ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅದು ಕೇವಲ ಆಫ್ಗನ್ನರ ಹಣೆಬರಹವಲ್ಲ...

ಅಕ್ಷರ ಗಾತ್ರ

ವಾಸಿಸಲು ಯೋಗ್ಯ, ಆರೋಗ್ಯಕರ ವಿಶ್ವ ಸೃಷ್ಟಿಸುವಲ್ಲಿ ಶಾಂತಿ, ಸಮಾನತೆ, ಘನತೆ ಮುಖ್ಯ ಎಂದು ಹೇಳುವ ವಿಶ್ವಸಂಸ್ಥೆಯು ಅಫ್ಗಾನಿಸ್ತಾನದ ವಿಷಯದಲ್ಲಿ ಈವರೆಗೆ ಯಾವುದೇ ಸ್ಪಷ್ಟ ಹಾಗೂ ದೃಢವಾದ ನಿಲುವು ತಾಳದಿರುವುದು ಈ ದಶಕದ ದುರಂತವೇ ಸರಿ. ಮೂಲಭೂತವಾದದ ಮೇಲೆ ನಿಂತಿರುವ ತಾಲಿಬಾನ್ ಎಂಬ ಸಂಘಟನೆಗೆ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿರುವ ಕೆಲವು ರಾಷ್ಟ್ರಗಳು ಈಮೂಲಭೂತವಾದದಿಂದ ಭವಿಷ್ಯದಲ್ಲಿ ಸಂಭವಿಸುವ ಆಗುಹೋಗುಗಳಿಗೆ ಪ್ರತ್ಯಕ್ಷವಾಗಿ ಕಾರಣವಾಗುತ್ತವೆ ಎಂಬುದನ್ನು ಮರೆಯುವಂತಿಲ್ಲ. ಏಕೆಂದರೆ ಮೂಲಭೂತವಾದ ಎನ್ನುವುದು ಯಾವುದೇ ಧರ್ಮದ್ದಾಗಿರಲಿ ಅದರಿಂದ ಮನುಕುಲಕ್ಕೆ ಕಂಟಕ ಒದಗುವುದಂತೂ ಕಟ್ಟಿಟ್ಟ ಬುತ್ತಿ.

ನಾವೇನೋ ದೊಡ್ಡದನ್ನು ಸಾಧಿಸಿ ತೋರಿಸುತ್ತೇವೆ ಎಂಬಂತೆ ಅಫ್ಗಾನಿಸ್ತಾನಕ್ಕೆ ಕಾಲಿಟ್ಟ ಅಮೆರಿಕಕ್ಕೆ, ಉಗ್ರ ಬಿನ್ ಲಾಡೆನ್‌ನನ್ನು ಕೊಂದದ್ದು ಬಿಟ್ಟರೆ ಬೇರೆ ಇನ್ನಾವುದೇ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವೇ ಆಗಿಲ್ಲ. ಆದರೆ ಅಫ್ಗಾನಿಸ್ತಾನ ಎನ್ನುವುದು ರಕ್ತಬೀಜಾಸುರರ ನೆಲ. ಅಲ್ಲಿ ಒಬ್ಬ ಲಾಡೆನ್ ಸತ್ತರೆ, ಒಬ್ಬ ಮುಲ್ಲಾ ಉಮರ್ ಸಾವಿಗೀಡಾದರೆ ಅಂತಹ ಸಾವಿರಾರು ಮಂದಿ ಹುಟ್ಟಿಕೊಳ್ಳುತ್ತಾರೆ. ಈ ದುಷ್ಟರ ತಳಿಯನ್ನು ಬುಡಸಮೇತ ಕಿತ್ತೊಗೆಯುವುದಕ್ಕೆ ಕ್ರಮ ಕೈಗೊಳ್ಳಬೇಕು. ಅಫ್ಗಾನಿಸ್ತಾನದ ಜನರನ್ನು ರಕ್ಷಿಸಬೇಕಾದ ಹೊಣೆಗಾರಿಕೆ ಭಾರತ ಸಹಿತ ಜಗತ್ತಿನ ಎಲ್ಲ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ಮೇಲಿದೆ. ಆದರೆ ಈ ಅಟ್ಟಹಾಸ ಕೇವಲ ಆಫ್ಗನ್ನರಿಗೆ ಸಂಬಂಧಿಸಿದ್ದು, ಅದು ಅವರ ಹಣೆಬರಹ, ಏನಾದರೂ ಆಗಲಿ ನಮಗೇನು ಎನ್ನುವಂತಹ ಉಡಾಫೆ ಮನೋಭಾವವನ್ನು ನಾವು ಇವತ್ತು ಹೊಂದಿದ್ದೇ ಆದಲ್ಲಿ, ನಾಳೆ ತಾಲಿಬಾನ್ ಎಂಬ ದುಷ್ಟ ಸಂಘಟನೆ ಇತರ ಪ್ರದೇಶಗಳಲ್ಲೂ ತನ್ನ ಕಬಂಧಬಾಹು ಚಾಚಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎನ್ನುವುದರಲ್ಲಿ
ಸಂದೇಹವಿಲ್ಲ.

- ಸಲೀಂ ಆರ್‌. ತಾಳಿಕೋಟಿ,ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT