ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 27 ಜೂನ್ 2024, 19:17 IST
Last Updated 27 ಜೂನ್ 2024, 19:17 IST
ಅಕ್ಷರ ಗಾತ್ರ

ಸಮ್ಮೇಳನಾಧ್ಯಕ್ಷರ ಆಯ್ಕೆ: ಉಳಿಯಲಿ ಸ್ವಾಯತ್ತ ಪರಂಪರೆ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಪಟ್ಟಕ್ಕೆ ಅರ್ಜಿಗಳ ಮಹಾಪೂರವೇ ಹರಿದುಬರುತ್ತಿದೆ ಎಂದು ವರದಿಯಾಗಿದೆ (ಪ್ರ.ವಾ., ಜೂನ್ 27). ಸಮ್ಮೇಳನದ ಅಧ್ಯಕ್ಷರನ್ನು ನಿಯಮಾನುಸಾರವಾಗಿ ಆಯ್ಕೆ ಮಾಡುವ ಅಧಿಕಾರ ಕಸಾಪ ಕಾರ್ಯಕಾರಿ ಸಮಿತಿಗೆ ಮಾತ್ರ ಇದೆ. ಇದು ಕಸಾಪದ ಈವರೆಗಿನ ಸ್ವಾಯತ್ತ ಪರಂಪರೆಯೂ ಆಗಿದೆ. ಆದರೆ ಈಗ ಅಲ್ಲಿಯೂ ಅರ್ಜಿಗಳನ್ನು ಹಾಕಿಕೊಳ್ಳುವುದು ಮತ್ತು ಆ ಮೂಲಕ ಸಮ್ಮೇಳನದ ಅಧ್ಯಕ್ಷರ ಆಯ್ಕೆ ನಡೆಯುವುದು ಶೋಭೆ ತರುವ ವಿಷಯ ಅಲ್ಲ. ಈವರೆಗೆ ನಡೆದುಬಂದಂತೆ ಕಸಾಪ ಕಾರ್ಯಕಾರಿ ಸಮಿತಿ ತನಗಿರುವ ಅಧಿಕಾರದಿಂದ ಅರ್ಹ ಸಾಹಿತಿಯನ್ನು ಆಯ್ಕೆ ಮಾಡಿ, ಸಮ್ಮೇಳನದ ಅಧ್ಯಕ್ಷತೆಯ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕು.

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಕುಕಲಾಕೃತಿಕಾರರು ವಿಮರ್ಶೆಗೆ ಒಳಗಾಗಲಿ

‘ಸಾಹಿತಿಗಳಿಗಿದು ಸ್ವವಿಮರ್ಶೆಯ ಸಮಯ’ ಎಂಬ ರಘುನಾಥ ಚ.ಹ. ಅವರ ಲೇಖನ (ಪ್ರ.ವಾ., ಜೂನ್‌ 25) ಮಾರ್ಮಿಕವಾಗಿದೆ. ಇಂದು, ಅಕಾಡೆಮಿಗಳ ಅಧಿಕಾರದ ಸ್ಥಾನಗಳಿಗೆ ನಾಮಕರಣ ಹೊಂದಲೆಂದು, ಅವು ಕೊಡುವ ಮತ್ತು ಸರ್ಕಾರವು ತಾನೇ ನೇರವಾಗಿ ಕೊಡಮಾಡುವ ಪಂಪ, ಗುಬ್ಬಿ ವೀರಣ್ಣದಂತಹ
ಪ್ರಶಸ್ತಿಗಳನ್ನು ಪಡೆಯಲೆಂದು, ವಿಶ್ವವಿದ್ಯಾಲಯಗಳ ಕುಲಪತಿಗಳಾಗ
ಲೆಂದು ಹಾಗೂ ಲಕ್ಷಗಟ್ಟಲೆ, ಕೋಟಿಗಟ್ಟಲೆ ವೆಚ್ಚವಾಗುವ ಸರ್ಕಾರಿ ಪ್ರಾಜೆಕ್ಟುಗಳನ್ನು ಪಡೆಯಲೆಂದು ಆಸೆ-ದುರಾಸೆಪಟ್ಟು ಲಾಬಿ ಮಾಡುವ ಸಾಹಿತಿ, ಕಲಾವಿದರು (ಅಥವಾ ಹಾಗೆಂದು ತಮ್ಮನ್ನು ತಾವು ಕರೆದು, ಕರೆಸಿಕೊಳ್ಳುವವರು) ಹಲವರಿದ್ದಾರೆ. ಅಂಥವರು ರಾಜಕಾರಣಿಗಳ ಮರ್ಜಿಗೆ ಒಳಗಾಗುವುದು ತಮ್ಮ ಆ ಅಗ್ಗದ ಆಸೆಯಿಂದಾಗಿಯೇ.

ಟಿ.ವಿ. ವಾಹಿನಿಗಳು ಹಾಗೂ ಪತ್ರಿಕೆಗಳ ಪುಟಗಳಲ್ಲಿ ವಿಜೃಂಭಿಸುವುದು ಬಹುತೇಕ ಅವರ ಸುದ್ದಿಯೇ. ಅದು ನಿಲ್ಲಬೇಕು. ಕಲೆ, ಕಲೆಗಾರಿಕೆಯ ಹೆಸರಿನಲ್ಲಿ ಮತ್ತು ಕೆಲವೊಮ್ಮೆ, ಸಾಮಾಜಿಕ ನ್ಯಾಯ ಸಲ್ಲಿಸುವುದರ ಹೆಸರಿನಲ್ಲಿ ನಡೆಯುವ ಆ ಥರದವರ ದಂಧೆಯಿಂದ ಸೃಷ್ಟಿಯಾಗುವ ಕುಕಲಾಕೃತಿಗಳು ಹಾಗೂ ಅವುಗಳ ಕೃತಿಕಾರರು ಔಚಿತ್ಯಪೂರ್ಣವಾದ ಟೀಕೆ-ವಿಮರ್ಶೆಗೆ ಒಳಗಾಗಬೇಕು. ಇಲ್ಲವಾದರೆ ಈ ರೋಗಕ್ಕೆ ಮದ್ದಿರುವುದಿಲ್ಲ. ಜೊತೆಗೆ, ತಮಗೆ ಒಪ್ಪಿಗೆಯಾಗದ್ದನ್ನು, ಒಪ್ಪಿಗೆ ಆಗದವರನ್ನು ಕುರಿತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಘನ-ಸಂಯಮವಾದ ವಿಮರ್ಶೆಗೆ ಬದಲು ಬೈಗುಳದ ನುಡಿಗಟ್ಟಿನ ಷರಾ ಬರೆಯುವುದು, ದುಬಾರಿ ಮಾತಿನ ವಿಡಂಬನೆ, ಕಟಕಿ ಆಡುವುದು ಕೂಡ ಈ ರೋಗದ ಲಕ್ಷಣ ಮತ್ತು ಪರಿಣಾಮಗಳಾಗಿವೆ.

ರಘುನಂದನ, ಬೆಂಗಳೂರು

ಅರಣ್ಯ ನಾಶದ ಯೋಜನೆ: ನಿರ್ಧಾರ ಪುನರ್‌ಪರಿಶೀಲಿಸಿ

ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಪ್ರದೇಶದ ದೇವದಾರಿ ಶ್ರೇಣಿಯಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಗಣಿಗಾರಿಕೆಗೆ ಅರಣ್ಯ ನೀಡದಂತೆ ಅರಣ್ಯ ಸಚಿವರಾಗಿ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದು ಕೇಳಿ ನಮಗೆಲ್ಲ ಬಹಳ ಸಂತಸವಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಲೇ ದೇವದಾರಿ ಅರಣ್ಯಕ್ಕೆ ಕೊಡಲಿ ಹಾಕಲು ಸಹಿ ಹಾಕಿಯೇ ಹೊರಬಂದಿದ್ದಾರೆ. ಈಗ ಅದನ್ನು ಸಮರ್ಥಿಸಿಕೊಳ್ಳಲು ಹೇಳಿಕೆಗಳನ್ನು ನೀಡುತ್ತಿದ್ದಾರಾದರೂ ಸಹಿ ಹಾಕಲು ಅವರಿಗೆ ಇದ್ದ ಒತ್ತಡವನ್ನು ನಾವು ಊಹಿಸಬಲ್ಲೆವು. ರಾಜಕೀಯ ಮುಖಂಡರಿಗಾಗಲೀ ಉನ್ನತ ಅಧಿಕಾರ ಸ್ಥಾನದಲ್ಲಿ ಇರುವವರಿಗಾಗಲೀ ಅಥವಾ ಗಣಿಗಾರಿಕೆಯಂಥ ಉದ್ದಿಮೆಯಿಂದ ಬರುವ ಲಾಭವನ್ನೇ ನೋಡುವ ಕಂಪನಿಯವರಿಗಾಗಲೀ ಈಗ ಇಡೀ ಭೂಮಿ ಎದುರಿಸುತ್ತಿರುವ ಹವಾಮಾನ ವೈಪರೀತ್ಯದ ಸಂಕಟವು ಇನ್ನೂ ಮನದಟ್ಟಾಗಿಲ್ಲ ಎನ್ನುವುದು ಅತಿ ವಿಷಾದಕರ ವಿಚಾರ. ಒಂದು ಕಡೆ, ಗಣಿಗಾರಿಕೆ ಆಗಿರುವಲ್ಲಿ ಗಿಡಗಳನ್ನು ನೆಡಲು, ‘ಕಾಡು ಬೆಳೆಸಲು’ ಕೋಟ್ಯಂತರ ರೂಪಾಯಿ ಎತ್ತಿಡುವುದು, ಇನ್ನೊಂದು ಕಡೆ, ಅಲ್ಲೇ ಪಕ್ಕದಲ್ಲಿರುವ ದಟ್ಟ ಕಾಡಿನ ಲಕ್ಷಾಂತರ ಗಿಡಮರಗಳನ್ನು ಉರುಳಿಸಿ ಬೋಳಾಗಿಸುವುದು... ಇದೆಲ್ಲಿಯ ನ್ಯಾಯ? ಹಣ ಹಾಕಿ ಬೆಳೆಸಿರುವ ಒಂದಾದರೂ ಕಾಡು ಇದೆಯೇ?

ಗಣಿಗಾರಿಕೆಗೆ ಅರಣ್ಯ ನೀಡದಿರುವುದರ ಸಂತಸವನ್ನು ಹಂಚಿಕೊಳ್ಳಲು ತಯಾರಾಗುತ್ತಿದ್ದಂತೆಯೇ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ 20 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಎಂಪಿಎಂ ಕಂಪನಿಗೆ ಮತ್ತೆ ಗುತ್ತಿಗೆಗೆ ಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಚಿವರ ನಡೆ ಆತಂಕವನ್ನು ಉಂಟುಮಾಡುತ್ತಿದೆ. ಸದಾ ಹಸಿರು ಕಾಡುಗಳನ್ನು ಕಡಿದು ಮತ್ತೆ ಅಕೇಶಿಯಾ, ನೀಲಗಿರಿ ನೆಡುವ ಯೋಚನೆಯೇ? ಸ್ಥಳೀಯವಲ್ಲದ ಈ ಎರಡೂ ಮರಗಳು ನೆಲದೊಳಗಿನ ಎಲ್ಲ ಸತ್ವವನ್ನೂ ಹೀರಿಕೊಂಡು ಸುತ್ತೆಲ್ಲ ಬೇರೇನೂ ಬೆಳೆಯದಂತೆ ಮಾಡುತ್ತವೆ ಎನ್ನುವುದು ಸರ್ವವಿದಿತ. ಆ ಕಾರಣಕ್ಕಾಗಿಯೇ ನೀಲಗಿರಿಯ ನಿಷೇಧವಾಗಿದ್ದು. ಈ ನಿಷೇಧವನ್ನು ತೆಗೆದುದಾದರೂ ಯಾತಕ್ಕೆ? ಹವಾಮಾನ ವೈಪರೀತ್ಯದಿಂದ ಇಡೀ ಭೂಮಿಯೇ ಸುಟ್ಟು ಹೋಗುತ್ತಿರುವಾಗ, ಇರುವ ಹಸಿರು ಮತ್ತು ವೈವಿಧ್ಯವನ್ನು ಉಳಿಸಿಕೊಳ್ಳುವತ್ತ ನಮ್ಮ ನಡೆ ಇರಬೇಕಲ್ಲವೇ? ಈ ಕಾಡುಗಳ ನಾಶ ಮತ್ತು ಏಕಜಾತಿಯ ಗಿಡಗಳನ್ನು ಬೆಳೆಸುವ ವಿಚಾರವನ್ನು ಸಚಿವರು ತಕ್ಷಣವೇ ಕೈಬಿಡಲಿ. ಸಂಡೂರಿಗೆ ಸಂಬಂಧಿಸಿದ ಆದೇಶ ಹಿಂತೆಗೆದುಕೊಳ್ಳುವಂತೆ ಸಚಿವರಿಗೆ ಮೇಲಿಂದ, ಅತ್ತ, ಇತ್ತಲಿಂದ ಒತ್ತಡಗಳು ಬರಬಹುದು. ಆದರೆ ಸಚಿವರು ಈ ನಿರ್ಧಾರಕ್ಕೆ ಅಚಲರಾಗಿ ನಿಲ್ಲಬೇಕೆಂಬುದು ನಮ್ಮೆಲ್ಲರ ಆಗ್ರಹದ ಮನವಿ. ಹಾಗೆಯೇ ಎಂಪಿಎಂ ವಿಚಾರದಲ್ಲಿ ಸಚಿವರು ಪುನರ್‌ವಿಚಾರ ಮಾಡಬೇಕೆಂದು ಒತ್ತಾಯಿಸುತ್ತೇವೆ.

ಶಾರದಾ ಗೋಪಾಲ, ಡಾ. ಪ್ರಕಾಶ ಭಟ್‌, ಸುನಂದಾ ಭಟ್‌, ಶ್ರೀನಿವಾಸ ಕುಲಕರ್ಣಿ, ಶಿವಕುಮಾರ ಪಾಟೀಲ್‌, ಕವಿತಾ, ದಾಕ್ಷಾಯಿನಿ ಕುಂಬಾರ, ನೇತ್ರಾವತಿ, ಡಾ. ಪೂರ್ಣಿಮಾ ದೌರೋಜಿ
‘ಪರಿಸರಕ್ಕಾಗಿ ನಾವು’ ಧಾರವಾಡ ಜಿಲ್ಲಾ ಘಟಕದ ಕಾರ್ಯಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT