ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ಸ್ವಚ್ಛ’ ರಾಜಕೀಯ ಅಭಿಯಾನ!

Published 27 ಮಾರ್ಚ್ 2024, 22:30 IST
Last Updated 27 ಮಾರ್ಚ್ 2024, 22:30 IST
ಅಕ್ಷರ ಗಾತ್ರ

‘ಸ್ವಚ್ಛ’ ರಾಜಕೀಯ ಅಭಿಯಾನ!

2014ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೆತ್ತಿಕೊಂಡ ಯೋಜನೆಯೆಂದರೆ ‘ಸ್ವಚ್ಛ ಭಾರತ ಅಭಿಯಾನ’. ಈ ಯೋಜನೆಯು ತುಂಬಾ ಹೊಸದಾಗಿತ್ತು ಮತ್ತು ಎಲ್ಲರ, ಮುಖ್ಯವಾಗಿ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಆ ಅಭಿಯಾನಕ್ಕೆ ಒಂದು ರಾಜಕೀಯ ಆಯಾಮವೂ ಇರುವುದನ್ನು ಪತ್ರಿಕೆಯ ವಿಶೇಷ ವರದಿಗಳು (ಪ್ರ.ವಾ., ಮಾರ್ಚ್ 26, 27) ತೋರಿಸಿಕೊಟ್ಟಿವೆ.

ಹಿಂದೂಗಳ ಪರಂಪರಾಗತ ನಂಬಿಕೆಯೆಂದರೆ, ಗಂಗಾ ನದಿಯಲ್ಲಿ ಒಮ್ಮೆ ಸ್ನಾನ ಮಾಡಿದರೂ ಸಾಕು, ಗಂಗಾ ಮಾತೆ ಅವರ ಎಲ್ಲ ಪಾಪಗಳನ್ನೂ ತೊಳೆಯುತ್ತಾಳೆ. ಆದರೆ, ಗಂಗಾ ನದಿಯಂತಹ ಒಂದು ರಾಜಕೀಯ ಪಕ್ಷವೂ ಇದೆ ಎಂಬುದು ಬಹುಜನರಿಗೆ ಗೊತ್ತಿರಲಿಲ್ಲ. ಅದೆಷ್ಟು ಮಹಾನ್ ನಾಯಕರು ಒಂದು ಪಕ್ಷವನ್ನು ಸೇರಿದ ಕೂಡಲೇ ಶುಚಿರ್ಭೂತರಾಗಿ ಸ್ವಚ್ಛವಾಗಿದ್ದಾರೆ ಎಂಬುದನ್ನು ಓದಿ ನಂಬಲಾರದೆ ನಂಬಿದೆ. ಇನ್ನು ಮುಂದೆ ನ್ಯಾಯಾಲಯ,
ಸೆರೆಮನೆಗಳಂತಹವು ಏನೂ ಬೇಕಿಲ್ಲ. ಪರಿಣಾಮತಃ, ನಮ್ಮ ರಾಷ್ಟ್ರದ ಅದೆಷ್ಟು ಹಣ ಉಳಿಯುತ್ತದೆ!

–ಸಿ.ಎನ್.ರಾಮಚಂದ್ರನ್, ಬೆಂಗಳೂರು

ದಟ್ಟವಾಗಿ ಆವರಿಸುವ ಪ್ರೀತಿಯ ಛಾಯೆ

ನಾನು ಧಾರವಾಡದಲ್ಲಿ ವಿದ್ಯಾರ್ಥಿ ದಿನಗಳಲ್ಲಿದ್ದಾಗ ನಾಡಿನ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಅವರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದೆ. ಪ್ರತಿ ಬಾರಿ ಅವರನ್ನು ಕಂಡಾಗಲೆಲ್ಲಾ ಜ್ಞಾನ ದೇಗುಲದ ದರ್ಶನ ಪಡೆದಂತಹ ಅನುಭವ ಆಗುತ್ತಿತ್ತು. ಅವರು ಆಡುತ್ತಿದ್ದ ಅಂತಃಕರಣಪೂರ್ವಕ ಮಾತುಗಳು ನನ್ನಂಥವನಿಗೆ ಚೇತೋಹಾರಿಯಾಗಿದ್ದವು. ಮನುಷ್ಯಪ್ರೀತಿಯನ್ನು ಅವರು ಜವಾಬ್ದಾರಿ, ಸೇವೆ, ಸಮರ್ಪಣೆ, ಕ್ಷಮೆ, ತ್ಯಾಗ ಎಂಬ ನುಡಿಗಳಿಗೆ ಅನ್ವಯಿಸಿ ಅರ್ಥೈಸು
ತ್ತಿದ್ದರು. ಪ್ರತಿಯೊಬ್ಬರೂ ಹೇಗೆ ತಮ್ಮ ನಿತ್ಯ ಜೀವನದಲ್ಲಿ ಪ್ರೀತಿಪೂರ್ವಕ ನಡವಳಿಕೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಮನಮುಟ್ಟುವಂತೆ ಹೇಳುತ್ತಿದ್ದರು.

ಜರ್ಮನಿಯ ಚಿಂತಕ ಎರಿಕ್‌ ಫ್ರಾಮ್‌ ಬರೆದ ‘ಆರ್ಟ್‌ ಆಫ್‌ ಲವಿಂಗ್‌’ ಕೃತಿಯನ್ನು ಪ್ರೊ. ರಾಘವೇಂದ್ರ ರಾವ್‌ ಕನ್ನಡಕ್ಕೆ ತರ್ಜುಮೆ ಮಾಡಿದ್ದು, ಅದಕ್ಕೆ ಗುರುಲಿಂಗ ಕಾಪಸೆಯವರು ಮುನ್ನುಡಿ ಬರೆದಿದ್ದಾರೆ. ಅದು ವೈದ್ವಾಂಸಿಕತೆ, ವಸ್ತುನಿಷ್ಠತೆ ಹಾಗೂ ನೈತಿಕತೆಯ ತ್ರಿವೇಣಿ ಸಂಗಮದಂತಿದೆ. ಈ ಪುಸ್ತಕವನ್ನು ಮತ್ತೆ ಮತ್ತೆ ಓದುವಾಗ ಸದಾ
ಭಿನ್ನ ಭಿನ್ನ ಅರ್ಥ ಹಾಗೂ ಭಾವಗಳನ್ನು ಸ್ಫುರಿಸುತ್ತದೆ. ಕಾಪಸೆಯವರು ನಮ್ಮಿಂದ ದೂರವಾಗಿರಬಹುದು. ಆದರೆ, ಅವರು ಚೆಲ್ಲಿರುವ ಪ್ರೀತಿಯ ಛಾಯೆ ಮಾತ್ರ ನಮ್ಮನ್ನು ಸದಾ ದಟ್ಟವಾಗಿ ಆವರಿಸುತ್ತಲೇ ಇರುತ್ತದೆ.

–ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌, ಬೆಂಗಳೂರು

ನಿರೀಕ್ಷೆಗೆ ನಿಲುಕದ ರಾಜಕೀಯ ಚಕ್ರವ್ಯೂಹ

ರಾಜ್ಯದ ಅತ್ಯಂತ ಪ್ರಭಾವಶಾಲಿ ರಾಜಕಾರಣಿಯಾಗಿ ಕೆಲವು ವರ್ಷಗಳ ಕಾಲ ಮೆರೆದು, ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಜೈಲುಪಾಲಾಗಿ ನಂತರ ಬಿಡುಗಡೆಯಾಗಿ, ತಮ್ಮದೇ ಆದ ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿ, ಶಾಸಕರಾಗಿ ಆಯ್ಕೆಯಾಗಿರುವ ಗಾಲಿ ಜನಾರ್ದನ ರೆಡ್ಡಿ ಹೊಸ ಖದರ್‌ನಿಂದ ಈಗ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು. ಜನಾರ್ದನ ರೆಡ್ಡಿ ಯಾರೆಂಬುದೇ ತಮಗೆ ಗೊತ್ತಿಲ್ಲ ಎಂದು ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು ಎಂಬ ಮಾತು ಕೇಳಿಬಂದಿತ್ತು. ಅದೇ ಈಗ ತಮ್ಮನ್ನು ಅಮಿತ್‌ ಶಾ ಅವರೇ ಸ್ವತಃ ಪಕ್ಷಕ್ಕೆ ಆಹ್ವಾನಿಸಿದ್ದರು ಎಂದು ರೆಡ್ಡಿ ಹೇಳಿದ್ದಾರೆ.

ಅದೇನೇ ಇರಲಿ, ರಾಜಕೀಯವೆಂಬ ಚಕ್ರವ್ಯೂಹದಲ್ಲಿ ಯಾರು ಯಾವಾಗ ಯಾರ ಪಾಳಯ ಸೇರುತ್ತಾರೋ ಆ ದೇವರಿಗೆ ಮಾತ್ರ ಗೊತ್ತು ಎನ್ನುವುದಕ್ಕೆ ರೆಡ್ಡಿ ಅವರ ಪ್ರಕರಣವೇ ನಿದರ್ಶನ.

–ಕೆ.ವಿ.ವಾಸು, ಮೈಸೂರು

ಸ್ಥಳೀಯ ಸಂಸ್ಥೆ: ಚುನಾವಣೆ ಯಾಕಿಲ್ಲ?

ರಾಜ್ಯದ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದು ಬಹಳಷ್ಟು ಸಮಯ ಕಳೆದಿದ್ದರೂ ಅವುಗಳಿಗೆ ಚುನಾವಣೆ ನಡೆಸಲು ಸರ್ಕಾರ ಹಿಂದೆಮುಂದೆ ನೋಡುತ್ತಿರುವುದು ಏಕೆ? ಸ್ಥಳೀಯ ಸರ್ಕಾರಗಳ ರಚನೆ ಮತ್ತು ಅದರ ಮಹತ್ವದ ಬಗ್ಗೆ ಸಂವಿಧಾನದಲ್ಲಿ ವಿವರವಾದ ಉಲ್ಲೇಖವಿದೆ. ಸ್ಥಳೀಯ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸುವ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಾದ ನಡೆಯಲ್ಲ. ಅವಧಿ ಪೂರೈಸುವ ಲೋಕಸಭೆ, ವಿಧಾನಸಭೆಗಳಿಗೆ
ಸಮಯಕ್ಕೆ ಸರಿಯಾಗಿ ಚುನಾವಣೆಗಳು ನಡೆಯುತ್ತವೆ. ಆದರೆ, ಸ್ಥಳೀಯ ಸಂಸ್ಥೆಗಳ ಕಥೆ ಬೇರೆಯೇ ಇದೆ. ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಪೈಕಿ ಯಾವುದರಲ್ಲೂ ಚುನಾಯಿತ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ.

ಸಂವಿಧಾನದ ಉದ್ದೇಶಗಳನ್ನು ಮನಗಂಡು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗವು ಆದಷ್ಟು ಬೇಗ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿ, ಸ್ಥಳೀಯ ಸರ್ಕಾರಗಳು ಅಸ್ತಿತ್ವಕ್ಕೆ ಬರುವ ಹಾಗೆ ಮಾಡಬೇಕು. ಈ ಮೂಲಕ ಪ್ರಜಾಪ್ರಭುತ್ವದ ಬೇರನ್ನು ಇನ್ನಷ್ಟು ಗಟ್ಟಿಗೊಳಿಸಬೇಕು.

–ಪ್ರಸಾದ್‌ ಜಿ.ಎಂ., ಮೈಸೂರು

ಪ್ರಜಾಪ್ರಭುತ್ವ ‘ಮಾಗುವುದು’ ಯಾವಾಗ?

ಲೋಕಸಭಾ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗೆ ಸಲ್ಲಿಸುತ್ತಿರುವ ಪ್ರಮಾಣಪತ್ರದಲ್ಲಿ ಘೋಷಿಸುತ್ತಿರುವ ಸ್ವತ್ತು, ಆದಾಯದ ವಿವರಗಳನ್ನು ಅವಲೋಕಿಸಿದಾಗ, ಅಪವಾದ ಪ್ರಕರಣಗಳನ್ನು ಹೊರತುಪಡಿಸಿ ಮಿಕ್ಕೆಲ್ಲರೂ ಕೋಟಿವೀರರೇ ಆಗಿರುವುದು ತಿಳಿಯುತ್ತದೆ.

‘ನಾನೇನು ಮಾಡಲಿ ಬಡವನಯ್ಯಾ’ ಎಂಬ ಮಾತಿಗೆ ಪೂರಕವಾಗುವಂತೆ ಅಭ್ಯರ್ಥಿಗಳು ಘೋಷಣಾ ಪತ್ರ ಸಲ್ಲಿಸಿ ಗೆದ್ದು ಬರುವ ಸಂದರ್ಭ ನಿರ್ಮಾಣವಾಗಬೇಕು, ಆಗ ನಮ್ಮ ಪ್ರಜಾಪ್ರಭುತ್ವ ‘ಮಾಗಿದೆ’ ಎನ್ನಬಹುದು ಎಂದು ಹಲವರು ಅಲವತ್ತುಕೊಳ್ಳುತ್ತಿದ್ದಾರೆ. ಅಲ್ಲಿಯವರೆಗೆ ರಾಜಕಾರಣ ಬರೀ ‘ಉಳ್ಳವರ’ ಸ್ವತ್ತು ಎನ್ನುವ ಹಿರಿತಲೆಗಳ ಗೊಣಗಾಟ ತಪ್ಪಿದ್ದಲ್ಲ.

–ವೆಂಕಟೇಶ್ ಮುದಗಲ್, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT