ಅಸಹಾಯಕತೆಯನ್ನು ಒಪ್ಪಿಕೊಂಡವರು...

7

ಅಸಹಾಯಕತೆಯನ್ನು ಒಪ್ಪಿಕೊಂಡವರು...

Published:
Updated:

ನಾನು ಕನ್ನಡ ವಿಷಯದಲ್ಲಿ ಕೆ-ಸೆಟ್, ಎನ್‌ಇಟಿ, ಜೆಆರ್‌ಎಫ್, ಎಂ.ಫಿಲ್ ಹಾಗೂ ಡಾಕ್ಟರೇಟ್ ಪದವಿ ಒಳಗೊಂಡಂತೆ ಎಲ್ಲ ಅಗತ್ಯ ಅರ್ಹತೆಗಳನ್ನು ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕ.

ಕೆಲಸಕ್ಕೆ ವರದಿ ಮಾಡಿಕೊಳ್ಳುವಾಗಲೇ, ‘ಪರ್ಮನೆಂಟ್ ಉಪನ್ಯಾಸಕರು ಬಂದರೆ ನೀವು ಹೋಗಬೇಕಾಗುತ್ತದೆ’ ಎಂಬ ಮೌಖಿಕ ಷರತ್ತಿಗೆ ಬದ್ಧನಾಗಿ ಉಸಿರು ಬಿಗಿ ಹಿಡಿದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದವನು.

ಕಳೆದ ವಾರ ಸರ್ಕಾರವು ಹಲವು ಮಂದಿ ಸಹಾಯಕ ಪ್ರಾಧ್ಯಾಪಕರನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ವರ್ಗಾವಣೆ ಮಾಡಿ ಅದೇಶ ಹೊರಡಿಸಿದೆ. ಆಡಳಿತ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯೇ. ನಿಯೋಜನೆಗೊಳ್ಳುವ ವೇಳೆಗಾಗಲೇ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸೆಮಿಸ್ಟರ್ ಮುಗಿದು, ಪರೀಕ್ಷೆಗಳು ಶುರುವಾಗಿವೆ. ನಾನು ಕರ್ತವ್ಯ ನಿರ್ವಹಿಸುತ್ತಿರುವ ಕಾಲೇಜಿನ ಕನ್ನಡ ವಿಭಾಗದಲ್ಲಿ ಆರೂ ಮಂದಿ ಅತಿಥಿ ಉಪನ್ಯಾಸಕರೇ. ಈಗ ಇಬ್ಬರನ್ನು ನಿಯೋಜಿಸಿದ್ದರ ಪರಿಣಾಮ ನಾಲ್ಕು ಮಂದಿ ಅತಿಥಿ ಉಪನ್ಯಾಸಕರು ಅನಿವಾರ್ಯವಾಗಿ ಬಿಟ್ಟು ಹೊರಗೆ ಬರಬೇಕಾದ ಸ್ಥಿತಿ ಇದೆ. ಅದು ನಿಯಮವೂ ಹೌದು. ಆದರೆ ಈ ಮಧ್ಯಂತರದ ಆದೇಶವು ಹಸಿ ಗಾಯದ ಮೇಲೆ ಬರೆ ಹಾಕಿದಂತೆಯೇ ಹೊರತು ಮತ್ತೇನೂ ಅಲ್ಲ.

ಮಧ್ಯಂತರದಲ್ಲಿ ಶಿಕ್ಷಕರನ್ನು ವರ್ಗಾಯಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಶಿಕ್ಷಕರ ವರ್ಗಾವಣೆಯನ್ನು ರದ್ದು ಮಾಡುವಂತೆ ಮುಖ್ಯಮಂತ್ರಿಯೇ ಕಳೆದ ವಾರ ಸೂಚನೆ ನೀಡಿದ್ದಾರೆ. ಇದೇ ನೀತಿ ಕಾಲೇಜುಗಳಿಗೇಕೆ ಅನ್ವಯವಾಗುವುದಿಲ್ಲ? ಮಧ್ಯಂತರದ ನಿಯೋಜನೆಯಿಂದಾಗಿ ಅತಿಥಿ ಉಪನ್ಯಾಸಕ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತಿರುವ ನನ್ನಂತಹ ನೂರಾರು ಜನರು ನಿರುದ್ಯೋಗಿಗಳಾಗಿದ್ದಾರೆ. ಕನಿಷ್ಠ ಪ್ರಸಕ್ತ ಶೈಕ್ಷಣಿಕ ಅವಧಿ ಮುಗಿಯುವವರೆಗಾದರೂ ನಮ್ಮನ್ನು ಮುಂದುವರಿಸಿದ್ದರೆ, ಮುಂದಿನ ವರ್ಷ ಹೊಸದಾಗಿ ಅರ್ಜಿ ಸಲ್ಲಿಸಿ ಬೇರೆ ಯಾವುದಾದರೂ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿತ್ತು. ಈಗ ಅದೂ ಇಲ್ಲದಂತಾಗಿದೆ.

ಅನೇಕ ಸಮಸ್ಯೆಗಳ ನಡುವೆಯೇ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನಮ್ಮಂಥವರ ಬೆಂಬಲಕ್ಕೆ ಯಾರೂ ಇಲ್ಲ ಎಂಬುದು ದುರಂತವೇ ಸರಿ.

ಡಾ. ಪ್ರಸನ್ನ ಡಿ.ಜೆ., ಹಾಸನ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !