ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶಾದಾಯಕ ಬಜೆಟ್

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಜನರ ಅಭಿವೃದ್ಧಿಗೆ ನೀಡುವ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಜನರಿಗೆ ತಲಪುತ್ತಿದೆ. ಇದನ್ನು ಹೇಳಿದವರು ಬೇರೆ ಯಾರೂ ಅಲ್ಲ. ಈ ದೇಶದ ಪ್ರಧಾನಿಯಾಗಿದ್ದ ದಿ. ರಾಜೀವ್ ಗಾಂಧಿಅವರು. ಈಗ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಹೇಳಿರುವಂತೆ 10 ರೂಪಾಯಿಯಲ್ಲಿ ಕೇವಲ 10 ಪೈಸೆ ಮಾತ್ರ ಜನರಿಗೆ ತಲಪುತ್ತಿದೆ.

ಆಡಳಿತದಲ್ಲಿ ಪ್ರಮಾಣಿಕತೆಗೆ ಪ್ರಾಧಾನ್ಯ ನೀಡದಿದ್ದರೆ ಸಮಾಜದ ಪ್ರಗತಿ ಅಸಾಧ್ಯ. ಕೇವಲ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದರಿಂದ ಪ್ರಯೋಜನವಿಲ್ಲ. ಅವುಗಳು ಅರ್ಹ ಫಲಾನುಭವಿಗಳಿಗೆ ತಲಪಬೇಕು, ಅವುಗಳನ್ನು ತಲಪಿಸುವ ಆಡಳಿತ ವರ್ಗ ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಮಾತ್ರ ಸಾಧ್ಯ.

ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದರೂ, ಅದರ ನಿರ್ಮೂಲನೆಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿ ಸಾಕಷ್ಟು ಹಣವನ್ನು ಮೀಸಲಿಡುವ ಬದಲಿಗೆ, ಬರಲಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವೋಟ್ ಬ್ಯಾಂಕ್ ಸ್ಥಾಪನೆಗೆ ಒತ್ತು ನೀಡುವ ಕಾರ್ಯಕ್ರಮ ಮತ್ತು ಯೋಜನೆಗಳಿಗೆ ಆದ್ಯತೆ ನೀಡಿ ಅವುಗಳಿಗೆ ಬಜೆಟ್‌ನಲ್ಲಿ ಅವಕಾಶ ಮಾಡಿಕೊಟ್ಟಿರುವುದು ಎದ್ದು ಕಾಣುತ್ತಿದೆ.

ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟಾಚಾರ ವಿರೋಧಿಸಿ ಮಾತನಾಡುತ್ತಿದ್ದವರು, ಅಧಿಕಾರಕ್ಕೆ ಬಂದಮೇಲೆ ಅದರ ನಿರ್ಮೂಲನೆಗೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಹಾಲಿ ಸರ್ಕಾರ ಆಡಳಿತ ಸುಧಾರಣೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ನೀಡದಿದ್ದರೆ, ಹಳೇ ನೀರು- ಹೊಸ ಬಾಟಲ್ ಎಂದು ಜನ ಗೇಲಿ ಮಾಡುವಂತಾಗುತ್ತದೆ.
ಇರುವ ಭ್ರಷ್ಟ ಆಡಳಿತ ವ್ಯವಸ್ಥೆಯನ್ನೇ ಉಳಿಸಿಕೊಂಡು, ಶಾಸಕರು ಮತ್ತು ಮಂತ್ರಿಗಳು ಹೊಸಬರಾಗಿ ನೂತನ ಸರ್ಕಾರ ಎನಿಸಿಕೊಂಡರೆ ಅದು ಶುದ್ಧ ಆಡಳಿತ ನೀಡುವ ಸರ್ಕಾರ ಎಂದು ಹೇಳಲಾಗದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT