ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 26 ಫೆಬ್ರುವರಿ 2024, 22:30 IST
Last Updated 26 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ಅರಣ್ಯ ವಿಸ್ತರಣೆ: ಬರೀ ಘೋಷಣೆಯಾಗದಿರಲಿ

ಮಾನವ– ವನ್ಯಜೀವಿ ಸಂಘರ್ಷದ ಕಾರಣ ಕೃಷಿ ಮಾಡಲು ಸಾಧ್ಯವಾಗದೇ ಇರುವ ಪ್ರದೇಶದಲ್ಲಿ ಅಥವಾ ವನ್ಯಜೀವಿ ಕಾರಿಡಾರ್‌ ವ್ಯಾಪ್ತಿಯಲ್ಲಿನ ಖಾಸಗಿ ಜಮೀನನ್ನು ರೈತರು ಸ್ವ ಇಚ್ಛೆಯಿಂದ ಸರ್ಕಾರಕ್ಕೆ ಬಿಟ್ಟುಕೊಡಲು ಮುಂದೆ ಬಂದರೆ, ಅಂತಹ ಜಮೀನುಗಳನ್ನು ಸ್ವಾಧೀನಕ್ಕೆ ಪಡೆದು ಅರಣ್ಯವನ್ನು ವಿಸ್ತರಿಸುವ ಸರ್ಕಾರದ ಆಲೋಚನೆಯು(ಪ್ರ.ವಾ., ಫೆ. 23) ಸಂತ್ರಸ್ತ ರೈತರಿಗೆ ಸಂತೋಷ ತಂದಿದೆ. ಪಶ್ಚಿಮಘಟ್ಟದ ಅರಣ್ಯದ ಪಕ್ಕದಲ್ಲಿರುವ ಈ ಜಮೀನುಗಳು ವನ್ಯಜೀವಿಗಳ ಭಂಡಾರವೇ ಆಗಿವೆ. ಇತ್ತೀಚೆಗೆ ಆನೆಗಳ ಹಾವಳಿ ವಿಪರೀತವಾಗಿದ್ದು ರೈತರ ಬದುಕು ಕಡು ಕಷ್ಟಕರವಾಗಿ ಪರಿಣಮಿಸಿದೆ.

ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಸುಮಾರು ಎಂಟು ಗ್ರಾಮಗಳ ರೈತರು ತಮ್ಮ 3,355 ಎಕರೆ ಜಮೀನನ್ನು ಈ ಉದ್ದೇಶಕ್ಕೆ ಬಿಟ್ಟುಕೊಡಲು ತಯಾರಾಗಿರುವುದಾಗಿ ಸ್ವತಃ ಒಪ್ಪಿಗೆ ನೀಡಿದ್ದಾರೆ. ಇದರಿಂದಾಗಿ ಸರ್ಕಾರಿ ಜಮೀನು ಸೇರಿದಂತೆ ಸುಮಾರು 18,000 ಎಕರೆ ಪ್ರದೇಶವು ವನ್ಯಜೀವಿಗಳಿಗೆ ಮುಕ್ತವಾಗುತ್ತದೆ. ಸರ್ಕಾರ ಈ ಯೋಜನೆಗೆ ಈ ಹಿಂದೆಯೇ ಬಜೆಟ್‌ನಲ್ಲಿ ಹಣ ಮೀಸಲಿರಿಸಿದ್ದರೂ ಅದು ಕಾರ್ಯಗತವಾಗಲಿಲ್ಲ. ಯೋಜನೆಯನ್ನು ಸರ್ಕಾರ ಈಗಲಾದರೂ ಜಾರಿಗೆ ತರಬೇಕು. ಅದಕ್ಕೆ ಬೇಕಾದ ಹಣ ಬಿಡುಗಡೆ ಮಾಡಿ ವನ್ಯಜೀವಿ– ಮಾನವ ಸಂಘರ್ಷವನ್ನು ತಪ್ಪಿಸಬೇಕು.

ಅತ್ತಿಹಳ್ಳಿ ದೇವರಾಜ್, ಹಾಸನ 

**

ಸಲ್ಲದ ಹೇಳಿಕೆಯೂ ಚುನಾವಣಾ ಗಿಮಿಕ್

ಅನುದಾನ ತಾರತಮ್ಯ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ನಡೆಯುತ್ತಿರುವ ತಿಕ್ಕಾಟವನ್ನು, ಕಾಂಗ್ರೆಸ್‌ ಪಕ್ಷ ಮಾಡುತ್ತಿರುವ ಚುನಾವಣಾ ಗಿಮಿಕ್ ಎಂದು ಅರ್ಥೈಸಿದ್ದಾರೆ ಬಿಜೆಪಿ ಮುಖಂಡ ಜಗದೀಶ ಶೆಟ್ಟರ್(ಪ್ರ.ವಾ., ಫೆ. 26). ಅವರ ಈ ಥರದ ಹೇಳಿಕೆ ಸಹ ‘ಚುನಾವಣಾ ಗಿಮಿಕ್’ ಅಲ್ಲವೇ? ಕೆಲವು ತಿಂಗಳ ಹಿಂದೆ ಅವರು ಬಿಜೆಪಿಯನ್ನು ತ್ಯಜಿಸಿ, ಕಾಂಗ್ರೆಸ್ ಸೇರಿ, ಮತ್ತೆ ಕಾಂಗ್ರೆಸ್ ತ್ಯಜಿಸಿ, ಬಿಜೆಪಿ ಸೇರಿ ಇದೀಗ ಕಾಂಗ್ರೆಸ್ ಅನ್ನು ಟೀಕಿಸುವುದು, ಬಿಜೆಪಿಯನ್ನು ಹೊಗಳುವುದು ಬಾಲಿಶತನವಲ್ಲವೇ?

ಶೆಟ್ಟರ್ ಅವರು ಮುಖ್ಯಮಂತ್ರಿ ಕೂಡ ಆಗಿದ್ದವರು. ಅಂಥವರು ಬರೀ ಅಧಿಕಾರದ ಆಸೆಗಾಗಿ ಪುನಃ ಪುನಃ ಪಕ್ಷಾಂತರ ಮಾಡಿರುವುದರ ಹಿಂದೆ ಇರುವ ಅಧಿಕಾರದಾಹವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ.

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

**

ಹುಂಡಿ ಹಣ ವಿನಿಯೋಗಕ್ಕೊಂದು ಸರಳ ಸೂತ್ರ

ದೇವಸ್ಥಾನಗಳ ಹುಂಡಿಗೆ ಭಕ್ತರು ಧನಕನಕ ಅರ್ಪಿಸಿದ ನಂತರ ಅವರಿಗೆ ಅದರ ಮೇಲೆ ಯಾವ ಅಧಿಕಾರವೂ ಇರುವುದಿಲ್ಲ. ಅದು ಆಗ ದೇವರ ದುಡ್ಡು. ದೇವರು ಎಲ್ಲರನ್ನೂ ಪ್ರೀತಿಸುತ್ತಾನೆ, ಸಮಾನವಾಗಿ ಕಾಣುತ್ತಾನೆ ಎಂದು ಧರ್ಮಗ್ರಂಥಗಳು ಹೇಳುತ್ತವೆ, ಧರ್ಮಗುರುಗಳೂ ಹೇಳುತ್ತಾರೆ. ಆದ್ದರಿಂದ, ಸಮಾಜದಲ್ಲಿ ಈಗ ಬೇರೂರಿರುವ ದ್ವೇಷ, ಅಸಮಾನತೆಯ ನಿವಾರಣೆಗಾಗಿ ಹುಂಡಿಯ ಸಂಪತ್ತು ವಿನಿಯೋಗವಾಗಬೇಕು. ಅರ್ಥಾತ್, ಜಾತಿ-ಮತಗಳ ಸೌಹಾರ್ದದ ಉದ್ದೇಶ ಹೊಂದಿದ ಕಾರ್ಯಗಳಿಗೆ, ಕಡುಬಡವರ ಜೀವನೋಪಾಯಕ್ಕೆ, ಶಿಕ್ಷಣ ಮತ್ತು ಆರೋಗ್ಯಕ್ಕೆ, ಶೋಷಣೆ, ಅಸ್ಪೃಶ್ಯತೆಯ ನಿವಾರಣೆಗೆ ಬಳಕೆಯಾಗಬೇಕು.

ಮುಜರಾಯಿ ಇಲಾಖೆಯ ದೇವಾಲಯ ಮತ್ತು ಸಾಧ್ಯವಿರುವ ಇತರ ದೇಗುಲಗಳ ಹುಂಡಿಯ ಸಂಪತ್ತನ್ನು ಒಟ್ಟಾಗಿ ಪರಿಗಣಿಸಿ, ದೇಗುಲ-ಸಿಬ್ಬಂದಿಯ ನಿರ್ವಹಣೆ ಮಾತ್ರಕ್ಕೆ ಬಳಸಿ ಉಳಿದ ಎಲ್ಲ ಸಂಪತ್ತೂ ಮೇಲೆ ಹೇಳಿದಂತೆ ವಿನಿಯೋಗವಾಗುವಂತೆ ಕಾನೂನು ಮತ್ತು ಯೋಜನೆಗಳು ಜಾರಿಗೆ ಬರಬೇಕು.

ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

**

ತೆರಿಗೆ ಹಂಚಿಕೆ: ಗೊಂದಲ ಬಗೆಹರಿಸಿ

ತೆರಿಗೆ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ. ಹಣಕಾಸು ಆಯೋಗದ ಶಿಫಾರಸಿನ ಅನ್ವಯವೇ ಎಲ್ಲ ರಾಜ್ಯಗಳಿಗೂ ತೆರಿಗೆ ಹಣ ಹಂಚಿಕೆಯಾಗು ತ್ತಿದೆ ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ. ತೆರಿಗೆ ಹಂಚಿಕೆ ನ್ಯಾಯಸಮ್ಮತ ಎಂದು ಬಿಜೆಪಿ ಪರ ವಕ್ತಾರರು, ತಾರತಮ್ಯ ನಡೆದಿದೆ ಎಂದು ಕಾಂಗ್ರೆಸ್‌ ಪರ ಇರುವವರು ವಾದಿಸುತ್ತಿದ್ದಾರೆ. ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೇಳಿಕೆಗಳು ಪರಸ್ಪರ ವಿರುದ್ಧವಾಗಿದ್ದು, ಯಾರು ಸರಿ ಎನ್ನುವುದರ ಬಗ್ಗೆ ಪ್ರಜೆಗಳಲ್ಲಿ ಗೊಂದಲ ಮೂಡಿದೆ. ಆದ್ದರಿಂದ ಎರಡೂ ಸರ್ಕಾರಗಳು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ ದಾಖಲೆಗಳನ್ನು ಮಾಧ್ಯಮಗಳ ಮೂಲಕ ಪ್ರಜೆಗಳ ಮುಂದಿಟ್ಟು ಗೊಂದಲಕ್ಕೆ ಅಂತ್ಯ ಹಾಡಬೇಕು. ಈ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು.‌

ಜಿ.ನಾಗೇಂದ್ರ ಕಾವೂರು, ಸಂಡೂರು

**

ನೀರನ್ನು ಸ್ವಿಸ್‌ ಬ್ಯಾಂಕಿನಲ್ಲಿ ಇಡಲಾಗದು!

‘ಬ್ರ್ಯಾಂಡ್‌ ಬೆಂಗಳೂರು ಕಟ್ಟುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಬದಲು ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗಮನ ಹರಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ವರದಿಯಾಗಿದೆ. ಜೊತೆಗೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರಿನ ಅಭಾವ ಉದ್ಭವ ಆಗದಂತೆ ಪಾಲಿಕೆ, ಜಲಮಂಡಳಿ ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸೂಚಿಸಿರುವುದಾಗಿ ಮತ್ತೊಂದು ವರದಿ ತಿಳಿಸಿದೆ. ನೀರಿನ ಪರಿಹಾರಕ್ಕಾಗಿ ಬರೀ ಮುಖ್ಯಮಂತ್ರಿಯವರಿಗೆ ಸಲಹೆ ನೀಡುವುದು ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹಾಕುವುದರಿಂದ ಸಮಸ್ಯೆ ಇತ್ಯರ್ಥ ಆಗದು. ನೀರು ಲಭ್ಯವಿದ್ದರೆ ಜನರಿಗೆ ಕೊಟ್ಟೇ ಕೊಡುತ್ತಾರೆ. ಅದನ್ನು ಸ್ವಿಸ್‌ ಬ್ಯಾಂಕಿನಲ್ಲಿ ಇಡಲಾಗದು.

ರಾಜಕಾಲುವೆಗಳ ಒತ್ತುವರಿ, ಕೆರೆಗಳ ಕಬಳಿಕೆ, ಮರಗಳ ಕಡಿಯುವಿಕೆ, ಅರಣ್ಯ ನಾಶ ಹಾಗೂ ಒತ್ತುವರಿಯಿಂದ ಈ ಪರಿಸ್ಥಿತಿ ಉದ್ಭವವಾಗಿದೆ ಎಂಬುದು ಸ್ಪಷ್ಟ. ಇದಕ್ಕೆ ಕಾರಣ, ಅಭಿವೃದ್ಧಿಯ ಹೆಸರಿನಲ್ಲಿ ಮಾಡುವ ಅರ್ಥಹೀನ ಮತ್ತು ಅವೈಜ್ಞಾನಿಕ ಕಾಮಗಾರಿಗಳು. ಇಂತಹವನ್ನು ಮೊದಲು ನಿಲ್ಲಿಸಿ ಕೆರೆಕಟ್ಟೆಗಳನ್ನು ತುಂಬಿಸುವುದರತ್ತ ಗಮನ ಹರಿಸಲಿ. ಈ ಪರಿಸ್ಥಿತಿಗೆ ಸರ್ಕಾರವಷ್ಟೇ ಕಾರಣವಲ್ಲದೆ ಜನರೂ ಕಾರಣಕರ್ತರೇ ಎಂಬುದು ಗಮನಾರ್ಹ. ನೀರನ್ನು ಮಾನವ ಸೃಷ್ಟಿಸಲಾಗದು. ನಿಸರ್ಗದಿಂದಲೇ ಪಡೆಯಬೇಕು ಮತ್ತು ಅದನ್ನು ಉಳಿಸಿ ಬಳಸಬೇಕು. ಹೀಗಾಗಿ, ಸರ್ಕಾರ ಮತ್ತು ಜನ ಇಬ್ಬರೂ ಎಚ್ಚೆತ್ತುಕೊಳ್ಳಬೇಕಿದೆ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT