ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PTCL ಕಾಯ್ದೆ | ಉಳ್ಳವರಿಗೆ ಆಸ್ತಿ, ದಲಿತರಿಗೆ ನಾಸ್ತಿ; ಒಳನೋಟ ಪ್ರತಿಕ್ರಿಯೆಗಳು

Last Updated 21 ನವೆಂಬರ್ 2022, 10:51 IST
ಅಕ್ಷರ ಗಾತ್ರ

ಉಳ್ಳವರಿಗೆ ಆಸ್ತಿ: ದಲಿತರಿಗೆ ನಾಸ್ತಿ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ನವೆಂಬರ್ 20) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

***

‘ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿ’
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ(ಪಿಟಿಸಿಎಲ್) ಮೊದಲಿನಂತೆ ಬಲಿಷ್ಠವಾಗಬೇಕಾದರೆ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿಗೆ ಮುಂದಾಗಬೇಕು. ಇದು ಶೋಷಿತ ಸಮುದಾಯಗಳ ಕೂಗು. ಮೀಸಲಾತಿ ಹೆಚ್ಚಳಕ್ಕಿಂತ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಹೊಸಕೋಟೆಯ ಮಲ್ಲಸಂದ್ರದ ಯಲ್ಲಪ್ಪ ಹಾಗೂ ಸಕಲೇಶಪುರ ತಾಲ್ಲೂಕಿನ ಉಮೇಶ್ ಅವರಂತಹ ಈ ನಾಡಿನ ಭೂ ಪರಭಾರೆಗೆ ತುತ್ತಾಗಿರುವ ಎಲ್ಲ ಕುಟುಂಬಗಳ ಸ್ವಾಭಿಮಾನದ ಬದುಕಿಗೆ ಸರ್ಕಾರ ನ್ಯಾಯ ಒದಗಿಸಬೇಕು. ಈ ಸಂಬಂಧ ವಿಧಾನಸಭೆ ಎಸ್‌ಸಿಎಸ್‌ಟಿ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡಿ ವರ್ಷಗಳೇ ಕಳೆದಿವೆ. ಮೀಸಲಾತಿ ಜಾರಿ ವಿಚಾರದಲ್ಲಿ ಪರಿಶಿಷ್ಟರ ಮೇಲಿದ್ದ ಪ್ರೀತಿ, ಕಾಯ್ದೆ ತಿದ್ದುಪಡಿಯಲ್ಲಿ ಯಾಕಿಲ್ಲ? ಕೂಡಲೇ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಕಾಯ್ದೆಯನ್ನು ಬಲಪಡಿಸಬೇಕು.


–ಗೋಪಾಲ್ ಡಿ. ಕಟ್ಟಿಮನಿ, ಗಂಗಾವತಿ, ಕೊಪ್ಪಳ ಜಿಲ್ಲೆ

***

'ಕಾಯ್ದೆ ದುರ್ಬಲರ ದನಿಯಾಗಲಿ’
ಪರಭಾರೆ ಆಗಿರುವ ದಲಿತರ ಆಸ್ತಿಯನ್ನು ಮತ್ತೆ ಪಡೆಯಲು ಜಾರಿಗೆ ತಂದ ಪಿಟಿಸಿಎಲ್ ಕಾಯ್ದೆಯೇ ದುರ್ಬಲವಾಗಿರುವುದು ದುರಂತದ ಸಂಗತಿ. ಎಲ್ಲರಿಗೂ ಭೂ ಒಡೆತನದ ಹಕ್ಕು ಸಿಗಬೇಕು ಎನ್ನುವುದು ಈ ಕಾಯ್ದೆಯ ಉದ್ದೇಶ. ಭೂಮಿ ವಿಷಯದಲ್ಲಿ ದಲಿತರಿಗೆ ಮೋಸವಾಗುತ್ತಿದೆ. ಹಾಗಾಗಿ ದಲಿತರು ಆರ್ಥಿಕವಾಗಿ ಸಬಲರಾಗಲು ಕಾಯ್ದೆಯೂ ಪ್ರಬಲವಾಗಬೇಕು. ಈ ನಿಟ್ಟಿನಲ್ಲಿ ಕಾಯ್ದೆಯನ್ನು ಸಮರ್ಪಕವಾಗಿ ತಿದ್ದುಪಡಿ ತಂದು ದಲಿತರಿಗೆ ನ್ಯಾಯ ಒದಗಿಸಬೇಕು.


–ಮಾಳಿಂಗರಾಯ , ಕೆಂಭಾವಿ

***

’ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ಅಗತ್ಯ’
ಪಿಟಿಸಿಎಲ್ ಕಾಯ್ದೆಯ ವಿರುದ್ಧ 2017ರಲ್ಲಿ ಹೊರ ಬಂದಿರುವ ಸುಪ್ರೀಂ ಕೋರ್ಟ್‌ ತೀರ್ಪು ಪರಿಶಿಷ್ಟರು ಸಾವಿರಾರು ಎಕರೆ ಭೂಮಿ ಕಳೆದುಕೊಳ್ಳಲು ಕಾರಣವಾಗಿದೆ. ಈ ಸಂಬಂಧ ‘ಪ್ರಜಾವಾಣಿ’ ಪ್ರಕಟಿಸಿರುವ ವರದಿ ಸಕಾಲಿಕವಾಗಿದೆ. ಇದಕ್ಕೂ ಮೊದಲು 1999ರಲ್ಲಿ ಹೈಕೋರ್ಟ್‌ ಪೂರ್ಣಪೀಠವು ಮಹಮ್ಮದ್ ಜಾಫರ್ ಪ್ರಕರಣದಲ್ಲಿ ಪರಿಶಿಷ್ಟ ಗೇಣಿದಾರರ ಕೃಷಿ ಭೂಮಿ ಈ ಕಾಯ್ದೆಗೆ ಅರ್ಹವಲ್ಲ ಎಂದು ತೀರ್ಪು ನೀಡಿತ್ತು. ಇದರಿಂದಾಗಿ ಸಾವಿರಾರು ಬಡ ಪರಿಶಿಷ್ಟರು ಭೂಮಿ ಕಳೆದುಕೊಂಡರು. ಕಾಯ್ದೆಯ ಕಲಂ3(1)(ಬಿ)ನಲ್ಲಿ ಇರುವ ‘ಮಂಜೂರಾದ ಭೂಮಿ’ ಎಂಬ ಪದದ ಬದಲು ‘ಕೆಲವು ಭೂಮಿ’ ಎಂದು ಸರ್ಕಾರ ತಿದ್ದುಪಡಿ ಮಾಡಬೇಕು ಮತ್ತು ಪೂರ್ವಾನ್ವಯವಾಗುವಂತಾದರೆ ಕಳೆದುಕೊಂಡ ಭೂಮಿ ವಾಪಸ್‌ ಪಡೆಯಲು ಪರಿಶಿಷ್ಟರಿಗೆ ಸಾಧ್ಯವಾಗಲಿದೆ ಎಂಬುದನ್ನು ಹಲವು ನಿವೃತ್ತ ನ್ಯಾಯಮೂರ್ತಿಗಳೇ ಹೇಳಿದ್ದಾರೆ. ಅದೇ ರೀತಿ ಸುಪ್ರೀಂ ಕೋರ್ಟ್‌ 1994ರಲ್ಲಿ ಕೆ.ಟಿ.ಹುಚ್ಚೇಗೌಡ ಪ್ರಕರಣದಲ್ಲಿ ಸರ್ಕಾರಿ ಭೂಮಿ ಮತ್ತು ಖಾಸಗಿ ಜಮೀನಿನ ಪ್ರತಿಕೂಲ ಸ್ವಾಧೀನ ಅವಧಿ ಕ್ರಮವಾಗಿ 30 ವರ್ಷ ಮತ್ತು 12 ವರ್ಷ ಎಂದು ನೀಡಿದ ತೀರ್ಪಿನಿಂದಾಗಿ ಸಾವಿರಾರು ಪರಿಶಿಷ್ಟರು ಭೂಮಿ ಕಳೆದುಕೊಂಡರು. ಒಟ್ಟಾರೆ ನ್ಯಾಯಾಲಯಗಳ ಈ ರೀತಿಯ ವ್ಯತಿರಿಕ್ತ ತೀರ್ಪುಗಳಿಗೆ ಪರಿಹಾರವೆಂದರೆ ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ.


–ಶ್ರೀಧರ ಕಲಿವೀರ, ದಸಂಸ ಹಿರಿಯ ಹೋರಾಟಗಾರ

***

ಚಳಿಗಾಲದ ಅಧಿವೇಶನದಲ್ಲಿ ಕರಡು ಪ್ರಸ್ತಾವ ಅಂಗೀಕರಿಸಿ
ರಾಜ್ಯ ಸರ್ಕಾರದಿಂದಲೇ ಟಿಪಿಸಿಎಲ್ ಕಾಯ್ದೆ ಉಲ್ಲಂಘನೆಯಾಗಿದೆ. ಜಿಲ್ಲಾಧಿಕಾರಿಗಳು ಮತ್ತು ವಿಭಾಗಾಧಿಕಾರಿಗಳು ಬಲಾಡ್ಯರೊಂದಿಗೆ ಶಾಮೀಲಾಗಿ ದಲಿತರ ಭೂಮಿ ಹಕ್ಕನ್ನು ಕಸಿದುಕೊಂಡಿದ್ದಾರೆ. ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2017ರಲ್ಲಿ ನೀಡಿದ ತೀರ್ಪು ದಲಿತ ಸಮುದಾಯವನ್ನು ಧೃತಿಗೆಡಿಸಿತು. ದಲಿತ ಸಂಘಟನೆಗಳ ಒಕ್ಕೂಟವನ್ನು ಅಸ್ತಿತ್ವಕ್ಕೆ ತಂದು ಕಾಯ್ದೆಗೆ ಸಮಗ್ರ ತಿದ್ದುಪಡಿಗಾಗಿ ಹೋರಾಟ ನಡೆಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲಾ ಪಕ್ಷದ ಶಾಸಕರು, ಮಂತ್ರಿಗಳ ಜತೆ ಸಮಾಲೋಚನಾ ಸಭೆಗಳನ್ನು ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗಿದೆ. ಚಿಂತಕ ಲೋಲಾಕ್ಷ ಅವರ ನೇತೃತ್ವದ ನಿಯೋಗವು ಸಮಗ್ರ ತಿದ್ದುಪಡಿಯ ಕರಡನ್ನು ಸಿದ್ಧಪಡಿಸಿದೆ. ದಲಿತರಿಗೆ ‘ದಾನ’ವಾಗಿ ನೀಡಿದ ಭೂಮಿಯೂ ಒಳಗೊಳ್ಳಬೇಕು, ಅರ್ಜಿ ಸಲ್ಲಿಕೆಯಾಗಿ ಒಂದು ತಿಂಗಳ ಅವಧಿಯಲ್ಲಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಇತ್ಯರ್ತಗೊಳಿಸಬೇಕು ಎಂಬ ಅಂಶಗಳೂ ತಿದ್ದುಪಡಿಯ ಭಾಗವಾಗಿವೆ. ಕಂದಾಯ ಇಲಾಖೆ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಮೇಲುಸ್ತುವಾರಿಯೂ ಕಡ್ಡಾಯವಾಗಬೇಕು. ಇದಕ್ಕೆ ಅಧಿಕಾರಿ ವರ್ಗಕ್ಕೆ ಒಪ್ಪಿ ಭೂಮಿ ಹಕ್ಕು ರಕ್ಷಿಸುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಕೂಡ ತಾತ್ವಿಕ ಒಪ್ಪಿಗೆ ನೀಡಿದರು. ಚಳಿಗಾಲದ ಅಧಿವೇಶನದಲ್ಲಿ ಈ ಕರಡನ್ನು ಸರ್ಕಾರ ಮಂಡಿಸಿ ಅಂಗೀಕಾರ ಪಡೆಯಬೇಕು.


–ಎಂ.ವೆಂಕಟಸ್ವಾಮಿ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ

***

ಪಿಟಿಸಿಎಲ್ ಕಾಯ್ದೆ ಪರಿಣಾಕಾರಿಯಾಗಿ ಜಾರಿಗೊಳಿಸಿ
ದಲಿತರಿಗೆ ಸರ್ಕಾರ ಭೂಮಿ ನೀಡಿ ಪಿಟಿಸಿಎಲ್ ಕಾಯ್ದೆ ಮೂಲಕ ಪರಭಾರೆ ನಿಷೇಧಿಸಿ ಅದಕ್ಕೆ ಬಲ ತಂಬಿತ್ತು. ಆದರೆ ಕ್ರಮೇಣ ಭೂಮಿಯ ಮೌಲ್ಯ ಮತ್ತು ಅವಶ್ಯಕತೆಯ ಹೆಚ್ಚಾದಂತೆ ಕೆಲವರು ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವ ಘಟನೆಗಳು ನಡೆದಿವೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಈ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕಾಯ್ದೆಯ ನಿಜವಾದ ಉದ್ದೇಶ ಅರಿತು ಕಾನೂನು ಪ್ರಕ್ರಿಯೆ ಮೂಲಕ ವಿಶೇಷವಾದ ತಿದ್ದುಪಡಿಯನ್ನು ತಂದು ಅವುಗಳನ್ನು ಪರಿಣಾಮಕಾರಿ ಜಾರಿಗೊಳಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಂಜೂರಾತಿ ಭೂಮಿಯನ್ನು ಉಳಿಸುವ ಕೆಲಸವಾಗಬೇಕು.


ಶಿವಕುಮಾರ ಮ್ಯಾಗಳಮನಿ, ರಾಯಚೂರು

***

ಪಿಟಿಸಿಎಲ್ ಕಾಯ್ದೆಗೆ ಬಲ ನೀಡಿ
ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ತಂದು ಮತ್ತೆ ದಲಿತರಿಗೆ ಬಲಕೊಡಬೇಕು ಎಂಬ ಆಶಯದೊಂದಿಗೆ ‘ಪ್ರಜಾವಾಣಿ’ ಮುಖ ಪುಟದಲ್ಲಿ ವರದಿ ಪ್ರಕಟಿಸಿದೆ ಎಂದರೆ ಶೇ 50ರಷ್ಟು ನ್ಯಾಯ ಸಿಕ್ಕಿದೆ ಎಂಬುದು ನನ್ನ ನಂಬಿಕೆ. ಇನ್ನು ಶೇ 50ರಷ್ಟು ನಮ್ಮ ಹೋರಾಟದಿಂದ ನಾವು ಪಡೆಯಲು ಸಾಧ್ಯವಾಗುತ್ತದೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ದಲಿತ ನಾಯಕರು ಈಗಲಾದರೂ ತಮ್ಮ ಹಮ್ಮು ಬಿಮ್ಮುಗಳನ್ನು ಬಿಟ್ಟು ಹೋರಾಟಕ್ಕೆ ಇಳಿಯಬೇಕು. ಈ ಕಾಯ್ದೆಗೆ ತಿದ್ದುಪಡಿ ತಂದು ದಲಿತರ ಜಮೀನು ದಲಿತರಿಗೆ ಕೊಡಿಸುವುದು ಮೀಸಲಾತಿಯಷ್ಟೇ ಮುಖ್ಯ.


–ಪಾವಗಡ ಶ್ರೀರಾಮ್, ಮಾದಿಗ ದಂಡೋರ ರಾಜ್ಯ ಘಟಕದ ಅಧ್ಯಕ್ಷ

***

‘ಉಳ್ಳವರ ಪರ ಕಾಯ್ದೆ’
ದಲಿತರು ಸ್ವಾತಂತ್ರ್ಯ ಪೂರ್ವದಿಂದ ಇದುವರೆಗೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಅದು ತನ್ನ ಸಮುದಾಯದವರಿಂದ ಆಗಿರಬಹುದು ಅಥವಾ ಬೇರೆ ಸಮುದಾಯದವರಿಂದ ಆಗಿರಬಹುದು. ಕಾಯ್ದೆಗಳು ಉಳ್ಳವರ ಪರವಾಗಿ ಕೆಲಸ ಮಾಡುತ್ತವೆ. ಸರ್ಕಾರ ದಲಿತರ ಶೋಷಣೆ ತಪ್ಪಿಸಿ ಈ ಕಾಯ್ದೆಗೆ ಬಲ ನೀಡಬೇಕು.
ಅಡಿವೆಪ್ಪ ಬಸಪ್ಪ ಸಂಪಗಾಂವಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT