ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅರುಗಾಗುವುದು!

Published 13 ಮೇ 2024, 19:40 IST
Last Updated 13 ಮೇ 2024, 19:40 IST
ಅಕ್ಷರ ಗಾತ್ರ

ವಾಕಿಂಗ್ ಹೋಗುವಾಗ ತುರೇಮಣೆ ‘ನಾಯಿ ಹೊಲಸು ಮಾಡ್ಯದೆ. ಅರುಗಾಗ್ಲಾ’ ಅಂತ ಎಚ್ಚರಿಸಿದರು. ‘ಸಾ, ಅರುಗಾಗು ಅಂದ್ರೆ ಅರ್ಥ ಏನು?!’ ಅಂತ ಕೇಳಿದೆ. ‘ಅದೇ ಕಲಾ ಹೊಲಸನ್ನು ತುಳೀದೇ ಅಂತರ ಕಾಯ್ದುಕೊಳ್ಳುವುದನ್ನೇ ಅರುಗಾಗುವುದು ಅಂತೀವಿ’ ಎಂದು ವಿವರಿಸಿದರು.

‘ಸಾ, ಯಾವ್ಯಾವ ಹೊಲಸನ್ನ ಕಂಡ್ರೆ ಅಂತರ ಕಾಯ್ದುಕೊಂಡು ಅರುಗಾಗಬೇಕಾಯ್ತದೆ’ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿದೆ.

‘ಬೊಡ್ಡಿಹೈದ್ನೆ, ಅದು ನಾಯಿ ಹೊಲಸಾದ್ರೂ ಸರಿ ರಾಜಕೀಯದ ಹೊಲಸಾದ್ರೂ ಸರಿ ತುಳಿದವರ ಕಾಲು ನಾರ್ತದೆ. ಮಗ್ಗುಲಲ್ಲಿ ಅರುಗಾಗಿ ಹೋದ್ರೆ ಬಚಾವು’ ಅಂತ ಬುದ್ಧಿಮಾತು ಹೇಳಿದರು.

‘ಅಲ್ಲ ಸಾ, ಮನ್ನೆ ಒಬ್ಬರು ಪಕ್ಕದ ದೇಶದ ತಾವು ಬಾಂಬದೆ ಅಂದುದ್ಕೆ ‘ಪಕ್ಸ ಈ ಹೇಳಿಕೆ ಯಿಂದ ಅಂತರ ಕಾಯ್ದುಕೊಂಡದೆ’ ಅಂದವ್ರೆ. ಅದ್ಯಾಕೋ’ ಚಂದ್ರು ಆನೆ ಪಟಾಕಿ ಸಿಡಿಸಿದ.

‘ಹಂಗೀಯೆ ಭಾರತದೋರು ಯಾವ್ಯಾವುದೋ ದೇಸದೋರ ಥರಾ ಕಾಣ್ತಾವ್ರೆ ಅಂದುದ್ಕೂ ಪಕ್ಷ ಅಂತರ ಕಾಯ್ದುಕೊಳ್ಳುವುದು ಒಳ್ಳೇದಲ್ಲವುರಾ?’ ನಾನು ಕೇಳಿದೆ.

‘ಇವಿಷ್ಟೇ ಅಲ್ಲ ಕನ್ರೋ, ಆನ್‍ಲೈನ್ ಧೋಕಾ ಹೊಲಸು, ಬಿಟ್‍ಕಾಯಿನ್ ಹೊಲಸು, ಕಾಮ ದ್ರೋಹಿಗಳ ಹೊಲಸು, ಅಧಿಕಾರದ ಹೊಲಸು, ಲಂಚದ ಹೊಲಸು, ವಿಡಿಯೊ ಮಾರ್ಫಿಂಗ್‌, ಬ್ಯಾಡದ ಸ್ನೇಯಿತರಿಂದ, ನೆಂಟರಿಂದ ಅಂತರ ಕಾಯ್ದುಕೊಳ್ಳುವುದೂ ಅದೇ’ ಅಂದ್ರು ತುರೇಮಣೆ.

‘ಸಾ, ರಾಜಕೀಯವೇ ಹೊಲಸಾಗ್ಯದೆ, ಇದರಿಂದ ಅಂತರ ಕಾಯ್ದುಕೊಳ್ಳುತ್ತೇವೆ ಅಂತ ಇಲ್ಲೀಗಂಟ ಯಾರಾದರೂ ರಾಜಕಾರಣಿ ಹೇಳಿಕೆ ಕೊಟ್ಟವ್ರಾ ಸಾ?’ ಅಂತ ಪ್ರಶ್ನೆ ಹಾಕಿದೆ.

‘ರಾಜಕಾರಣಿಗಳು ಯಾರೂ ಹಂಗೆ ಹೇಳಕುಲ್ಲ. ಯಾಕೇಂದ್ರೆ ಅವರು ಹೊಲಸಿನ ವಾಸನೆಗೆ ಒಗ್ಗಿರದ್ರಿಂದ ಹೊಲಸು ತುಳಿಯದೇ ಅವರ ಕ್ಯಾಮೆ. ಅದಕ್ಕೆ ಬದಲು ‘ಎಲೆಕ್ಷನ್ನಲ್ಲಿ ಎಡವಟ್ ರಾಜಕಾರಣಿಗೆ ಮತದಾನ ಮಾಡದೇ ಅಂತರ ಕಾಯ್ದುಕೊಳ್ಳುತ್ತೇವೆ’ ಅಂತ ಜನ ತೀರ್ಮಾನ ತಕ್ಕಂದ್ರೆ ಭೇಸಲ್ಲವುಲಾ?’ ತುರೇಮಣೆ ಕೊಟ್ಟ ಪರಿಹಾರದಿಂದ ಯಾರ್‍ಯಾರು ಅರುಗಾಗಿ ಅಂತರ
ಕಾಯ್ದುಕೊಳ್ಳುತ್ತಾರೋ ಗೊತ್ತಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT