ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 28 ಫೆಬ್ರುವರಿ 2024, 23:30 IST
Last Updated 28 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ನಿಖರ ಮಾಹಿತಿಗೆ ಧಕ್ಕೆ ಬಾರದಿರಲಿ

ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರವಾಗುವ ವಾರ್ತೆಗಳು  ಅಧಿಕೃತವಾಗಿದ್ದು, ಸದಾ ಸ್ಪಷ್ಟ, ನಿಖರ ಮಾಹಿತಿ ನೀಡುತ್ತವೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಆದರೆ ಬುಧವಾರದ (ಫೆ. 28) ರಾಷ್ಟ್ರೀಯ ವಿಜ್ಞಾನ ದಿನದಂದು, ಬೆಳಗಿನ 7.05ಕ್ಕೆ ಪ್ರಸಾರವಾಗುವ ಪ್ರದೇಶ ಸಮಾಚಾರದಲ್ಲಿ, ಸರ್‌ ಸಿ.ವಿ.ರಾಮನ್‌ ಅವರ ಜನ್ಮದಿನದ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. ಅಂದು ರಾಮನ್ ಅವರು ತಮ್ಮ ಸಂಶೋಧನೆಯ ‘ರಾಮನ್ ಪರಿಣಾಮ’ವನ್ನು ಜಗತ್ತಿಗೆ ಪರಿಚಯಿಸಿದ ದಿನ. ಅದನ್ನು ಜನ್ಮದಿನ ಎಂದು ತಪ್ಪಾಗಿ ಹೇಳಿದ್ದರಿಂದ ಕೇಳುಗರಲ್ಲಿ ಗೊಂದಲ ಉಂಟಾಯಿತು.

ಇಂಥ ಆಭಾಸಗಳು ಮುಂದಿನ ಪೀಳಿಗೆಯ ದೃಷ್ಟಿಯಿಂದ ಆತಂಕಕಾರಿಯೂ ಹೌದು. ಇಂತಹ ಸಂಗತಿಗಳನ್ನು ಪ್ರಸಾರ ಮಾಡುವಾಗ ಸಂಬಂಧಪಟ್ಟವರು ಹೆಚ್ಚು ಜಾಗರೂಕರಾಗಿ ಇರಬೇಕಾದುದು ಅಗತ್ಯ. 

ನಂದಿನಿ ಪ್ರಸಾದ್, ಬೆಂಗಳೂರು

**

ರಾಜಕೀಯ ಜಾಣ್ಮೆ, ನಿಗೂಢ ಲೆಕ್ಕಾಚಾರ

ದೇಶದ ರಾಜಕಾರಣ ಇಂದು ಸೈದ್ಧಾಂತಿಕ ಬದ್ಧತೆಯ ಮೇಲಷ್ಟೇ ನಿಂತಿಲ್ಲ. ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳಿಗೆ ಬೇಕಿರುವುದು ಸಂಖ್ಯಾಬಲ. ಆ ಸಂಖ್ಯೆ ಗಿಟ್ಟಿಸಿಕೊಳ್ಳಲು ರಾಜಕಾರಣಿಗಳು ಮತ್ತು ಪಕ್ಷಗಳು ನಾನಾ ರೀತಿಯ ಕಸರತ್ತುಗಳನ್ನು, ಗಿಮಿಕ್‌ಗಳನ್ನು ಮಾಡುತ್ತವೆ. ಈ ಕಾರಣದಿಂದ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಅರಬ್ಬಿ ಸಮುದ್ರದ ಕರಾವಳಿ ತೀರದಲ್ಲಿ ಸ್ಕೂಬಾ ಡೈವಿಂಗ್‌ ಮಾಡಿ ನೀರಿನ ಒಳಗೆ ಹೋಗಿದ್ದನ್ನು ಲಘುವಾಗಿ ನೋಡಲಾಗದು. ನನ್ನ ಪ್ರಕಾರ ಅದೊಂದು ರಾಜಕೀಯ ಜಾಣ್ಮೆ. ಎಲ್ಲರ ಗಮನ ಸೆಳೆಯುವ ತಂತ್ರ.

ಅಧಿಕಾರ ಹಿಡಿಯುವುದೇ ಮುಖ್ಯವಾದಾಗ ನಾಯಕನಾದವನಿಗೆ ಕೆಲವು ನಿಗೂಢ ಲೆಕ್ಕಾಚಾರಗಳು ಇರುತ್ತವೆ. ಅವು ಹೇಳುವಂತಹವಲ್ಲ. ಮಾಡುವಂತಹವು. ಇಲ್ಲಿ ಕೆಲವರು ಮೋದಿ ಅವರನ್ನು ಟೀಕಿಸುತ್ತಾರೆ. ಆದರೆ ಸಾಂವಿಧಾನಿಕ ಹುದ್ದೆಯಾದ ಪ್ರಧಾನಿ ಸ್ಥಾನದಲ್ಲಿ ಇರುವವರ ವಿರುದ್ಧದ ಟೀಕೆಯನ್ನು ಜನರು ಉದ್ಧಟತನವೆಂದೇ ಭಾವಿಸುವ ಸಾಧ್ಯತೆ ಇರುತ್ತದೆ. ಆ ಕಾರಣಕ್ಕೆ, ಲೇವಡಿ ಮಾಡಿದಷ್ಟೂ ವ್ಯಕ್ತಿಬಲ, ಪಕ್ಷಬಲ ಹೆಚ್ಚಿ, ಸಂಖ್ಯಾಬಲ ವೃದ್ಧಿಸುತ್ತಾ ಹೋಗುತ್ತದೆ. ಟೀಕೆಗಳು ನೇಪಥ್ಯಕ್ಕೆ ಸರಿಯುತ್ತವೆ.

ಆರ್.ವೆಂಕಟರಾಜು, ಬೆಂಗಳೂರು

**

ಆತ್ಮಸಾಕ್ಷಿಯೇ ಇಲ್ಲದವರಿಂದ ನಲುಗಿದ ‘ಆತ್ಮಸಾಕ್ಷಿ’!

ಪ್ರಸಕ್ತ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ‘ಆತ್ಮಸಾಕ್ಷಿ’ ಹೆಸರಿನಲ್ಲಿ ಕಾಂಗ್ರೆಸ್‌ ಪರವಾಗಿ ಮತ ಚಲಾಯಿಸಿರುವ ಸುದ್ದಿ (ಪ್ರ.ವಾ., ಫೆ. 28) ಓದಿ, ಆತ್ಮಸಾಕ್ಷಿ ಎಂಬ ಪದ ಬಳಕೆ ಚುನಾವಣೆ ರಾಜಕೀಯದ ಚದುರಂಗದಾಟದಲ್ಲಿ ಎಷ್ಟೊಂದು ಅರ್ಥಹೀನವಾಗಿದೆ ಎನ್ನಿಸಿತು. ಅಧಿಕಾರದ ಆಸೆಗಾಗಿ, ತಾವಿದ್ದ ಕಾಂಗ್ರೆಸ್‌ ಪಕ್ಷದ ನೇತೃತ್ವದ ಸರ್ಕಾರವನ್ನೇ ಪತನಗೊಳಿಸಿ, ಓಡೋಡಿ ಹೋಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದವರು ಈಗಿನ ಬಿಜೆಪಿ ಶಾಸಕರಾದ ಶಿವರಾಂ ಹೆಬ್ಬಾರ್ ಮತ್ತು ಸೋಮಶೇಖರ್‌. ಈಗ ಮತ್ತೊಮ್ಮೆ ತಾವಿರುವ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಇಬ್ಬರ ಪೈಕಿ ಒಬ್ಬರು ಅಡ್ಡಮತದಾನ ಮಾಡಿದರೆ, ಮತ್ತೊಬ್ಬರು ಮತಗಟ್ಟೆಯತ್ತ ಸುಳಿಯದೆ ತಮಗೆ ‘ಆತ್ಮಸಾಕ್ಷಿ’ ಇಲ್ಲ ಎಂಬುದನ್ನು ಸಾರಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಆ ಪಕ್ಷದ ಶಾಸಕರಾಗಿದ್ದ ಜಿ.ಜನಾರ್ದನ ರೆಡ್ಡಿ, ಕಾಂಗ್ರೆಸ್ ಮುಖಂಡರ ವಿರುದ್ಧ ವಿಧಾನಸಭೆಯಲ್ಲಿ ತೋಳೇರಿಸಿ, ‘ದಂ ಇದ್ರೆ ಬಳ್ಳಾರಿಗೆ ಬನ್ನಿ’ ಎಂದು ಹ್ಞೂಂಕರಿಸಿದ್ದರು. ಆದರೆ ಈಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಏಕೈಕ ಸದಸ್ಯರಾಗಿರುವ ಅದೇ ರೆಡ್ಡಿ ಅವರು ಇಷ್ಟು ಬೇಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿರುವುದು ಬಹುಶಃ ‘ಆತ್ಮಸಾಕ್ಷಿ’ ಪರವಾಗಿ ಇರಲು ಸಾಧ್ಯವಿಲ್ಲ. ಇದು ಸ್ವರಕ್ಷಣೆಯ ತಂತ್ರವಾಗಿರಲೇಬೇಕು.

ರೆಡ್ಡಿಯವರ ವಿರುದ್ಧ ವಿಧಾನಸಭೆಯಲ್ಲಿ ತೊಡೆತಟ್ಟಿದ್ದ ಸಿದ್ದರಾಮಯ್ಯ ಅವರು ಆತ್ಮಸಾಕ್ಷಿಯ ಅನುಸಾರ ನಡೆದುಕೊಂಡಿದ್ದೇ ಆಗಿದ್ದರೆ, ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಪರ ಮತದಾನ ಮಾಡುವುದನ್ನು ‘ಆತ್ಮಸಾಕ್ಷಿ’ಯ ಹೆಸರಿನಲ್ಲಿ ನಿರಾಕರಿಸಬೇಕಿತ್ತು. ಅಂದು ಬೆಂಗಳೂರು-ಬಳ್ಳಾರಿ ಜಾಥಾದ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ ಇಷ್ಟು ಬೇಗ ರೆಡ್ಡಿಯವರನ್ನು ಮತಗಟ್ಟೆಯಲ್ಲಿ ಒಪ್ಪಿಕೊಂಡಿರುವುದರಿಂದ ‘ರಾಜಕಾರಣದಲ್ಲಿ ಶಾಶ್ವತ ಶತ್ರುಗಳಾಗಲೀ ಮಿತ್ರರಾಗಲೀ ಇರಲು ಸಾಧ್ಯವಿಲ್ಲ’ ಎಂಬ ಸವಕಲು ನಾಣ್ಯವನ್ನು ಮತ್ತೆ ಚಲಾವಣೆಗೆ ತಂದಂತಾಗಿದೆ. ರಾಜಕಾರಣಿಗಳ ಮಾತುಗಳು ಸದಾ ಮತಪತ್ರ ರಾಜಕೀಯದ ಪರ ಎಂಬುದನ್ನು ಮತದಾರರು ಯಾವತ್ತೂ ಮರೆಯಬಾರದು. ಅಂತೂ ಇಂತೂ, ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ, ಆತ್ಮಸಾಕ್ಷಿಯೇ ಇಲ್ಲದವರಿಂದಾಗಿ ‘ಆತ್ಮಸಾಕ್ಷಿ’ ಎಂಬ ಪದ ‘ನಲುಗುವಂತೆ’ ಆಗಿದೆ.

ಎಂ.ಜಿ.ರಂಗಸ್ವಾಮಿ, ಹಿರಿಯೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT