಾರಿ, ಅಂಕೋಲಾ

___________________________

ವಿವೇಚನಾರಹಿತ ನಿರ್ಧಾರ ಮತ್ತು ಜನರ ಆಕ್ರೋಶ

ಸೋಲಾಪುರ- ಕಲಬುರಗಿ- ಹಾಸನ ಮಾರ್ಗದ ರೈಲು ಕಲಬುರಗಿಯಿಂದ ಬೆಂಗಳೂರಿಗೆ ಹೋಗಿ ಬರಲು ಅತ್ಯಂತ ಅನುಕೂಲಕರವಾಗಿರುವ ಜನಪ್ರಿಯ ರೈಲು. ಈ ರೈಲಿಗೆ ಬೆಂಗಳೂರು ತಲುಪಲು 10 ಗಂಟೆ ಸಾಕು. ಅಂತೆಯೇ, ವಿಪರೀತ ಪ್ರಯಾಣಿಕರ ಸಂದಣಿ ಇರುತ್ತದೆ. ಇಂತಹ ರೈಲನ್ನು ಒಂದು ದಿನದ ಮಟ್ಟಿಗೆ ರದ್ದು ಮಾಡಲು ಸಹ ರೈಲ್ವೆ ಇಲಾಖೆ ಹತ್ತು ಸಲ ಯೋಚಿಸಬೇಕು. ಎಷ್ಟೋ ಸಲ ರದ್ದು ಮಾಡಿ ನೆಟ್ಟಿಗರಿಂದ ಟೀಕೆಗೊಳಗಾಗಿ ಪುನರಾರಂಭಿಸಿದ್ದೂ ಇದೆ. ಪರಿಸ್ಥಿತಿ ಹೀಗಿರುವಾಗ, ನಮ್ಮ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಈ ರೈಲಿನ ಸಂಚಾರವನ್ನು ಇದೇ 30ರಿಂದ ಮುಂದಿನ ವರ್ಷದ ಫೆಬ್ರುವರಿ 1ರವರೆಗೆ ತಾಂತ್ರಿಕ ಕಾರಣ ಹೇಳಿ ಏಕಾಏಕಿ ರದ್ದು ಮಾಡಿತ್ತು. ಇದನ್ನು ತಿಳಿದ ಪ್ರಯಾಣಿಕರಲ್ಲಿ ಕೆಲವರಾದರೂ ಹೌಹಾರಿ ಬೇರೆ ರೈಲು, ಬಸ್‌ನಲ್ಲಿ ಕಾದಿರಿಸಿ ಬದಲಿ ವ್ಯವಸ್ಥೆ ಮಾಡಿಕೊಂಡಿದ್ದರು.

ನೆಟ್ಟಿಗರಿಂದ ಟೀಕಾಪ್ರಹಾರ ಶುರುವಾಗುವ ಮುನ್ನವೇ ಎಚ್ಚೆತ್ತ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ ಅವರು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಸದರಿ ರೈಲು ಸಂಚಾರದ ಅನಿವಾರ್ಯವನ್ನು ಮನವರಿಕೆ ಮಾಡಿಕೊಟ್ಟು, ಇತರ ಕೆಲ ರೈಲಿನ ಹಾಗೆ ಮಾರ್ಗ ಬದಲಿಸಿ ಓಡಿಸಲು ಕೋರಿದ್ದರು. ಪರಿಸ್ಥಿತಿಯ ತೀವ್ರತೆ ಅರಿತ ಇಲಾಖೆ, ರದ್ದು ಮಾಡಿದ ಆದೇಶವನ್ನು ಅಂತಿಮವಾಗಿ ಹಿಂಪಡೆದು ನಮಗೆಲ್ಲ ನಿರಾಳ ಭಾವ ತಂದುಕೊಟ್ಟಿತು. ಆದರೆ ನನ್ನ ಪ್ರಶ್ನೆ ಇಷ್ಟೇ, ಕಲ್ಯಾಣ ಕರ್ನಾಟಕದ ಕಲಬುರಗಿಗೆ ಹೊಸ ರೈಲನ್ನು ಕೊಡದ ರೈಲ್ವೆ ಇಲಾಖೆಗೆ, ಇರುವ ರೈಲನ್ನೂ ಕಿತ್ತುಕೊಂಡರೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದೂ ತಿಳಿಯಲಾರದಷ್ಟು ಅರಿವಿನ ಕೊರತೆಯೇ? ವಿವೇಚನೆ ಇಲ್ಲದೆ ಕೈಗೊಂಡ ಇಂತಹ ನಿರ್ಧಾರದಿಂದ ಬದಲಿ ವ್ಯವಸ್ಥೆ ಮಾಡಿಕೊಂಡವರಿಗೆ ರೈಲ್ವೆ ಇಲಾಖೆ ಪರಿಹಾರ ಕೊಡುತ್ತದೆಯೇ

–ವೆಂಕಟೇಶ್ ‌ಮುದಗಲ್, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT