ಸಂಘರ್ಷದ ನಾಡಿನಲ್ಲಿ ಶಾಂತಿಯ ಬೆಳಕಿಂಡಿ

7

ಸಂಘರ್ಷದ ನಾಡಿನಲ್ಲಿ ಶಾಂತಿಯ ಬೆಳಕಿಂಡಿ

Published:
Updated:
Deccan Herald

‘ಅತ್ತ ಸ್ವರ್ಗ– ಇತ್ತ ನರಕ,  ನಡುವೆ ನಾವು 51 ವರ್ಷಗಳಿಂದ ತ್ರಿಶಂಕು ಸ್ಥಿತಿಯಲ್ಲಿ ಜೋತು ಬಿದ್ದಿದ್ದೇವೆ. ಇನ್ನೆಷ್ಟು ದಿನ ಇದೇ ಸ್ಥಿತಿಯಲ್ಲಿರೋಣ? ನಮ್ಮ ಬದುಕು ಬದಲಾಗುವುದು ಬೇಡವೇ?’

– ಇದೀಗ ಜೆರುಸಲೇಂ ನಗರಾಡಳಿತದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ರಮದನ್ ದಬಾಶ್ ಕೇವಲ ಹೀಗೆ ಪ್ರಶ್ನೆಗಳನ್ನು ಕೇಳಿ ಸುಮ್ಮನಾಗುವುದಿಲ್ಲ. ‘ಇಸ್ರೇಲ್–ಪ್ಯಾಲಸ್ತೀನ್‌ ಸಂಘರ್ಷಕ್ಕೆ ರಾಜಕೀಯ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಭರವಸೆಯ ಮಾತುಗಳನ್ನು ಆಡುತ್ತಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜೆರುಸಲೇಂ ನಗರದಲ್ಲಿ ರಾಯಭಾರ ಕಚೇರಿ ಆರಂಭಿಸಿದ್ದು ಮತ್ತು ನಂತರದ ಬೆಳವಣಿಗೆಗಳು ವಿಶ್ವದ ಇತರ ದೇಶಗಳ ಮಾಧ್ಯಮಗಳಿಗೆ ಈಗಲೂ ದೊಡ್ಡಸುದ್ದಿ. ಆದರೆ ಇಸ್ರೇಲ್‌ ಮತ್ತು ಅದರ ಸುತ್ತ ಇರುವ ಅರಬ್ ಜಗತ್ತಿನಲ್ಲಿ ಮಾತ್ರ ಜೆರುಸಲೇಂ ನಗರಾಡಳಿತ ಚುನಾವಣೆಯಲ್ಲಿ ಪ್ಯಾಲಸ್ತೀನ್ ಮೂಲದ ವ್ಯಕ್ತಿಯೊಬ್ಬರು ಸ್ಪರ್ಧಿಸಲು ಮುಂದಾಗಿರುವುದು ಬಿಸಿಬಿಸಿ ವಿದ್ಯಮಾನ.

ಜೆರುಸಲೇಂ ನಗರದಲ್ಲಿ ಪ್ಯಾಲಸ್ತೀನಿಯರಿಗಾಗಿ ನಿರ್ಮಿಸಿರುವ ‘ಸುರ್ ಬಹಾರ್’ ಸಮುದಾಯ ಕೇಂದ್ರದಲ್ಲಿ ಮಾತಿಗೆ ಸಿಕ್ಕ ರಮದಾನ್ ದಬಾಶ್ ಅವರ ಈ ನಿರ್ಧಾರಕ್ಕೆ ಇಸ್ರೇಲ್‌ನ ಯಹೂದಿ ಮತ್ತು ಪಕ್ಕದ ಪ್ಯಾಲಸ್ತೀನ್ ಅರಬ್ಬರಿಂದ ಅಚ್ಚರಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೆರುಸಲೇಂನ ಒಟ್ಟು ಜನಸಂಖ್ಯೆ 8.60 ಲಕ್ಷ. ಇದರಲ್ಲಿ ಮೂರನೇ ಒಂದು ಭಾಗದ ಜನರು ಪ್ಯಾಲಸ್ತೀನ್ ಮೂಲದವರು. ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ಅಕಸ್ಮಾತ್ ದಬಾಶ್ ಗೆದ್ದರೆ ಜೆರುಸಲೇಂ ನಗರಾಡಳಿತ ಸಂಸ್ಥೆಯಲ್ಲಿ ಮೊದಲ ಪ್ಯಾಲಸ್ತೀನ್ ಪ್ರತಿನಿಧಿ ಅವರಾಗುತ್ತಾರೆ. ಮಾತ್ರವಲ್ಲ, ಈ ಬೆಳವಣಿಗೆಯು ಇಸ್ರೇಲ್ ನೆಲದಲ್ಲಿ ವಾಸವಿರುವ ಪ್ಯಾಲಸ್ತೀನ್ ಜನರು ಮತ್ತು ಪ್ಯಾಲಸ್ತೀನ್ ಮೂಲದವರ ಬಗ್ಗೆ ಯಹೂದಿಗಳ ಮನಸ್ಸಿನಲ್ಲಿ ಆಗುತ್ತಿರುವ ಬದಲಾವಣೆಯ ದ್ಯೋತಕವಾಗುತ್ತದೆ.

ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ದಬಾಶ್, ಸುರ್ ಬಹಾರ್ ಸನಿಹದ ಮನೆಯೊಂದರಲ್ಲಿ 1967ರಲ್ಲಿ ಜನಿಸಿದವರು. 1968ರಲ್ಲಿ ಈ ಪ್ರದೇಶವನ್ನು ಜೋರ್ಡಾನ್‌ನಿಂದ ಇಸ್ರೇಲ್ ವಶಪಡಿಸಿಕೊಂಡಿತ್ತು. ಪಶ್ಚಿಮ ದಂಡೆಯನ್ನು ಆಕ್ರಮಿಸಿಕೊಂಡ ಇಸ್ರೇಲ್‌, ಅರಬ್ ಜಗತ್ತಿನೊಂದಿಗೆ ಶಾಂತಿ ಮಾತುಕತೆ ಬಾಕಿ ಉಳಿಸಿಕೊಂಡು ಮಿಲಿಟರಿ ಬಲದ ಮೂಲಕ ನಿಯಂತ್ರಿಸಲು ಆರಂಭಿಸಿತು. ಆದರೆ ಜೆರುಸಲೇಂ ವಿಚಾರದಲ್ಲಿ ಇಸ್ರೇಲ್‌ನ ನಡೆ ಬೇರೆಯೇ ಆಗಿದೆ. ಜೆರುಸಲೇಂ ನೇರವಾಗಿ ತನ್ನ ನಿಯಂತ್ರಣದಲ್ಲಿದೆ ಎಂದು ಘೋಷಿಸಿ, ಸುಪರ್ದಿಗೆ ತೆಗೆದುಕೊಂಡಿದೆ.

ದಬಾಶ್ ಅವರ ಕುಟುಂಬವೂ ಸೇರಿದಂತೆ ಇಲ್ಲಿ ನೆಲೆಸಿರುವ ಎಲ್ಲರೂ ಇಸ್ರೇಲ್‌ನಲ್ಲಿ ವಾಸಿಸಬಹುದು ಮತ್ತು ಇಸ್ರೇಲ್‌ನ ಆರೋಗ್ಯ ಮತ್ತು ಸಾಮಾಜಿಕ ಸೇವೆಗಳನ್ನು ಬಳಸಿಕೊಳ್ಳಬಹುದು ಎಂಬುದು ಇದರ ಅರ್ಥ. ಇವರೆಲ್ಲರೂ ಇಸ್ರೇಲ್‌ನ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ನಗರಾಡಳಿತ ಚುನಾವಣೆಗಳಲ್ಲಿ ಮತ ಚಲಾಯಿಸಬಹುದು. ಆದರೆ ಪಶ್ಚಿಮ ಜೆರುಸಲೇಂನಲ್ಲಿರುವ ಯಾರೊಬ್ಬರೂ ಹೀಗೆ ಮಾಡಲಿಲ್ಲ. ಹೀಗೆ ಮಾಡಿದರೆ ಇಸ್ರೇಲ್‌ನ ಅಧಿಪತ್ಯವನ್ನು ಒಪ್ಪಿಕೊಂಡಂತೆ ಆಗಬಹುದು ಎಂಬ ಸಂಕೋಚ ಅವರನ್ನು ಕಾಡುತ್ತಿತ್ತು.

ಕಳೆದ 51 ವರ್ಷಗಳಿಂದ ದಬಾಶ್ ಸೇರಿದಂತೆ ಜೆರುಸಲೇಂನಲ್ಲಿ ವಾಸವಿರುವ ಅರಬ್ಬರು ರಾಜಕೀಯ ಅಸ್ತಿತ್ವವೇ ಇಲ್ಲದ ಸಂದಿಗ್ಧ ಪರಿಸ್ಥಿತಿ ಅನುಭವಿಸಿದ್ದರು. 2013ರಲ್ಲಿ ನಡೆದ ನಗರಾಡಳಿತ ಚುನಾವಣೆಯಲ್ಲಿ ಶೇ 2ರಷ್ಟು ಅರಬ್ಬರು ಸಹ ಮತ ಚಲಾಯಿಸಲಿಲ್ಲ. ಇಂದಿಗೂ ಅರಬ್ಬರು ವಾಸಿಸುವ ಜೆರುಸಲೇಂನ ಭಾಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ, ವಿಪರೀತ ಜನಸಂದಣಿ ಇರುವ ಈ ಕೊಳಕು ಪ್ರದೇಶದಲ್ಲಿ ಅಪರಾಧ ಪ್ರಕರಣಗಳ ಜೊತೆಗೆ ಬಡತನ ಪ್ರಮಾಣವೂ ಹೆಚ್ಚು.

‘ಯಹೂದಿ– ಅರಬ್ ಜನಾಂಗಗಳ ನಡುವೆ ಹಂಚಿಹೋಗಿರುವ ಜೆರುಸಲೇಂನಲ್ಲಿ ಏಕೆ ಈ ವೈಪರಿತ್ಯ ಎದ್ದು ಕಾಣುತ್ತದೆ?’

ಈ ಪ್ರಶ್ನೆಯನ್ನು ದಬಾಶ್ ಅವರ ಎದುರು ಇರಿಸಿದಾಗ ಬಂದ ಉತ್ತರ ‘ರಾಜಕೀಯ ಅಸ್ಪೃಶ್ಯತೆ’.

‘ನಮಗೆ ರಾಜಕೀಯ ಪ್ರಾತಿನಿಧ್ಯ ಇಲ್ಲ. ಹೀಗಾಗಿ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ಜೆರುಸಲೇಂನಲ್ಲಿರುವ ಎಲ್ಲ ಅರಬ್ಬರು ದಬಾಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದೂ ಹೇಳಲು ಆಗುವುದಿಲ್ಲ. ರಮಲ್ಲಾದಲ್ಲಿರುವ ಪ್ಯಾಲಸ್ತೀನ್ ಆಡಳಿತವು ಜೆರುಸಲೇಂ ನಗರದ ಚುನಾವಣೆಯಲ್ಲಿ ಪಾಲ್ಗೊಳ್ಳುವುದನ್ನು ‘ಇಸ್ರೇಲ್‌ ಆಡಳಿತ
ದೊಂದಿಗೆ ಕೈಜೋಡಿಸುವುದು’ ಎಂದೇ ವ್ಯಾಖ್ಯಾನಿಸಿ, ಚುನಾವಣೆಗಳನ್ನು ಬಹಿಷ್ಕರಿಸಲು ಕರೆ ನೀಡಿದೆ.

‘ಚುನಾವಣೆಗೆ ನಿಲ್ಲುವ ನನ್ನ ನಿರ್ಧಾರ ಖಂಡಿಸಿ ಹಲವು ಬೆದರಿಕೆ ಕರೆಗಳು ಬಂದಿವೆ. ನನ್ನನ್ನು ಸಂಚುಕೋರ, ಯಹೂದಿಗಳೊಂದಿಗೆ ಶಾಮೀಲಾದವ ಎಂದೆಲ್ಲಾ ನನ್ನವರು ಹೀಯಾಳಿಸುತ್ತಿದ್ದಾರೆ’ ಎಂದು ದಬಾಶ್ ಬೇಸರ ತೋಡಿಕೊಳ್ಳುತ್ತಾರೆ. ಅದರೆ ಅದೇ ಉಸಿರಿನಲ್ಲಿ ‘ಜೆರುಸಲೇಂ ನಗರದ ಶೇ 58ರಷ್ಟು ಪ್ಯಾಲಸ್ತೀನ್ ವಾಸಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಲವು ತೋರಿದ್ದಾರೆ’ ಎಂದು ಸಮೀಕ್ಷಾ ವರದಿಯೊಂದನ್ನು ಉಲ್ಲೇಖಿಸುತ್ತಾರೆ.

ನಗರಾಡಳಿತ ಚುನಾವಣೆಯಲ್ಲಿ ಗೆಲುವು ಸಾಧಿಸಲು 7000 ಮತಗಳು ಬೇಕು. ಇಸ್ರೇಲಿ ಮುಖ್ಯಧಾರೆಯ ಪ್ರಜೆಗಳು ಮತ್ತು ಅತಿ ಸಂಪ್ರದಾಯವಾದಿ ಯಹೂದಿಗಳಲ್ಲಿ ಪರಸ್ಪರ ಒಮ್ಮತವಿಲ್ಲ. ಹೀಗಾಗಿ ಪ್ಯಾಲಸ್ತೀನಿಯರು ಕೆಲವೇ ಸ್ಥಾನಗಳನ್ನು ಗಳಿಸಿದರೂ ಆಡಳಿತದಲ್ಲಿ ಮುಖ್ಯಪಾತ್ರ ವಹಿಸಬಹುದು. ಆದರೆ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಷ್ಟವಿದೆ ಎಂದು ಸಮೀಕ್ಷೆಗಳಲ್ಲಿ ಹೇಳುವುದು ಬೇರೆ, ಚುನಾವಣೆಯಲ್ಲಿ ಮತದಾನ ಮಾಡುವುದು ಬೇರೆ. ಹೀಗಾಗಿ ದಬಾಶ್ ಭವಿಷ್ಯ ಏನಾಗಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ.

ನೀವು ದಬಾಶ್ ಅವರನ್ನು ಸುಧಾರಣವಾದಿ ಎಡಪಂಥೀಯ ಎಂದು ಅಂದುಕೊಳ್ಳಬೇಡಿ. ತಮ್ಮ ಮಾತಿನಲ್ಲಿ ದಬಾಶ್‌ ಕುರಾನ್‌ನ ಹಲವು ಸಾಲುಗಳನ್ನು ಉಲ್ಲೇಖಿಸಿದರು. ತನ್ನ ನಾಲ್ವರು ಪತ್ನಿಯರು ಮತ್ತು 12 ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ಇಸ್ರೇಲ್‌ನಲ್ಲಿ ಬಹುಪತ್ನಿತ್ವ ಅಪರಾಧ. ಆದರೆ ಇಸ್ಲಾಂ ಅದನ್ನು ಒಪ್ಪುವುದರಿಂದ ಅಧಿಕಾರಿಗಳು ಕೆಲವೊಮ್ಮೆ ಕಣ್ಮುಚ್ಚಿಕೊಂಡಿರುತ್ತಾರೆ.

‘ನೀವೇಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದ ತಕ್ಷಣ ದಬಾಶ್ ತಮ್ಮ ಕಿಸೆಯಿಂದ ಸ್ಮಾರ್ಟ್‌ಫೋನ್ ಹೊರತೆಗೆದು ಜಿರಳೆಗಳು, ಇಲಿಗಳೇ ತುಂಬಿದ್ದ ಅರಬ್ಬರ ಪ್ರದೇಶದಲ್ಲಿರುವ ಅಂಗನವಾಡಿಯೊಂದನ್ನು ತೋರಿಸಿದರು. ನಂತರ ಕಿಟಕಿಯತ್ತ ಕೈತೋರಿ ಯಹೂದಿಗಳೇ ನೆಲೆಸಿರುವ ಪೂರ್ವ ಜೆರುಸಲೇಂನ ಹರ್‌ಹೋಮ ಪ್ರದೇಶದತ್ತ ಕೈತೋರಿ, ‘ಅಲ್ಲಿರುವ ಸೌಲಭ್ಯಗಳನ್ನು ಪ್ಯಾಲಸ್ತೀನಿಯರು ಕನಸಿನಲ್ಲಿಯೂ ಎಣಿಸಲಾರರು. ನಮಗೆ ಶಾಲೆಗಳು ಬೇಕು, ಶಿಕ್ಷಕರು ಬೇಕು, ಉದ್ಯೋಗಗಳು ಬೇಕು’ ಎಂದು ಭಾವುಕರಾಗಿ ಮೇಜು ಗುದ್ದಿದರು.

‘ಇಸ್ರೇಲ್‌ನೊಂದಿಗೆ ಶಾಂತಿ ಮಾತುಕತೆಯ ಸಾಧ್ಯತೆ ಕ್ಷೀಣಿಸಿದೆ. ಹೆಜ್ಬುಲ್ಲಾ, ಹಮಾಸ್, ಇಸ್ಲಾಮಿಕ್ ಸ್ಟೇಟ್ ಮತ್ತು ಸಿರಿಯಾ ಯುದ್ಧ ಭೂಮಿಯ ಮುಖ್ಯಕೇಂದ್ರಗಳು ಜೆರುಸಲೇಂನಿಂದ ಕೇವಲ ಮೂರೂವರೆ ಗಂಟೆಗಳ ಪಯಣದ ಅಂತರದಲ್ಲಿವೆ. ಆದರೂ ಜೆರುಸಲೇಂನಿಂದ ಇಸ್ರೇಲ್ ಸರ್ಕಾರ ಹಿಂದೆ ಸರಿಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಇದನ್ನು ಅರ್ಥಮಾಡಿಕೊಂಡಿರುವ ದಬಾಶ್, ಯಹೂದಿ ಸಂಪ್ರದಾಯವಾದಿಗಳ ನಡುವೆ ಜನಪ್ರಿಯವಾಗಿರುವ ಇಸ್ರೇಲಿ ಬಲಪಂಥೀಯ ಪಕ್ಷದೊಂದಿಗೆ ವ್ಯವಹರಿಸಲು ಇಷ್ಟಪಡುತ್ತಾರೆ. ಕಳೆದ ವರ್ಷ ಲಿಕುಡ್ ಪಕ್ಷಕ್ಕೆ ಇನ್ನೇನು ಸೇರಿಯೇ ಬಿಟ್ಟರು ಎನ್ನುವಷ್ಟು ಹತ್ತಿರವಾಗಿದ್ದರು. ಇಂಥ ನಡೆಗಳಿಗೆ ಅವರು ದುಬಾರಿ ಬೆಲೆ ತೆರಬೇಕಾಗುತ್ತದೆ. ಇಸ್ರೇಲಿಗಳಿಗೆ ಅವರು ಹತ್ತಿರವಾದಷ್ಟೂ ಪ್ಯಾಲಸ್ತೀನಿ ಮತದಾರರ ಅನುಮಾನ ಹೆಚ್ಚಾಗುತ್ತದೆ.

‘ಈ ಸಮುದಾಯ ಕೇಂದ್ರವನ್ನೇ ತೆಗೆದುಕೊಳ್ಳಿ. ಇದನ್ನು ಕಟ್ಟುವುದಕ್ಕೆ ಹಣ ಕೊಟ್ಟಿರುವುದು ಇಸ್ರೇಲ್ ಸರ್ಕಾರ. ನಾನು ಇಸ್ರೇಲ್ ಆಡಳಿತದೊಂದಿಗೆ ವ್ಯವಹರಿಸಿ ಬೇಕಾದ್ದು ಪಡೆದುಕೊಳ್ಳಬಲ್ಲೆ ಎನ್ನುವುದಕ್ಕೆ ಇದು ಉದಾಹರಣೆ. ಇಸ್ರೇಲಿಗಳು ‘ನಾವು ಯಹೂದಿಗಳು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒತ್ತುಕೊಡುವವರು’ ಎಂದು ಹೇಳಿಕೊಳ್ಳುತ್ತಾರೆ. ‘ಸರಿ ಮತ್ತೆ ನಿಮ್ಮ ಪ್ರಜಾಪ್ರಭುತ್ವ ಪದ್ಧತಿಯನ್ನು ನನಗೆ ತೋರಿಸಿ’ ಎಂದು ಕೇಳುತ್ತೇನೆ’ ಎಂದು ನಿರ್ಭಿಡೆಯ ಮಾತನ್ನಾಡುತ್ತಾರೆ.

ಕಳೆದ ಐದು ವರ್ಷಗಳಿಂದೀಚೆಗೆ ಜೆರುಸಲೇಂ ಬದಲಾಗಿದೆ. ಇಸ್ರೇಲಿಗಳು ಮಾಲೀಕರಾಗಿರುವ ಅಂಗಡಿಗಳಲ್ಲಿ ಪ್ಯಾಲಸ್ತೀನಿ ಕೆಲಸಗಾರರು ಕಾಣಿಸಿಕೊಳ್ಳುವುದು ಈ ಹಿಂದೆ ಕಂಡುಕೇಳರಿಯದ ಸಂಗತಿಯಾಗಿತ್ತು. ಆದರೆ ಈಗ ಇದು ಸಾಮಾನ್ಯ ದೃಶ್ಯ ಎನಿಸಿದೆ. ಹೀಬ್ರೂ ವಿ.ವಿ.ಗೆ ಪ್ಯಾಲಸ್ತೀನಿಗಳು ಸೇರಿಕೊಳ್ಳುವುದು, ಇಸ್ರೇಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದು ಸಹ ಈಗ ಸಾಮಾನ್ಯ ವಿದ್ಯಮಾನ. ಇದಕ್ಕೆ ಯಹೂದಿ ನಾಡಿನಲ್ಲಿ ಕಾರ್ಮಿಕರ ಕೊರತೆ ಮತ್ತು ಪ್ಯಾಲಸ್ತೀನಿ ಪ್ರದೇಶದಲ್ಲಿ ನಿರುದ್ಯೋಗ ಕಾರಣವೇ ಹೊರತು, ಇಸ್ರೇಲಿಗಳ ಉದಾರ ಹೃದಯ ಕಾರಣವಲ್ಲ.

ಜೆರುಸಲೇಂನ ಸುರ್‌ ಬಹಾರ್ ಸಮುದಾಯ ಕೇಂದ್ರವೂ ಇಂಥದ್ದೇ ಕಥೆ ಹೇಳುತ್ತದೆ. ಈ ಪ್ರದೇಶದಲ್ಲಿರುವ ಹಲವರಿಗೆ (ಇಸ್ರೇಲ್ ಸರ್ಕಾರ ಉಗ್ರಗಾಮಿಗಳು ಎನ್ನುವ) ಹಮಾಸ್ ಸಂಘಟನೆಯ ಒಡನಾಟವಿದೆ. ಸಮುದಾಯ ಕೇಂದ್ರದ ಉದ್ಘಾಟನೆ
ಸಮಾರಂಭ ನಡೆದ ನಂತರ ಕೆಲವರು ಅದನ್ನು ಸುಟ್ಟುಹಾಕಿದ್ದರು. ಆದರೆ ಕೆಲವೇ ದಿನಗಳಲ್ಲಿ ಅದರ ರಿಪೇರಿ ನಡೆಯಿತು. ಈಗ ಪ್ರತಿದಿನ ನೂರಾರು ಮಂದಿ ಅಲ್ಲಿಗೆ ಭೇಟಿ ನೀಡುತ್ತಾರೆ.

ಸಮುದಾಯ ಕೇಂದ್ರದ ವಿಚಾರದಲ್ಲಿ ನಡೆದ ಈ ಬೆಳವಣಿಗೆಯು ಇಸ್ರೇಲ್ ಸರ್ಕಾರದ ಧೋರಣೆಯಲ್ಲಿಯೂ ಬದಲಾವಣೆಗೆ ಕಾರಣವಾಯಿತು. ಇದೀಗ ಸರ್ಕಾರವು ಅರಬ್ಬರು ವಾಸವಿರುವ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ 5.60 ಕೋಟಿ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ. ಈ ಹಣವು ಸದ್ವಿನಿಯೋಗವಾದರೆ ಅರ್ಧ ಶತಮಾನದ ನಂತರ ಜೆರುಸಲೇಂ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಂತೆ ಆಗುತ್ತದೆ.

ಜೆರುಸಲೇಂನಲ್ಲಿರುವ ಅರಬ್ಬರಿಗೆ ಸೌಕರ್ಯ ಕಲ್ಪಿಸುವ ಪ್ರಯತ್ನಕ್ಕೆ ಹಣ ಬಿಡುಗಡೆ ಮಾಡಲು ಇಸ್ರೇಲಿನ ಪ್ರಗತಿಪರರು ಅಷ್ಟು ಒಲವು ತೋರುತ್ತಿಲ್ಲ. ‘ಎಂದಿದ್ದರೂ ಇದು ಪ್ಯಾಲಸ್ತೀನಿಯರಿಗೆ ವಾಪಸ್ ಕೊಡಬೇಕಾದ ಜಾಗ. ಅಲ್ಲಿಗೇಕೆ ಹಣ ಹೂಡಬೇಕು’ ಎನ್ನುವುದು ಅವರ ಪ್ರಶ್ನೆ. ಆದರೆ ಇಸ್ರೇಲ್‌ನ ಸಂಪ್ರದಾಯವಾದಿ ಬಲಪಂಥೀಯರು ಮಾತ್ರ ‘ಇಡೀ ನಗರ ಇಸ್ರೇಲ್ ಅಧೀನದಲ್ಲಿರುಬೇಕು. ಸಮಗ್ರ ನಗರದ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು’ ಎಂದು ವಾದಿಸುತ್ತಾರೆ.

5.60 ಕೋಟಿ ಡಾಲರ್ ಮೊತ್ತದ ಅನುದಾನ ಬಿಡುಗಡೆಗೆ ಜೀವ್ ಎಲ್ಕೀನ್‌ನಂಥ ರಾಜಕಾರಿಣಿಗಳ ಅಭಯವಿದೆ. ಕಟ್ಟರ್ ಬಲಪಂಥೀಯ ಲಿಕುಡ್ ಪಕ್ಷದ ಎಲ್ಕೀನ್ ಜೆರುಸಲೆಂ ನಗರದ ಮೇಯರ್ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರು. ‘ನಮಗೆ ಸಹಾಯ ಮಾಡುವ ಯಾರೊಂದಿಗೆ ಬೇಕಾದರೂ ನಾನು ಕೆಲಸ ಮಾಡಲು ಸಿದ್ಧ’ ಎನ್ನುವ ದಬಾಶ್‌ಗೆ ಎಲ್ಕೀನ್ ಅವರ ಬಗ್ಗೆ ಅಸಹನೆ ಇಲ್ಲ ಎನ್ನುವುದು ಗಮನಾರ್ಹ ಸಂಗತಿ.

ಸುರ್‌ ಬಹಾರ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಗರಾಡಳಿತ ಸಂಸ್ಥೆಯ ಮ್ಯಾನೇಜರ್‌ ಜೊತೆಗೆ ನಾನು ತಿರುಗಾಡುತ್ತಿದ್ದಾಗ ಅವರು ನಿರ್ಮಾಣ ಹಂತದಲ್ಲಿರುವ ಒಂದು ಕಟ್ಟಡ ತೋರಿಸಿದರು. ಅದು 140 ಕೊಠಡಿಗಳಿರುವ ಶಾಲಾ ಕಟ್ಟಡ. ‘ಹಮಾಸ್ ಜೊತೆಗೆ ನಂಟಿರುವ ಪ್ಯಾಲಸ್ತೀನಿಯರು ಈ ಯೋಜನೆಗೆ ಅನುಮೋದನೆ ಸಿಗಲು ಸಹಕರಿಸಿದರು’ ಎಂದು ಅವರು ನಗುತ್ತಾ ನುಡಿದಾಗ ನನಗೆ ಆಶ್ಚರ್ಯವಾಯಿತು.

‘ನಿಮಗೆ ಉದಾರವಾದಿಗಳೊಂದಿಗೆ ಮಾತ್ರ ಬದುಕಬೇಕು ಎನ್ನುವ ಆಸೆಯಿದ್ದರೆ ಅತ್ತ–ಇತ್ತ–ಎತ್ತಲೂ ಯಾರೊಬ್ಬರೂ ಸಿಗುವುದಿಲ್ಲ’ ಎಂದು ಅವರು ಖಡಕ್ಕಾಗಿ ನುಡಿದರು.

ಹೌದಲ್ಲಾ, ಇಲ್ಲಿರುವ ಯಾರೂ ಶಾಂತಿ ಒಪ್ಪಂದಕ್ಕೆ ಸಹಿ ಹಾಕುತ್ತಿಲ್ಲ. ಆದರೆ ಎಲ್ಲರಿಗೂ ಅವರ ಮಕ್ಕಳು ಶಾಲೆಗೆ ಹೋಗಬೇಕು ಎನ್ನುವ ಆಸೆ ಮಾತ್ರ ಇದೆ.

(ದಿ ನ್ಯೂಯಾರ್ಕ್ ಟೈಮ್ಸ್)

ಬರಹ ಇಷ್ಟವಾಯಿತೆ?

  • 4

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !