ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಜಾತಿ ಆಧಾರಿತ ವಿಮರ್ಶೆಗೆ ಕಡಿವಾಣವಿರಲಿ

ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವವರನ್ನು ಕೆಲವರು ಅವರ ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸಿ ಟೀಕೆ, ಟಿಪ್ಪಣಿ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಅಭ್ಯರ್ಥಿಯ ಸಾಮರ್ಥ್ಯ ಮತ್ತು ಮಿತಿಗಳು ವಸ್ತುನಿಷ್ಠವಾಗಿ ನಿಕಷಕ್ಕೆ ಒಳಗಾಗಲಿ. ಅದುಬಿಟ್ಟು ಅವರ ಜಾತಿಯನ್ನು ಹಿಡಿದು ಮಾತನಾಡುವುದು ತಪ್ಪು. ಎಲ್ಲ ಜಾತಿಯವರಿಗೂ ಅವರವರ ಜಾತಿ ದೊಡ್ಡದು. ‘ನಮ್ಮ ಧರ್ಮದಲ್ಲಿ ಇರೋಣ, ಬೇರೆಬೇರೆ ಧರ್ಮದವರನ್ನು ಪ್ರೀತಿಸೋಣ’ ಎಂದ ಮಹಾತ್ಮ ಗಾಂಧಿಯವರ ಮಾತಿನಂತೆ ನಮ್ಮ ವಿಮರ್ಶೆಗಳು ಇರುವುದು ಒಳಿತು. ಇದನ್ನು ಎಲ್ಲ ವರ್ಗದವರೂ ತಿಳಿದುಕೊಳ್ಳುವುದು ಅಗತ್ಯ.

-ಚಿದಂಬರ ಪಿ. ನಿಂಬರಗಿ, ಧಾರವಾಡ

**

ಬೋರ್ಡ್‌ ಪರೀಕ್ಷೆ: ಪ್ರಹಸನ ಸಲ್ಲ

ರಾಜ್ಯ ಪಠ್ಯಕ್ರಮದ 5, 8, 9ನೇ ತರಗತಿಗಳ ಬೋರ್ಡ್‌ ಪರೀಕ್ಷೆಯ ಪ್ರಹಸನ ಇನ್ನೂ ಮುಂದುವರಿದಿದೆ. ಫಲಿತಾಂಶವನ್ನು ತಡೆಹಿಡಿಯುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಇದರಿಂದಾಗಿ, ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತಾಗಿದೆ. ರಾಜ್ಯ ಸರ್ಕಾರ ಮತ್ತು ಖಾಸಗಿ ಶಾಲೆಗಳ ಸಂಘಟನೆಗಳ ಜಗಳದ ನಡುವೆ ಇಲ್ಲಿ ಬಡವಾಗಿದ್ದು ವಿದ್ಯಾರ್ಥಿಗಳು ಮತ್ತು ಪಾಲಕರು. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು‌ ಹಾಗೂ ಸೂಕ್ತ ವಾರ್ಷಿಕ ಕ್ರಿಯಾಯೋಜನೆಯೊಂದಿಗೆ ಮುಂಬರುವ ಶೈಕ್ಷಣಿಕ ವರ್ಷವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು.

-ಸುರೇಂದ್ರ ಪೈ, ಭಟ್ಕಳ

**

ವೆಬ್‌ ಕಾಸ್ಟಿಂಗ್‌: ಶಿಕ್ಷಣದ ಮೌಲ್ಯ ಉಳಿಸುವ ಕ್ರಮ

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಶಿಕ್ಷಣ ಇಲಾಖೆಯು ವೆಬ್ ಕಾಸ್ಟಿಂಗ್ ಮೂಲಕ ನಡೆಸಿರುವುದು ದೇಶದ ಶಿಕ್ಷಣ ಕ್ಷೇತ್ರದಲ್ಲಿಯೇ ಹೊಸ ಮೈಲಿಗಲ್ಲು ಎನ್ನಬಹುದು. ಎಸ್ಎಸ್ಎಲ್‌ಸಿ ಪರೀಕ್ಷೆ ಬರೀ ನಾಮಕಾವಸ್ತೆಗೆ ಬೋರ್ಡ್ ಪರೀಕ್ಷೆಯಾಗಿದ್ದುದು ವಿಷಾದದ ಸಂಗತಿಯಾಗಿತ್ತು. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಪ್ರಯತ್ನ ಮಾಡಿದೆ. ಆದರೆ ವಾಸ್ತವದಲ್ಲಿ ನಿಜವಾಗಿಯೂ ಗುಣಾತ್ಮಕ ಶಿಕ್ಷಣ ಸಿಗುತ್ತಿಲ್ಲ ಎನ್ನುವುದು ಶಿಕ್ಷಣ ಇಲಾಖೆಗೆ ಈಗ ಮನವರಿಕೆಯಾದಂತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಹಂಬಲದಿಂದ ಮಕ್ಕಳಿಗೆ ನಕಲು ಮಾಡಲು ಅವಕಾಶ ಕಲ್ಪಿಸಲಾಗುತ್ತಿತ್ತು ಎಂಬ ಆರೋಪವಿದೆ. ಇಂತಹ ಆರೋಪವನ್ನು ನಿವಾರಿಸುವ ದಿಸೆಯಲ್ಲಿ ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸುವ ವೆಬ್ ಕಾಸ್ಟಿಂಗ್ ಎಂಬ ಕಟ್ಟುನಿಟ್ಟಾದ ಕ್ರಮವನ್ನು ಇಲಾಖೆ ಕೈಗೊಂಡಿದ್ದು ಅಭಿನಂದನೀಯ.

ಮೊಬೈಲ್ ಫೋನ್‌ ಮತ್ತು ಅಂತರ್ಜಾಲದ ಗೀಳಿನಿಂದಾಗಿ ಈಗಿನ ಮಕ್ಕಳಲ್ಲಿ ಪುಸ್ತಕವನ್ನು ತೆಗೆದು ಓದುವ ಹವ್ಯಾಸ ಮರೆಯಾಗಿದೆ. ಶಿಕ್ಷಕರ ಪಾಠವನ್ನು ಕೇಳುವುದು ಹಾಗೂ ಸಲಹೆಗಳನ್ನು ಸ್ವೀಕರಿಸುವುದರಲ್ಲಿ ಉದಾಸೀನ ತೋರುತ್ತಾರೆ. ಇನ್ನು ಕೆಲವು ಮಕ್ಕಳು ಶಿಕ್ಷಕರನ್ನೇ ಬೆದರಿಸುವ ಪ್ರಕರಣಗಳು ಜಗಜ್ಜಾಹೀರಾಗಿವೆ. ಎಸ್ಎಸ್ಎಲ್‌ಸಿ ಎಂಬ ಪರೀಕ್ಷೆಯು ಪಿಯುಸಿಗೆ ಸೇರಿಸುವ ಅಥವಾ ಸುರಿಯುವ ರೀತಿಯಲ್ಲಿ ಆಗಬಾರದು. ಯಾರು ನಿಷ್ಠೆಯಿಂದ ಅಭ್ಯಾಸ ಮಾಡಿರುತ್ತಾರೋ ಅವರಿಗಷ್ಟೇ ಉತ್ತಮ ಫಲಿತಾಂಶ ಲಭ್ಯವಾಗಬೇಕು. ವೆಬ್‌ ಕಾಸ್ಟಿಂಗ್‌ ವ್ಯವಸ್ಥೆಯಿಂದಾಗಿ ಈ ಬಾರಿ ಉತ್ತೀರ್ಣರಾಗುವ ಮಕ್ಕಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವುದು ನಿಶ್ಚಿತ. ಆದರೂ ಪರವಾಗಿಲ್ಲ, ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವುದರಿಂದ ಶಿಕ್ಷಣ ಮತ್ತು ಶಿಕ್ಷಕರ ಮೌಲ್ಯವಾದರೂ ಉಳಿದೀತು. ಇಲಾಖೆಯು ಕನಿಷ್ಠ ಐದು ವರ್ಷ ವೆಬ್ ಕಾಸ್ಟಿಂಗ್ ಕ್ರಮವನ್ನು ಮುಂದುವರಿಸಿದರೂ ಮಕ್ಕಳು ಮತ್ತು ಶಿಕ್ಷಕರು ಸ್ವಚ್ಛವಾಗುವುದರಲ್ಲಿ ಎರಡು ಮಾತಿಲ್ಲ.

-ಕೆ.ಮಂಜುನಾಥ, ಹರಪನಹಳ್ಳಿ 

**

‘ವರ್ಷದ ತೊಡಕು’ ಸೂಕ್ತ ಬಳಕೆ

‘ಹೊಸ ತೊಡಕು’ ಪದ ಬಳಕೆಯೇ ತೊಡಕು ಎಂದು ತಾ.ಸಿ.ತಿಮ್ಮಯ್ಯ ಹೇಳಿದ್ದಾರೆ (ವಾ.ವಾ., ಏ. 8). ವಾಸ್ತವದಲ್ಲಿ ಇದರ ಸರಿಯಾದ ಅರ್ಥ ‘ವರ್ಷದ ತೊಡಕು’. ಹಳೆ ಮೈಸೂರು ಪ್ರಾಂತ್ಯದಲ್ಲಿ ಇದರ ಆಚರಣೆ ಯುಗಾದಿಯಷ್ಟೇ ಮಹತ್ವ ಪಡೆದಿದೆ. ರೈತ ಸಮುದಾಯವು ಒಕ್ಕಲುತನದ ವಿಶ್ರಾಂತಿಯಿಂದ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮತ್ತು ಆರಂಬಕ್ಕೆ ತೊಡಗುವ ಹಾಗೂ ಪ್ರಕೃತಿ ಪುಟಿದೇಳುವ ಸಮಯವಿದು. ಇದರ ಸಂಭ್ರಮವನ್ನು ಯುಗಾದಿಯ ಮರುದಿನ ಮಾಂಸದ ಆಹಾರ ತಯಾರಿಸಿ ಉಣ್ಣುವುದರೊಂದಿಗೆ ಆಚರಿಸಲಾಗುತ್ತದೆ. ಯುಗಾದಿಯ ಮರುದಿನ ಹಳ್ಳಿಗಳಲ್ಲಿ ಬೇರೆಯವರ ಮನೆಯ ಮೇಲೆ ಕಲ್ಲು ಎಸೆದು ಬೈಗುಳ ಪಡೆಯುವ ಒಂದು ಪ್ರತೀತಿಯೂ ಇದೆ. ಅಂದರೆ ವರ್ಷದ ಎಲ್ಲಾ ತೊಡಕುಗಳನ್ನು ಅಂದೇ ನಿವಾರಿಸಿಕೊಳ್ಳುವುದು. ಇದರ ಹಿನ್ನೆಲೆಯನ್ನು ಜನಪದ ವಿದ್ವಾಂಸ ಎಚ್.ಎಲ್.ನಾಗೇಗೌಡರ ‘ದೊಡ್ಡಮನೆ’ ಕಾದಂಬರಿಯಲ್ಲಿ ಕಾಣಬಹುದು. ಅದರಲ್ಲಿ ಅವರು ವರ್ಷದ ತೊಡಕಿನ ಬಗ್ಗೆ ವಿವರಿಸಿದ್ದಾರೆ. ಆದ್ದರಿಂದ, ವರ್ಷ ತೊಡಕು ಎಂಬುದು ಹೆಚ್ಚು ಸೂಕ್ತ ಮತ್ತು ಸಂದರ್ಭೋಚಿತ.

-ಸಿ.ಆರ್.ಗೋಪಾಲಸ್ವಾಮಿ, ಬೆಂಗಳೂರು

**

ಹೆಸರಿನಿಂದ ದಿಕ್ಕು ತಪ್ಪಿಸುವ ವ್ಯರ್ಥ ಪ್ರಯತ್ನ

ಚುನಾವಣೆ ಸಂದರ್ಭದಲ್ಲಿ ಮತದಾರರಲ್ಲಿ ಗೊಂದಲ ಉಂಟುಮಾಡಲು ಅಥವಾ ಮತದಾರರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಒಂದೇ ಹೆಸರಿನ ಹಲವು ಅಭ್ಯರ್ಥಿಗಳನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸುವಂತೆ ಮಾಡುವುದು, ಈ ಮೂಲಕ ಅದೇ ಹೆಸರಿನ ಎದುರಾಳಿ ಅಭ್ಯರ್ಥಿಗೆ ತೊಂದರೆ ಕೊಡಲು ಪ್ರಯತ್ನಿಸುವುದು ರಾಜಕೀಯ ಪಕ್ಷಗಳ ಉದ್ದೇಶವಾಗಿರುತ್ತದೆ. ಆದರೆ ಇಂದಿನ ಕಾಲಘಟ್ಟದಲ್ಲಿ ಮತದಾರರು ಬಹಳಷ್ಟು ಪ್ರಜ್ಞಾವಂತರಾಗಿದ್ದಾರೆ. ಯಾರಿಗೆ ಮತ್ತು ಯಾವ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕೆಂದು ಮೊದಲೇ ನಿರ್ಧರಿಸಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆಯಾ ಪಕ್ಷದ ಕಾರ್ಯಕರ್ತರು ಪಕ್ಷದ ಚಿಹ್ನೆ, ಅಭ್ಯರ್ಥಿಯ ಹೆಸರು ಮತ್ತು ಕ್ರಮಸಂಖ್ಯೆಯನ್ನು ಮತದಾರರಿಗೆ ಮನದಟ್ಟು ಮಾಡಿಕೊಟ್ಟಿರುತ್ತಾರೆ. ಇದರಿಂದ, ಮತಗಟ್ಟೆಗೆ ಹೋಗಿ ಮತದಾನ ಮಾಡುವ ಹಳ್ಳಿಯ ನಿರಕ್ಷರರನ್ನು ಸಹ ಬರೀ ಅಭ್ಯರ್ಥಿಯ ಹೆಸರಿನಿಂದ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಇದು ರಾಜಕೀಯ ಪಕ್ಷಗಳ ವ್ಯರ್ಥ ಪ್ರಯತ್ನವೆಂದೇ ಹೇಳಬಹುದು.‌

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್‌ ಇದಕ್ಕೊಂದು ಉದಾಹರಣೆ. ಅವರನ್ನು ಸೋಲಿಸಲು ಸುಮಲತಾ ಎಂಬ ಹೆಸರಿನ ನಾಲ್ವರು ಅಭ್ಯರ್ಥಿಗಳನ್ನು ಪಕ್ಷೇತರರನ್ನಾಗಿ ನಿಲ್ಲಿಸಲಾಗಿತ್ತಾದರೂ ಸುಮಲತಾ ಅಂಬರೀಷ್‌ ಅವರೇ ಜಯ ಗಳಿಸಿದ್ದನ್ನು ಮರೆಯಬಾರದು.

-ಬೂಕನಕೆರೆ ವಿಜೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT