ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ದಕ್ಕುವುದೇ?

Last Updated 15 ಜನವರಿ 2019, 19:45 IST
ಅಕ್ಷರ ಗಾತ್ರ

‘ಮೇಲ್ಜಾತಿ ಮೀಸಲು ಮಸೂದೆ’ಯು ಒಂದೆರಡು ವಾರಗಳೊಳಗೇ ಕಾಯ್ದೆಯ ಸ್ಥಾನಮಾನ ಪಡೆದಿದೆ. ಸಂಸತ್ತಿನ ಈ ನಿರ್ಣಯವನ್ನು ನಾವು ಗೌರವಿಸಲೇಬೇಕು. ಆದರೆ, ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಯೋಚಿಸುವಾಗ, ದೇಶದ ಸಂವಿಧಾನವು ಕೆಳ ವರ್ಗದ ಶೋಷಿತರನ್ನು ಮೇಲೆತ್ತಿ ಅವರನ್ನು ಮೇಲ್ಜಾತಿಯವರ ಸಾಮಾಜಿಕ ಸ್ಥಾನಮಾನಕ್ಕೆ ಸರಿದೂಗಿಸಬೇಕೆಂದು ಅಪೇಕ್ಷಿಸಿರುವುದು ತಿಳಿದುಬರುತ್ತದೆ. ಈ ಉದ್ದೇಶಕ್ಕಾಗಿಯೇ ಹಲವು ಸರ್ಕಾರಗಳು ವಿವಿಧ ಹಂತದಲ್ಲಿ ಮೀಸಲು ಸೌಲಭ್ಯ ನಿಗದಿಪಡಿಸಿ, ಶೋಷಿತರು ಮುಖ್ಯವಾಹಿನಿಯ ಜೊತೆ ಪ್ರವಹಿಸಲು ಅನುವು ಮಾಡಿಕೊಡುತ್ತಾ ಬಂದಿವೆ. ಇಂತಹ ಸೌಲಭ್ಯಗಳಿಂದ ಅವರಲ್ಲಿ ಸ್ವಾಭಿಮಾನದಿಂದ ಬಾಳುವ ಆತ್ಮವಿಶ್ವಾಸ ವೃದ್ಧಿಯಾಗಿದೆ.

ಇಷ್ಟಿದ್ದರೂ, ಹಿಂದುಳಿದಿರುವ ಇನ್ನಷ್ಟು ವರ್ಗಗಳು ಮೀಸಲಾತಿಯಲ್ಲಿ ನ್ಯಾಯೋಚಿತವಾಗಿ ತಮಗೂ ಪಾಲು ಸಿಗಬೇಕೆಂದು ಅಲವತ್ತುಕೊಳ್ಳುತ್ತಿವೆ. ಇದನ್ನಾದರೂ ಪರಿಗಣಿಸಿದ್ದರೆ ಸಾಮಾಜಿಕ ನ್ಯಾಯಕ್ಕೆ ಅರ್ಥ ಬರುತ್ತಿತ್ತು. ಆದರೆ, ಇಂತಹ ಬೇಡಿಕೆಯ ಕೂಗು ಅರಣ್ಯರೋದನವಾಗಿಯೇ ಉಳಿದಿರುವಾಗ ಮೇಲ್ವರ್ಗದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ರಾಜಕಾರಣಿಗಳಿಗೆ ಇದೊಂದು ಬಿಸಿತುಪ್ಪ. ಸಮ್ಮತವಿಲ್ಲದಿದ್ದರೂ ಅವರು ಅದನ್ನು ವಿರೋಧಿಸುವಂತಿಲ್ಲ. ಏಕೆಂದರೆ, ಮತಾದಾಯವೇ ಅವರ ಬೀಜ ಮಂತ್ರವಲ್ಲವೇ? ಸಂವಿಧಾನದ ಮೂಲ ಆಶಯಕ್ಕೆ ಮರ್ಮಾಘಾತ ನೀಡಲು ಸದ್ದಿಲ್ಲದೇ ನಿರಂತರ ಪ್ರಯತ್ನ ಸಾಗಿದೆ ಎಂಬುದನ್ನು ದೃಢೀಕರಿಸಲು ಇನ್ನೇನು ಬೇಕು?

ಈಗ ಜಾತಿ ಭೇದಕ್ಕಿಂತ ಆದಾಯ, ಅಧಿಕಾರದ ಆಧಾರದಲ್ಲಿ ವರ್ಗ ಭೇದದ ಕಾಲ ಬಂದಿದೆ. ಮೇಲ್ವರ್ಗದವರಿಗೆ ನೀಡುವ ಮೀಸಲಾತಿಗೆ ವರ್ಷಕ್ಕೆ ₹ 8 ಲಕ್ಷ ಆದಾಯ ಮಿತಿ ನಿಗದಿಪಡಿಸಿರುವುದು ಹಾಸ್ಯಾಸ್ಪದ. ಇದರಿಂದ ನಿಜವಾದ ಬಡವರಿಗೆ ಲಾಭವಾಗದೆ, ಕೈ ಬಾಯಿ ಇದ್ದವರು ಅದರ ಲಾಭ ಬಾಚಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ. ಹೊಸ ಕಾನೂನಿನಿಂದ ಕಡು ಬಡವರಿಗೆ ಅನುಕೂಲವಾದರೆ ಕಾನೂನು ತಂದುದು ಸಾರ್ಥಕವಾಗುತ್ತದೆ.

ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT