ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 29 ಫೆಬ್ರುವರಿ 2024, 22:30 IST
Last Updated 29 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ಸ್ಟೈಪೆಂಡ್‌ ತಡೆಯಲು ಹಲವು ಮಾರ್ಗ 

ಬಹುತೇಕ‌ ವೈದ್ಯಕೀಯ ಕಾಲೇಜುಗಳು ಪ್ರಭಾವಿಗಳ,‌ ರಾಜಕಾರಣಿಗಳ ಬಿಗಿ ಮುಷ್ಟಿಯಲ್ಲಿವೆ. ಹೆಚ್ಚಿನ ಕಾಲೇಜುಗಳು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನ್ಯಾಯಯುತವಾಗಿ ಕೊಡಬೇಕಾದ ಸ್ಟೈಪೆಂಡ್ ಕೊಡದೆ ಅವರನ್ನು ಬೇಕಾಬಿಟ್ಟಿಯಾಗಿ ದುಡಿಸಿಕೊಳ್ಳುತ್ತವೆ. ಒಂದು ವೇಳೆ ಕೊಟ್ಟರೂ ದುಬಾರಿ ಹಾಸ್ಟೆಲ್ ಶುಲ್ಕ ಅಥವಾ ಡೊನೇಷನ್ ಅನ್ನು ವಿದ್ಯಾರ್ಥಿಗಳ‌‌ ಮೇಲೆ‌ ಹೇರಿ, ಅದನ್ನು ಅವರಿಂದ ವಾಪಸ್‌ ವಸೂಲು ಮಾಡುತ್ತವೆ. ಹೀಗೆ ಮೊದಲು ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟಿಗೆ ಹಣ ಜಮಾ‌‌ ಮಾಡಿ, ಅದನ್ನು ಪರೋಕ್ಷವಾಗಿ ಹಿಂದಕ್ಕೆ ಪಡೆಯುವ ಹಲವು ಮಾರ್ಗಗಳನ್ನು ಕಾಲೇಜು ಆಡಳಿತ‌ ಮಂಡಳಿಗಳು ಕಂಡುಕೊಂಡಿವೆ.

ಇನ್ನು ತಮ್ಮ ಶೈಕ್ಷಣಿಕ ಭವಿಷ್ಯ ಅತಂತ್ರಗೊಳ್ಳುವ ಭಯದಿಂದ‌ ವಿದ್ಯಾರ್ಥಿಗಳು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲಾಗದೆ ಅಸಹಾಯಕರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರದ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಭಾರತೀಯ ವೈದ್ಯಕೀಯ ಮಂಡಳಿಯು ನಿಯಮಾವಳಿಗಳನ್ನು ರೂಪಿಸುವುದು ಮಾತ್ರ ತನ್ನ ಜವಾಬ್ದಾರಿ‌‌ ಎಂದು ನಂಬಿದಂತಿದೆ. 

ಡಾ.‌ ಅನಿಲ್‌ ಎಮ್. ಚಟ್ನಳ್ಳಿ, ಕಲಬುರಗಿ

**

ಮುದ್ರಾಂಕ ಶುಲ್ಕ ಹೆಚ್ಚಳ ಅಸಮಂಜಸ

ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಮುದ್ರಾಂಕ ಶುಲ್ಕವನ್ನು ಅವೈಜ್ಞಾನಿಕವಾಗಿ ಏರಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರ್ಕಾರದ ವಿವಿಧ ಯೋಜನೆಗಳು ಸೇರಿದಂತೆ ಕೃಷಿ ಉಪಕರಣಗಳಿಗೆ ಸಹಾಯಧನ, ಮುಚ್ಚಳಿಕೆ ಪತ್ರ, ಪ್ರಮಾಣಪತ್ರಗಳನ್ನು ₹ 20ರ ಅಫಿಡವಿಟ್‌ನಲ್ಲಿ ಸಲ್ಲಿಸಲಾಗುತ್ತಿತ್ತು. ಆದರೆ, ಈ ದರವನ್ನು ಈಗ ಏಕಾಏಕಿ
ಅವೈಜ್ಞಾನಿಕವಾಗಿ ಐದು ಪಟ್ಟು ಅಂದರೆ ₹ 100ಕ್ಕೆ ಹೆಚ್ಚಳ ಮಾಡಿದ್ದು, ಕನಿಷ್ಠ ದರ ಇದಾಗಿದೆ.

ಸಾಲ, ಆಸ್ತಿ ಖರೀದಿ ಪತ್ರಗಳ ಮೇಲೆ ಹೆಚ್ಚಳ ಮಾಡಲಿ, ಆದರೆ ರೈತಾಪಿ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿ ಉಪಯೋಗಿಸುವಂತಹ ಅಫಿಡವಿಟ್ ದರವನ್ನು ಹಳೆಯ ದರಕ್ಕೆ ಇಳಿಸಲು ರಾಜ್ಯ ಸರ್ಕಾರ ಚಿಂತಿಸಬೇಕಾಗಿದೆ.

ಮುರುಗೇಶ ಡಿ., ದಾವಣಗೆರೆ

**

ಹೀಗೂ ನಡೆಯುತ್ತದೆ ಶಸ್ತ್ರಚಿಕಿತ್ಸೆ!

ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಂತರ ಮೂವರು ಮಹಿಳೆಯರು ಮೃತಪಟ್ಟಿದ್ದು ಬಹಳ ನೋವಿನ ಸಂಗತಿ. ಈ ಸಂದರ್ಭದಲ್ಲಿ, ನಾನು 2021ರಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ನನ್ನ ತಂಗಿಗೆ ಸಿಸೇರಿಯನ್‌ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾಗಿದ್ದು ನೆನಪಾಗುತ್ತದೆ. ಆಗ ಆಸ್ಪತ್ರೆಯಲ್ಲಿ ಸುಮಾರು 8 ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ನಡೆಸಿ, ನಂತರ ಕೊನೆಯದಾಗಿ ನನ್ನ ತಂಗಿಗೆ ಶಸ್ತ್ರಚಿಕಿತ್ಸೆಯನ್ನು ಆರಂಭಿಸಲಾಯಿತು. ಆದರೆ, ಅದನ್ನು ಅರ್ಧಕ್ಕೇ ನಿಲ್ಲಿಸಿ ಹೊರಬಂದ ವೈದ್ಯರೊಬ್ಬರು ‘ನಿನ್ನ ತಂಗಿ ಶಸ್ತ್ರಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಇಲ್ಲಿ ಸರಿಯಾದ ಎಕ್ಯುಪ್‌ಮೆಂಟ್‌ಗಳು ಇಲ್ಲ. ಹಾಗಾಗಿ ಆಕೆಯನ್ನು ನನ್ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಾ. ಅಲ್ಲಿ ಎಲ್ಲಾ ತರಹದ ಎಕ್ಯುಪ್‌ಮೆಂಟ್‌ಗಳೂ ಇವೆ’ ಎಂದು ಹೇಳಿ ಹೊರಟುಹೋದರು. ಆಗ ನಾನು ನನ್ನ ತಂಗಿಯನ್ನು ಆಂಬುಲೆನ್ಸ್ ಮುಖಾಂತರ ವೈದ್ಯರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ನಮ್ಮಿಂದ ₹ 25,000 ದುಡ್ಡು ಕಟ್ಟಿಸಿಕೊಂಡಿದ್ದನ್ನು ಮರೆಯುವಂತಿಲ್ಲ. ಇದು ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ದಂಧೆ ಎಂದರೂ ತಪ್ಪಾಗದು.

ಚನ್ನಪ್ಪ ಯಾದವ್, ಗುರುಮಠಕಲ್

**

ಪ್ರಜ್ಞಾವಂತರ ‘ಪ್ರಜ್ಞೆ’ ಎಲ್ಲಿ ಹೋಯಿತು?

ವಿಧಾನಪರಿಷತ್ ಸದಸ್ಯರಾಗಿ ಬುದ್ಧಿಜೀವಿಗಳು ಮತ್ತು ಪ್ರಜ್ಞಾವಂತರನ್ನು ಆಯ್ಕೆ ಮಾಡಲಾಗುತ್ತಿತ್ತು. ಎಲ್ಲ ಪಕ್ಷದವರೂ ಅಂತಹವರನ್ನೇ ಆಯ್ಕೆ ಮಾಡುತ್ತಿದ್ದುದು ವಿಶೇಷ. ಉತ್ತಮವಾದ ಚರ್ಚೆಗಳಿಂದ ಒಡಗೂಡಿದ ಕಲಾಪ ನಡೆಯುತ್ತಿದ್ದರೆ ಸಾರ್ವಜನಿಕರು ಆಸಕ್ತಿಯಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆದರೆ, ಇಂದು ಆ ಪವಿತ್ರ ಮನೆಯಲ್ಲಿ ಕೆಲವು ಜನಪ್ರತಿನಿಧಿಗಳು ರೌಡಿಗಳಂತೆ ವರ್ತಿಸುತ್ತಿರುವುದು ಕಂಡುಬರುತ್ತದೆ. ಇತ್ತೀಚೆಗಿನ ಕಲಾಪದಲ್ಲಿ ಏಕವಚನದಲ್ಲಿ ನಿಂದಿಸಿದರು ಎಂಬ ಕಾರಣಕ್ಕೆ ಇಬ್ಬರು ಸದಸ್ಯರು ತೊಡೆ ತಟ್ಟಿ ಜಗಳಕ್ಕೆ ಹೋಗುವವರಂತೆ ನಡೆದುಕೊಂಡಿದ್ದು ವಿಷಾದನೀಯ. ಬಸವರಾಜ ಹೊರಟ್ಟಿ ಅವರಂತಹ ಅನುಭವಿ, ಚಿಂತಕ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದರೂ ಅವರಿಗೆ ಕಿಂಚಿತ್ ಗೌರವವನ್ನೂ ಕೊಡದಂತೆ ನಡೆದುಕೊಳ್ಳುತ್ತಿರುವುದು ಶೋಚನೀಯ.

ಇದರಿಂದ ಮೇಲ್ಮನೆ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತದೆ. ವಿಷಯಗಳ ಬಗ್ಗೆ ಶಾಂತಚಿತ್ತರಾಗಿ, ಸಮಾಧಾನದಿಂದ ಚರ್ಚೆ ಮಾಡಲು ಸಾಧ್ಯವಿಲ್ಲವೇ? ಕೂಗಾಡಿದರೆ, ಕಿರುಚಾಡಿ ತಮ್ಮ ಆರ್ಭಟ ತೋರಿಸಿದರಷ್ಟೇ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯಬಹುದು ಎಂಬ ಧೋರಣೆಯೇ? ಕೋಟ್ಯಂತರ ಜನ ತಮ್ಮನ್ನು ಗಮನಿಸುತ್ತಿರುತ್ತಾರೆ ಎಂಬ ಬಗ್ಗೆ ಸಣ್ಣ ಮಟ್ಟಿಗಿನ ಪ್ರಜ್ಞೆಯಾದರೂ ಇರಲಿ.

ಮಲ್ಲತ್ತಹಳ್ಳಿ ಎಚ್. ತುಕಾರಾಂ, ಬೆಂಗಳೂರು

**

ಎಫ್ಎಸ್ಎಲ್ ವರದಿಗೆ ಕಾಯಬೇಕಿಲ್ಲ...

ಇತ್ತೀಚೆಗಿನ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ಸಾಬೀತಾದರೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್‌) ವರದಿ ಬಂದ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ. ಆರೋಪ ಸಾಬೀತಾಗುವುದು ನ್ಯಾಯಾಲಯದಲ್ಲಿಯೇ ವಿನಾ ಪೊಲೀಸರ ತನಿಖೆಯಿಂದಲ್ಲ. ಅಲ್ಲದೆ, ಆಪಾದಿತರ ವಿರುದ್ಧ ಕ್ರಮ ಕೈಗೊಳ್ಳಲು ಎಫ್ಎಸ್ಎಲ್ ವರದಿ ಬರುವವರೆಗೂ ಕಾಯಬೇಕಾಗಿಲ್ಲ. ಆರೋಪಪಟ್ಟಿ ಸಲ್ಲಿಸಲು ಎಫ್ಎಸ್ಎಲ್ ವರದಿ ಅವಶ್ಯ. ಆದರೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲು ಈ ವರದಿ ಕಡ್ಡಾಯವಲ್ಲ.

ಎಫ್ಎಸ್ಎಲ್ ವರದಿಯಲ್ಲಿ ವಿಡಿಯೊ ನಕಲಿ ಎಂದು ಕಂಡುಬಂದರೆ ‘ಬಿ’ ರಿಪೋರ್ಟ್ ಸಲ್ಲಿಸುವುದರ ಜೊತೆಗೆ ನಕಲಿ ವಿಡಿಯೊ ಸೃಷ್ಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಎಫ್ಎಸ್ಎಲ್ ವರದಿ ಬಂದ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎನ್ನುವುದು ಸರಿಯಲ್ಲ. ಕೊಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೋಸ್ಟ್‌ಮಾರ್ಟಂ ವರದಿಗಾಗಿ ಕಾಯಲಾಗುವುದೇ? ಖಂಡಿತಾ ಇಲ್ಲ!

ಪಿ.ಜೆ.ರಾಘವೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT