ನೋಂದಣಿ ಗೊಂದಲಗಳ ಸಿಕ್ಕು ಬಿಡಿಸಿದ ಆಯುಕ್ತ

7

ನೋಂದಣಿ ಗೊಂದಲಗಳ ಸಿಕ್ಕು ಬಿಡಿಸಿದ ಆಯುಕ್ತ

Published:
Updated:
Prajavani

ಬೆಂಗಳೂರು: ಆಸ್ತಿ ಖರೀದಿ ಹಾಗೂ ಅದರ ನೋಂದಣಿ ವೇಳೆ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು, ಬಡಾವಣೆ ಅನಧಿಕೃತವೇ ಎಂಬುದನ್ನು ತಿಳಿಯುವುದು ಹೇಗೆ, ಕಂದಾಯ ನಿವೇಶನ ನೋಂದಣಿಗೆ ಅವಕಾಶ ಇದೆಯೇ, ಅಕ್ರಮ ನೋಂದಣಿಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು...

ಜನರನ್ನು ಕಾಡುತ್ತಿದ್ದ ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಅವರು ತಾಳ್ಮೆಯಿಂದ ಉತ್ತರಿಸಿದರು. ಜನರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದ ಅವರು ಅವುಗಳಿಗೆ ಪರಿಹಾರವನ್ನೂ ಸೂಚಿಸಿದರು. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಭರವಸೆಯನ್ನೂ ನೀಡಿದರು.

‘ಪ್ರಜಾವಾಣಿ’ ವತಿಯಿಂದ ಬುಧವಾರ ಏರ್ಪಡಿಸಿದ್ದ ಫೋನ್‌–ಇನ್‌ ಕಾರ್ಯಕ್ರಮ ಜನರು ಹಾಗೂ ಆಯುಕ್ತರ ನಡುವೆ ನೇರ ಚರ್ಚೆಗೆ ವೇದಿಕೆ ಕಲ್ಪಿಸಿತು. ಸಾರ್ವಜನಿಕರು ಕೇಳಿದ ಪ್ರಮುಖ ಪ್ರಶ್ನೆಗಳು ಹಾಗೂ ಆಯುಕ್ತರು ನೀಡಿದ ಉತ್ತರಗಳ ಸಾರ ಇಲ್ಲಿದೆ.

*ದಯಾನಂದ, ಗಾಂಧಿನಗರ: ಆಸ್ತಿಗಳ ಮಾರ್ಗಸೂಚಿ ದರಗಳ ವಿವರವನ್ನು ಪಡೆಯುವುದು ಹೇಗೆ? ಈ ಕುರಿತ ಪುಸ್ತಕಗಳೇನಾದರೂ ಇವೆಯೇ?
ತ್ರಿಲೋಕಚಂದ್ರ, ಆಯುಕ್ತ:
ನಮ್ಮ ಇಲಾಖೆಯ ವೆಬ್‌ಸೈಟ್‌ನಲ್ಲೇ (https://www.karnataka.gov.in/karigr/Pages/Home.aspx) ಈ ಕುರಿತ ಸಂಪೂರ್ಣ ವಿವರಗಳಿವೆ. ‘ಮೌಲ್ಯ ಆ್ಯಪ್‌’ ಡೌನ್‌ಲೋಡ್‌ ಮಾಡಿಕೊಂಡರೆ, ಅದರ ಮೂಲಕ ನಗರದ ಯಾವ ಪ್ರದೇಶದಲ್ಲಿ ಎಷ್ಟು ಮಾರ್ಗಸೂಚಿ ದರ ವಿಧಿಸಲಾಗುತ್ತಿದೆ ಎಂಬುದನ್ನು ತಿಳಿಯಬಹುದು.

*ಭಾನುಮತಿ, ಅರಕಲಗೂಡು: ನನ್ನ ಭಾವ ಇತ್ತೀಚೆಗೆ ತೀರಿಕೊಂಡಿದ್ದು, ಅವರ ಆಸ್ತಿಯನ್ನು ಅಕ್ಕನ ಹೆಸರಿಗೆ ನೋಂದಾಯಿಸಬೇಕಿದೆ. ಆದರೆ, ಭಾವನ ಹೆಸರು ಕಾಮಣ್ಣ ಎಂದು ನಮೂದಿಸುವ ಬದಲು ಅಧಿಕಾರಿಗಳು ಶಾಮಣ್ಣ ಎಂದು ಬರೆದಿದ್ದಾರೆ. ಈ ತಪ್ಪನ್ನು ಸರಿಪಡಿಸುವುದು ಹೇಗೆ? ಇದನ್ನು ಮತ್ತೆ ತಿದ್ದುಪಡಿ ಮಾಡಲು ಕುಟುಂಬದ ಸದಸ್ಯರೆಲ್ಲರೂ ಬರಬೇಕು ಎಂದು ಉಪನೋಂದಣಾಧಿಕಾರಿ ಕಚೇರಿಯ ಸಿಬ್ಬಂದಿ ತಿಳಿಸಿದ್ದಾರೆ. ಕುಟುಂಬದ ಸದಸ್ಯರು ಬೇರೆ ಬೇರೆ ಕಡೆ ನೆಲೆಸಿದ್ದು, ಅವರನ್ನು ಒಗ್ಗೂಡಿಸುವುದು ಕಷ್ಟ.

ತ್ರಿಲೋಕಚಂದ್ರ: ತಿದ್ದುಪಡಿ ಬಗ್ಗೆ ಉಪನೋಂದಣಾಧಿಕಾರಿ ಕಚೇರಿಗೆ ಅರ್ಜಿ ಕೊಡಿ. ಅವರು ಅದನ್ನು ಪರಿಶೀಲಿಸಿ ಅನುಮೋದನೆಗಾಗಿ ಜಿಲ್ಲಾ ನೊಂದಣಾಧಿಕಾರಿಗೆ ಕಳುಹಿಸುತ್ತಾರೆ. ಅವರು ಪಹಣಿಯಲ್ಲೂ ಹೆಸರು ತಿದ್ದುಪಡಿ ಮಾಡಿ ಆದೇಶ ಮಾಡುತ್ತಾರೆ. ಹೆಸರು ತಿದ್ದುಪಡಿಗಾಗಿ ಕುಟುಂಬದ ಎಲ್ಲ ಸದಸ್ಯರೂ ಹೋಗಬೇಕಾದ ಅಗತ್ಯ ಇಲ್ಲ.

*ಆಂಜನಪ್ಪ, ಮಾಗಡಿ ರಸ್ತೆ: ಹೆಸರಿನಲ್ಲಿ ಆಗಿರುವ ಸಣ್ಣಪುಟ್ಟ ತಿದ್ದುಪಡಿಗೆ ಜಿಲ್ಲಾ ನೋಂದಣಾಧಿಕಾರಿ ಕಚೇರಿವರೆಗೆ ಹೋಗಲೇಬೇಕೇ? ಉಪನೋಂದಣಾಧಿಕಾರಿ ಮಟ್ಟದಲ್ಲೇ ಅದನ್ನು ಸರಿಪಡಿಸಲು ಅವಕಾಶ ಕಲ್ಪಿಸಬಹುದಲ್ಲವೇ?

ಆಯುಕ್ತ: ಉಪನೋಂದಣಾಧಿಕಾರಿ ಕೇವಲ ಹೆಸರನ್ನು ಸರಿಪಡಿಸಿದರೆ ಅಡ್ಡಿ ಇಲ್ಲ. ಅದರೆ, ಹೆಸರನ್ನೇ ಬದಲಾಯಿಸುವಂತಹ ಪ್ರಕರಣಗಳು ನಡೆದರೆ ಅದಕ್ಕೆ ಯಾರು ಹೊಣೆ?

*ಮುರಳೀಧರ, ತುಮಕೂರು: ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ವೇಳೆ ಕನ್ನಡದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಿಲ್ಲವೇಕೆ?

ತ್ರಿಲೋಕಚಂದ್ರ: ಸದ್ಯಕ್ಕೆ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಮಾತ್ರ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕನ್ನಡದಲ್ಲೂ ಮಾಹಿತಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲು ಸಿದ್ಧತೆ ನಡೆದಿದೆ. ಆದರೂ, ಸಂಖ್ಯೆ, ಹೆಸರು, ವಿಳಾಸ, ಆಸ್ತಿ ಎಲ್ಲೆಲ್ಲಿ ಬರುತ್ತದೆ ಎಂಬ ಮಾಹಿತಿಗಳನ್ನು ಇಂಗ್ಲಿಷ್‌ನಲ್ಲೂ ಅಪ್‌ಲೋಡ್‌ ಮಾಡಬೇಕಾಗುತ್ತದೆ.

*ರಂಗನಾಥ ರಾವ್‌, ತೀರ್ಥಹಳ್ಳಿ: ಬೇಗೂರು ಹೋಬಳಿಯಲ್ಲಿ ನಮ್ಮ ಜಾಗವಿದೆ. ಇದನ್ನು ನೋಂದಣಿ ಮಾಡಿಸಲು ನಮೂನೆ 11 ಬಿ ಹಾಗೂ ಅದಕ್ಕೆ ಸಂಬಂಧಿಸಿದ ನಕಾಶೆ (ಸ್ಕೆಚ್‌) ಅಗತ್ಯವಿದೆಯೇ? ಇದರ ಅಗತ್ಯ ಇಲ್ಲ ಎಂದು ಹೈಕೋರ್ಟ್‌ ಆದೇಶ ಇದೆಯಲ್ಲವೇ?

ಆಯುಕ್ತ: ನೀವು ನಿರ್ದಿಷ್ಟ ಸರ್ವೇ ನಂಬ್ರದ ಅಷ್ಟೂ ಜಾಗವನ್ನು ಮಾರಾಟ ಮಾಡುತ್ತಿದ್ದೀರಿ ಎಂದಾದರೆ ಅದರ ನಕಾಶೆ ಅಗತ್ಯವಿಲ್ಲ. ಆದರೆ, ಆ ಸರ್ವೆ ನಂಬರ್‌ನಲ್ಲಿ ಸ್ವಲ್ಪ ಜಾಗವನ್ನು ಮಾತ್ರ ಮಾರಾಟ ಮಾಡುವುದಾದರೆ ಪ್ರಿಮ್ಯುಟೇಷನ್‌ ಸ್ಕೆಚ್‌ ಒದಗಿಸಲೇಬೇಕು. ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ಎರಡು ವರ್ಷದ ಹಿಂದೆಯೇ ತಡೆಯಾಜ್ಞೆ ನೀಡಿದೆ. ಸರ್ವೆ ನಂಬರ್‌ನಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಮಾರಾಟ ಮಾಡುವಾಗ ಅದರ ಬಗ್ಗೆ ನಿಖರತೆ ಇದ್ದರೆ ಗ್ರಾಹಕರಿಗೆ ಅನುಕೂಲ. ಈ ಸಲುವಾಗಿಯೇ ನಕಾಶೆಯನ್ನು ನೀಡುವುದನ್ನು ಕಡ್ಡಾಯ ಮಾಡಲಾಗಿದೆ.

*ವಿಜಯಪ್ರಕಾಶ್‌, ಚಿತ್ರದುರ್ಗ: ನಾವು ಖಾಸಗಿ ಬಡಾವಣೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಅದು ಈಗಾಗಲೇ ಪೂರ್ಣಗೊಂಡಿದೆ. ಉದ್ಯಾನ ಹಾಗೂ ರಸ್ತೆಯ ಮೂಲಸೌಕರ್ಯಗಳನ್ನು ಕಲ್ಪಿಸಿದ್ದೇವೆ. ಆದರೂ, ಇದರ ನೋಂದಣಿಗೆ ರೇರಾದಿಂದ ಅನುಮೋದನೆ ಬೇಕು ಎಂದು ಉಪನೋಂದಣಾಧಿಕಾರಿ ಕೇಳುತ್ತಿದ್ದಾರೆ.

ಆಯುಕ್ತ: ಈಗಾಗಲೇ ಪೂರ್ಣಗೊಂಡಿರುವ ಬಡಾವಣೆಗಳಿಗೆ ರೇರಾ ಅನುಮೋದನೆ ಅಗತ್ಯ ಇಲ್ಲ. ಈ ಬಗ್ಗೆ ವಿವರ ಕೊಡಿ. ನಾನು ಸಂಬಂಧಪಟ್ಟ ಉಪನೋಂದಣಾಧಿಕಾರಿ ಜೊತೆ ಮಾತನಾಡುತ್ತೇನೆ.

*ಮಂಜುನಾಥ, ವಿಜಯನಗರ: ನಗರದಲ್ಲಿ ರಿಲೀಸ್‌ ಡೀಡ್‌ಗೆ ಬೇರೆ ಬೇರೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬೇರೆ ಬೇರೆ ಪ್ರಮಾಣದ ಶುಲ್ಕ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಗೆ ಸೇರದ ಗ್ರಾಮದಲ್ಲಿ ನಿವೇಶನಗಳಿದ್ದರೂ, ಅದು ಬಿಎಂಆರ್‌ಡಿಎ ವ್ಯಾಪ್ತಿಗೆ ಬರುತ್ತದೆ ಎಂಬ ನೆಪ ಹೇಳಿ ₹ 5,600 ಶುಲ್ಕ ಪಾವತಿಸುವಂತೆ ಕೇಳುತ್ತಾರೆ. ಇದು ಸರಿಯೇ?

ಆಯುಕ್ತ: ಸೆಲ್ಫ್‌ ಡೀಡ್‌ಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ₹ 5,600 ಹಾಗೂ ಬಿಬಿಎಂಪಿ ಹೊರತುಪಡಿಸಿ ಉಳಿದ ನಗರಗಳಲ್ಲಿ ₹ 3,000 ಶುಲ್ಕ ನಿಗದಿಪಡಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಿಂದ ಹೊರಗೆ ಇರುವ ಪ್ರದೇಶದಲ್ಲಿ ₹ 5,600 ಶುಲ್ಕ ಪಾವತಿಸಬೇಕಾದ ಅಗತ್ಯ ಇಲ್ಲ.

*ನಾಗರಾಜ್‌, ಚನ್ನಪಟ್ಟಣ: ನಾನು ಋಣಭಾರರಾಹಿತ್ಯ ಪ್ರಮಾಣಪತ್ರಕ್ಕೆ (ಎನ್‌ಕಂಬರೆನ್ಸ್‌ ಸರ್ಟಿಫಿಕೇಟ್‌) ಅರ್ಜಿ ಸಲ್ಲಿಸಿ ಒಂದೂವರೆ ತಿಂಗಳು ಕಳೆಯಿತು. ಇನ್ನೂ ಸಿಕ್ಕಿಲ್ಲ. ಇದನ್ನು ನೀಡಲು ಇಷ್ಟು ದಿನ ಬೇಕಾ?

ಆಯುಕ್ತ: ದಾಖಲೆಗಳು ಸರಿಯಾಗಿದ್ದರೆ ಅರ್ಜಿ ಸಲ್ಲಿಸಿದ ತಕ್ಷಣವೇ ಇ.ಸಿ ನೀಡಬಹುದು. 2004ರ ನಂತರದ ದಾಖಲೆಗಳು ಗ್ರಾಮವಾರು ಆನ್‌ಲೈನ್‌ನಲ್ಲಿ ಲಭ್ಯ. 2004ಕ್ಕಿಂತ ಹಿಂದಿನ ದಾಖಲೆಗಳನ್ನು ಕಡತಗಳಲ್ಲೇ ಪರಿಶೀಲಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಇ.ಸಿ. ನೀಡಲು ಅಧಿಕಾರಿಗಳು ನಾಲ್ಕೈದು ದಿನ ಸಮಯ ತೆಗೆದುಕೊಳ್ಳುತ್ತಾರೆ.‌

*ಅಣ್ಣಮ್ಮ, ಬಸವೇಶ್ವರನಗರ: ಕಮಲಾನಗರದ ಬಳಿ ವೃಷಭಾವತಿನಗರದಲ್ಲಿ ನನ್ನ ತಾಯಿ ಹೆಸರಿನಲ್ಲಿರುವ ನಿವೇಶನದಲ್ಲಿ ಮನೆ ನಿರ್ಮಿಸಿದ್ದೇವೆ. ಈಗ ಅದು ರಾಜಕಾಲುವೆಯ ಮೀಸಲು ಪ್ರದೇಶದಲ್ಲಿ ಬರುತ್ತದೆ ಎಂದು ಹೇಳುತ್ತಿದ್ದಾರೆ. ಇದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಒಂದುವೇಳೆ ಇದು ರಾಜಕಾಲುವೆ ಮೀಸಲು ಪ್ರದೇಶದಲ್ಲಿ ಬಂದರೆ ಅಲ್ಲಿನ ಮನೆ ಕೆಡವಬೇಕಾಗುತ್ತದೆಯೇ. ಕೆಡವಿದರೆ ಸರ್ಕಾರವೇನಾದರೂ ಪರಿಹಾರ ಕೊಡುತ್ತದೆಯೇ?

ಆಯುಕ್ತರು: ತಾಲ್ಲೂಕು ಕಚೇರಿಯಲ್ಲಿ ರಾಜಕಾಲುವೆಯ ಮೀಸಲು ಪ್ರದೇಶದ ಕುರಿತ ವಿವರ ಲಭ್ಯ. ಕಂದಾಯ ಇಲಾಖೆ ಅಭಿವೃದ್ಧಿಪಡಿಸಿರುವ ದಿಶಾಂಕ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ‘ಮೈ ಲೊಕೇಷನ್‌’ ಆಯ್ಕೆ ಮಾಡಿಕೊಳ್ಳುವ ಮೂಲಕ ರಾಜಕಾಲುವೆ ಮೀಸಲು ಪ್ರದೇಶದ ವಿವರ ಪಡೆಯಬಹುದು.

ಮಾರ್ಗಸೂಚಿ ದರ ನಿಗದಿಗೆ ಪಿಐಡಿ ನೆರವು
‘ಮಾರ್ಗಸೂಚಿ ದರವನ್ನು ಶೇ 10ರಿಂದ ಶೇ 15ಕ್ಕಿಂತ ಹೆಚ್ಚು ಮಾಡುವುದಿಲ್ಲ ಎಂದು ಇಲಾಖೆ ಭರವಸೆ ನೀಡಿತ್ತು. ಆದರೆ, ಬಾಣಸವಾಡಿ, ಕೆ.ಆರ್‌.ಪುರ, ಬಿದರಹಳ್ಳಿ, ಬೈರತಿ ಮುಂತಾದ ಕಡೆ ಮಾರ್ಗಸೂಚಿ ದರವನ್ನು ಶೇ 90ಕ್ಕೂ ಹೆಚ್ಚು ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಉದಾಹರಣೆಗೆ ಭೈರತಿಯಲ್ಲಿ ಚದರ ಅಡಿಗೆ ₹ 18,900ರಷ್ಟಿದ್ದ ಮಾರ್ಗಸೂಚಿ ದರವನ್ನು ಏಕಾಏಕಿ ₹ 36,300ಕ್ಕೆ ಹೆಚ್ಚಳ ಮಾಡಲಾಗಿದೆ ಇದು ಎಷ್ಟರಮಟ್ಟಿಗೆ ಸರಿ’ ಎಂದು ಶೇಷಾದ್ರಿಪುರದ ಪ್ರವೀಣ್‌ ಪ್ರಶ್ನಿಸಿದರು.

‘ಮಾರ್ಗಸೂಚಿ ದರವನ್ನು ಪರಿಷ್ಕರಿಸುವಾಗ ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು (ಗರಿಷ್ಠ) ಮೊತ್ತಕ್ಕೆ ಜಾಗ ಮಾರಾಟ ಆಗಿದೆ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಜಾಗ ಮಾರಾಟವಾದ ಗರಿಷ್ಠ ಮೊತ್ತಕ್ಕಿಂತ ಕಡಿಮೆ ಮಾರ್ಗಸೂಚಿ ದರವನ್ನು ನಿಗದಿಪಡಿಸಿದರೆ ಮಹಾಲೇಖಪಾಲರು ತಮ್ಮ ವರದಿಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ. ಭೈರತಿಯಲ್ಲೂ ಎಷ್ಟು ದರಕ್ಕೆ ಆಸ್ತಿ ಮಾರಾಟ ಆಗಿದೆ ಎಂಬುದನ್ನು ಆಧರಿಸಿಯೇ ಮಾರ್ಗಸೂಚಿ ದರವನ್ನು ನಿಗದಿಪಡಿಸಿದ್ದೇವೆ’ ಎಂದು ತ್ರಿಲೋಕಚಂದ್ರ ಉತ್ತರಿಸಿದರು.

ಬಿಬಿಎಂಪಿ 20 ಲಕ್ಷ ಆಸ್ತಿ ಮಾಲೀಕರಿಗೆ ಆಸ್ತಿ ಗುರುತು ಸಂಖ್ಯೆ (ಪಿಐಡಿ) ನೀಡಿದೆ. ಈ ವರ್ಷ ನಗರದಲ್ಲಿ ಪಿಐಡಿ ಸಂಖ್ಯೆಯನ್ನು ಆಧರಿಸಿ ಮಾರ್ಗಸೂಚಿ ದರವನ್ನು ನಿಗದಿಪಡಿಸಿದ್ದೇವೆ. ಇದರಿಂದಾಗಿ ವೈಜ್ಞಾನಿಕ ದರ ನಿಗದಿ ಸಾಧ್ಯವಾಗಿದೆ. ಈ ಮೊದಲು ಆಸ್ತಿ ಯಾವ ಬೀದಿಯಲ್ಲಿದೆ ಎಂಬುದನ್ನು ಆಧರಿಸಿ ದರ ನಿಗದಿಯಾಗುತ್ತಿತ್ತು. ಈ ಬಾರಿ ನಿರ್ದಿಷ್ಟ ಆಸ್ತಿಯ ಮೌಲ್ಯಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

‘ನಮ್ಮ ಪ್ರದೇಶದಲ್ಲಿ ಆಸ್ತಿಗಳ ಮಾರ್ಗಸೂಚಿ ದರವನ್ನು ಏಕಾಏಕಿ ಹೆಚ್ಚಳ ಮಾಡಲಾಗಿದೆ. ಇಲ್ಲಿನ ಕಿರಿದಾದ ರಸ್ತೆ ಮಾತ್ರ ಇದೆ. ಆದರೂ ಹೆಚ್ಚು ಮಾರ್ಗಸೂಚಿ ದರ ನಿಗದಿಪಡಿಸಿದರೆ ಬಡವರಿಗೆ ಮಧ್ಯಮವರ್ಗದವರಿಗೆ ಹೊರೆ ಆಗುವುದಿಲ್ಲವೇ?’ ಎಂದು ಚೋಳನಾಯಕನಹಳ್ಳಿಯ ಭಾಸ್ಕರ್‌ ಪ್ರಶ್ನಿಸಿದರು.

‘ಯಾವುದೇ ಆಸ್ತಿ ರಾಜ್ಯ ರಸ್ತೆ ಅಥವಾ ಹೆದ್ದಾರಿಗೆ ಮುಖ ಮಾಡಿಕೊಂಡಿದ್ದರೆ ಅದರ ಮೌಲ್ಯವೂ ಹೆಚ್ಚುತ್ತದೆ. ಹಾಗಾಗಿ ಇಂತಹ ಆಸ್ತಿಗಳಿಗೆ ಹೆಚ್ಚುವರಿಯಾಗಿ ಶೇ 25ರಷ್ಟು ಶುಲ್ಕ ವಸೂಲಿ ಮಾಡಲು ಅವಕಾಶ ಕಲ್ಪಿಸಿದ್ದು ನಿಜ. ನೀವು ಹೇಳುತ್ತಿರುವ ಪ್ರಕಾರ ಆಸ್ತಿಯ ಬಳಿ ಕಿರಿದಾದ ರಸ್ತೆ ಮಾತ್ರ ಇದ್ದರೆ ಪರಿಶೀಲಿಸಿ ಮಾರ್ಗಸೂಚಿ ದರ ಪರಿಷ್ಕರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಆಯುಕ್ತರು ಭರವಸೆ ನೀಡಿದರು.

ಯಾವ ಸ್ವತ್ತಿಗೆ ರೇರಾ ಅನುಮೋದನೆ ಕಡ್ಡಾಯ?
‘500 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಎಲ್ಲ ಯೋಜನೆಗಳಿಗೆ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದು ಕಡ್ಡಾಯ. ಬಡಾವಣೆ, ಅಪಾರ್ಟ್‌ಮೆಂಟ್‌ ಸಮುಚ್ಚಯ, ವಿಲ್ಲಾ, ಒಂದಕ್ಕಿಂತ ಹೆಚ್ಚು ವಸತಿ ಹೊಂದಿರುವ ಕಟ್ಟಡಗಳೆಲ್ಲದಕ್ಕೂ ಈ ನಿಯಮ ಅನ್ವಯವಾಗುತ್ತದೆ. ಇಲ್ಲದಿದ್ದರೆ ನಾವು ಅಂತಹ ಆಸ್ತಿಗಳಿಗೆ ಮಾರ್ಗಸೂಚಿ ದರವನ್ನು ನಿಗದಿ ಮಾಡುವುದಿಲ್ಲ’ ಎಂದು ತ್ರಿಲೋಕಚಂದ್ರ ಸ್ಪಷ್ಟಪಡಿಸಿದರು.

’ಯಾವುದಾದರೂ ಅಭಿವೃದ್ಧಿ ಯೋಜನೆಗೆ ಜಮೀನು ಕಳೆದುಕೊಳ್ಳುವ ಸಂದರ್ಭ ಎದುರಾದಾಗ ಮಾತ್ರ ಜನರು ಆಸ್ತಿ ಮಾರ್ಗಸೂಚಿ ದರವನ್ನು ಹೆಚ್ಚು ಮಾಡುವಂತೆ ಕೋರಿಕೆ ಸಲ್ಲಿಸುತ್ತಾರೆ. ಇಲ್ಲದಿದ್ದರೆ ಆಸ್ತಿಯ ಮಾರ್ಗಸೂಚಿ ದರ ಆದಷ್ಟು ಕಡಿಮೆಯೇ ಇರಲಿ ಎಂದು ಬಯಸುತ್ತಾರೆ. ಆಸ್ತಿ ನೋಂದಣಿ ಮಾಡುವಾಗಲಂತೂ ನೈಜ ಮೌಲ್ಯವನ್ನು ಮರೆಮಾಚಲಾಗುತ್ತದೆ. ಈ ಅಕ್ರಮಕ್ಕೆ ತಳಮಟ್ಟದ ಅಧಿಕಾರಿಗಳೂ ಕೈಜೋಡಿಸುತ್ತಾರೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿಯೇ ಕೇಂದ್ರ ಮೌಲ್ಯಮಾಪನ ಸಮಿತಿಯೇ ಈಗ ಮಾರ್ಗಸೂಚಿ ದರವನ್ನು ನಿಗದಿ ಪಡಿಸುತ್ತದೆ’ ಎಂದು ಅವರು ವಿವರಿಸಿದರು.

‘500 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಯೋಜನೆಗಳಿಗೆ ಕೇಂದ್ರ ಮೌಲ್ಯಮಾಪನ ಸಮಿತಿಯೇ ದರ ನಿಗದಿ ಮಾಡುವುದರಿಂದ ನೈಜ ಮೌಲ್ಯವನ್ನು ಮರೆಮಾಡುವ ಅಕ್ರಮಗಳಿಗೆ ಕಡಿವಾಣ ಬೀಳಲಿದೆ’ ಎಂದರು.

ಸಿಬ್ಬಂದಿಯೇ ಇಲ್ಲ’
ಹೆಬ್ಬಾಳದ ಉಪನೋಂದಣಾಧಿಕಾರಿ ಕಚೇರಿಗೆ ಯಾವುದೇ ಕೆಲಸಕ್ಕೆ ಹೋದರೂ ‘ಸರ್ವರ್‌ ಕೈಕೊಟ್ಟಿದೆ... ಸಿಬ್ಬಂದಿ ಕೊರತೆ ಇದೆ’ ಎಂಬ ಸಿದ್ಧ ಉತ್ತರ ಸಿಗುತ್ತಿದೆ’ ಎಂದು ಕುಮಾರ್‌ ಎಂಬುವರು ದೂರಿದರು. 

‘ಈ ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರು ವರ್ಷದ ಹಿಂದೆ ನಿವೃತ್ತರಾಗಿದ್ದಾರೆ. ಇತ್ತೀಚೆಗೆ ಇ.ಸಿ. ಪಡೆಯುವ ಸಲುವಾಗಿ ಈ ಕಚೇರಿಗೆ ಭೇಟಿ ನೀಡಿದ್ದಾಗ ಉಪನೋಂದಣಾಧಿಕಾರಿಯೂ ಇರಲಿಲ್ಲ. ಸಿಬ್ಬಂದಿಯೂ ಇರಲಿಲ್ಲ. ಉಪನೋಂದಣಾಧಿಕಾರಿ ಯಾವಾಗಲೂ ತಡವಾಗಿ ಕಚೇರಿಗೆ ಬರುತ್ತಾರೆ’ ಎಂದು ಅವರು ಆರೋಪಿಸಿದರು.

‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ನಿಮಗೆ ಇ.ಸಿ ಒದಗಿಸುವ ವ್ಯವಸ್ಥೆ ಮಾಡುತ್ತೇನೆ’ ಎಂದು ಆಯುಕ್ತರು ಭರವಸೆ ನೀಡಿದರು.


ಡಾ.ಕೆ.ವಿ.ತ್ರಿಲೋಕಚಂದ್ರ 

ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಲಂಚಾವತಾರ
‘ಕೆಲವು ನಿವೇಶನಗಳನ್ನು ನೋಂದಣಿ ಮಾಡಿಕೊಡಲು ಸಬ್‌ ರಿಜಿಸ್ಟ್ರಾರ್ ಕಚೇರಿಗಳಲ್ಲಿ ₹ 40 ಸಾವಿರದಿಂದ ₹ 50 ಸಾವಿರ ಲಂಚ ಪಡೆಯುತ್ತಿದ್ದಾರೆ’ ಎಂದು ಚನ್ನಸಂದ್ರದ ನಂಜುಂಡೇಗೌಡ ಆರೋಪಿಸಿದರು.

‘ಬಾಣಸವಾಡಿಯಲ್ಲಿ ಉಪನೋಂದಣಾಧಿಕಾರಿಯೊಬ್ಬರು ದುಡ್ಡು ಕೊಟ್ಟರೆ ಯಾವುದೇ ನಿವೇಶನವನ್ನು ಬೇಕಿದ್ದರೂ ನೋಂದಣಿ ಮಾಡಿಕೊಡುತ್ತಿದ್ದರು. ಕೆರೆ, ರಾಜಕಾಲುವೆ ಮೀಸಲು ಪ್ರದೇಶದಲ್ಲಿರುವ ಕಂದಾಯ ನಿವೇಶನಗಳನ್ನು ಅವರು ನೋಂದಾಯಿಸಿದ್ದರು. ಇದನ್ನು ಖರೀದಿಸಿದ ಅಮಾಯಕರು ಬಳಿಕ ತೊಂದರೆ ಅನುಭವಿಸುವಂತಾಗಿದೆ. ಅಂತಹ ನಿವೇಶನಗಳಲ್ಲಿ ಮನೆ ನಿರ್ಮಿಸುವುದಕ್ಕೂ ಆಗುವುದಿಲ್ಲ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಇಲಾಖೆ ಏನು ಕ್ರಮ ಕೈಗೊಂಡಿದೆ’ ಎಂದು ಅವರು ಕೇಳಿದರು.

ತ್ರಿಲೋಕಚಂದ್ರ ಉತ್ತರಿಸಿ, ‘ಇಂತಹ ನಿರ್ದಿಷ್ಟ ಪ್ರಕರಣಗಳಿದ್ದರೆ ಇಲಾಖೆಗೆ ದೂರು ಕೊಡಬಹುದು. ನಿಯಮ ಮೀರಿ ಆಸ್ತಿಗಳನ್ನು ನೋಂದಣಿ ಮಾಡಲು ಕೈಜೋಡಿಸುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಆಸ್ತಿ ಖರೀದಿಗೆ ಮುನ್ನ ಅದರ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವ ಜವಾಬ್ದಾರಿ ಖರೀದಿದಾರರಿಗೂ ಇದೆ’ ಎಂದರು.

‘ಕಂದಾಯ ನಿವೇಶನಗಳಿಗೆ ಬಿ–ಖಾತಾ ಮಾಡಿಕೊಂಡು ಅದನ್ನೇ ನೋಂದಾಯಿಸುತ್ತಿದ್ದಾರೆ. ನಗರದ ಹೊರವಲಯದಲ್ಲಿ ಬಾಣಸವಾಡಿ, ಯಲಹಂಕ, ಸರ್ಜಾಪುರ ಮುಂತಾದ ಕಡೆ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ತಡೆಯಲು ಆಸ್ತಿ ನೋಂದಣಿ ವೇಳೆ ಪೂರಕ ದಾಖಲೆಗಳನ್ನೂ ಸ್ಕ್ಯಾನ್‌ ಮಾಡಿಸಿ ಅವುಗಳನ್ನೂ ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿ
ಸಿದ್ದೇವೆ. ಬಡಾವಣೆಗಳಿಗೆ ರಿಯಲ್‌ ಎಸ್ಟೇಟ್‌ ನಿಯಂತ್ರಣಾ ಪ್ರಾಧಿಕಾರದಿಂದ (ರೇರಾ) ಅನುಮೋದನೆ ಪಡೆದಿದ್ದರೆ ಮಾತ್ರ ಅವುಗಳ ನಿವೇಶನಗಳಿಗೆ ಮಾರ್ಗಸೂಚಿ ದರ ನಿಗದಿಪಡಿಸುತ್ತಿದ್ದೇವೆ. ಇದರಿಂದ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಬೀಳುತ್ತಿದೆ’ ಎಂದರು.

‘ಬಿಬಿಎಂಪಿ ವ್ಯಾಪ್ತಿಯ ಕೆಲವು ಉಪನೋಂದಣಾಧಿಕಾರಿಗಳು ₹ 20 ಸಾವಿರ ಕೊಟ್ಟರೆ ಕಂದಾಯ ನಿವೇಶನಗಳನ್ನು ನೋಂದಣಿ ಮಾಡುತ್ತಾರೆ. ನಾಗರಬಾವಿ, ಲಗ್ಗೆರೆ, ಪೀಣ್ಯ ಮತ್ತಿತರ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಇದು ನಡೆಯುತ್ತಿದೆ. ಇನನ್ನೂ ಕೆಲವೆಡೆ ಮಾಡಿಕೊಡುತ್ತಿಲ್ಲ’ ಎಂದು ಕೊಡಿಗೇಹಳ್ಳಿ ಕುಮಾರ್‌ ಗಮನ ಸೆಳೆದರು.

ಪ್ರಜಾವಾಣಿ ತಂಡ: ಮಂಜುನಾಥ ಹೆಬ್ಬಾರ್‌, ಪ್ರವೀಣ್‌ ಕುಮಾರ್ ಪಿ.ವಿ., ಕೃಷ್ಣಕುಮಾರ್‌ ‍ಪಿ.ಎಸ್‌.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !