ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರಾಜ್ಯಪಾಲರ ಮಾದರಿ ನಡೆ

Published 13 ಫೆಬ್ರುವರಿ 2024, 23:59 IST
Last Updated 13 ಫೆಬ್ರುವರಿ 2024, 23:59 IST
ಅಕ್ಷರ ಗಾತ್ರ

ರಾಜ್ಯಪಾಲರ ಮಾದರಿ ನಡೆ

ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳ ರಾಜ್ಯಪಾಲರು ದಿನಾಲೂ ಎಂಬಂತೆ ಆಯಾ ರಾಜ್ಯ ಸರ್ಕಾರ ಗಳೊಂದಿಗೆ ಸಂಘರ್ಷದಲ್ಲಿ ಇರುತ್ತಾರೆ. ಕೆಲವು ರಾಜ್ಯಗಳು ಇಂತಹ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದೂ ಇದೆ. ಅಂತಹ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್, ತಮ್ಮ ಸಾಂವಿಧಾನಿಕ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುವಂತೆ ಹಿತವಚನವನ್ನೂ ನೀಡಿದೆ. ರಾಜ್ಯಪಾಲರ ಹುದ್ದೆಯು ರಾಜ್ಯ ಸರ್ಕಾರಗಳಿಗೆ ಕಿರುಕುಳ ನೀಡುವ ಸಲುವಾಗಿಯೇ ಇದೆಯೇನೋ ಅನ್ನುವಷ್ಟರ ಮಟ್ಟಿಗೆ ಕೆಲ ರಾಜ್ಯಪಾಲರ ಕಾರ್ಯವೈಖರಿ ಇರುತ್ತದೆ. ಇದಕ್ಕೆ ಕೇಂದ್ರದ ಸಮ್ಮತಿಯೂ ಇರಬಹುದು.

ಕೆಲವು ರಾಜ್ಯಪಾಲರು ವಿಧಾನಮಂಡಲವನ್ನು ಉದ್ದೇಶಿಸಿ ಮಾತನಾಡುವಾಗ, ಸರ್ಕಾರದ ಭಾಷಣವನ್ನು ಕಾಟಾಚಾರಕ್ಕೆ ಎಂಬಂತೆ ಓದುವುದು, ಕೇಂದ್ರ ಸರ್ಕಾರವನ್ನು ಟೀಕಿಸುವ ಭಾಗಗಳನ್ನು ಓದದೇ ಕೈಬಿಡುವುದು ಆಗಾಗ್ಗೆ ವರದಿಯಾಗುತ್ತವೆ. ರಾಜ್ಯ ಸರ್ಕಾರ ಸಿದ್ಧಪಡಿಸುವ ರಾಜ್ಯಪಾಲರ ಭಾಷಣವು ಸರ್ಕಾರದ ಧ್ಯೇಯ, ಧೋರಣೆಗಳನ್ನು ಬಿಂಬಿಸುತ್ತದೆ. ಅಪವಾದವೆಂಬಂತೆ, ಕರ್ನಾಟಕದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಕೇಂದ್ರ ಸರ್ಕಾರವನ್ನು ಟೀಕಿಸುವ ಭಾಗವನ್ನೂ ಒಳಗೊಂಡು ಸೋಮವಾರ ಪೂರ್ಣ ಬಜೆಟ್ ಭಾಷಣವನ್ನು ಓದಿರುವುದು ಇತರ ರಾಜ್ಯಪಾಲರಿಗೆ ಮಾದರಿಯಾಗಿದೆ. ರಾಜ್ಯ ಸರ್ಕಾರದೊಂದಿಗೆ ಸೌಹಾರ್ದದಿಂದ ಇರುವ ಗೆಹಲೋತ್‌, ರಾಜ್ಯಪಾಲರ ಹುದ್ದೆಯ ಘನತೆ, ಗೌರವವನ್ನು ಅರಿತವರಾಗಿದ್ದಾರೆ. ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ತೆರಿಗೆ ಪಾಲು, ಬರ ಪರಿಹಾರದ ಬಾಕಿ ಹಾಗೂ ಕೇಂದ್ರ ತೋರುತ್ತಿರುವ ತಾರತಮ್ಯ ಧೋರಣೆಯ ಬಗ್ಗೆ ಅವರಿಗೆ ಮನವರಿಕೆ ಆಗಿರಲಿಕ್ಕೂ ಸಾಕು. ಭಾಷಣವನ್ನು ಯಥಾವತ್ತಾಗಿ ಓದುವ ಮೂಲಕ ರಾಜ್ಯದ ಪರವಾಗಿ ನಿಂತ ಅವರಿಗೆ ಕರ್ನಾಟಕದ ಜನತೆ ಆಭಾರಿಯಾಗಿ ಇರಬೇಕು.

⇒ವೆಂಕಟೇಶ ಮಾಚಕನೂರ, ಧಾರವಾಡ

ತುಟಿ ಬಿಚ್ಚದೆ ಸಾಧಿಸಿದ್ದಾದರೂ ಏನು?

17ನೇ ಲೋಕಸಭೆಯು 1,354 ಗಂಟೆಗಳ ಕಾಲ ಕಲಾಪ ನಡೆಸಿದ್ದು, ಈ ಅವಧಿಯಲ್ಲಿ ಒಂಬತ್ತು ಸಂಸದರು ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಚರ್ಚೆಯಲ್ಲೂ ಭಾಗವಹಿಸದ ಈ ಸಂಸದರಲ್ಲಿ ನಾಲ್ವರು ನಮ್ಮ ಕರುನಾಡಿನವರು ಎಂದು ತಿಳಿದು ಮಹದಾನಂದವಾಯಿತು! ನೀತಿ–ನಿಲುವು ಹಾಗೂ ಮಸೂದೆಗಳ ಬಗ್ಗೆ, ತಮ್ಮ ಸಂಸದೀಯ ಕ್ಷೇತ್ರದ ಆಗುಹೋಗುಗಳ ಬಗ್ಗೆ ಮಾತನಾಡದೆ ಗಾಢ ಮೌನಕ್ಕೆ ಶರಣಾಗಿರುವ ಈ ಸಂಸದರು, ‘ಮಾತು ಬೆಳ್ಳಿ ಮೌನ ಬಂಗಾರ’ ಎಂಬ ನುಡಿಗಟ್ಟಿನ ಕಟ್ಟಾ
ಅಭಿಮಾನಿಗಳಾಗಿರಬಹುದೇ ಎಂಬ ಸಂಶಯ ಕಾಡುತ್ತಿದೆ. ಅಥವಾ ‘ಮೂಕನಾಗಬೇಕು/ ಜಗದಲಿ
ಜ್ವಾಕ್ಯಾಗಿರಬೇಕು’ ಎಂದು ಸಾರಿದ ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ನುಡಿಯನ್ನು ದಿಟ ಮಾಡಲು ಹೊರಟಿರುವರೇ ಎಂಬ ಜಿಜ್ಞಾಸೆ ಕಾಡುತ್ತಿದೆ. ನನ್ನದೊಂದು ಕೆಟ್ಟ ಕುತೂಹಲ. ತುಟಿ ಬಿಚ್ಚದೆ, ಮೌನಿಗಳಾಗಿದ್ದು ಈ ಸಂಸದರು ಏನನ್ನು ಸಾಧಿಸಿದರು? ಮತ ನೀಡಿ ಅವರನ್ನು ಗೆಲ್ಲಿಸಿದ ಮತದಾರರ ಮನಃಸ್ಥಿತಿಯು ಈ ವಿಷಯ ತಿಳಿದ ಬಳಿಕ ಹೇಗಾಗಿರಬಹುದು? ಇವರು ಪ್ರತಿನಿಧಿಸುವ ಸಂಸದೀಯ ಕ್ಷೇತ್ರಗಳು ಸಂಸತ್ತಿನಲ್ಲಿ ತುಟಿ ಬಿಚ್ಚುವ ಅವಶ್ಯಕತೆ ಇಲ್ಲದಷ್ಟು ಅಭಿವೃದ್ಧಿಯಾಗಿವೆ ಎಂದು ಪರಿಭಾವಿಸಿ ನಮಗೆ ನಾವೇ ಸಾಂತ್ವನ ಹೇಳಿಕೊಳ್ಳೋಣವೇ?

⇒ವೆಂಕಟೇಶ್ ಮುದಗಲ್, ಕಲಬುರಗಿ

ಖಾಲಿ ಗೋಡೆ ಕಬಳಿಸಲು ಪೈಪೋಟಿ!

ಮುಂಬರುವ ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ಬಿಜೆಪಿಯು ರಾಷ್ಟ್ರದಾದ್ಯಂತ ಅನಾವರಣ
ಗೊಳಿಸಲು ಮುಂದಾಗಿರುವ ‘ಮತ್ತೊಮ್ಮೆ ಮೋದಿ ಸರ್ಕಾರ’ ಎನ್ನುವ ಗೋಡೆ ಬರಹದ ಅಭಿಯಾನಕ್ಕೆ ಚುನಾವಣಾ ನೀತಿ ಸಂಹಿತೆಯ ಅಡಿ ಚುನಾವಣಾ ಆಯೋಗವು ಅನುಮತಿ ನೀಡಬಹುದೇ ಎನ್ನುವುದು ತಿಳಿಯದು. ಆದರೆ ಒಂದು ಪ್ರಮುಖ ಪಕ್ಷವು ಇಂತಹ ಅಭಿಯಾನವನ್ನು ಕೈಗೊಂಡರೆ ಅದನ್ನು ಸಮೂಹ ಸನ್ನಿಯಂತೆ ಎಲ್ಲ ಪಕ್ಷಗಳೂ ಅನುಸರಿಸುವುದರಲ್ಲಿ ಸಂದೇಹವಿಲ್ಲ.

ಮತದಾರರನ್ನು ತಲುಪುವಲ್ಲಿ ಇದು ಒಂದು ಪರಿಣಾಮಕಾರಿ ಪ್ರಚಾರ ಮಾರ್ಗವಾಗಿರುವುದರಿಂದ, ಖಾಲಿ ಗೋಡೆಗಳನ್ನು ದೊಡ್ಡ ಪ್ರಮಾಣದಲ್ಲಿ ಕಬಳಿಸುವ ದಿಸೆಯಲ್ಲಿ ಹುಚ್ಚು ಸ್ಪರ್ಧೆ ಏರ್ಪಡುವ ಮತ್ತು ಈ ವಿಷಯದಲ್ಲಿ ಘರ್ಷಣೆಗಳು ಸಂಭವಿಸುವುದನ್ನು ಅಲ್ಲಗಳೆಯಲಾಗದು. ಹಾಗೆಯೇ ಪಟ್ಟಣ ಮತ್ತು ನಗರಗಳ ಸೌಂದರ್ಯವನ್ನು ಕೆಡಿಸುವ ಈ ಗೋಡೆ ಬರಹಗಳನ್ನು ಚುನಾವಣೆಯ ನಂತರ ಸ್ವಚ್ಛಗೊಳಿಸುವವರು ಯಾರು ಎನ್ನುವ ಜನರ ಪ್ರಶ್ನೆಗೆ ರಾಜಕೀಯ ನಾಯಕರು ಉತ್ತರ ಕೊಡಬೇಕಾಗಿದೆ. ಆಯೋಗವು ಅಕಸ್ಮಾತ್‌ ಈ ಗೋಡೆ ಬರಹಗಳಿಗೆ ಅನುಮತಿ ನೀಡಿದರೆ, ಅದನ್ನು ಅಳಿಸುವ ಜವಾಬ್ದಾರಿಯ ಬಗೆಗೂ ಚಿಂತಿಸಬೇಕು.

⇒ರಮಾನಂದ ಶರ್ಮಾ, ಬೆಂಗಳೂರು

ಬೆಳ್ಳುಳ್ಳಿಯೋ ಬೆಳ್ಳಿಯೋ?!

ಬೆಳ್ಳುಳ್ಳಿಯ ಬೆಲೆ ಗಗನಕ್ಕೇರಿದ್ದು, ಪ್ರತಿ ಕೆ.ಜಿಗೆ ₹ 400ಕ್ಕೂ ಹೆಚ್ಚಾಗಿರುವುದು ಜನಸಾಮಾನ್ಯರಿಗೆ ಹೊರೆಯಾಗಿದೆ. ಈ ಕಾರಣದಿಂದ, ‘ಬೆಳ್ಳುಳ್ಳಿ ಬಳಸಿ ತಯಾರಿಸುವ ಪದಾರ್ಥಗಳನ್ನು ತಾತ್ಕಾಲಿಕವಾಗಿ ಕೈಬಿಟ್ಟು, ಬೆಳ್ಳುಳ್ಳಿ ರಹಿತ ಆಹಾರ ಪದಾರ್ಥಗಳನ್ನು ಶೇ 10ರಷ್ಟು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡಲು ಚಿಂತನೆ ನಡೆಸಿದ್ದೇವೆ’ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು ತಿಳಿಸಿರುವುದಾಗಿ ವರದಿಯಾಗಿದೆ. ‘ಭೂಲೋಕದ ಅಮೃತ’ ಎಂದು ಕರೆಯಲಾಗುವ ಬೆಳ್ಳುಳ್ಳಿ ಅತಿ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುವ ತರಕಾರಿಯಾಗಿದೆ. ಹಲವಾರು ಕಾಯಿಲೆಗಳಿಗೆ ಅದು
ಸಿದ್ಧೌಷಧವಾಗಿದೆ.

ದಿನನಿತ್ಯದ ಸಾರು, ಸಾಂಬಾರ್, ಪಲ್ಯ, ಚಟ್ನಿಯಂತಹವುಗಳ ತಯಾರಿಕೆಯಲ್ಲಿ ಬಳಸಲಾಗುವ ಬೆಳ್ಳುಳ್ಳಿಯ ದರ ಇದೀಗ ಇಷ್ಟೊಂದು ಏರಿರುವುದು ಬೇಸರದ ಸಂಗತಿ. ಇದರ ಬೆಲೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತು ಗಮನ ಹರಿಸಬೇಕಾಗಿದೆ. ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT