ಉಬರ್‌ ಕ್ಯಾಬ್ ಚಾಲಕ ಬಂಧನ

7
ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್‌ ಕದ್ದೊಯ್ದಿದ್ದ * ವಿಜಯನಗರ ಠಾಣೆಯಲ್ಲಿ ದಾಖಲಾಗಿದ್ದ ದೂರು

ಉಬರ್‌ ಕ್ಯಾಬ್ ಚಾಲಕ ಬಂಧನ

Published:
Updated:

ಬೆಂಗಳೂರು: ಪ್ರಯಾಣಿಕರ ಚಿನ್ನಾಭರಣ ಹಾಗೂ ಮೊಬೈಲ್‌ ಇದ್ದ ವ್ಯಾನಿಟಿ ಬ್ಯಾಗ್ ಕದ್ದೊಯ್ದಿದ್ದ ಆರೋಪದಡಿ ಮಂಜುನಾಥ್ ರೆಡ್ಡಿ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

‘ಎಲೆಕ್ಟ್ರಾನಿಕ್ ಸಿಟಿಯ ಹೊಸರಸ್ತೆ ನಿವಾಸಿಯಾದ ಮಂಜುನಾಥ್, ಉಬರ್ ಕ್ಯಾಬ್ ಚಾಲಕ. ಪ್ರಯಾಣಿಕರಿಂದ ಕದ್ದಿದ್ದ ಚಿನ್ನಾಭರಣವನ್ನು ಆತ, ತಾಯಿ ಮನೆಯಲ್ಲಿ ಬಚ್ಚಿಟ್ಟಿದ್ದ. ಆತನನ್ನು ಬಂಧಿಸಿ 70 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ವಿಜಯನಗರದಲ್ಲಿ ವಾಸವಿರುವ ಅರ್ಚಿತ್ ಜೈನ್ ಎಂಬುವರ ತಂದೆ, ಅಜ್ಜಿ ಹಾಗೂ ಸಂಬಂಧಿಕರು ರಾಜಸ್ಥಾನದಿಂದ ಜ. 10ರಂದು ರಾತ್ರಿ 11.50 ಗಂಟೆಗೆ ವಿಮಾನದಲ್ಲಿ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣಕ್ಕೆ ಬಂದಿಳಿದಿದ್ದರು. ಉಬರ್‌ ಕಂಪನಿಯ ಕೌಂಟರ್‌ಗೆ ಹೋಗಿ ಕ್ಯಾಬ್‌ ಕಾಯ್ದಿರಿಸಿದ್ದರು. ಅಲ್ಲಿಯ ಸಿಬ್ಬಂದಿ, ಇನೋವಾ ಕಾರಿನಲ್ಲಿ ಅವರನ್ನು ಹತ್ತಿಸಿ ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ವಿಜಯನಗರದ ಮನೆಯ ಬಳಿ ಕಾರು ಬರುತ್ತಿದ್ದಂತೆ ತಂದೆ ಹಾಗೂ ಸಂಬಂಧಿಕರು, ಚಾಲಕನಿಗೆ ಬಾಡಿಗೆ ಕೊಟ್ಟು ಲಗೇಜು ಇಳಿಸಿಕೊಂಡಿದ್ದರು. ಅಜ್ಜಿಯ ವ್ಯಾನಿಟಿ ಬ್ಯಾಗ್‌, ಕಾರಿನಲ್ಲಿ ಇತ್ತು. ಅದನ್ನು ತೆಗೆದುಕೊಳ್ಳುವಷ್ಟರಲ್ಲೇ ಚಾಲಕ, ಅಲ್ಲಿಂದ ಹೊರಟು ಹೋಗಿದ್ದ’.

‘ಚಾಲಕನ ಮೊಬೈಲ್ ಸ್ವಿಚ್ಡ್‌ ಆಫ್ ಆಗಿತ್ತು. ಉದ್ದೇಶಪೂರ್ವಕವಾಗಿಯೇ ಚಾಲಕ, ₹1.48 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್‌ ತೆಗೆದುಕೊಂಡು ಪರಾರಿಯಾಗಿರುವುದಾಗಿ ಅರ್ಚಿತ್‌ ಜೈನ್ ಠಾಣೆಗೆ ದೂರು ನೀಡಿದ್ದರು’ ಎಂದು ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !