ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ರಹಿತ ಆಡಳಿತ ಬರಲಿ

Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ಹಿಂದೊಂದು ಕಾಲದಲ್ಲಿ, ರಾಜಕೀಯ ಅರಾಜಕತೆ, ಭ್ರಷ್ಟಾಚಾರ, ಕೊಲೆ, ಸುಲಿಗೆ ಮತ್ತು ಹಿಂಸಾಚಾರಕ್ಕೆ ಹೆಸರಾಗಿದ್ದ ಬಿಹಾರ ರಾಜ್ಯ ಈಗ ಮುಖ್ಯಮಂತ್ರಿ ನಿತೀಶ್‌ಕುಮಾರ್ ಜಾರಿಗೆ ತಂದಿರುವ ಹಲವಾರು ಆಡಳಿತ ಸುಧಾರಣಾ ಕ್ರಮಗಳಿಂದಾಗಿ  ಮಾದರಿ ರಾಜ್ಯವಾಗಿ ದೇಶದ ಗಮನ ಸೆಳೆದಿದೆ. ಅನಗತ್ಯ ವಿಳಂಬಕ್ಕೆ ಕಡಿವಾಣ ಹಾಕಿ ನಿಗದಿತ ಅವಧಿಯಲ್ಲಿ ಅಲ್ಲಿನ ನಾಗರಿಕರಿಗೆ ಸರ್ಕಾರಿ ಸೇವೆಗಳು ಲಭ್ಯವಾಗುವಂತೆ ಮಾಡಿರುವುದರ ಜೊತೆಗೆ, ಆಡಳಿತದಲ್ಲಿ ತುಂಬಿ ತುಳುಕುತ್ತಿದ್ದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ತೆಗೆದುಕೊಂಡಿರುವ ಹಲವಾರು ಪರಿಣಾಮಕಾರಿ ಉಗ್ರಕ್ರಮಗಳ ಮೂಲಕ ಅದರ ನಿರ್ಮೂಲನೆಗೆ ಪ್ರಥಮ ಆದ್ಯತೆ ನೀಡಿರುವುದರಿಂದಾಗಿ ಅದು ಮಾದರಿ ರಾಜ್ಯ ಎನಿಸಿಕೊಂಡಿದೆ.

ಒಂದು ನೋವಿನ ಸಂಗತಿ ಎಂದರೆ ಸುಸಂಸ್ಕೃತ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಮ್ಮ ಕರ್ನಾಟಕವನ್ನು ಮೊದಲು ನಾವು ಮಾದರಿ ರಾಜ್ಯವನ್ನಾಗಿ ಮಾಡಿ, ಇತರರು ನಮ್ಮನ್ನು ನೋಡಿ ಕಲಿಯುವಂತೆ ಮಾಡಬೇಕಿತ್ತು. ಆದರೆ ನಾವೇ ಇತರರನ್ನು ನೋಡಿ ಕಲಿಯಬೇಕಾದ ಪರಿಸ್ಥಿತಿ ಬಂದಿದೆ. ಇದಕ್ಕೆ ಇದುವರೆಗೂ ನಮ್ಮ ರಾಜ್ಯವನ್ನಾಳಿದವರೇ ಕಾರಣ. ರಾಜ್ಯದಲ್ಲಿ ಸಕಾಲ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯ್ದೆಯನ್ನು ಜಾರಿಗೆ ತರುವ ಮುನ್ನ, ಸಚಿವ ಸುರೇಶ್‌ಕುಮಾರ್ ನೇತೃತ್ವದ ಹಿರಿಯ ಐ.ಎ.ಎಸ್. ಅಧಿಕಾರಿಗಳನ್ನೊಳಗೊಂಡ ತಂಡ ಬಿಹಾರ ರಾಜ್ಯಕ್ಕೆ ತೆರಳಿ ಅಲ್ಲಿ ನಾಗರಿಕ ಸೇವಾ ಖಾತರಿ ಕಾಯ್ದೆ ಜಾರಿಗೆ ತಂದ ಬಳಿಕ ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಆಗಿರುವ ಸುಧಾರಣಾ ಕ್ರಮಗಳನ್ನು ವೀಕ್ಷಿಸಿ ಮಾಹಿತಿ ಸಂಗ್ರಹಿಸಿದ್ದರು.

ಜೊತೆಗೆ ಇತರ ರಾಜ್ಯಗಳಲ್ಲಿರುವ ಇದೆ ಮಾದರಿಯ ಕಾಯ್ದೆ ಕಾನೂನುಗಳನ್ನು ಅಧ್ಯಯನಮಾಡಿ ಸಾಧಕ-ಬಾಧಕಗಳನ್ನು ಅರಿತುಕೊಂಡು ವಿಧೇಯಕ ರೂಪಿಸಿದರು. ಅದಕ್ಕೆ ಸದನದ ಒಪ್ಪಿಗೆ ದೊರೆತು ಈಗ ಅದು ಸೇವಾ ಖಾತರಿ ಕಾಯ್ದೆಯಾಗಿ ಜಾರಿಗೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಎಂದರೆ, ಅಧಿಕಾರಿಗಳ ತಂಡ ಬಿಹಾರ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಆಗಿರುವ ಸುಧಾರಣೆಗಳ ಬಗ್ಗೆ ವೀಕ್ಷಿಸುವಾಗ, ಸರ್ಕಾರ ಲಂಚಕೋರರನ್ನು ಬಲೆಗೆ ಬೀಳಿಸಲು ಸಹಕರಿಸುವ ನಾಗರಿಕರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುವ ಯೋಜನೆ ಜಾರಿಗೆ ತಂದಿರುವುದು ಸೇರಿದಂತೆ ಭ್ರಷ್ಟಾಚಾರ ನಿಯಂತ್ರಿಸಲು ತೆಗೆದುಕೊಂಡಿರುವ ಪರಿಣಾಮಕಾರಿ ಉಗ್ರ ಕ್ರಮಗಳು ತಂಡದ ಕಣ್ಣಿಗೆ ಬೀಳಲಿಲ್ಲವೆ? ಅದೆಲ್ಲ ಗೊತ್ತಿದ್ದರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕೇವಲ ನಾಗರಿಕ ಸೇವಾ ಖಾತರಿ ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.

ಒಟ್ಟಿನಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಗಳು ಭ್ರಷ್ಟಾಚಾರವನ್ನು ನಿಯಂತ್ರಿಸಲು ತೆಗೆದುಕೊಂಡಿರುವ ಸುಧಾರಣಾ ಕ್ರಮಗಳನ್ನು ನಮ್ಮ ರಾಜ್ಯ ಸರ್ಕಾರ ತೆಗೆದುಕೊಳ್ಳಲು ವಿಫಲವಾಗಿದ್ದು, ಬರೀ ಸಕಾಲ ಕಾಯ್ದೆಯನ್ನು ಜಾರಿಗೆ ತಂದಿರುವುದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಲು ಹೊರಟಿದೆ. ದಿ. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಕಡತಗಳನ್ನು ಇಂತಿಷ್ಟು ದಿನಗಳಲ್ಲಿ ವಿಲೇವಾರಿ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿದ್ದರು. ಆದರೆ ಈಗಿನಂತೆ ವಿಳಂಬಕ್ಕೆ ದಂಡ ವಿಧಿಸಲು ಅವಕಾಶ ಇರಲಿಲ್ಲ ಅಷ್ಟೆ. ಹಾಗಾಗಿ ಈಗ ಜಾರಿಗೆ ತಂದಿರುವ ಕಾಯ್ದೆ ಹಿಂದಿನ ವ್ಯವಸ್ಥೆಯ ಮುಂದಿನ ಭಾಗವಾಗಿದ್ದು ಸ್ವಲ್ಪ ಸುಧಾರಣೆಗಳನ್ನು ಕಂಡಿದೆ ಎನ್ನುವುದನ್ನು ಬಿಟ್ಟರೆ ಇನ್ನೇನು ಇಲ್ಲ. ಭ್ರಷ್ಟಾಚಾರ ರಹಿತ ಆಡಳಿತ ರೂಪಿಸಿ, ಆಡಳಿತ ಯಂತ್ರ ಸೇವಾ ಮನೋಭಾವದಿಂದ ಕೆಲಸ ಮಾಡುವಂತೆ ನೋಡಿಕೊಂಡರೆ, ಇಂತಹ ಕಾಯ್ದೆಗಳ ಅವಶ್ಯಕತೆಯೇ ಇರುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT